ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟಿಂಗ್ ಪವರ್ ಪ್ಲೇ ನಿರ್ಣಾಯಕ: ರೈನಾ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ವಿಶ್ವಕಪ್ ಟೂರ್ನಿಯ ಪಂದ್ಯಗಳ ವೇಳೆ ಬ್ಯಾಟಿಂಗ್ ‘ಪವರ್ ಪ್ಲೇ’ ಅವಧಿಯ ಓವರ್‌ಗಳು ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯವನ್ನು ಭಾರತ ತಂಡದ ಆಟಗಾರ ಸುರೇಶ್ ರೈನಾ ವ್ಯಕ್ತಪಡಿಸಿದ್ದಾರೆ.

‘ಉಪಭೂಖಂಡದ ವಿಕೆಟ್‌ಗಳು ಫ್ಲಾಟ್ ಆಗಿವೆ. ಈ ಕಾರಣ ಎಲ್ಲ ಪಂದ್ಯಗಳಲ್ಲೂ ಬೃಹತ್ ಮೊತ್ತದ ಹೋರಾಟ ನಿರೀಕ್ಷಿಸಬಹುದು. ಆದ್ದರಿಂದ ಬ್ಯಾಟಿಂಗ್ ‘ಪವರ್ ಪ್ಲೇ’ ಓವರ್‌ಗಳ ಗರಿಷ್ಠ ಪ್ರಯೋಜನ ಪಡೆಯುವುದು ಅಗತ್ಯ. ಈ ಐದು ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 40 ರಷ್ಟು ರನ್ ಪೇರಿಸಬೇಕು. ಹಾಗಾದಲ್ಲಿ ಕೊನೆಯ 10 ಓವರ್‌ಗಳಲ್ಲಿ ತಂಡದ ಮೊತ್ತವನ್ನು ಮತ್ತಷ್ಟು ಹಿಗ್ಗಿಸಲು ಸಾಧ್ಯ’ ಎಂದು ಬುಧವಾರ ತಿಳಿಸಿದರು.

‘ಪವರ್ ಪ್ಲೇ ಅವಧಿಯಲ್ಲಿ ಆಕ್ರಮಣಕಾರಿ ಆಟವಾಡುವ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ’ ಎಂದು 24ರ ಹರೆಯದ ಎಡಗೈ ಆಟಗಾರ ನುಡಿದರು.

ಅದೇ ರೀತಿ ಈ ಅವಧಿಯಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಕಡಿವಾಣ ತೊಡಿಸುವ ಬೌಲರ್‌ಗಳೂ ಭಾರತ ತಂಡದಲ್ಲಿದ್ದಾರೆ ಎಂದರು. ‘ಪವರ್ ಪ್ಲೇ ಅವಧಿಯಲ್ಲಿ ಬಿಗುವಾದ ಬೌಲಿಂಗ್ ನಡೆಸುವ ಸ್ಪಿನ್ನರ್‌ಗಳು ತಂಡದಲ್ಲಿದ್ದಾರೆ. ಅವರ ಮುಂದೆ ಎದುರಾಳಿ ತಂಡದವರಿಗೆ ರನ್ ಗಳಿಸುವುದು ಸುಲಭವಲ್ಲ. ಇಲ್ಲಿನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ನೆರವು ನೀಡುವ ಕಾರಣ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಗಳಿಗೆ ಮುಂದಾಗುವ ಸಾಧ್ಯತೆ ಕಡಿಮೆ. ಅಂತಹ ಸಾಹಸಕ್ಕೆ ಕೈಹಾಕಿದರೆ ಸುಲಭದಲ್ಲಿ ವಿಕೆಟ್ ಒಪ್ಪಿಸುವರು’ ಎಂದು ರೈನಾ ಹೇಳಿದರು.

ಅದೇ ರೀತಿ ಫೀಲ್ಡಿಂಗ್ ಕೂಡಾ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬುದು ರೈನಾ ಅವರ ಹೇಳಿಕೆ. ‘ಚೆನ್ನಾಗಿಫೀಲ್ಡಿಂಗ್ ಮಾಡಿದರೆ ನಮ್ಮನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಚುರುಕಿನ ಕ್ಷೇತ್ರರಕ್ಷಣೆ ಮೂಲಕ 30-40 ರನ್‌ಗಳನ್ನು ತಡೆದರೆ ಬೌಲರ್‌ಗಳಿಗೆ ನೆರವಾಗಲಿದೆ. ಫೀಲ್ಡಿಂಗ್ ಚೆನ್ನಾಗಿದ್ದರೆ, ಬೌಲರ್‌ಗಳೂ ವಿವಿಧ ಪ್ರಯೋಗಗಳನ್ನು ನಡೆಸುವ ಧೈರ್ಯ ತೋರುವರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT