ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಪಯ್ಯ, ಅಡ್ಡಂಡ ಕಾರ್ಯಪ್ಪ ವಿರುದ್ಧ ಕಾಂಗ್ರೆಸ್ ಕಿಡಿ

ವಿಧಾನಸಭೆ ಚುನಾವಣೆ 2013
Last Updated 4 ಏಪ್ರಿಲ್ 2013, 6:19 IST
ಅಕ್ಷರ ಗಾತ್ರ

ಮಡಿಕೇರಿ: ದೇವಸ್ಥಾನದಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಸಭೆ ನಡೆಸುವ ಮೂಲಕ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು, ಅವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ವಕ್ತಾರ ಬಿ.ಎಸ್.ತಮ್ಮಯ್ಯ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಜಿ.ಬೋಪಯ್ಯ ಅವರ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಏ.3ರಂದು ಶ್ರೀಮಂಗಲ ಸಮೀಪದ ಕುಮಟೂರು ಗ್ರಾಮದ ಹೇರ್ಮಾಡು ಈಶ್ವರ ದೇವಾಲಯದಲ್ಲಿ ಬಿಜೆಪಿ ಸಭೆ ನಡೆದಿದ್ದು, ಅದರಲ್ಲಿ ಬೋಪಯ್ಯ ಅವರು ಭಾಗವಹಿಸಿದ್ದರು ಎಂದು ಅವರು ತಿಳಿಸಿದರು.

ಈ ರೀತಿ ನೀತಿ ನಿಯಮಗಳನ್ನು ಮೊದಲಿನಿಂದಲೂ ಉಲ್ಲಂಘಿಸಿಕೊಂಡೇ ಬಂದಿದ್ದಾರೆ. ಇದೇ ಮೊದಲೇನಲ್ಲ. ಅವರು ವಿಧಾನಸಭಾಧ್ಯಕ್ಷರಾಗಿದ್ದಾಗ ನಡೆದುಕೊಂಡ ರೀತಿ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು ಎಂದು ಅವರು ಖಾರವಾಗಿ ನುಡಿದರು.

ಸರ್ಕಾರದ ಅನುದಾನದಿಂದ ಮಂಜೂರಾದ ಕಾಮಗಾರಿ ಕೆಲಸಗಳ ಬಗ್ಗೆ ಹಾಗೂ ದೇವಾಲಯಗಳಿಗೆ ಬಿಡುಗಡೆಯಾದ ಹಣದ ಬಗ್ಗೆ ಕೆಲವು ಸಂಘ-ಸಂಸ್ಥೆಗಳಿಂದ ಪತ್ರಿಕಾ ಜಾಹೀರಾತು ಕೊಡಿಸಿ, ಅಗ್ಗದ ಪ್ರಚಾರ ಪಡೆಯುತ್ತಿದ್ದಾರೆ. ದೇವಾಲಯಗಳಿಗೆ ಬರುತ್ತಿರುವುದು ಸರ್ಕಾರದ ಅನುದಾನವೇ ಹೊರತು ಇವರು ತಮ್ಮ ಜೇಬಿನಿಂದ ಕೊಟ್ಟಂತಹ ದುಡ್ಡೇನಲ್ಲ ಎಂದು ತಮ್ಮಯ್ಯ ಟೀಕಿಸಿದರು.

ಅಡ್ಡಂಡ ಕಾರ್ಯಪ್ಪ ವಿರುದ್ಧ ದೂರು: ಬಿಜೆಪಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿರುವ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಡ್ಡಂಡ ಸಿ. ಕಾರ್ಯಪ್ಪ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಅವರಿಗೆ ದೂರು ನೀಡಲಿದ್ದೇವೆ ಎಂದು ಬಿ.ಎಸ್. ತಮ್ಮಯ್ಯ ಹೇಳಿದರು.
ಕಾರ್ಯಪ್ಪ ಅವರಿಗೆ ರಾಜಕೀಯ ಇಷ್ಟವಿದ್ದರೆ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ನೇರವಾಗಿ ಚುನಾವಣೆಗೆ ಇಳಿಯಲಿ ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್ ಗೆಲುವು ಶತಃಸಿದ್ಧ: ಬಿಜೆಪಿಯವರ ಭ್ರಷ್ಟ ಆಡಳಿತವನ್ನು ನೋಡಿ ಮತದಾರರು ಬೇಸತ್ತು ಹೋಗಿದ್ದಾರೆ. ಬಿಜೆಪಿ ಮುಖಂಡರ ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳನ್ನು ಕಂಡು ಬೇಸರ ವ್ಯಕ್ತಪಡಿಸಿರುವ ರಾಜ್ಯ ಹಾಗೂ ಜಿಲ್ಲೆಯ ಮತದಾರರು ಈ ಬಾರಿ ಕಾಂಗ್ರೆಸ್‌ಗೆ ಮತ ಚಲಾಯಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ದೊಡ್ಡ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಎಲ್ಲ ಮುಖಂಡರು ಒಗ್ಗಟ್ಟಾಗಿ ದುಡಿದು, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವಿ.ಪಿ. ಸುರೇಶ್, ಟಿ.ಎಂ. ಅಯ್ಯಪ್ಪ, ಕೆ.ಎ. ಯಾಕೂಬ್, ಕೆ.ಎಂ. ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT