ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಸಿಬ್ಬಂದಿ ಮತ್ತು ಸೌಜನ್ಯ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬ್ಯಾಂ ಕ್‌ಗಳು ಇಂದು  ಸಾರ್ವಜನಿ­ಕ­ರ ಅವಿಭಾಜ್ಯ ಅಂಗವಾಗಿ ಕಾರ್ಯ­ನಿರ್ವ­ಹಿಸುತ್ತಿವೆ. ಒಂದು ಕಾಲದಲ್ಲಿ ಬ್ಯಾಂಕ್‌ನಲ್ಲಿ ಸಾಲ ಸಿಗುವುದೇ ದುಸ್ತರ­ವಾಗಿತ್ತು. ಆದರೆ ಇಂದು ಬ್ಯಾಂಕ್‌ಗಳು ಅನೇಕ ವಿಧದ ಸಾಲ ಕೊಡುವ ಯೋಜನೆಗಳನ್ನು ಹಮ್ಮಿ­ಕೊಂಡು ಜನಸಾಮಾನ್ಯರ ಜೀವನಕ್ಕೆ ಆಧಾರ­ವಾಗಿವೆ. ಬ್ಯಾಂಕ್ ಮತ್ತು ಗ್ರಾಹಕ ಪರಸ್ಪರ ಪೂರಕ; ಒಂದೇ ನಾಣ್ಯದ ಎರಡು ಮುಖಗಳು.

ಆದರೆ ಕೆಲವು ಬ್ಯಾಂಕ್ ಸಿಬ್ಬಂದಿಯ ಅನಗತ್ಯ ಕಿರಿ­ಕಿರಿ, ದರ್ಪ, ಸೌಜನ್ಯ ರಹಿತ ವರ್ತನೆಗಳಿಂದಾಗಿ ಸೂಕ್ಷ್ಮ ಮನಸ್ಸಿನ ಗ್ರಾಹಕರು ಆಘಾತವನ್ನು ಅನು­ಭವಿ­ಸುವಂಥ ಅನೇಕ ಪರಿಸ್ಥಿತಿಗಳು ಎದುರಾ­ಗುತ್ತವೆ. ಇಲ್ಲಿ ನನ್ನೊಂದಿಗೆ ಘಟಿಸಿದ ಒಂದು ಸಂದರ್ಭವನ್ನು ಹಂಚಿಕೊಳ್ಳುತ್ತಿದ್ದೇನೆ.

ಈಗ್ಗೆ ಎರಡು ತಿಂಗಳ ಹಿಂದೆ, ರಾಷ್ಟ್ರೀಕೃತ ಬ್ಯಾಂಕ್‌ ಒಂದರ ಶಾಖೆಯಲ್ಲಿ ನಾನು ಠೇವಣಿ ಇಟ್ಟಿದ್ದ ಸರ್ಟಿಫಿಕೇಟ್‌ಗಳನ್ನು ತುರ್ತು ಸಂದರ್ಭ­ದಿಂದಾಗಿ ಅವಧಿಗೆ ಮೊದಲೇ ಮುರಿಸ­ಬೇಕಾ­ಯಿತು. ನಾನು ರೂ. ೬,೫೦,೦೦೦ ಪಡೆಯಲು ಕ್ಯಾಷ್ ಕೌಂಟರ್‌ನಲ್ಲಿದ್ದ ಮಹಿಳಾ ಕ್ಯಾಷಿಯರ್‌­ಗೆ ಚೆಕ್ ಕೊಟ್ಟೆ. ಅವರು ಐದುನೂರು ರೂಪಾಯಿಗಳ (ನೂರರ) ೧೩ ಕಟ್ಟನ್ನು ಎಣಿಸಿ ನನಗೆ ಕೊಟ್ಟರು. ನಾನು ಸಹ ಅಲ್ಲಿ ಮತ್ತೊಮ್ಮೆ ೧೩ ಕಟ್ಟುಗಳಿರುವ ಬಗ್ಗೆ ಖಾತರಿಪಡಿಸಿಕೊಂಡು ಮನೆಗೆ ಬಂದೆ. ಮನೆಗೆ ಬಂದು ಹಣವನ್ನು ನನ್ನ ಶ್ರೀಮತಿ­ಗೆ ಕೊಟ್ಟೆ. ಅವಳೂ 13 ಕಟ್ಟುಗಳನ್ನು ನನ್ನೆದುರೇ ಎಣಿಸಿ ಇಟ್ಟಳು.

ಇದಾದ ಎರಡು ದಿನಗಳ ನಂತರ ಬ್ಯಾಂಕ್‌ನ ಮ್ಯಾನೇಜರ್ ನಮ್ಮ ಮನೆಗೆ ಫೋನ್ ಮಾಡಿ ಕ್ಯಾಷಿಯರ್ ಕೊಟ್ಟ ನೋಟುಗಳ ಬಗ್ಗೆ ಸೌಜನ್ಯ­ದಿಂದಲೇ ವಿಚಾರಿಸಿದರು. ನಾನು ಅವರಿಗೆ ಐದು­ನೂರು ರೂಪಾಯಿಗಳ ೧೩ ಕಟ್ಟುಗಳು ಮಾತ್ರ ಬಂದಿರುವ ವಾಸ್ತವಾಂಶವನ್ನು ತಿಳಿಸಿದೆ.

ಇದಾದ ನಾಲ್ಕು ದಿನಗಳ ನಂತರ ನನಗೆ ಮತ್ತೆ ಬ್ಯಾಂಕ್‌­ನಿಂದ, ಬ್ಯಾಂಕ್‌ಗೆ ತಕ್ಷಣ ಬಂದು ಹೋಗು­ವಂತೆ ಫೋನ್ ಕರೆ ಬಂದಿತು. ನಾನು ಮತ್ತೆ ಆ ಕೂಡಲೇ ಬ್ಯಾಂಕ್‌ಗೆ ಹೋದೆ. ಮ್ಯಾನೇಜರ್ ಚೇಂಬರ್‌ನಲ್ಲಿ ನನಗೆ ಸಿ.ಸಿ. ಕ್ಯಾಮೆರಾ ತೋರಿಸಲಾಯಿತು. ಅದನ್ನು ನೋಡು­ವು­ದಕ್ಕೂ ಮೊದಲು, ಮತ್ತೊಮ್ಮೆ ನಾನು, ‘ನನಗೆ ಐದುನೂರು ರೂಪಾಯಿಗಳ ೧೩ ಕಟ್ಟು­ಗಳು ಮಾತ್ರ ಬಂದಿದ್ದು, ಹಾಗೇನಾದರೂ ಕ್ಯಾಷಿ­ಯರ್ ಬೇಜವಾಬ್ದಾರಿಯಿಂದ ಹೆಚ್ಚು ಕೊಟ್ಟಿದ್ದರೆ ನಾನಾಗಲೇ ಮರಳಿ ಕೊಡುತ್ತಿದ್ದೆ’ ಎಂದು ಹೇಳಿ ಸಿ.ಸಿ. ಕ್ಯಾಮೆರಾ ನೋಡಿದೆ. ನನಗೆ ಆ ಕ್ಯಾಮೆರಾದಲ್ಲಿ ಯಾವುದೂ ಸ್ಪಷ್ಟ­ವಾಗಿ ಕಾಣಲಿಲ್ಲ.

ಆಗ ಆ ಮಹಿಳಾ ಕ್ಯಾಷಿಯರ್, ‘ನಿಮಗೆ, ನಾನು ೧೫ ಕಟ್ಟುಗಳನ್ನು ಕೊಟ್ಟಿದ್ದೇನೆ, ಹೆಚ್ಚು ಹಣ ನಿಮಗೇ ಹೋಗಿದೆ,  ನೀವು ಹದಿನೈದು ಕಟ್ಟುಗಳನ್ನು ಹದಿನೈದು ಸಲ ತೆಗೆದು ಕೊಂಡಿ­ದ್ದೀರಿ,  ಸಿ.ಸಿ. ಕ್ಯಾಮೆರಾದಲ್ಲಿ ನೋಡಿ,  ನಿಮ್ಮ ವಿರುದ್ಧ ಪೊಲೀಸ್ ಕಂಪ್ಲೆಂಟ್ ಕೊಟ್ಟರೆ ತಿಳಿಯು­ತ್ತದೆ’ ಎಂದು ನನ್ನ ಮೇಲೆ ಆಪಾದನೆ ಹೊರಿಸಿದರು.

ಆದರೆ ಅಲ್ಲಿದ್ದ ಮ್ಯಾನೇಜರ್ ಮತ್ತು ಇನ್ನಿಬ್ಬರು ಕಿರಿಯ ಮ್ಯಾನೇಜರುಗಳು ನನಗೆ ಸೌಜನ್ಯ­ದಿಂದ, ‘ಸಾರ್, ತಪ್ಪು ತಿಳಿಯಬೇಡಿ, ನಾವು ಸುಮಾರು ಜನ ಗ್ರಾಹಕರನ್ನು ಕರೆದು ಕೇಳು­ವಂತೆ ನಿಮಗೂ ಕೇಳಿದೆವು’  ಎಂದರು. ನಾನು ಮಹಿಳಾ ಕ್ಯಾಷಿಯರರ ಈ ದುರ್ವರ್ತನೆ­ಯಿಂದ ನೊಂದು ಮರುದಿನ ಕಸ್ಟಮರ್ ಕೇರ್‌ಗೆ ಒಂದು ದೂರು ಅರ್ಜಿಯನ್ನು ಬರೆದು ಅದರ ಒಂದು ಪ್ರತಿಯನ್ನು ಸಂಬಂಧಿಸಿದ ಮ್ಯಾನೇಜರ್ ಅವರಿಗೆ ಕೊಡಲು ಹೋದೆ.

ಆಗ ಅವರು, ‘ಸಾರ್ ದಯವಿಟ್ಟು ಇದನ್ನು ಮುಂದು­ವರಿಸಬೇಡಿ, ಆದದ್ದನ್ನು ಮರೆತುಬಿಡಿ, ಅವರು ಆಡಿದ ಮಾತಿನಿಂದ ನಮಗೂ ಬೇಸರ­ವಾಗಿದೆ’ ಎಂದು ಕ್ಷಮೆ ಯಾಚಿಸಿದರು. ನಾನು ವಿಷಯ­ವನ್ನು ಅಲ್ಲಿಗೆ ನಿಲ್ಲಿಸಿದೆ. ಆದರೆ ನಾನು ಆಗಿ­ನಿಂದ ಮಾನಸಿಕವಾಗಿ ಆಘಾತವನ್ನು ಅನುಭ­ವಿ­ಸುತ್ತಿದ್ದೇನೆ. ೪೩ ವರ್ಷಗಳಿಂದ ನಾನು ಈ ಬ್ಯಾಂಕಿನ ಗ್ರಾಹಕನಾಗಿದ್ದೇನೆ. ಸೌಜನ್ಯದಿಂದ ವ್ಯವಹ­ರಿಸುವುದು ಬ್ಯಾಂಕಿನ ಅನೇಕ ಸಿಬ್ಬಂದಿಗೆ ತಿಳಿದಿದೆ.

ಅಲ್ಲದೇ, ೨೦೧೦ ರಲ್ಲಿ ಇದೇ ಬ್ಯಾಂಕ್‌ನ ಸಿಬ್ಬಂದಿ­ಯೊಬ್ಬರು ನನ್ನ ಉಳಿತಾಯ ಖಾತೆಗೆ ರೂ ೩,೦೦,೦೦೦ ಹಣವನ್ನು ಎರಡು ಬಾರಿ ಜಮಾ ಮಾಡಿದ್ದರು. ಅವರ ಅಚಾತುರ್ಯ ನನ್ನ ಗಮನಕ್ಕೆ ಬಂದ ಕೂಡಲೇ ನಾನು ಬ್ಯಾಂಕ್‌ಗೆ ಹೋಗಿ ಸರಿಪಡಿಸಿಕೊಂಡೆ.  ಒಂದು ವೇಳೆ ಸಿ.ಸಿ. ಕ್ಯಾಮೆರಾ­ದಲ್ಲಿ ನನಗೆ ಹೆಚ್ಚು ಹಣ ಕೊಟ್ಟಿದ್ದು ಕಂಡು ಬಂದಿದ್ದರೆ,  ಮ್ಯಾನೇಜರ್ ನನ್ನ ವಿರುದ್ಧ ಆಗಲೇ ಮುಂದಿನ ಕ್ರಮ ಕೈಗೊಳ್ಳುತ್ತಿದ್ದರು.

ಸಿ.ಸಿ. ಕ್ಯಾಮೆರಾ ನೋಡಿದ ನನ್ನ ಶಿಷ್ಯನೊಬ್ಬ (ಅವನೂ ಅದೇ ಬ್ಯಾಂಕ್ ಉದ್ಯೊಗಿ) ‘ಸಾರ್, ನನಗೆ ಅದ­ರಲ್ಲಿ ನಿಮ್ಮ ಗುರುತೇ ಸಿಗಲಿಲ್ಲ’  ಎಂದ. ಆದರೆ ಆ ಮಹಿಳಾ ಕ್ಯಾಷಿಯರ್ ಮಾಡಿದ ಆಪಾದನೆ­ಯಿಂದ ನಾನು ಜೀವಮಾನವಿಡೀ ಆಘಾತವನ್ನು ಅನು­ಭವಿಸಬೇಕಾಗಿದೆ. ಒಂದುವೇಳೆ ಅವರು ಬೇರೊಬ್ಬ ಗ್ರಾಹಕರಿಗೆ ಹೆಚ್ಚು ಹಣ ಕೊಟ್ಟಿದ್ದರೂ ಅದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಇಂಥವರಿಂದಾಗಿ ಪ್ರಾಮಾಣಿಕ ಗ್ರಾಹಕರು ನೋವು, ಅವಮಾನವನ್ನು ಎದುರಿಸಬೇಕಾಗುತ್ತದೆ.

ಹಣ ಪಡೆದ ಗ್ರಾಹಕ, ಬ್ಯಾಂಕ್‌ನಿಂದ ಹೊರ ಹೋದ ಮೇಲೆ ಹಣದ ವ್ಯತ್ಯಾಸಕ್ಕೆ ಬ್ಯಾಂಕ್ ಜವಾ­ಬ್ದಾರಿ­ಯಲ್ಲ, ಇದು ಕ್ಯಾಷ್ ಕೌಂಟರ್‌ನಲ್ಲಿ ಕೂತು ಕಾರ್ಯ ನಿರ್ವಹಿಸುವ ಕ್ಯಾಷಿಯರ್‌ಗೂ ಅನ್ವಯಿಸುತ್ತದೆ ಎಂಬ ಸಣ್ಣ ಪರಿಜ್ಞಾನ ಅವರಿಗೂ ಇರಬೇಕಲ್ಲವೇ? ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸದೆ, ಪ್ರಾಮಾಣಿಕ ಗ್ರಾಹಕರ ಮೇಲೆ ಆಪಾದನೆ ಹೊರಿಸುವ ಇಂಥ ಸಿಬ್ಬಂದಿ ಮೇಲೆ ಬ್ಯಾಂಕ್ ಯಾವ ಕ್ರಮ ಕೈಗೊಳ್ಳುತ್ತಿದೆ?

ಕ್ಯಾಷಿಯರ್, ಗ್ರಾಹಕರಿಗೆ ಕೊಟ್ಟ ಹಣವನ್ನು ಮತ್ತು ಗ್ರಾಹಕರು ಕ್ಯಾಷಿಯರ್ ಮೂಲಕ ಪಡೆದ ಹಣವನ್ನು ಸ್ಪಷ್ಟವಾಗಿ ದಾಖಲಿಸುವ ಉನ್ನತ ತಂತ್ರಜ್ಞಾನದ ಕ್ಯಾಮೆರಾ ಇಲ್ಲವೇ ಮತ್ಯಾವುದೇ ಉಪ­ಕರಣ­ವನ್ನು ಕೌಂಟರ್‌ನಲ್ಲಿ ಅಳವಡಿಸುವ ಬಗ್ಗೆ ಬ್ಯಾಂಕ್‌ಗಳು ಕ್ರಮ ಕೈಗೊಳ್ಳುವುದು ಬ್ಯಾಂಕ್‌ಗಳಿಗೂ ಕ್ಷೇಮ. ಗ್ರಾಹಕರಿಗೂ ಕ್ಷೇಮ. ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT