ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಪಯ್ಯ ಹ್ಯಾಟ್ರಿಕ್ ಸಾಧಿಸುವರೇ?

Last Updated 17 ಏಪ್ರಿಲ್ 2013, 11:07 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಚುನಾವಣಾ ರಾಜಕಾರಣದಲ್ಲಿ 30 ವರ್ಷಗಳ ಹಿಂದೆ ಹ್ಯಾಟ್ರಿಕ್ ಸಾಧಿಸಿದ್ದ ಕಾಂಗ್ರೆಸ್ಸಿನ ಜಿ.ಕೆ. ಸುಬ್ಬಯ್ಯ ಅವರ  ಸಾಧನೆಯನ್ನು ಹಾಲಿ ವಿರಾಜಪೇಟೆ ಶಾಸಕ ಬಿಜೆಪಿಯ ಕೆ.ಜಿ. ಬೋಪಯ್ಯ ಸರಿಗಟ್ಟುವರೇ ಎನ್ನುವ ಕುತೂಹಲ ಜಿಲ್ಲೆಯಲ್ಲಿ ಮೂಡಿದೆ.

ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೆ.ಜಿ.ಬೋಪಯ್ಯ ಅವರು ಸೋಮವಾರ ನಾಮಪತ್ರ ಸಲ್ಲಿಸಿ, ಮೂರನೇ ಬಾರಿ ಆಯ್ಕೆಗಾಗಿ ಮತದಾರರ ಮುಂದೆ ನಿಂತಿದ್ದಾರೆ.

ಜಿಲ್ಲೆಯ ವಿರಾಜಪೇಟೆ ಕ್ಷೇತ್ರದಿಂದ 1972, 1978 ಹಾಗೂ 1983ರಲ್ಲಿ ಸತತವಾಗಿ ಜಯಗಳಿಸುವ ಮೂಲಕ ಜಿ.ಕೆ. ಸುಬ್ಬಯ್ಯ ಹ್ಯಾಟ್ರಿಕ್ ಸಾಧಿಸಿದ್ದರು. ತದನಂತರದ ದಿನಗಳಲ್ಲಿ ವಿವಿಧ ಪಕ್ಷಗಳಿಂದ ಹಲವು ನಾಯಕರು ಸತತವಾಗಿ ಎರಡೆರಡು ಬಾರಿ ಜಯಗಳಿಸಿದ್ದರೂ ಹ್ಯಾಟ್ರಿಕ್ ಸಾಧಿಸುವಲ್ಲಿ ವಿಫಲರಾಗಿದ್ದರು.

ಪ್ರಸ್ತುತ ವಿರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಕೆ.ಜಿ.ಬೋಪಯ್ಯ ಅವರು ಇದಕ್ಕಿಂತ ಮೊದಲು ಅಂದರೆ 2004ರಲ್ಲಿ ಮಡಿಕೇರಿ ಕ್ಷೇತ್ರದಿಂದಲೂ ಜಯಗಳಿಸಿ, ಹ್ಯಾಟ್ರಿಕ್ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ಮೇ 5ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಯಶೋಗಾಥೆಯನ್ನು ಮುಂದುವರಿಸುವರೇ? ಎನ್ನುವ ಪ್ರಶ್ನೆ ಜಿಲ್ಲೆಯಲ್ಲಿ ಮನೆಮಾಡಿದೆ.

ಇದಕ್ಕಿಂತಲೂ ಮೊದಲು ವಿರಾಜಪೇಟೆ ಕ್ಷೇತ್ರದಲ್ಲಿ 1985, 1989ರಲ್ಲಿ ಸುಮಾ ವಸಂತ್ ಅವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಸತತ ಎರಡು ಬಾರಿ ಜಯ ದಾಖಲಿಸಿದ್ದರು. ಅವರ ಹ್ಯಾಟ್ರಿಕ್ ಸಾಧನೆಗೆ (1994ರಲ್ಲಿ) ಬಿಜೆಪಿಯ ಎಚ್.ಡಿ. ಬಸವರಾಜು ಅಡ್ಡಗಾಲು ಹಾಕಿದರು. 

ಮಡಿಕೇರಿ ಕ್ಷೇತ್ರದಲ್ಲಿ 1985 ಹಾಗೂ 1989ರಲ್ಲಿ ಕಾಂಗ್ರೆಸ್ಸಿನ ಡಿ.ಎ. ಚಿಣ್ಣಪ್ಪ ಸತತ ಎರಡು ಬಾರಿ ಜಯಗಳಿಸಿದ್ದರು. ಸೋಮವಾರಪೇಟೆ ಕ್ಷೇತ್ರದಲ್ಲಿ (2008ರಲ್ಲಿ ಈ ಕ್ಷೇತ್ರವನ್ನು ಮಡಿಕೇರಿ ಕ್ಷೇತ್ರದಲ್ಲಿ ವಿಲೀನಗೊಳಿಸಲಾಯಿತು) ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ದಿವಂಗತ ಆರ್.ಗುಂಡೂರಾವ್ 1972 ಹಾಗೂ 1978ರಲ್ಲಿ ಸತತ ಎರಡು ಬಾರಿ ಜಯಗಳಿಸಿದ್ದರು. ಅವರ ಹ್ಯಾಟ್ರಿಕ್ ಸಾಧನೆಗೆ (1983) ಜನತಾ ಪಕ್ಷದ ಅಭ್ಯರ್ಥಿ ಬಿ.ಎ. ಜೀವಿಜಯ ಅವರು ಅಡ್ಡಿಯಾದರು. ನಂತರ ಜೀವಿಜಯ ಅವರು 1985ರಲ್ಲಿ ಪುನಃ ಆಯ್ಕೆಗೊಂಡರು.

ಪ್ರಸ್ತುತ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆ ಕ್ಷೇತ್ರದಿಂದ 1994ರಲ್ಲಿ ಹಾಗೂ 1999ರಲ್ಲಿ ಸತತ ಎರಡು ಬಾರಿ ಜಯಭೇರಿ ಬಾರಿಸಿ, 2004ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಜೀವಿಜಯ ಅವರ ಎದುರು ಸೋಲು ಅನುಭವಿಸಿದರು.

ಸೋಮವಾರಪೇಟೆ ವಿಧಾನಸಭಾ ಕ್ಷೇತ್ರವು 2008ರಲ್ಲಿ ಪುನರ್‌ವಿಂಗಡಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ವಿಲೀನಗೊಂಡಿತು. ಆಗ ಅಪ್ಪಚ್ಚು ರಂಜನ್ ಪುನಃ ಜಯಭೇರಿ ಬಾರಿಸಿದರು. ಕಳೆದ 10 ತಿಂಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರಾದರು.

ಪ್ರಭಾವಿ ಜಿಲ್ಲೆ: ಕೊಡಗು ಚಿಕ್ಕ ಜಿಲ್ಲೆಯಾದರೂ ಅತ್ಯಂತ ಪ್ರಭಾವಿ ನಾಯಕರನ್ನು, ಸಚಿವರನ್ನು ನೀಡಿದೆ. ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಹಲವು ಖಾತೆಗಳನ್ನು ಇಲ್ಲಿನ ನಾಯಕರು ನಿರ್ವಹಿಸಿದ್ದಾರೆ. ಮುಖ್ಯಮಂತ್ರಿಯಾಗಿ ಆರ್.ಗುಂಡೂರಾವ್, ವಿಧಾನಸಭಾಧ್ಯಕ್ಷರಾಗಿ ಕೆ.ಜಿ.ಬೋಪಯ್ಯ, ಸಚಿವರಾಗಿ ಸುಮಾ ವಸಂತ್, ಎಂ.ಎಂ.ನಾಣಯ್ಯ, ಎಂ.ಸಿ.ನಾಣಯ್ಯ, ಬಿ.ಎ. ಜೀವಿಜಯ, ಅಪ್ಪಚ್ಚು ರಂಜನ್ ತಮ್ಮ ಛಾಪು ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT