ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋರ್ ಹೊಡೆದ ಪಾಲಿಕೆ ಬಜೆಟ್ ಚರ್ಚೆ

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 2012-13ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯ ಎರಡನೇ ದಿನವಾದ ಮಂಗಳವಾರ ವಿರೋಧ ಪಕ್ಷಗಳ ಅನೇಕ ಸದಸ್ಯರ ಗೈರು ಹಾಜರಿ ಸಭೆಯಲ್ಲಿ ಎದ್ದು ಕಂಡಿತು. ಆದರೆ, ಆಡಳಿತಾರೂಢ ಬಿಜೆಪಿಯ ಬಹಳಷ್ಟು ಮಂದಿ ಸದಸ್ಯರು ಸಭೆ ಕೊನೆಯವರೆಗೆ ಆಸಕ್ತಿಯಿಂದ ಕುಳಿತದ್ದು ಗಮನಸೆಳೆಯಿತು.

ಸಭೆಯ ಮಧ್ಯೆ ಮಧ್ಯೆ ವಿರೋಧ ಪಕ್ಷಗಳ ಸದಸ್ಯರು ಹೊರಗೆ ಹೋಗುವುದು, ಒಳಗೆ ಬರುವುದು ಸಾಮಾನ್ಯವಾಗಿತ್ತು. ಅಂಕಿ-ಅಂಶ, ವಾಸ್ತವಾಂಶಗಳ ಮೇಲೆ ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್, ಆಡಳಿತದ ಲೋಪವನ್ನು ಎತ್ತಿ ತೋರುತ್ತಿದ್ದರು.

ಆದರೆ, ಕೆಎಂಸಿ ಕಾಯ್ದೆ, ನಿಯಮಗಳ ಆಧಾರದ ಚೌಕಟ್ಟಿನಲ್ಲಿಯೇ ಚರ್ಚೆ ಮುಂದುವರಿಸಿದ್ದರಿಂದ ಸದಸ್ಯರಿಗೂ `ಬೋರ್~ ಅನಿಸಿರಬಹುದು. ಹೀಗಾಗಿ, ಸದಸ್ಯರು ಸಭೆಯಿಂದ ಹೊರಗೆ ಹೋಗುವುದು- ಒಳಗೆ ಬರುವುದು ಸಾಮಾನ್ಯವಾಗಿತ್ತು.

ಸಂಜೆ 5 ಗಂಟೆಯಾದರೂ ಗುಣಶೇಖರ್ ಚರ್ಚೆ ಮುಂದುವರಿಸಲು ಪಟ್ಟು ಹಿಡಿದಾಗ ಸದಸ್ಯರೇ ಕಾಫಿಗೆ ಸ್ವಲ್ಪ ವಿರಾಮ ನೀಡುವಂತೆ ಮೇಯರ್ ಅವರನ್ನು ಕೋರಿದರು. ಆದರೂ ಪಟ್ಟು ಸಡಿಲಸದೆ ಗುಣಶೇಖರ್ ಚರ್ಚೆ ಮುಂದುವರಿಸಿದಾಗ ಸದಸ್ಯರೇ ಎದ್ದು ಹೊರ ನಡೆದರು. `ನೀವು ಮಾತು ಮುಂದುವರಿಸಿ, ಸದಸ್ಯರು ಕಾಫಿ ಕುಡಿದು ಬರಲಿ~ ಎಂದು ಮೇಯರ್ ಡಿ. ವೆಂಕಟೇಶಮೂರ್ತಿ, ಗುಣಶೇಖರ್ ಅವರನ್ನು ಕೋರಿದರು.

ಆಗ ಸದಸ್ಯರೊಬ್ಬರು, ಮೇಯರ್ `ನಿಮಗೆ ಕಾಫಿ  ಬೇಡವೇ?~ ಎಂದು ಮೂದಲಿಸಿದರು. ಆಗ ಮೇಯರ್ ಸಭೆಯನ್ನು 10 ನಿಮಿಷ ಮುಂದೂಡಿ ಹೊರನಡೆದರು. ಆನಂತರ ಸಂಜೆ 6 ಗಂಟೆವರೆಗೂ ಚರ್ಚೆ ನಡೆಯಿತು. ಬುಧವಾರ ಬೆಳಿಗ್ಗೆ 9 ಗಂಟೆಗೆ ಸಭೆಯನ್ನು ಮುಂದೂಡಲಾಗಿದ್ದು, ಆರಂಭದಲ್ಲಿ ಗುಣಶೇಖರ್ ಅವರೇ ಚರ್ಚೆ ಮುಂದುವರಿಸಲಿದ್ದಾರೆ.

ಎಡಬಿಡಂಗಿ, ರಾಜೀನಾಮೆ: ಇ-ಪ್ರೊಕ್ಯೂರ್‌ಮೆಂಟ್‌ನ ಲೋಪಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಮಾಜಿ ಮೇಯರ್, ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ. ಚಂದ್ರಶೇಖರ್, `ನಮ್ಮ ಅಧಿಕಾರಿಗಳೇ ನಮ್ಮನ್ನು ಹಾಳು ಮಾಡುತ್ತಿದ್ದಾರೆ~ ಎಂದು ಆರೋಪಿಸಿದರು.

ಆಗ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಪಿ.ಎನ್. ಸದಾಶಿವ, `ಇಲ್ಲ, ಎಲ್ಲವೂ ಸರಿಯಾಗಿ ನಡೆಯುತ್ತಿದೆ~ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು. ಇದರಿಂದ ಸಿಟ್ಟಿಗೆದ್ದ ಚಂದ್ರಶೇಖರ್, `ಇಬ್ಬರೂ ಬಿಳಿ ಹಾಳೆಯಲ್ಲಿ ರಾಜೀನಾಮೆ ಪತ್ರ ಬರೆದುಕೊಡೋಣ. ನನ್ನ ಆರೋಪ ಸುಳ್ಳೆಂದು ನೀವು ಸಾಬೀತುಪಡಿಸಿದರೆ ನಾನು ಸಭೆಯಿಂದ ಹಾಗೇ ಹೊರ ನಡೆಯುತ್ತೇನೆ~ ಎಂದು ಸವಾಲು ಹಾಕಿದರು.

`ನಾನು ನಿಮ್ಮ ಬೆಂಬಲಕ್ಕೇ ಬಂದರೂ ಒಳ್ಳೆಯ ಎಡಬಿಡಂಗಿ ರೀತಿ ವರ್ತಿಸುತ್ತಿದ್ದೀರಿ~ ಎಂದು ಚಂದ್ರಶೇಖರ್ ಅವರು ಸದಾಶಿವ ಅವರನ್ನು ಚುಚ್ಚಿದರು. ಎಡಬಿಡಂಗಿ ಪದವನ್ನು ಕಡತದಿಂದ ವಾಪಸು ತೆಗೆಯುವಂತೆ ಸದಾಶಿವ ಒತ್ತಾಯಿಸಿದರು. ಆದರೆ, ಅದು ಅಸಂಸದೀಯ ಪದವಲ್ಲ ಎಂದು ಚಂದ್ರಶೇಖರ್ ವಾದಿಸಿದರು. ಈ ಹಂತದಲ್ಲೇ ಮೇಯರ್ ಸಭೆಯನ್ನು ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT