ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಕೋರ್ಟ್‌ಗೆ ಮರಳಿದ ಅರುಂಧತಿ

`ಕ್ರೀಡೆಯಿಂದ ದೂರವಾಗಿಬಿಡುತ್ತೇನೆ ಎನ್ನುವ ಆತಂಕ ಕಾಡಿತ್ತು'
Last Updated 1 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: “ಆ ಕಷ್ಟದ ದಿನಗಳನ್ನು ನೆನಪಿಸಿಕೊಂಡರೆ ಇಂದಿಗೂ ಬೇಸರವಾಗುತ್ತದೆ. ಆಗ ನಾನಿದ್ದ ಸ್ಥಿತಿಯನ್ನು ನೋಡಿದರೆ, ನನ್ನ ಪ್ರೀತಿಯ ಬ್ಯಾಡ್ಮಿಂಟನ್‌ನಿಂದ ದೂರವಾಗಿ ಬಿಡುತ್ತೇನೆ ಎನ್ನುವ ಆತಂಕ ಕಾಡಿತ್ತು. ಅದೃಷ್ಟಕ್ಕೆ ಹಾಗೇನೂ ಆಗಲಿಲ್ಲ. ಮತ್ತೆ ರಾಕೆಟ್ ಹಿಡಿಯುವ ಸಾಮರ್ಥ್ಯ ಮರಳಿ ಬಂತು”

-ಹೀಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು ಯುವ ಬ್ಯಾಡ್ಮಿಂಟನ್ ಆಟಗಾರ್ತಿ ನಾಗಪುರದ ಅರುಂಧತಿ ಪಂತ್ವಾನೆ. ಒಂದು ವರ್ಷದ ಹಿಂದೆ ಪಂತ್ವಾನೆಯ ಎಡಗಣ್ಣು ಅಲ್ಸರ್‌ಗೆ ತುತ್ತಾಗಿತ್ತು. ದೃಷ್ಟಿ ಪೂರ್ಣಪ್ರಮಾಣದಲ್ಲಿ ಕಾಣಿಸುತ್ತಿರಲಿಲ್ಲ. ಶೇ. 40ರಿಂದ 50ರಷ್ಟನ್ನು ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಕಳೆದ ವರ್ಷ ಉದ್ಯಾನನಗರಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅವರು ಈ ಸಮಸ್ಯೆಗೆ ಒಳಗಾಗಿದ್ದರು. ಈಗ ಆ ಎಲ್ಲಾ ಸಂಕಷ್ಟವನ್ನು ಮೀರಿ ಇನ್ನಷ್ಟು ಗಟ್ಟಿಯಾಗಿದ್ದಾರೆ.

ಈ ಆಟಗಾರ್ತಿಯ ಕುಟುಂಬವೇ ಕ್ರೀಡಾ ಕುಟುಂಬ. ತಂದೆ ಅವಿನಾಶ್ ಅಥ್ಲೆಟಿಕ್ ಕೋಚ್. ತಾಯಿ ಚಿತ್ರಾ ಅಥ್ಲೀಟ್. ಸಹೋದರಿ ಅಭಿಲಾಷಾ ಕ್ರಿಕೆಟ್ ಆಟಗಾರ್ತಿ. ಹೀಗೆ ಕ್ರೀಡಾ ವಾತಾವರಣದ ಹಿನ್ನೆಲೆಯಿಂದ ಬೆಳೆದು ಬಂದ `ಕಿತ್ತಳೆ ನಗರಿ'ಯ ಆಟಗಾರ್ತಿ ಮತ್ತೆ ಬ್ಯಾಡ್ಮಿಂಟನ್ ಅಂಗಣಕ್ಕೆ ಮರಳಿ ಎಂದಿನ ಉತ್ಸಾಹದಿಂದ ಆಡುತ್ತಿದ್ದಾರೆ. 

ಅರುಂಧತಿ ಹಲವು ಅಖಿಲ ಭಾರತ ಮಟ್ಟದ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈಸ್ಟೋನಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲೂ ಬೆಳ್ಳಿ ಪದಕ ಜಯಿಸಿದ್ದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಸೀನಿಯರ್ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಅವರು `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

-ಬ್ಯಾಡ್ಮಿಂಟನ್ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ?
ತೀರಾ ಆಕಸ್ಮಿಕವಾಗಿ ಬ್ಯಾಡ್ಮಿಂಟನ್‌ಗೆ ಬಂದೆ. ಅಪ್ಪ ಅಮ್ಮ ಅಥ್ಲೆಟಿಕ್ಸ್ ಬಗ್ಗೆ ಆಸಕ್ತಿ ಹೊಂದಿದ್ದರಿಂದ ನಾನೂ ಅಥ್ಲೆಟಿಕ್‌ನತ್ತ ಆಸಕ್ತಿ ಬೆಳೆಸಿಕೊಂಡಿದ್ದೆ. 100 ಹಾಗೂ 200 ಮೀ. ಓಟದಲ್ಲಿಯೂ ಪಾಲ್ಗೊಂಡಿದ್ದೆ. ಆದರೆ, ತಂದೆಯ ಸಲಹೆಯ ಮೇರೆಗೆ ಬ್ಯಾಡ್ಮಿಂಟನ್‌ನತ್ತ ಮುಖ ಮಾಡಿದೆ. ಈಗ ಇದೇ ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆನ್ನುವ ಗುರಿ ಹೊಂದಿದ್ದೇನೆ.

-ಸ್ವೀಡನ್ ಕ್ಲಬ್‌ನಲ್ಲಿ ಪಡೆದ ತರಬೇತಿಯ ಅನುಭವ ಹೇಗಿತ್ತು?
ಅಲ್ಲಿ ಸಿಕ್ಕ ತರಬೇತಿಯಿಂದ ಭಾರತದಲ್ಲಿ ಹಲವು ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಗುತ್ತಿದೆ. ಸ್ವೀಡನ್‌ನಲ್ಲಿ ಅತ್ಯುತ್ತಮ ಸೌಲಭ್ಯಗಳಿವೆ. ಅಲ್ಲಿಗೆ ತರಬೇತಿ ಪಡೆಯಲು ಬರುವ ಆಟಗಾರ್ತಿಯರು ಮಾನಸಿಕವಾಗಿ ಹೆಚ್ಚು ಬಲಿಷ್ಠರಾಗಿರುತ್ತಾರೆ. ನಾವೂ ಅದೇ ರೀತಿಯ ಮನಸ್ಥೈರ್ಯ ಬೆಳೆಸಿಕೊಳ್ಳಬೇಕು.

- ಕಣ್ಣಿನ ಸಮಸ್ಯೆ ಈಗ ಹೇಗಿದೆ?
ಪೂರ್ಣವಾಗಿ ಗುಣವಾಗಿದ್ದೇನೆ. ಮತ್ತೆಂದೂ ರ‌್ಯಾಕೆಟ್ ಹಿಡಿಯಲು ಆಗುವದಿಲ್ಲ ಎಂದುಕೊಂಡಿದ್ದೆ. ಈ ವೇಳೆ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೆ. ಏನೇ ಸಮಸ್ಯೆ ಎದುರಾದರೂ, ಬ್ಯಾಡ್ಮಿಂಟನ್‌ನಿಂದ ದೂರವಾಗಬೇಡ ಎಂದು ಪಾಲಕರು ಧೈರ್ಯ ತುಂಬಿದರು. ಇಲ್ಲವಾದರೆ, ಒಂದು ವರ್ಷದ ಹಿಂದೆಯೇ ನನ್ನ ಕ್ರೀಡಾ ಜೀವನ ಮುಕ್ತಾಯವಾಗುತ್ತಿತ್ತು.

-ಸಿಂಗಲ್ಸ್‌ನಲ್ಲಿಯೇ ಆಸಕ್ತಿ ವಹಿಸಲು ಕಾರಣ?
ಮೊದಲಿನಿಂದಲೂ ನನ್ನ ಆಯ್ಕೆ ಸಿಂಗಲ್ಸ್ ವಿಭಾಗವೇ. ಭವಿಷ್ಯದಲ್ಲಿ ಎಷ್ಟೇ ಸಾಧನೆ ಮಾಡಿದರೂ ಅದು ಸಿಂಗಲ್ಸ್‌ನಲ್ಲಿ ಮಾತ್ರ. ಈ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲು ಕೋಚ್ ಗೋಪಿಚಂದ್ ಕಾರಣ.

-ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಪದಕ ಗೆದ್ದ ಬಳಿಕ ಭಾರತದಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಏನಾದರೂ ಬದಲಾವಣೆಯಾಗಿದೆಯೇ?
ಖಂಡಿತಾ. ಭಾರತದಲ್ಲಿ ಕ್ರಿಕೆಟ್‌ಗೆ ಎಷ್ಟು ಮಹತ್ವ ನೀಡಲಾಗುತ್ತಿದೆಯೋ ಅದೇ ರೀತಿಯ ಪ್ರಾಮುಖ್ಯತೆ ಬ್ಯಾಡ್ಮಿಂಟನ್‌ಗೂ ಲಭಿಸತೊಡಗಿದೆ. ಪ್ರಾಯೋಜಕರು ಸಾಕಷ್ಟು ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ. ಸೈನಾ ದೀದಿ  ಭಾರತದಲ್ಲಿ ಬ್ಯಾಡ್ಮಿಂಟನ್‌ಗೆ ಹೊಸ ಆಯಾಮ ನೀಡಿದರು.

- ನಿಮ್ಮ ಗುರಿ?
ಪ್ರತಿ ಕ್ರೀಡಾಪಟುವಿಗೆ ಒಮ್ಮೆಯಾದರೂ     ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಆಸೆ ಇರುತ್ತದೆ. ನನ್ನ ಕನಸೂ ಸಹ ಇದೇ ಆಗಿದೆ. 2020ರ ಒಲಿಂಪಿಕ್ಸ್ ವೇಳೆಗೆ ಈ ಆಸೆ ಈಡೇರಿಸಿಕೊಳ್ಳಬೇಕೆಂಬ ಗುರಿ ಹೊಂದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT