ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಪಯ್ಯ ರಾಜೀನಾಮೆಗೆ ಸಿದ್ದರಾಮಯ್ಯ ಪಟ್ಟು

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐವರು ಪಕ್ಷೇತರ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಸಂವಿಧಾನಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರವನ್ನು ಉಳಿಸಲು ಸಂವಿಧಾನದ ವಿಧಿ ವಿಧಾನಗಳನ್ನು ಗಾಳಿಗೆ ತೂರಿ, 2010ರ ಅಕ್ಟೋಬರ್ 10ರಂದು ಕಾನೂನುಬಾಹಿರವಾಗಿ ಐವರು ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿರುವುದರಿಂದ ಒಂದು ಕ್ಷಣವೂ ಅವರು ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಸ್ಪೀಕರ್ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ನಿಷ್ಪಕ್ಷಪಾತದಿಂದ ವರ್ತಿಸದೆ ಸರ್ಕಾರವನ್ನು ಉಳಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂಬ ಅಂಶವನ್ನು ತೀರ್ಪಿನಲ್ಲಿ ಗಂಭೀರವಾಗಿ ಪ್ರಸ್ತಾಪಿಸಲಾಗಿದೆ. ಸತ್ಸಂಪ್ರದಾಯವನ್ನು ಉಳಿಸುವ ದೃಷ್ಟಿಯಿಂದ ಈಗಲಾದರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಯಡಿಯೂರಪ್ಪ ಒತ್ತಡದಿಂದ ಸರ್ಕಾರ ಉಳಿಸಲು ಸಂವಿಧಾನಬಾಹಿರ ಆದೇಶ ಹೊರಡಿಸಲಾಗಿದೆ ಎಂಬುದನ್ನು ನ್ಯಾಯಾಲಯವೇ ಹೇಳಿದೆ. ಆದ್ದರಿಂದ ಜಂಟಿ ಅಧಿವೇಶನದಲ್ಲಿ ಸಂವಿಧಾನದ ರಕ್ಷಕರಾದ ರಾಜ್ಯಪಾಲರ ಪಕ್ಕದಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ. ಸ್ಪೀಕರ್ ಹುದ್ದೆಯ ಪಾವಿತ್ರ್ಯ ಹಾಳು ಮಾಡಿರುವ ಅವರು ಆ ಸ್ಥಾನದಲ್ಲಿ ಕುಳಿತುಕೊಳ್ಳಬಾರದು ಎಂದು ಆಗ್ರಹಿಸಿದರು.

ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ನೋಟಿಸ್ ಕಳುಹಿಸಿದರೆ ನಿಯಮಾವಳಿ ಪ್ರಕಾರ 14 ದಿನಗಳ ನಂತರ ಅದನ್ನು ಕಲಾಪ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಆದರೆ ಅಷ್ಟು ದಿನ ಅಧಿವೇಶನವೇ ನಡೆಯುತ್ತಿಲ್ಲ. ಹೀಗಾಗಿ 2 ಬಾರಿ ಕಳುಹಿಸಿದ ನೋಟಿಸ್ ವ್ಯರ್ಥವಾಯಿತು. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ರಾಜ್ಯಪಾಲರ ಸೂಚನೆಯಂತೆ ಲೋಕಾಯುಕ್ತ ಸ್ಥಾನಕ್ಕೆ ಸರ್ಕಾರ ಬೇರೆ ಹೆಸರನ್ನು ಸೂಚಿಸಬೇಕು ಎಂದು ಆಗ್ರಹಿಸಿದ ಅವರು, ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವುದಕ್ಕಾಗಿಯೇ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಟೀಕಿಸಿದರು.

ಉತ್ತರ-ದಕ್ಷಿಣ ಧ್ರುವ...!
`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನಾನು ಒಟ್ಟಿಗೆ ಸೇರಿ ರಾಜಕೀಯ ಪಕ್ಷ ಕಟ್ಟುತ್ತೇವೆ ಎಂಬ ಊಹಾಪೋಹಗಳು ಆಧಾರರಹಿತ. ನಾವಿಬ್ಬರೂ ಉತ್ತರ- ದಕ್ಷಿಣ ಧ್ರುವಗಳಿದ್ದಂತೆ. ರಾಜಕೀಯದಲ್ಲಿ ನನಗೆ ಆಗದವರು ಈ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಅಷ್ಟೇ~ ಎಂದು ಸಿದ್ದರಾಮಯ್ಯ ಉತ್ತರಿಸಿದರು.

ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಹೆಚ್ಚು ಕಾಲ ಇರುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರಲ್ಲಾ ಎಂದು ಕೆಣಕಿದಾಗ, ಅಧಿಕಾರ ಕಳೆದುಕೊಂಡ ಮೇಲೆ ನೀರಿನಿಂದ ಹೊರ ಬಂದ ಮೀನಿನಂತಾಗಿರುವ ಯಡಿಯೂರಪ್ಪ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಇದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ ಎಂದರು.

ಯಡಿಯೂರಪ್ಪ ಬಿಜೆಪಿಯಿಂದ ಹೊರಬರಲಿ ಎಂದು ಕಾಂಗ್ರೆಸ್ ಸಂಸದ ಎಚ್.ವಿಶ್ವನಾಥ್ ಅವರೇ ಹೇಳಿದ್ದಾರಲ್ಲಾ ಎಂದು ಸುದ್ದಿಗಾರರು ಹೇಳಿದಾಗ, `ಸುಮ್ಮನೆ ಯಡಿಯೂರಪ್ಪ ಅವರನ್ನು ಕೆಣಕಲು ಹೇಳಿರಬಹುದು ಅಷ್ಟೇ. ನಮ್ಮಲ್ಲಿ ಯಾವುದೇ ಗೊಂದಲ, ಅನಿಶ್ಚಿತತೆ ಇಲ್ಲ. ಚುನಾವಣೆಗೆ ಸಿದ್ಧರಾಗುತ್ತಿದ್ದೇವೆ~ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT