ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಎದುರು ರೈತನ ಶವ ಇಟ್ಟು ಪ್ರತಿಭಟನೆ

Last Updated 17 ಡಿಸೆಂಬರ್ 2010, 12:35 IST
ಅಕ್ಷರ ಗಾತ್ರ

ಕುಣಿಗಲ್: ಆಘಾತದಿಂದ ಸಾವನ್ನಪ್ಪಿದ ತಾಲ್ಲೂಕಿನ ಕೊತ್ತಗೆರೆ ಹೋಬಳಿ ಗುನ್ನಾಗರೆ ಗ್ರಾಮದ ಚನ್ನಕೇಶವಮೂರ್ತಿ (40) ಶವವನ್ನು ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಎದುರು ಇಟ್ಟು ಗ್ರಾಮಸ್ಥರು ಗುರುವಾರ ಪ್ರತಿಭಟಿಸಿದರು.

ಬ್ಯಾಂಕ್ ಅಧಿಕಾರಿಗಳ ನಿರಂತರ ಕಿರುಕುಳವೇ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ವಿವರ: ಚನ್ನಕೇಶವಮೂರ್ತಿ ಮೂರು ವರ್ಷಗಳ ಹಿಂದೆ ಎಸ್‌ಬಿಎಂನಲ್ಲಿ ಟ್ರ್ಯಾಕ್ಟರ್ ಸಾಲ ಪಡೆದಿದ್ದರು. ಪ್ರಾರಂಭದಲ್ಲಿ ಕೆಲ ಕಂತುಗಳನ್ನು ಪಾವತಿಸಿದ್ದು, ನಂತರ ಮರು ಪಾವತಿ ಮಾಡಿರಲಿಲ್ಲ.

ಡಿ. 12ರಂದು ಮನೆಗೆ ಬಂದ ಬ್ಯಾಂಕ್ ಕ್ಷೇತ್ರ ಅಧಿಕಾರಿಗಳು ಸಾಲದ ಬಾಕಿ ರೂ. 9 ಲಕ್ಷ, ಬಡ್ಡಿ 1.5 ಲಕ್ಷ ಕಟ್ಟಬೇಕು, ಇಲ್ಲವಾದರೆ ಆಸ್ತಿ ಹರಾಜು ಹಾಕುವುದಾಗಿ ಹೇಳಿದ್ದರು ಎನ್ನಲಾಗಿದೆ. 

12 ರಂದು ಚನ್ನಕೇಶವ ಮೂರ್ತಿ ಕುಸಿದು ಬಿದ್ದ ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ನಿಧನರಾದರು.

ಟ್ರ್ಯಾಕ್ಟರ್‌ನಲ್ಲಿ ಶವ ಇಟ್ಟುಕೊಂಡು ಬಂದ ಗ್ರಾಮಸ್ಥರು ಮೊದಲಿಗೆ ಪೊಲೀಸ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ಮಾಡಿದರು. ನಂತರ ಬ್ಯಾಂಕ್ ಶಾಖೆ ಮುಂಭಾಗಕ್ಕೆ ಪ್ರತಿಭಟನೆ ಸ್ಥಳಾಂತರಿಸಿದರು.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ತುಮಕೂರಿನಿಂದ ಬ್ಯಾಂಕ್ ಎಜಿಎಂ ರಮಾನಂದ್ ಸ್ಥಳಕ್ಕೆ ಧಾವಿಸಿ ಬಂದರು. ನಂತರ ತಹಶೀಲ್ದಾರ್ ಡಾ.ರವಿ ಎಂ.ತಿರ್ಲಾಪುರ್, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಬ್ಯಾಂಕ್ ವ್ಯವಸ್ಥಾಪಕಿ ಗೀತಾ, ಪಿಎಸ್‌ಐ ಚನ್ನಯ್ಯಹಿರೇಮಠ್ ಸಮ್ಮುಖದಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಸಾಲ ಮನ್ನಾ ಮಾಡುವ ಲಿಖಿತ ಭರವಸೆಯನ್ನು ಬ್ಯಾಂಕ್ ಅಧಿಕಾರಿಗಳು ನೀಡಿದರು. ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಪತಿ ಸಾವಿಗೆ ಬ್ಯಾಂಕ್ ಅಧಿಕಾರಿಗಳ ಒತ್ತಡ ಕಾರಣವಾಗಿದ್ದು, ಕ್ರಮ ಕೈಗೊಳ್ಳುವಂತೆ ಮೃತ ಚನ್ನಕೇಶವ ಮೂರ್ತಿ ಪತ್ನಿ ಸುಜಾತಾ ಕುಣಿಗಲ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT