ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧಿಕ ಮೊಂಡುತನದಿಂದ ಕೂಡಿದ ಆಗ್ರಹ

ಚರ್ಚೆ
Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸರ್ಕಾರಗಳು ಒಂದು ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡರೆ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಅಂತಹ ದಮನಿತ ವಿಚಾರಕ್ಕೆ ಒಂದಲ್ಲದಿದ್ದರೆ ಹತ್ತು ಗುಪ್ತದಾರಿಗಳು ತೆರೆದುಕೊಳ್ಳುತ್ತವೆ.

ಸಂವಿಧಾನದ ಹಾಗೂ ಭಾರತೀಯ ದಂಡ ಸಂಹಿತೆಯ ನಾನಾ ಪರಿಚ್ಛೇದಗಳು, ಜೊತೆಗೆ ‘ಉಚಿತ ಅಥವಾ ಸಕಾರಣ ನಿರ್ಬಂಧ’ಗಳ ಹೆಸರಿನಲ್ಲಿ ಬೌದ್ಧಿಕ ಚಿಂತನೆಗಳ ಮೇಲೆ ದೇಶದಾದ್ಯಂತ ನಡೆಯುತ್ತಿರುವ ನಿರಂತರವಾದ ದಬ್ಬಾಳಿಕೆ ಯನ್ನು ಕುರಿತು ವಿವರಿಸುವ ಸಿ.ಎನ್‌. ರಾಮ ಚಂದ್ರನ್‌ರವರ ‘ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೇ?’ ಎಂಬ ಲೇಖನ (ದಿ: 19–09–2013) ಅಧ್ಯಯನಶೀಲತೆಯಿಂದ ಕೂಡಿದ ಮಾಹಿತಿಯುಕ್ತ ಲೇಖನದಂತೆ ತೋರುವುದಾ ದರೂ ಆ ಲೇಖನದ ಕೆಲವು ಬೇಡಿಕೆ ಮತ್ತು ಆಗ್ರಹಗಳು ಬೌದ್ಧಿಕ ಮೊಂಡುತನದಿಂದ ಕೂಡಿದ್ದಾಗಿದೆ.

ಮೌಢ್ಯ, ಕಂದಾಚಾರ, ಗುಲಾಮತನ, ಶೋಷಣೆಗಳ ವಿರುದ್ಧ ದನಿಯೆತ್ತಿದ  ಮತ್ತು ಅವುಗಳ ನಿರ್ಮೂಲನೆಗೆ ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತರಾಗಿದ್ದ ಜಗತ್ತಿನ ಎಲ್ಲ ಕಾಲದ ಚಿಂತಕರು ಮತ್ತು ಅನುಭಾವಿಗಳೂ (ಬುದ್ಧ, ಬಸವ, ಯೇಸು, ಸಾಕ್ರಟಿಸ್‌, ಮನ್ಸೂರ್‌, ಗೆಲಿಲಿಯೋ, ನೀಷೆ ಇತ್ಯಾದಿ) ತಮ್ಮ ಸಮಕಾಲೀನ ಕಾನೂನಿನ ದೃಷ್ಟಿಯಲ್ಲಿ ಅಪರಾಧಿ ಗಳೇ ಆಗಿದ್ದರು ಮತ್ತು ಅವರಲ್ಲಿ ಕೆಲವರು ಆಯಾ ಪ್ರಭುತ್ವಗಳು ಕಾನೂನಾತ್ಮಕವಾಗಿ (ಕೆಲವು ಸಂದರ್ಭಗಳಲ್ಲಿ ಕಾನೂನು ಬಾಹಿರವಾಗಿ) ವಿಧಿಸಿದ್ಧ ಶಿಕ್ಷೆಗಳನ್ನೂ ಅನು ಭವಿಸಿದ್ದರು.

ಸಾಕ್ರಟಿಸನಂತೂ ಅಥೆನ್ಸಿನ ನ್ಯಾಯಾಧಿಕರಣ ನೀಡಿದ ತೀರ್ಪಿಗೆ ಗೌರವದಿಂದ ತಲೆಬಾಗಿ ನಗುನಗುತ್ತಲೇ ನಂಜನ್ನು ನುಂಗಿದನೆಂದು ಪ್ಲೇಟೊ ಉಲ್ಲೇಖಿಸುತ್ತಾನೆ. ಸಂದರ್ಭದ ತುರ್ತಿನ ಕಾರಣದಿಂದಲೋ, ಅಜ್ಞಾನವಶದಿಂದಲೋ, ಹುಂಬತನದಿಂದಲೋ ಅವರಾರೂ ಇಂದಿನ ಜಾಣ ಬುದ್ಧಿಜೀವಿಗಳಂತೆ ತಮ್ಮ ತಮ್ಮ ನ್ಯಾಯಾಂಗ ವ್ಯವಸ್ಥೆಯ ಲೋಪ ಗಳನ್ನು ಪರಿಶೀಲಿಸಲು ಹೋಗದೆ ನೇರವಾಗಿ ಕಣ್ಣೆದುರಿನ ಪ್ರಶ್ನೆಗಳಿಗೆ ಮುಖಾಮುಖಿ ಯಾದರು ಮತ್ತು ವಿಷಮ ಪರಿಣಾಮಗಳನ್ನುಂಡರು.

ಸಂವಿಧಾನದ ಮುಖ್ಯ ಆಶಯ ವ್ಯವಸ್ಥೆಯಲ್ಲಿ ಶಾಂತಿ, ಸುಭದ್ರತೆ ಮತ್ತು ವ್ಯಕ್ತಿಗೌರವಗಳನ್ನು ಕಾಪಾಡುವುದಾಗಿದೆಯೇ ವಿನಾ ಬುದ್ಧಿಜೀವಿಗಳು ಮತ್ತು ಹಿಂದಣ ಅನುಭಾವಿಗಳು ಬಯಸಿದಂತೆ ಸಮುದಾಯವನ್ನು ನಿರ್ದಿಷ್ಟ ದಿಕ್ಕಿನತ್ತ ನಡೆಸುವುದು ಅಥವಾ ಹೊಸ ಆಲೋಚನೆಗೆ ಹಚ್ಚುವುದು ಅಲ್ಲ. ನ್ಯಾಯಾಂಗವು ಸಾಮಾಜಿಕ ಪರಿಸ್ಥಿತಿ, ಪರಿವರ್ತನೆಗಳನ್ನು ಅನುಸರಿಸಿ ರೂಪುಗೊಳ್ಳು ವುದೇ ವಿನಾ ಸ್ವಾಯತ್ತವಾಗಿ ಸಾಮಾಜಿಕ ಪರಿವರ್ತನೆ ತರಲು ಕ್ರಿಯಾಶೀಲವಾಗುವುದಿಲ್ಲ. ಆದ್ದರಿಂದಲೇ ಗೌತಮ ಬುದ್ಧನಂಥವರು ಮೊದಲು ನಿರೀಕ್ಷಣಾ ಜಾಮೀನನ್ನು ಪಡೆದು ಕೊಂಡು ಬಳಿಕ ವೈದಿಕಶಾಹಿ ಕಂದಾಚಾರ ಗಳ ವಿರುದ್ಧ ಧ್ವನಿಯೆತ್ತುವುದನ್ನು ಕಲ್ಪಿಸಿಕೊಳ್ಳಲೂ ನಮಗೆ ಸಾಧ್ಯವಾಗದಿರುವುದು. ಬುದ್ಧನು ಕಾನೂನನ್ನು ತನ್ನ ರಕ್ಷಕನೆಂದಾಗಲೀ ಕಂದಾಚಾರಗಳಲ್ಲಿ ಮುಳುಗಿದವರನ್ನು ತನ್ನ ಶತ್ರುವೆಂದಾಗಲೀ ಭಾವಿಸಲಿಲ್ಲ.

ಆದರೆ ಹಾಗೆ ಭಾವಿಸುವ ಮತ್ತು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮುಂದೆ ಅಂಗಲಾಚುವ ಬುದ್ಧಿಜೀವಿಗಳ ಮುಂದೆ ಎರಡು ದಾರಿಗಳಿವೆ: ಒಂದು, ಯಾವುದೇ ಕಾನೂನಾತ್ಮಕ ತೊಡಕುಗಳಿಗೆ ತಲ್ಲಣಿಸದೆ ತಮ್ಮ ಪ್ರಾಮಾಣಿಕ ಅನಿಸಿಕೆಗೆ ಬದ್ಧರಾಗಿ ತಮ್ಮ ಮೇಲೆರಗುವ ಘೋರ ಪರಿಣಾಮಗಳನ್ನು ಹಿಂದಿನವರಂತೆ ಧೈರ್ಯವಾಗಿ ಎದುರಿಸುವುದು. ಬುದ್ಧಿಜೀವಿಗಳ ಈ ಬದ್ಧತೆಯೇ ಕ್ರಮೇಣ ಒಂದು ಸಾಮಾಜಿಕ ಅಭಿಪ್ರಾಯವಾಗಿ ರೂಪುಗೊಂಡು ಸಾಂವಿಧಾನಿಕ ತಿದ್ದುಪಡಿಗೆ ದಾರಿ ಮಾಡಿಕೊಡಬಹುದು. ಇದನ್ನೇ ಬ್ರಿಟಿಷರ ಆಡಳಿತದ ಕಾಲದಲ್ಲಿ ಗಾಂಧಿ ಮಾಡಿದ್ದು. ಗಾಂಧಿಯ ಅಸಹಕಾರ ಚಳವಳಿಯ ಕಾರಣದಿಂದಾಗಿ ಬ್ರಿಟಿಷ್‌ ಸಂವಿಧಾನವು ತಾನೆಂದೂ ಊಹಿಸಿ ಕೊಂಡಿರದ ನಾನಾ ನೈತಿಕ ಬಿಕ್ಕಟ್ಟುಗಳಿಗೆ ಮುಖಾ ಮುಖಿಯಾಯಿತು ಮತ್ತು ಆ ಕಾರಣದಿಂದಾಗಿ ಗಾಂಧಿಗೆ ಕೃತಜ್ಞವಾಯಿತು. ಒಂದು ಪ್ರಭುತ್ವ ತನ್ನ ವಿರುದ್ಧವೇ ಬಂಡೆದ್ದವನಿಗೆ ಎಲ್ಲ ರೀತಿಯ ಭದ್ರತೆಯನ್ನು ಒದಗಿಸುವುದು, ಅವನನ್ನು ಗೌರವಪೂರ್ವಕವಾಗಿ ನಡೆಸಿಕೊಳ್ಳುವುದು ಇದೆಲ್ಲ ಇತಿಹಾಸದಲ್ಲಿ ಸುಲಭವಾಗಿ ಕಾಣಸಿಗುವ ನಿದರ್ಶನಗಳಲ್ಲ.

ತಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತನೆಯನ್ನು ಮುಂದುವರಿಸಲು ಬಯಸುವ ಆದರೆ ಹುತಾತ್ಮರಾಗಲು ಹಿಂಜರಿಯುವ ಬುದ್ಧಿಜೀವಿಗಳ ಎದುರಿಗೆ ಇನ್ನೂ ಒಂದು ದಾರಿ ಇದೆ: ‘ಪರಿಚ್ಛೇದ 153 ಎ, ಬಿ ಮತ್ತು 295–298 ಗಳ ತಿದ್ದುಪಡಿ ಮತ್ತು ‘ಪಬ್ಲಿಕ್‌ ಆರ್ಡರ್‌’ ‘ಡೀಸೆನ್ಸಿ–ಮೊರಾಲಿಟಿ’ ಪರಿಕಲ್ಪನೆಗಳ ಗುರುತಿಸುವಿಕೆ’ಯನ್ನೇ ತಮ್ಮ ಕಾಳಜಿಗಳ ಪೈಕಿ ಮೊದಲ ಆದ್ಯತೆಯನ್ನಾಗಿ ಪರಿಗಣಿಸಿ ತಮಗೆ ಅನುರೂಪವಾಗುವಂತೆ ಸಾಂವಿಧಾನಿಕ ತಿದ್ದು ಪಡಿಯಾಗುವವರೆಗೂ ಎಲ್ಲ ಬೌದ್ಧಿಕ ಚಿಂತನೆ ಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸುವುದು. ಬೌದ್ಧಿಕ ಚಿಂತನೆಗಿಂತಲೂ ಸಮಾಜಪರ ಕಾಳಜಿಯೇ ಮುಖ್ಯವೆಂದು ಭಾವಿಸುವ ಬುದ್ಧಿಜೀವಿಗಳ ಪಾಲಿಗೆ ಇದುವೇ ಒತ್ತಡ ಹೇರುವ ಒಂದು ತಂತ್ರವಾಗಿ ಪರಿಣಮಿ ಸುತ್ತದೆ ಮತ್ತು ಕ್ರಮೇಣ ಒಂದು ಚಳವಳಿಗೆ ಜನ್ಮ ನೀಡುತ್ತದೆ. ಇದಕ್ಕೂ ಹಿಂಜರಿಕೆಯಾಗುವು ದಾದರೆ ಅಂತಹ ಬುದ್ಧಿಜೀವಿಗಳು ಸುಮ್ಮನೆ ಖಾಸಗಿಯಾಗಿ ಇದ್ದುಬಿಡುವುದು ಒಳಿತು ಅದರಿಂದ ಸಮಾಜಕ್ಕಂತೂ ಇನ್ನೂ ಒಳಿತು.

ವಿಡಂಬನೆಯಂತೆ ತೋರುವ ಈ ಎರಡು ಆಯ್ಕೆಗಳು ನಮ್ಮ ಬುದ್ಧಿಜೀವಿಗಳ ಮುಂದಿರುವುದಾದರೆ ಒಟ್ಟು ಸಮುದಾಯದ ಮುಂದಿರುವುದು ವಾಸ್ತವದಲ್ಲಿ ಒಂದೇ ಆಯ್ಕೆಯಾಗಿದೆ ಅಥವಾ ನಿರೀಕ್ಷೆಯಾಗಿದೆ: ಜಸ್ಟಿಸ್‌ ಸಲ್ಡಾನಾ ಹೇಳಿದಂತೆ ‘ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ತರುವವರು ತುಂಬ ಸೂಕ್ಷ್ಮತೆಯಿಂದ ವರ್ತಿಸುವುದು’. ಆ ಸೂಕ್ಷ್ಮಜ್ಞತೆ ಇಲ್ಲದ ಮೇಲೆ ಸಿ.ಎನ್‌.ಆರ್‌. ಬಯಸುವ ಅಸಂದಿಗ್ಧವಾದ ‘ಪರಿಕಲ್ಪನೆಗಳ ಎಲ್ಲೆ’ಗಳೂ ನ್ಯಾಯವನ್ನು ರಕ್ಷಿಸುವಲ್ಲಿ ವಿಫಲವಾಗುವುವು. ಅಲ್ಲದೇ ಅಂತಹ ‘ಎಲ್ಲೆ’ಗಳು ಕಾಣದ ಹಿತಾಸಕ್ತಿಗಳ ಊಳಿಗದಲ್ಲಿ ನವೆಯುವ ಅಪಾಯವೂ ಇರುತ್ತದೆ. ಎಲ್ಲ ಸಂವಿಧಾನಗಳೂ ಉದಾತ್ತ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿ ಯುವವಾದರೂ ಪ್ರತಿಯೊಂದು ಸಾಂವಿಧಾನಿಕ ನಿಯಮವೂ ಒಂದು ನಿರ್ದಿಷ್ಟ ಪ್ರದೇಶದ ಎಲ್ಲ ಸಮುದಾಯಗಳ ಮನೋಧರ್ಮ ಮತ್ತು ಸಂವೇದನೆಗಳನ್ನು ಗೌರವಿಸಲೇಬೇಕಾದ ಅನಿ ವಾರ್ಯದಲ್ಲಿ ರೂಪುಗೊಂಡಿರುತ್ತದೆ ಎಂಬುದನ್ನು ಕಾನೂನಿನ ಆಶ್ರಯ ಬೇಡುವ ಬುದ್ಧಿಜೀವಿಗಳು ಮರೆಯಬಾರದು.

ನಾವು ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ಕ್ರಮವನ್ನು ತಡೆಯಲು ಕಾನೂನಾತ್ಮಕ ಹಾದಿಗಳನ್ನು ಕಂಡುಕೊಳ್ಳ ಬೇಕಾದುದು ಅತ್ಯಗತ್ಯ, ನಿಜ. ಆದರೆ ನಿಜವಾದ ಕ್ರಾಂತಿಕಾರೀ ವಿಚಾರಗಳನ್ನು ಹತ್ತಿಕ್ಕಲು ಜಗತ್ತಿನ ಯಾವ ಶಕ್ತಿಯಿಂದಲೂ ಈತನಕ ಸಾಧ್ಯವಾಗಿಲ್ಲ. ಮುಟ್ಟುಗೋಲು, ನಿಷೇಧಗಳಿಂದ ಯಾವ ವಿಚಾರವೂ ಮಣ್ಣುಗೂಡಿಲ್ಲ;  ಬದಲಿಗೆ ಇನ್ನೂ ಹೆಚ್ಚು ಪ್ರಚಾರ ಗಳಿಸಿವೆ ಎಂಬುದು ಇಂದು ಯಾರಿಗೂ ಗೊತ್ತಿಲ್ಲದ ವಿಚಾರವಾಗೇನೂ ಉಳಿದಿಲ್ಲ. ಮುಟ್ಟುಗೋಲಿಗೆ ಹೆದರಿ ತನ್ನ ವಿಚಾರಗಳನ್ನು ವ್ಯಕ್ತಪಡಿಸದೆ ಪರಿತಪಿಸುವ ವಿಚಾರವಾದಿಗಳಿಂದ ಸಮಾಜಕ್ಕೆ ಎಂದಾದರೂ ಪ್ರಯೋಜನವಾದೀತೇ? ಅಭಿವ್ಯಕ್ತಿಗೆ ಅವಕಾಶ ವಿಲ್ಲದ ಒಂದು ಸಮಾಜ ಆಂತರ್ಯದಲ್ಲಿ ರೋಗಗಳನ್ನು ಸಾಕಿಕೊಂಡಿರುವ ಕಾರಣ ದಿಂದಲೇ ಅಲ್ಲವೆ ನಮ್ಮ ನಡುವೆ ಬುದ್ಧಿಜೀವಿಗಳು ಚಲಾವಣೆಯಲ್ಲಿರುವುದು? ಒಂದು ಆರೋಗ್ಯ ಪೂರ್ಣ ಸಮಾಜದಲ್ಲಿ ಬುದ್ಧಿಜೀವಿಗಳು, ವಿಚಾರವಾದಿಗಳು, ಸಮಾಜ ಸುಧಾರಕರು ಅಕ್ಷರಶಃ ನಿರುದ್ಯೋಗಿಗಳಾಗಿಬಿಡುವರು.

ಸರ್ಕಾರಗಳು ಒಂದು ಪುಸ್ತಕವನ್ನು ಮುಟ್ಟು ಗೋಲು ಹಾಕಿಕೊಂಡರೆ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಅಂತಹ ದಮನಿತ ವಿಚಾರಕ್ಕೆ ಒಂದಲ್ಲದಿದ್ದರೆ ಹತ್ತು ಗುಪ್ತದಾರಿಗಳು ತೆರೆದು ಕೊಳ್ಳುತ್ತವೆ. ಆದರೆ ಇಂದು ನಮ್ಮ ಜನ ಸರ್ಕಾರ ವನ್ನೇ ಲೆಕ್ಕಿಸದೆ ವಿಚಾರವನ್ನು ದಮನಿಸುವ ನೆವದಲ್ಲಿ ಸುಷ್ಮಿತಾ ಬ್ಯಾನರ್ಜಿ, ದಾಭೋಲ್ಕರ ರಂತಹವರ ಜೀವ ತೆಗೆಯುವುದರಲ್ಲಿ ಮತ್ತು ಭೀಕರವಾದ ಕೋಮುಗಲಭೆಗಳಲ್ಲಿ ನಿರತರಾಗಿ ರುವುದು ನಿಜಕ್ಕೂ ಬೆಚ್ಚಿ ಬೀಳಿಸುವ ಸಂಗತಿ ಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಾನಿಗಿಂತ ಈ ಜೀವಹಾನಿಗಳ ಬಗ್ಗೆ ನಮ್ಮ ಬುದ್ಧಿಜೀವಿಗಳು ಹೆಚ್ಚು ಆತಂಕಿತರಾಗಿ ಆಲೋಚಿಸಬೇಕಾಗಿದೆ. ವಿಚಾರಗಳು ಮರುಹುಟ್ಟು ಪಡೆಯಬಲ್ಲವು, ಹತ್ತು ಹಲವು ರೂಪಗಳಲ್ಲಿ ಉಸಿರಾಡಬಲ್ಲವು. ಆದರೆ ಎಲ್ಲ ಕಾಲಕ್ಕೂ ವಿಚಾರಕ್ಕಿಂತ ಜೀವ ಪವಿತ್ರವಾದುದು ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT