ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್: ಕನಸುಗಳಿಗೆ ರೆಕ್ಕೆಪುಕ್ಕ...

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

1969ರಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ನಡೆದ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಉದ್ದಿಮೆ ಸಂಸ್ಥೆಗಳು ತಮ್ಮದೇ ಆದ ಬ್ಯಾಂಕ್‌ಗಳನ್ನು ಸ್ಥಾಪಿಸಲು ಪೂರ್ವಭಾವಿ ವೇದಿಕೆ ಸಿದ್ಧಗೊಳ್ಳುತ್ತಿದೆ.
 
ಭಾರತೀಯ ರಿಸರ್ವ್ ಬ್ಯಾಂಕ್, ಎರಡು ವಾರಗಳ ಹಿಂದೆ ಪ್ರಕಟಿಸಿರುವ ಹೊಸ ಖಾಸಗಿ ಬ್ಯಾಂಕ್‌ಗಳ ಸ್ಥಾಪನೆಗೆ ಸಂಬಂಧಿಸಿದ (ಲೈಸೆನ್ಸ್) ಮಾರ್ಗದರ್ಶಿ ಸೂತ್ರ ಕರಡು ದಾಖಲೆಯು ಕಾರ್ಪೊರೇಟ್ ಸಮೂಹಗಳ ಕನಸುಗಳಿಗೆ ರೆಕ್ಕೆ ಪುಕ್ಕ ಮೂಡಿಸಿದೆ. ಉದ್ದಿಮೆ ಸಂಸ್ಥೆಗಳ ಮಹತ್ವಾಕಾಂಕ್ಷೆಯ ಕನಸು ಈಗ ನನಸಾಗುವ ಕಾಲ ಸನ್ನಿಹಿತವಾಗಿದೆ.

ಈ ಕರಡು ಮಾರ್ಗದರ್ಶಿ ಸೂತ್ರಗಳು - ವ್ಯಾಪಕ ಪ್ರಮಾಣದ ಹಣಕಾಸು ಸೇರ್ಪಡೆ, ದಕ್ಷ ಕಾರ್ಪೊರೇಟ್ ಆಡಳಿತ, ಉದ್ದಿಮೆ ಸಂಸ್ಥೆಗಳ ಹಣಕಾಸು ವಹಿವಾಟಿನ ಮೇಲೆ ತೀವ್ರ ನಿಗಾ / ನಿಯಂತ್ರಣ, ಷೇರು ವಹಿವಾಟು ಆರಂಭಕ್ಕೆ ಕಾಲ ಮಿತಿ ಮತ್ತಿತರ ಸಕಾರಾತ್ಮಕ ಸಂಗತಿಗಳನ್ನು ಒಳಗೊಂಡಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ರಾಷ್ಟ್ರೀಕರಣದ ಉದ್ದೇಶ ಸಾಕಾರಗೊಳಿಸಲು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ, ಇನ್ನಷ್ಟು ಖಾಸಗಿ ಬ್ಯಾಂಕ್‌ಗಳ ಅಗತ್ಯ ಏನಿದೆ. ಇದರಿಂದ ಜನರ ಹಣಕ್ಕೆ ಸುರಕ್ಷತೆ ದೊರೆಯಲಿದೆಯೇ. ಹಣಕಾಸು ಅವ್ಯವಹಾರಗಳು ನಡೆದು, ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುವ ಅಪಾಯ ಇಲ್ಲವೆ ಮತ್ತಿತರ ಅನುಮಾನಗಳೂ ಕಾಡುತ್ತಿವೆ.

ಟಾಟಾ, ಅಂಬಾನಿ, ಬಿರ್ಲಾ, ಮಹೀಂದ್ರಾ ಮತ್ತು ಬಜಾಜ್ ಸಮೂಹ ಮುಂತಾದ ಉದ್ದಿಮೆ ಸಂಸ್ಥೆಗಳು ತಮ್ಮದೇ ಆದ ಬ್ಯಾಂಕ್‌ಗಳನ್ನು ಸ್ಥಾಪಿಸಲು ಬಹಳ ವರ್ಷಗಳಿಂದ ಎದುರು ನೋಡುತ್ತಿವೆ.

ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ ರಿಲಯನ್ಸ್ ಕ್ಯಾಪಿಟಲ್, ರೆಲಿಗೇರ್, ಬಜಾಜ್ ಫೈನಾನ್ಸ್ ಸರ್ವಿಸ್, ಎಲ್‌ಆಂಡ್‌ಟಿ ಫೈನಾನ್ಸ್, ಟಾಟಾ ಕ್ಯಾಪಿಟಲ್ ಮುಂತಾದವೂ ಬ್ಯಾಂಕ್‌ಗಳ ಲೈಸೆನ್ಸ್ ಪಡೆಯಲು ಉತ್ಸುಕವಾಗಿವೆ.

ಈ ಪಟ್ಟಿಯಲ್ಲಿ ಎಲ್‌ಆಂಡ್‌ಟಿ, ಶ್ರೀರಾಂ ಕ್ಯಾಪಿಟಲ್ ಮತ್ತು ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಕೂಡ ಸೇರಿದೆ.

ಮಾರ್ಗದರ್ಶಿ ಸೂತ್ರಗಳನ್ನೆಲ್ಲ ಈಡೇರಿಸುವ ಬಗ್ಗೆ ಕಾರ್ಪೊರೇಟ್ ಸಂಸ್ಥೆಗಳು ಭರವಸೆಯ ಮಾತುಗಳನ್ನಾಡುತ್ತಿವೆ. ಆದರೂ, ಈ ಬಗ್ಗೆ ಇನ್ನೂ ಸಾಕಷ್ಟು ವಿವರಣೆ, ಸ್ಪಷ್ಟನೆ ಬೇಕಾಗಿದೆ.

ಮಾಲೀಕತ್ವ, ಕಾರ್ಪೊರೇಟ್ ಸಮೂಹ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅನುಮತಿ ಪಡೆಯುವ ಬಗೆಗಿನ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ದೊರೆಯಬೇಕಾಗಿದೆ.

`ಆರ್‌ಬಿಐ~ನ ಕರಡು ಮಾರ್ಗದರ್ಶಿ ಸೂತ್ರಗಳಲ್ಲಿ ಇನ್ನೂ ಸಾಕಷ್ಟು ಸ್ಪಷ್ಟನೆ ಬೇಕಾಗಿದ್ದರೂ, ಕಾರ್ಪೊರೇಟ್ ಸಂಸ್ಥೆಗಳು ಈ ಎಲ್ಲ ನಿಬಂಧನೆ ಪೂರೈಸುವುದಾಗಿ ತಿಳಿಸಿ ತಮ್ಮ ಆಸಕ್ತಿ ಪ್ರಕಟಿಸಿವೆ. ಹೊಸ ಬ್ಯಾಂಕ್ ಲೈಸೆನ್ಸ್ ಬುಟ್ಟಿಗೆ ಹಾಕಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು, ಎಲ್ಲ ಷರತ್ತುಗಳನ್ನು ಪೂರೈಸಲು ಹೊರಟಿವೆ.

ತಮ್ಮದೇ ಆದ ಬ್ಯಾಂಕ್ ಸ್ಥಾಪನೆಯ ಆಸಕ್ತ ಸಂಸ್ಥೆಗಳಲ್ಲಿ ಕೆಲವು ಬ್ಯಾಂಕಿಂಗ್ ವಹಿವಾಟಿಗೆ ದುಮುಕಲು ಸಲಹಾ ಸಮಿತಿ ರಚಿಸಿದ್ದರೆ, ಇನ್ನೂ ಕೆಲ ಸಂಸ್ಥೆಗಳು ಇತರ ಸಲಹಾ ಸಂಸ್ಥೆಗಳ ಸೇವೆ ಪಡೆಯಲು ಮುಂದಾಗಿವೆ.

2001ರ ಜನವರಿಯಲ್ಲಿ ನೀಡಿದ್ದ ಭರವಸೆ ಜಾರಿಗೆ  `ಆರ್‌ಬಿಐ~  ಈಗ ಕಾರ್ಯಪ್ರವೃತ್ತಗೊಂಡಿದ್ದು, ತನ್ನ ಕರಡು ಮಾರ್ಗದರ್ಶಿ ಸೂತ್ರಗಳಿಗೆ  ಅಭಿಪ್ರಾಯ ಆಹ್ವಾನಿಸಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಈ ಮಾರ್ಗದರ್ಶಿ ಸೂತ್ರಗಳು  ಸಕಾರಾತ್ಮಕವಾಗಿವೆ ಎಂದು ಹೂಡಿಕೆ ಬ್ಯಾಂಕಿಂಗ್ ಸಂಸ್ಥೆ ಮೋರ್ಗನ್ ಸ್ಟ್ಯಾನ್ಲೆ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಖಾಸಗಿ ಉದ್ದಿಮೆ ಸಂಸ್ಥೆಗಳು ಬ್ಯಾಂಕಿಂಗ್ ವಹಿವಾಟು ಪ್ರವೇಶಕ್ಕೆ ಯಾವುದೇ ನಿರ್ಬಂಧ ಇಲ್ಲದಿದ್ದರೂ, ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಈಗ ಹಿಂದಿಗಿಂತ ಹೆಚ್ಚಾಗಿದೆ.

ಈ ಕಾರಣಕ್ಕೆ `ಆರ್‌ಬಿಐ~ ಅನೇಕ  ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. 1949ರ ಬ್ಯಾಂಕ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ, ಠೇವಣಿದಾರರ ಹಿತಾಸಕ್ತಿ ರಕ್ಷಿಸಲು ಬ್ಯಾಂಕ್‌ನ ನಿರ್ದೇಶಕ ಮಂಡಳಿ ರದ್ದುಪಡಿಸಲು (ಸೂಪರ್‌ಸೀಡ್) `ಆರ್‌ಬಿಐ~ ಅಧಿಕಾರ ಹೊಂದಿರಲಿದೆ.

ಕಾರ್ಪೊರೇಟ್ ಸಂಸ್ಥೆಯ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟ, ಇತರ ಹಣಕಾಸು ಚಟುವಟಿಕೆ ನಡೆಸದ ಪ್ರತ್ಯೇಕ ಸಂಸ್ಥೆಯು ಹೊಸ ಬ್ಯಾಂಕ್‌ಗಳನ್ನು ನಿರ್ವಹಿಸಬೇಕು ಎನ್ನುವ ನಿಬಂಧನೆಯು ಜನರ ಹಣಕ್ಕೆ ಹೆಚ್ಚುವರಿ ಭದ್ರತೆ ಒದಗಿಸಲಿದೆ. ಉದ್ದಿಮೆ ಸಂಸ್ಥೆಯ ಇತರ ಘಟಕಗಳಲ್ಲಿನ ಹಣಕಾಸು ಬಿಕ್ಕಟ್ಟುಗಳಿಗೆ ಠೇವಣಿದಾರರ ಹಣ ದುರ್ಬಳಕೆ ಆಗುವುದನ್ನು ಈ ನಿಬಂಧನೆಯು ತಡೆಯಲಿದೆ.

ಎಲ್ಲ ಅರ್ಹತಾ ಮಾನದಂಡಗಳನ್ನು ಪೂರೈಸಿದ ಖಾಸಗಿ ಸಂಸ್ಥೆಗಳಿಗೆಲ್ಲ ಬ್ಯಾಂಕ್ ಲೈಸೆನ್ಸ್ ಅನುಮತಿ ನೀಡಲು ಸಾಧ್ಯವಿಲ್ಲ ಎನ್ನುವ ನಿಬಂಧನೆಯು ಹೆಚ್ಚು ಮಹತ್ವದ್ದಾಗಿದೆ. `ಆರ್‌ಬಿಐ~ ನೇಮಿಸುವ ಪರಿಣತರ ಸಮಿತಿಯು ಲೈಸೆನ್ಸ್ ನೀಡುವ ನಿರ್ಧಾರ ಅಂತಿಮಗೊಳಿಸಲಿದೆ.

ಎರಡು ವರ್ಷಗಳಲ್ಲಿ ಕಡ್ಡಾಯವಾಗಿ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ನಿಬಂಧನೆಯು, ಬ್ಯಾಂಕ್‌ನ ಪ್ರವರ್ತಕರ ಪ್ರಶ್ನಾರ್ಹ ಸಾಲ ನೀಡಿಕೆ ಪ್ರವೃತ್ತಿಗೆ ಕಡಿವಾಣ ವಿಧಿಸಲಿದೆ.

ವಿರೋಧ
ಖಾಸಗಿ ಉದ್ದಿಮೆ ಸಂಸ್ಥೆಗಳು ಬ್ಯಾಂಕ್ ವಹಿವಾಟು ನಡೆಸಲು ಅವಕಾಶ ನೀಡಬಾರದು ಎನ್ನುವ ಟೀಕೆಯೂ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಕ್ರಮವು ಅವಿವೇಕತನದ್ದು ಮತ್ತು ಪ್ರತಿಗಾಮಿ ಆಗಿದೆ. ದೇಶದ ಅರ್ಥ ವ್ಯವಸ್ಥೆಗೆ ಎಣಿಕೆಗೆ ನಿಲುಕದ ಹಾನಿ ಉಂಟಾಗಲಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಇಂದಿರಾ ಗಾಂಧಿ ಅವರು 1969ರಲ್ಲಿ ಜಾರಿಗೆ ತಂದಿದ್ದ ರಾಷ್ಟ್ರೀಕರಣದ ಸದುದ್ದೇಶಕ್ಕೆ ಈ ಬ್ಯಾಂಕ್‌ಗಳ ಖಾಸಗೀಕರಣ ನೀತಿಯು  ತದ್ವಿರುದ್ಧವಾಗಿದೆ. ಬ್ಯಾಂಕಿಂಗ್ ವಲಯವು ಬಿಕ್ಕಟ್ಟಿನತ್ತ ಸಾಗಲು ಮತ್ತು ಹಣಕಾಸು ಹಗರಣಗಳಿಗೂ ಕುಮ್ಮಕ್ಕು ನೀಡಲಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿದೆ.

ಅಮೆರಿಕದ ಖಾಸಗಿ ಬ್ಯಾಂಕ್‌ಗಳ ಸ್ವೇಚ್ಛಾಚಾರ ಮತ್ತು ದುಂದುಗಾರಿಕೆ ಮತ್ತು ಊಹಾತ್ಮಕ  ಹಣಕಾಸು ಚಟುವಟಿಕೆಗಳಿಂದ 2008ರಲ್ಲಿ ಸಂಭವಿಸಿದ್ದ ಜಾಗತಿಕ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ನಮ್ಮಲ್ಲೂ ಖಾಸಗಿ ಉದ್ದಿಮೆ ಸಂಸ್ಥೆಗಳಿಗೆ ಬ್ಯಾಂಕ್ ವಹಿವಾಟು ಆರಂಭಿಸಲು ಅನುಮತಿ ನೀಡುವುದು ಸಮಂಜಸ ನಿರ್ಧಾರವಾಗಲಾರದು ಎನ್ನುವುದು ಟೀಕಾಕಾರರ ಧೋರಣೆಯಾಗಿದೆ.

ಬ್ಯಾಂಕ್‌ಗಳ ರಾಷ್ಟ್ರೀಕರಣದ ಮುಂಚೆ, ಬೃಹತ್ ಖಾಸಗಿ ಉದ್ದಿಮೆ ಸಂಸ್ಥೆಗಳು, ಬ್ಯಾಂಕ್‌ಗಳ ವಹಿವಾಟಿನ ಮೇಲೆ ಬಿಗಿ ಹಿಡಿತ ಹೊಂದಿದ್ದವು. ಅವುಗಳಿಗೆ ಉದ್ದಿಮೆಗಳ ಹಿತಾಸಕ್ತಿಯೇ ಮುಖ್ಯವಾಗಿತ್ತು.

ರಾಷ್ಟ್ರೀಕರಣದ ನಂತರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಅರೆ-ನಗರ, ಗ್ರಾಮೀಣ ಪ್ರದೇಶಗಳಿಗೂ ವ್ಯಾಪಕವಾಗಿ ವಿಸ್ತರಣೆಗೊಂಡವು. ಬ್ಯಾಂಕ್ ಸಾಲದ ಆದ್ಯತೆಗಳು ಬದಲಾದವು. ರೈತರು, ಜನಸಾಮಾನ್ಯರಿಗೂ ಸುಲಭವಾಗಿ ಸಾಲ ಸಿಗುವಂತಾಯಿತು.
 
ಈಗ ಮತ್ತೆ ಖಾಸಗಿ ಉದ್ದಿಮೆ ಸಂಸ್ಥೆಗಳಿಗೆ ಬ್ಯಾಂಕಿಂಗ್ ವಹಿವಾಟಿಗೆ ಅವಕಾಶ ಮಾಡಿಕೊಡುವುದರಿಂದ ಬ್ಯಾಂಕ್ ರಾಷ್ಟ್ರೀಕರಣದ ಆಶಯಗಳಿಗೆ ಧಕ್ಕೆ ಒದಗಲಿದೆ ಎನ್ನುವ ಕಳವಳ ವ್ಯಕ್ತವಾಗುತ್ತಿದೆ.

2008ರ ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ದೇಶಿ ಬ್ಯಾಂಕಿಂಗ್ ರಂಗವು ಕಿಂಚಿತ್ತೂ ಬಾಧಿತಗೊಳ್ಳಲಿಲ್ಲ. ಇದಕ್ಕೆ ನಮ್ಮಲ್ಲಿನ  ಕಠಿಣ ಸ್ವರೂಪದ ಬ್ಯಾಂಕಿಂಗ್ ನಿಯಂತ್ರಣ ಕ್ರಮಗಳೇ ಮುಖ್ಯ ಕಾರಣ. 

ದೇಶಿ ಬ್ಯಾಂಕಿಂಗ್ ವ್ಯವಸ್ಥೆಯು ` ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸುನಾಮಿ~ಗೆ ಬಂಡೆಗಲ್ಲಿನಂತೆ ಗಟ್ಟಿಯಾಗಿ ನಿಂತಿದ್ದವು. ಜತೆಗೆ, ದೇಶದ ಕೈಗಾರಿಕಾ ರಂಗವು ಪುನಶ್ಚೇತನಗೊಳ್ಳಲು ಅಗತ್ಯವಾದ ನೆರವಿನ ಹಸ್ತವನ್ನೂ ಚಾಚಿದ್ದವು.

ಖಾಸಗಿ ಉದ್ದಿಮೆ ಸಂಸ್ಥೆಗಳೂ ಬ್ಯಾಂಕಿಂಗ್ ವಹಿವಾಟು ಪ್ರವೇಶಿಸುವುದರಿಂದ ಇಂತಹ ಸದೃಢ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಲ್ಲಿ ಇರುವ ಬಗ್ಗೆಯೂ ಈಗ ಅಪಸ್ವರ ಕೇಳಿ ಬರುತ್ತಿದೆ.

ತಕ್ಷಣಕ್ಕೆ ಖಾಸಗಿ ಬ್ಯಾಂಕ್‌ಗಳು ಕಾರ್ಯಾರಂಭ ಮಾಡುವುದಿಲ್ಲ.  ಸದ್ಯಕ್ಕೆ ಜಾರಿಯಲ್ಲಿ ಇರುವ ಬ್ಯಾಂಕ್ ನಿಯಂತ್ರಣ ಕ್ರಮಗಳಿಗೆ ತಿದ್ದುಪಡಿ ತಂದು ಹೊಸ ಖಾಸಗಿ ಬ್ಯಾಂಕ್‌ಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯು  ಮುಂದಿನ ಹಣಕಾಸು ವರ್ಷದಲ್ಲಿಯೇ ಪೂರ್ಣಗೊಳ್ಳುವ ಸಾಧ್ಯತೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT