ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಉದ್ಯೋಗಿ ಖಾತೆಗೆ ದ್ವಿಶತಕ ಜಮೆ!

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನ ವಿಜಯಾ ಬ್ಯಾಂಕ್ ಉದ್ಯೋಗಿ  ಸಿ. ಮುರಳೀಧರನ್ ಗೌತಮ್ ಖಾತೆಗೆ ಭಾನುವಾರ ಮೈಸೂರಿನಲ್ಲಿ ದ್ವಿಶತಕದ ದಾಖಲೆ ಜಮೆಯಾಯಿತು! 

ಭಾನುವಾರ ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಭರ್ಜರಿ ದ್ವಿಶತಕ  (257; 576ನಿ, 394ಎಸೆತ, 20ಬೌಂಡರಿ) ಗಳಿಸುವ ಮೂಲಕ ಕೆಲವು ದಾಖಲೆಗಳ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ದ್ವಿಶತಕ ದಾಖಲಿಸಿದ ಕರ್ನಾಟಕದ 14ನೇ ಆಟಗಾರರಾಗಿರುವ ಗೌತಮ್, ಪ್ರಸಕ್ತ ಋತುವಿನಲ್ಲಿ ಆರು ಪಂದ್ಯಗಳಿಂದ 586 ರನ್ನುಗಳನ್ನು ಗಳಿಸಿದ್ದಾರೆ. ಇದೇ ಋತುವಿನಲ್ಲಿ ದ್ವಿಶತಕ ಗಳಿಸಿದ ಕರ್ನಾಟಕದ ಎರಡನೇ ಆಟಗಾರನಾಗಿದ್ದಾರೆ. ಚೆನ್ನೈನಲ್ಲಿ ತಮಿಳುನಾಡು ವಿರುದ್ಧ ಗಣೇಶ್ ಸತೀಶ್ (ಅಜೇಯ 200) ದ್ವಿಶತಕದ ಗಳಿಸಿದ್ದರು. 

2008ರಲ್ಲಿ ಬೆಂಗಳೂರಿನಲ್ಲಿ ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಗೌತಮ್, 37 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ. ಇಲ್ಲಿಯವರೆಗೆ ಅವರ  ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 158 ಅಗಿತ್ತು. 26 ವರ್ಷ ವಯಸ್ಸಿನ ಗೌತಮ್ ಖಾತೆಯಲ್ಲಿ ಒಟ್ಟು ಏಳು ಶತಕಗಳು, 8 ಅರ್ಧಶತಕಗಳು ಇವೆ. ಒಟ್ಟು 2171 ರನ್ನುಗಳು ಅವರ ಹೆಸರಿನಲ್ಲಿವೆ. ವಿಕೆಟ್ ಕೀಪಿಂಗ್‌ನಲ್ಲಿ 115 ಕ್ಯಾಚ್ ಪಡೆದಿದ್ದಾರೆ. 

ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಗೌತಮ್ ಏಳನೇ ಕ್ರಮಾಂಕದಲ್ಲಿ ಆಡಲು ಬರುತ್ತಿದ್ದರು. ಆದರೆ, ಮೈಸೂರಿನಲ್ಲಿ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ದ್ವಿಶತಕದ ಸಾಧನೆ ಮಾಡಿದರು.  ಪಂದ್ಯದ ಮೊದಲ ದಿನವೇ ಶತಕ ದಾಖಲಿಸಿದ್ದ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡು ಸಾವಿರ ರನ್‌ಗಳ ಗಡಿ ದಾಟಿದ್ದರು. ವಿದರ್ಭ ವಿರುದ್ಧ ಶತಕ ಗಳಿಸಿದ ಐದನೇ ಬ್ಯಾಟ್ಸ್‌ಮನ್ ಕೂಡ ಆಗಿದ್ದರು. ದೀಪಕ್ ಚೌಗುಲೆ, ರೋಲ್ಯಾಂಡ್ ಬ್ಯಾರಿಂಗ್ಟನ್, ದೊಡ್ಡಗಣೇಶ್, ಕೆ.ಎಲ್. ರಾಹುಲ್ ಅವರು ವಿದರ್ಭ ವಿರುದ್ಧ ಶತಕ ಗಳಿಸಿರುವ ಕರ್ನಾಟಕದ ಆಟಗಾರರು. ಅದರಲ್ಲೂ 2002ರಲ್ಲಿ ನಾಗಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ದೀಪಕ್ ಚೌಗುಲೆ ಗಳಿಸಿದ್ದ 166 ರನ್ನುಗಳು ವಿದರ್ಭದ ಎದುರು ಇದುವರೆಗೆ ಕರ್ನಾಟಕದ ಬ್ಯಾಟ್ಸ್‌ಮನ್‌ವೊಬ್ಬ ಗಳಿಸಿದ್ದ ದೊಡ್ಡ ಮೊತ್ತವಾಗಿತ್ತು. ಆದರೆ ಈ ದಾಖಲೆಯನ್ನೂ ಗೌತಮ್ ಮೈಸೂರಿನಲ್ಲಿ ಮೀರಿ ನಿಂತಿದ್ದಾರೆ.

`ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಸಿಕ್ಕಿದ್ದು ಬಹಳ ಸಹಕಾರಿಯಾಯಿತು. ಸಾಕಷ್ಟು ಸಮಯಾವಕಾಶ ಮತ್ತು ಮುಂದೆ ಬ್ಯಾಟಿಂಗ್ ಪಡೆ ಇದ್ದ ಕಾರಣ ದ್ವಿಶತಕದ ಸಾಧನೆ ಸಾಧ್ಯವಾಯಿತು. ಆದರೆ ಚೆನ್ನೈನಲ್ಲಿ ನಾನು ಗಳಿಸಿದ್ದ ಶತಕ (130) ಹೆಚ್ಚು ಖುಷಿ ಕೊಟ್ಟಿತ್ತು. ಏಕೆಂದರೆ ಅಲ್ಲಿ 500 ರನ್‌ಗಳಿಗಿಂತಲೂ ಹೆಚ್ಚು ಮೊತ್ತವನ್ನು ಬೆನ್ನಟ್ಟಿದ್ದಾಗ ತಂಡವನ್ನು ಸೋಲಿನಿಂದ ಪಾರು ಮಾಡಲು ನನ್ನ ಶತಕ ನೆರವಾಗಿತ್ತು' ಎಂದು ಗೌತಮ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT