ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋನ್ಸಾಯ್ ಬುಟಿಕ್‌ನಲ್ಲಿ ಬುದ್ಧನ ನಗು

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಉದ್ಯಾನನಗರಿ ಎಂಬ ಹೆಸರಿದ್ದರೂ ಇಲ್ಲಿಯ ಮನೆಯಂಗಳದಲ್ಲಿ ವಿಶಾಲವಾದ ಹೂದೋಟಗಳು ಕಣ್ಣಿಗೆ ಕಾಣುವುದು ಕಡಿಮೆ. ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಸಿಮೆಂಟ್ ಬಿಲ್ಡಿಂಗ್‌ಗಳು, ಮಾಲ್‌ಗಳು, ಹೋಟೆಲ್‌ಗಳು ಇಲ್ಲವೇ ಅಪಾರ್ಟ್‌ಮೆಂಟ್‌ಗಳು. ಗಾರ್ಡನ್ ಸಿಟಿ ಈಗ ಕ್ರಾಂಕೀಟ್ ಕಾಡು ಎನ್ನಿಸಿಕೊಳ್ಳಲು ಇವೆಲ್ಲಾ ಕೆಲವು ಕಾರಣಗಳಷ್ಟೆ.

ತಮ್ಮದೊಂದು ಪುಟ್ಟ ಕನಸಿನ ಮನೆ. ಅಲ್ಲೊಂದು ಚಿಕ್ಕ ಹೂದೋಟ. ಮುಸ್ಸಂಜೆ ಹೊತ್ತು ಒಂದು ಕಪ್ ಕಾಫಿ ಹೀರುತ್ತಾ ಹೂಗಳ ಜೊತೆ ಮಾತನಾಡಬೇಕು ಎಂಬ ಆಸೆ ಅನೇಕರ ಮನಸ್ಸಿನಲ್ಲಿ ಇರುತ್ತದೆ. ಆದರೆ, ಅಂಗೈ ಅಗಲ ಜಾಗಕ್ಕೂ ಇಲ್ಲಿ ಲಕ್ಷಗಟ್ಟಲೆ ಹಣ ತೆರಬೇಕು. ಹಾಗಿರುವಾಗ ಗಾರ್ಡನ್ ಆಸೆ ಕೈ ಬಿಡುವುದೇ ವಾಸಿ ಎಂದೇನಾದರೂ ಅನ್ನಿಸಿದರೆ ಇಲ್ಲಿ ದೃಷ್ಟಿ ಹರಿಸಿ.

ಈಗ ನಗರದಲ್ಲಿ ಬಾಲ್ಕನಿಯಲ್ಲಿ, ಟೆರೇಸ್ ಮೇಲೆ ಕೈತೋಟ ನಿರ್ಮಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇಂತಹ ಟೆರೇಸ್ ಗಾರ್ಡನ್‌ನಲ್ಲಿ ಯಾವ್ಯಾವ ಗಿಡಗಳನ್ನೆಲ್ಲಾ ಇಡಬಹುದು, ಹೇಗೆ ಸಿಂಗರಿಸಬೇಕೆಂಬ ಆಸೆ ಇದ್ದರೆ ಒಮ್ಮೆ ಇಂದಿರಾನಗರದಲ್ಲಿರುವ ಸನ್‌ಶೈನ್ ಗಾರ್ಡನ್ ಬುಟಿಕ್‌ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಎಲ್ಲಾ ಅನುಮಾನಗಳು ದೂರವಾಗುವ ಸಾಧ್ಯತೆ ಇದೆ.

ಸನ್‌ಶೈನ್ ಗಾರ್ಡನ್ ಬುಟಿಕ್‌ನಲ್ಲಿ ಚಿಕ್ಕಚಿಕ್ಕ ಹಣ್ಣು ಬಿಟ್ಟಿರುವ ಬೋನ್ಸಾಯಿ ಗಿಡಗಳು, ಕಪ್ಪೆ, ನಾಯಿಮರಿ, ಜಿಂಕೆ, ಬಸವಣ್ಣನ ಮತ್ತಿತರ ಮಣ್ಣಿನ ಕುಡಿಕೆಗಳು, ಬಿದಿರಿನಿಂದ ತಯಾರಿಸಿದ ವಸ್ತುಗಳು, ಹಕ್ಕಿಗೂಡುಗಳು, ಮನಸ್ಸನ್ನು ತಿಳಿಗೊಳಿಸುವ ವಾಟರ್‌ಫಾಲ್ಸ್, ನಿನಾದ ಗಂಟೆಗಳು, ಶಿಲ್ಪಗಳು ಹೀಗೆ ಏನೇನೋ ಇವೆ. ದೈನಂದಿನ ಬದುಕಿನ ಜಂಜಾಟದಲ್ಲಿ ಬೇಸತ್ತ ಮನಸ್ಸುಗಳು ಇಲ್ಲಿ ಬಂದರೆ ನಿರ್ಮಲ ಮನಸ್ಸಿನ ಬುದ್ಧನ ವಿಗ್ರಹ ನಗುತ್ತಲೇ ಸ್ವಾಗತಿಸುತ್ತದೆ. ಇದೊಂದು ಒತ್ತಡ ನಿವಾರಕ ಸ್ಥಳವೆಂದರೂ ತಪ್ಪಿಲ್ಲ.

`ಶಿಲಾಕೃತಿ ಇಲ್ಲದಿದ್ದರೆ ಕೈತೋಟ ಅಪೂರ್ಣವಾದಂತೆನಿಸುತ್ತದೆ. ಕೈತೋಟ ಹಾಗೂ ಹುಲ್ಲುಗಾವಲಿನ ಶಿಲ್ಪಗಳು  ವಿಶಿಷ್ಟವಾದ ಮೆರುಗು ತಂದಿದೆ. ಪ್ರತಿಯೊಬ್ಬರೂ ಶಾಂತಿ ಹಾಗೂ ನೆಮ್ಮದಿಯನ್ನು ಅರಸುತ್ತಿರುವ ಇಂದಿನ ಆಧುನಿಕ ಜಂಜಡದ ಜೀವನದಲ್ಲಿ ಬುದ್ಧನ ವಿಗ್ರಹ ಹಾಗೂ ಜಲವಸ್ತುಗಳು ಅತ್ಯುತ್ತಮ ಒತ್ತಡ ನಿವಾರಕಗಳಾಗಿ ಕೆಲಸ ಮಾಡುತ್ತವೆ. ಅದರಲ್ಲೂ ವೃತ್ತಿಪರರು ಕೆಲಸ ಮುಗಿಸಿ ಮನೆಗೆ ಬಂದಾಗ ಈ ಶಿಲ್ಪಗಳ ನೋಟ ಹಾಗೂ ನಿನಾದ ಅವರ ಒತ್ತಡವನ್ನು ಕೂಡಲೇ ನಿವಾರಿಸುತ್ತದೆ~ ಎಂಬುದು ಸನ್‌ಶೈನ್‌ನ ಮಾಲಕಿ ವೀಣಾ ನಂದಾ ನುಡಿ. 

ಬೋನ್ಸಾಯ್ ತಜ್ಞರಾದ ಜ್ಯೋತಿ ಹಾಗೂ ನಿಕುಂಜ್ ಪಾರೇಖ್ ಅವರ ಬಳಿ ತರಬೇತಿ ಪಡೆದ ನಂದಾ ಕೆಲವೇ ವರ್ಷಗಳಲ್ಲಿ ಇದರಲ್ಲಿ ಪರಿಣತಿ ಪಡೆದು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಬೋನ್ಸಾಯ್ ಕಲೆಯಲ್ಲಿ ಆಸಕ್ತಿ ಹೊಂದಿರುವ 500 ವಿದ್ಯಾರ್ಥಿಗಳಿಗೆ ಅವರು ತರಬೇತಿಯನ್ನೂ ನೀಡುತ್ತಿದ್ದಾರೆ. ನಿಮಗೂ ಬೋನ್ಸಾಯ್ ಬೆಳೆಯಲು ಆಸಕ್ತಿ ಇದ್ದರೆ ಇಂದೇ ಮಳಿಗೆಗೆ ಭೇಟಿ ನೀಡಿ. ಹೆಚ್ಚಿನ ವಿವರಗಳಿಗೆ- 9900145386.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT