ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌಲಿಂಗ್-ಫೀಲ್ಡಿಂಗ್ ಜೊತೆಗೂಡಿದರೆ..

Last Updated 6 ಮಾರ್ಚ್ 2011, 19:30 IST
ಅಕ್ಷರ ಗಾತ್ರ

1983ರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ವಿವಿಯನ್ ರಿಚರ್ಡ್ಸ್ ಮೇಲಕ್ಕೆತ್ತಿದ ಚೆಂಡನ್ನು ದೂರದಿಂದ ಓಡಿಹೋಗಿ ಕಪಿಲ್ ದೇವ ಹಿಡಿಯದೇ ಹೋಗಿದ್ದರೆ, ಭಾರತ ವಿಶ್ವಚಾಂಪಿಯನ್ ಆಗುತ್ತಲೇ ಇರಲಿಲ್ಲ.

ಕ್ರಿಕೆಟ್ ಪಂದ್ಯ ಗೆಲ್ಲಲು ಫೀಲ್ಡಿಂಗ್ ಮತ್ತು ಬೌಲಿಂಗ್ ಕೂಡ ಬ್ಯಾಟಿಂಗ್‌ನಷ್ಟೇ ಮಹತ್ವ ಪಡೆದುಕೊಂಡಿವೆ. ಕಳೆದ ಗುರುವಾರ ಹಾಲೆಂಡ್ ತಂಡದ ಮುಂದೆ ಅಲ್ಪ ಮೊತ್ತ ಗಳಿಸಿದ ಪಾಕಿಸ್ತಾನಕ್ಕೆ  ಗೆಲುವಿನ ಕುದುರೆ ಏರಲು ಸಾಧ್ಯವಾಗಿದ್ದು ಬೌಲಿಂಗ್ ಮತ್ತು ಫೀಲ್ಡಿಂಗ್ ಬಲದಿಂದಲೇ ಅಲ್ಲವೇ.

ಆದರೆ ಭಾರತ ತಂಡದತ್ತ ದೃಷ್ಟಿ ಹರಿಸಿದರೆ ಇವೆರಡೂ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ನಿಖರತೆ ಮತ್ತು ಪರಿಶ್ರಮದ ಅವಶ್ಯಕತೆ ಇರುವುದು ಎದ್ದು ಕಾಣುತ್ತಿದೆ. ಬಾಂಗ್ಲಾ ವಿರುದ್ಧದ ಉದ್ಘಾಟನೆ ಪಂದ್ಯದಲ್ಲಿ 370 ರನ್ನುಗಳ ಬೃಹತ್ ಮೊತ್ತ ಪೇರಿಸಿದ್ದ ಭಾರತ ತನ್ನ ಬ್ಯಾಟಿಂಗ್ ಬಲವನ್ನು ಪ್ರದರ್ಶಿಸಿತ್ತು. ಆದರೆ ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮಾಡಿದ ತಪ್ಪುಗಳಿಂದಾಗಿ ಹೆಚ್ಚು ರನ್ನುಗಳು ಹೋದವು.

ಇಂಗ್ಲೆಂಡ್ ವಿರುದ್ಧ ‘ಟೈ’ ಆದ ಪಂದ್ಯದಲ್ಲಿಯೂ ಅಷ್ಟೇ. ಇಂಗ್ಲೆಂಡ್‌ಗೆ ಹೋಲಿಸಿದರೆ ಭಾರತದ ಫೀಲ್ಡಿಂಗ್ ಗಮನ ಸೆಳೆಯುವಂತಿರಲಿಲ್ಲ.  338 ರನ್ನುಗಳ ಗುರಿಯನ್ನು ನೀಡಿದ್ದ ಭಾರತಕ್ಕೆ ಬೌಲಿಂಗ್‌ನಲ್ಲಿ ಹೆಚ್ಚಿನ ಸಹಾಯ ಸಿಗಲಿಲ್ಲ. ಮುನಾಫ್ ಪಟೇಲ್ ಮತ್ತು ಜಹೀರ್‌ಖಾನ್ ಬಿಟ್ಟರೆ ಎರಡೂ ಪಂದ್ಯಗಳಲ್ಲಿ ಉಳಿದ ಬೌಲರ್‌ಗಳ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ.

ಮೊದಲ ಪಂದ್ಯದಲ್ಲಿ ಶ್ರೀಶಾಂತ್ ತುಟ್ಟಿಯಾದ ರೀತಿ, ಎರಡನೇ ಪಂದ್ಯದಲ್ಲಿ ಆ್ಯಂಡ್ರ್ಯೂ ಸ್ಟ್ರಾಸ್ ಕಾಡಿದ ರೀತಿಯಲ್ಲಿಯೇ ಭಾರತದ ಬೌಲಿಂಗ್ ದೌರ್ಬಲ್ಯವನ್ನು ಅಳೆದುಬಿಡಬಹುದು. ಸ್ಪಿನ್ನರ್ ಪಿಯೂಷ್ ಚಾವ್ಲಾ ವಿಕೆಟ್ ಗಳಿಸಿದರೂ, ರನ್ನುಗಳ ವಿಷಯದಲ್ಲಿ ತುಟ್ಟಿಯಾದರು.

‘ವಿಶ್ವಕಪ್ ಗೆಲ್ಲುವ ಫೆವರಿಟ್ ಆಗಿರುವ ಭಾರತಕ್ಕೆ ಬೌಲಿಂಗ್ ದೌರ್ಬಲ್ಯವೇ ಮುಳುವಾಗಬಹುದು. ದೋನಿ ಬಳಗದ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ್ದ ಇಂಗ್ಲೆಂಡ್ ಬೌಲರ್‌ಗಳು ಐರ್ಲೆಂಡ್ ವಿರುದ್ಧ ಸೋತರು. ದೋನಿಯಂತಹ ಸಮರ್ಥ ನಾಯಕ ಇರುವ ಭಾರತ ತಂಡಕ್ಕೆ ಬೌಲಿಂಗ್‌ನಲ್ಲಿ ಹೆಚ್ಚಿನ ಆಯ್ಕೆಗಳಿಲ್ಲ. ಇಂತಹ ಸಂದರ್ಭದಲ್ಲಿ ಇರುವ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚುತ್ತದೆ’ ಎಂದು ಪಾಕಿಸ್ತಾನದ ಮಾಜಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಟೂರ್ನಿಯ ಆರಂಭಕ್ಕೂ ಮುನ್ನವೇ ಗಾಯಗೊಂಡು ತಂಡದಿಂದ ಹಿಂದೆ ಸರಿದ ಪ್ರವೀಣಕುಮಾರ ಅನುಪಸ್ಥಿತಿ ಕಾಡುತ್ತಿದೆ. ಅವರ ಬದಲಿಗೆ ಶ್ರೀಶಾಂತ್ ಮೊದಲ ಪಂದ್ಯದಲ್ಲಿಯೇ ನಿರಾಶೆಗೊಳಿಸಿದ್ದರು. ಪಾರ್ಟ್‌ಟೈಂ ಬೌಲರ್‌ಗಳು ಎಲ್ಲ ಸಂದರ್ಭಗಳಲ್ಲಿಯೂ ‘ಕ್ಲಿಕ್’ ಆಗುತ್ತಾರೆ ಎಂದು ಹೇಳುವುದು ಕಷ್ಟ.

ಬ್ಯಾಟಿಂಗ್‌ನಲ್ಲಿ ರನ್ನು ಗಳಿಸುವಷ್ಟೇ ಫೀಲ್ಡಿಂಗ್‌ನಲ್ಲಿ ರನ್ನುಗಳನ್ನು ಉಳಿಸುವುದೂ ಮಹತ್ವದ್ದು. ಒಂದೇ ಒಂದು ರನ್ ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷ (2010) ಜೈಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ  ಒಂದು ರನ್ ಜಯ ಸಾಧಿಸಲು ಬೌಲರ್ ಮತ್ತು ಫೀಲ್ಡರುಗಳ ಸಂಘಟಿತ ಹೋರಾಟವೇ ಕಾರಣವಾಗಿತ್ತು. ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು ಕೊನೆಯ ಓವರಿನಲ್ಲಿ  ಏಳು ರನ್ ಬೇಕಾಗಿದ್ದವು. ಪ್ರವೀಣಕುಮಾರ ಎಸೆತವನ್ನು ಬ್ಯಾಟ್ಸ್‌ಮನ್ ಲಾಂಗ್‌ವೆಲ್ಟ್ ಪುಲ್ ಪಾಡಿದ್ದರು.

ಬೌಂಡರಿ ಗೆರೆಯಲ್ಲಿ 36ರ ಹರೆಯದ ಸಚಿನ್ ಪ್ರದರ್ಶಿಸಿದ ಅದ್ಭುತ ಫೀಲ್ಡಿಂಗ್‌ನಿಂದಾಗಿ ಚೆಂಡು ಬೌಂಡರಿಗೆರೆ ದಾಟಲಿಲ್ಲ. ಆದರೆ ಬ್ಯಾಟ್ಸ್‌ಮನ್ ಮೂರು ರನ್ ಓಡಿದ್ದರು. ಬೌಂಡರಿಗೆರೆ ಕೂದಲೆಳೆಯ ಅಂತರದಲ್ಲಿ ಡೈವ್ ಹೊಡೆದಿದ್ದ ಸಚಿನ್ ಚೆಂಡಿನ ಓಟಕ್ಕೆ ಕೈ ಅಡ್ಡ ಹಾಕಿದ್ದರು. ಮೂರನೇ ಅಂಪೈರ್‌ಗೂ ತೀರ್ಪು ನೀಡುವುದು ಕಷ್ಟವಾಗಿತ್ತು. ಆದರೆ ಸಂಶಯದ ಫಲ ಸಚಿನ್ ಪರವಾಗಿತ್ತು. ಅದು ಭಾರತದ ಒಂದು ರನ್ ವಿಜಯಕ್ಕೆ ಕಾರಣವಾಯಿತು. ಪ್ರಯತ್ನವಿದ್ದರೆ ಫಲ ಒಲಿಯುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.

‘ಭಾರತ ತಂಡವು ಕ್ಷೇತ್ರರಕ್ಷಣೆಯಲ್ಲಿ ಸುಧಾರಣೆ ಮಾಡಿಕೊಂಡಿದೆ’ ಎಂದು ವಿಶ್ವಕಪ್ ಟೂರ್ನಿ ಆರಂಭಕ್ಕೆ ಮುನ್ನ ‘ವಿಶ್ವಶ್ರೇಷ್ಠ ಫೀಲ್ಡರ್’ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಹೇಳಿದ್ದರು.  ಆದರೆ ಭಾರತ ಆಡಿದ ಕಳೆದ ಎರಡು ಪಂದ್ಯಗಳಲ್ಲಿ ಈ ಮಾತು ಸಂಪೂರ್ಣವಾಗಿ ಸಾಬೀತಾಗಿಲ್ಲ.  ಕಪ್ ಗೆಲ್ಲುವ ಕನಸು ನನಸಾಗಬೇಕಾದರೆ ರೋಡ್ಸ್ ಮಾತು ನಿಜವಾಗಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT