ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಮಾಜಿ ಅಧ್ಯಕ್ಷರಿಗೆ ಜೈಲು

ರೂ 31.75 ಕೋಟಿ ನಷ್ಟ ಪ್ರಕರಣ
Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಚೆನ್ನೈ(ಪಿಟಿಐ): ಬ್ಯಾಂಕ್‌ಗೆ ಕೋಟಿಗಟ್ಟಲೆ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ಇಂಡಿಯನ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಂ.ಗೋಪಾಲಕೃಷ್ಣನ್ ಮತ್ತು ಆರು ಮಂದಿ ನಿವೃತ್ತ ಹಿರಿಯ ಅಧಿಕಾರಿಗಳಿಗೆ ಇಲ್ಲಿನ ವಿಶೇಷ `ಸಿಬಿಐ' ನ್ಯಾಯಾಲಯ 1 ವರ್ಷ ಅವಧಿಯ ಕಠಿಣ ಸೆರೆವಾಸದ ಶಿಕ್ಷೆ ವಿಧಿಸಿದೆ.

1992-96ರ ಅವಧಿಯಲ್ಲಿ ಸೂಕ್ತ ದಾಖಲೆಗಳು, ಭದ್ರತೆ ಇಲ್ಲದೆ ರೂ31.75 ಕೋಟಿ ಸಾಲ ನೀಡಿ ಬ್ಯಾಂಕ್‌ಗೆ ನಷ್ಟವಾಗುವಂತೆ ಮಾಡಿದ್ದ ಆರೋಪವನ್ನು ಏಳೂ ಮಂದಿ ವಿರುದ್ಧ ಹೊರಿಸಲಾಗಿತ್ತು.

ಆರೋಪಿಗಳ ವಿರುದ್ಧದ ಅಪರಾಧಿಕ ಸಂಚು, ಉದ್ಯೋಗ ನೀಡಿದ ಸಂಸ್ಥೆಯ ವಿಶ್ವಾಸಕ್ಕೆ ಧಕ್ಕೆ, ವಂಚನೆ ದೋಷಾರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರಾದ ಎಸ್.ಮಾಲತಿ ತೀರ್ಪು ನೀಡಿದರು.

ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.

ರೂ 4.5 ಲಕ್ಷ ದಂಡ
ಇದೇ ಪ್ರಕರಣದಲ್ಲಿ ನ್ಯಾಯಾಲಯ, ವರ್ತಕ ಎಂ.ವರದರಾಜು ಸೇರಿದಂತೆ ಇತರೆ 8 ಮಂದಿ ಅಪರಾಧಿಗಳಿಗೂ 1 ವರ್ಷದ ಕಠಿಣ ಸೆರೆವಾಸ ಮತ್ತು ಒಟ್ಟು ರೂ 4.5 ಲಕ್ಷ ದಂಡ ವಿಧಿಸಲಾಗಿದೆ.

ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿರುವ ನ್ಯಾಯಾಲಯ, ಅಲ್ಲಿಯವರೆಗೆ ಶಿಕ್ಷೆ ಜಾರಿಯನ್ನು ತಡೆಹಿಡಿದಿದೆ.

`ಸತ್ಯಂ ಫುಡ್ಸ್'ಗೆ ಸಾಲ
ವರದರಾಜು ಮಾಲೀಕತ್ವದ `ಸತ್ಯಂ ಫುಡ್ಸ್' ಸಂಸ್ಥೆಗೆ ಯಾವುದೇ ಸೂಕ್ತ ದಾಖಲೆಗಳು ಇಲ್ಲದೇ ಹಾಗೂ ಸಾಲಕ್ಕೆ ಅಗತ್ಯವಾಗಿದ್ದ ಭದ್ರತೆಗಳನ್ನೂ ಪಡೆಯದೇ 1992-96ರ ಅವಧಿಯಲ್ಲಿ ದೊಡ್ಡ ಮೊತ್ತದ ಸಾಲ ನೀಡಲು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಕಾರಣವಾಗಿದ್ದರು. ಇದು ಬ್ಯಾಂಕ್‌ಗೆ ಒಟ್ಟು ರೂ31.75 ಕೋಟಿ ನಷ್ಟವಾಗುವಂತೆ ಮಾಡಿತ್ತು.

`ಸಿಬಿಐ' 1997ರ ಮೇ 2ರಂದು 14 ಮಂದಿ ವಿರುದ್ಧ ವಂಚನೆ, ವಿಶ್ವಾಸದ್ರೋಹ, ಅಪರಾಧಿಕ ಸಂಚು ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT