ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ :ಗುರಿ ಮೀರಿದ ಸಾಧನೆ

Last Updated 9 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆ 2010-11ನೇ ಹಣಕಾಸು ವರ್ಷದಲ್ಲಿ ರೂ 5.43 ಕೋಟಿ ಮಾರುಕಟ್ಟೆ ಶುಲ್ಕ (ಮಾರ್ಕೆಟ್ ಸೆಸ್)ಅನ್ನು ಸಂಗ್ರಹಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಿದೆ.

  ಮಾರುಕಟ್ಟೆಗೆ ಒಟ್ಟಾರೆ 5.51 ಲಕ್ಷ ಕ್ವಿಂಟಲ್ ಮೆಣಸಿನಕಾಯಿ ಆವಕವಾಗಿದ್ದು, ಸುಮಾರು ರೂ 900 ಕೋಟಿ ವಹಿವಾಟು ನಡೆದಿದೆ. ಮಾರುಕಟ್ಟೆಯ ಇತಿಹಾಸದಲ್ಲಿಯೇ ಇಷ್ಟೊಂದು ವಹಿವಾಟು ನಡೆದಿರುವುದು ಇದೇ ಮೊದಲು ಎನ್ನಲಾಗಿದೆ. ಕಳೆದ ಮಾರ್ಚ್‌ನಲ್ಲಿ ಮಾರುಕಟ್ಟೆಗೆ 2.68 ಲಕ್ಷ ಕ್ಷಿಂಟಲ್ ಮೆಣಸಿನಕಾಯಿ ಆವಕವಾಗಿದ್ದು, ಸುಮಾರು ರೂ 2.13 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹವಾಗಿರುವುದು ಒಂದು ದಾಖಲೆ ಎನ್ನಬಹುದು. ಇದರಲ್ಲಿ ಸಿಂಹಪಾಲು ಬ್ಯಾಡಗಿ ಕಡ್ಡಿ ಮೆಣಸಿನಕಾಯಿಯದ್ದಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಮಾರುಕಟ್ಟೆಗೆ 3.49 ಲಕ್ಷ ಕ್ವಿಂಟಲ್ ಬ್ಯಾಡಗಿ ಕಡ್ಡಿ, 1.05 ಲಕ್ಷ ಕ್ವಿಂಟಲ್ ಬ್ಯಾಡಗಿ ಡಬ್ಬಿ ಹಾಗೂ 29 ಸಾವಿರ ಕ್ವಿಂಟಲ್ ಗುಂಟೂರ ಮೆಣಸಿನಕಾಯಿ ಆವಕವಾಗಿದೆ.

ಪ್ರತಿ ವರ್ಷ ಹಂಗಾಮು ಆರಂಭವಾಗುವುದು ದೀಪಾವಳಿ ನಂತರವೇ. ಆದರೆ ಪ್ರಸ್ತುತ ವರ್ಷ ಬಿದ್ದ ಅಕಾಲಿಕ ಮಳೆಯಿಂದ ಮೆಣಸಿನಕಾಯಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿ ಇಷ್ಟೊಂದು ಪ್ರಮಾಣದಲ್ಲಿ ಮೆಣಸಿನಕಾಯಿ ಬ್ಯಾಡಗಿ ಮಾರುಕಟ್ಟೆಗೆ ಬರುವುದು ಅನುಮಾನಾಸ್ಪದವಾಗಿತ್ತು. ಆದರೆ ಮೆಣಸಿನಕಾಯಿ ಬೆಳೆಯುವ ಕ್ಷೇತ್ರ ಆಂಧ್ರಪ್ರದೇಶದೊಂದಿಗೆ ತಮಿಳುನಾಡು ರಾಜ್ಯಕ್ಕೂ ಕೈಜೋಡಿಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ಮಾರುಕಟ್ಟೆಗೆ ಇಷ್ಟೊಂದು ಪ್ರಮಾಣದಲ್ಲಿ ಮೆಣಸಿನಕಾಯಿ ಹರಿದು ಬರಲು ಕಾರಣವಾಗಿದೆ. ಮಾರುಕಟ್ಟೆಗೆ ಎಷ್ಟೇ ಮೆಣಸಿನಕಾಯಿ ಬಂದರೂ ಅದನ್ನು ಖರೀದಿಸಿ ಅರಗಿಸಿಕೊಳ್ಳುವ ಎದೆಗಾರಿಕೆ ಇಲ್ಲಿನ ಮಾರುಕಟ್ಟೆಗೆ ಇದೆ. ಜೊತೆಗೆ ತೂಕ ಹಾಗೂ ದರದಲ್ಲಿ ರೈತರಿಗೆ ಮೋಸ ಮಾಡದೆ ಪ್ರಾಮಾಣಿಕವಾಗಿರುವುದರಿಂದ ಇಲ್ಲಿಯ ಮಾರುಕಟ್ಟೆಗೆ ಮೆಣಸಿನಕಾಯಿ ಹರಿದು ಬರುತ್ತಿದೆ. ಕಳೆದ ಜನವರಿಯಲ್ಲಿ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ರೂ 1509- ರೂ16289 ರಂತೆ ಮಾರಾಟವಾಗಿದ್ದರೆ, ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ರೂ 2099-ರೂ 20229ರಂತೆ ಮಾರಾಟವಾಗಿದೆ. ಗುಂಟೂರು ಮೆಣಸಿನಕಾಯಿ ರೂ 1069- ರೂ 6299ರ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದೆ.

  ಕಳೆದ ಹಣಕಾಸು ವರ್ಷದಲ್ಲಿ 3.93 ಲಕ್ಷ ಕ್ವಿಂಟಲ್ ಮೆಣಸಿನಕಾಯಿ ಮಾರುಕಟ್ಟೆಗೆ ಆವಕವಾಗಿದ್ದು, ಇದರ ಮೂಲಕ ರೂ 3.22 ಕೋಟಿ ಶುಲ್ಕ ಸಂಗ್ರಹಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT