ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಹೊಸತಾರೆ

ಮಿನುಗು ಮಿಂಚು
Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಸಿಂಧು ಹುಟ್ಟಿದ್ದೆಲ್ಲಿ, ಯಾವಾಗ?
ಪುಸರಳ ವೆಂಕಟ ಸಿಂಧು ಜುಲೈ 5, 1995ರಲ್ಲಿ ಹುಟ್ಟಿದರು. ಹೈದರಾಬಾದ್ ಅವರ ತವರು.

ಅವರ ಕೌಟುಂಬಿಕ ಹಿನ್ನೆಲೆ ಏನು?
ಕ್ರೀಡಾಪಟುಗಳ ಕುಟುಂಬದಿಂದ ಬಂದ ಹುಡುಗಿ ಸಿಂಧು. ವಾಲಿಬಾಲ್‌ನ ಮಾಜಿ ಆಟಗಾರ ರಮಣ ಆಕೆಯ ತಂದೆ. ಅವರಿಗೆ ಅರ್ಜುನ ಪ್ರಶಸ್ತಿಯೂ ಲಭಿಸಿದೆ. ತಾಯಿ ಪಿ.ವಿಜಯ ಕೂಡ ವಾಲಿಬಾಲ್ ಆಟಗಾರ್ತಿ. ಸಿಂಧು ಅವರ ಅಕ್ಕ ಭಾರತ ನೆಟ್‌ಬಾಲ್ ತಂಡವನ್ನು ಪ್ರತಿನಿಧಿಸಿದ್ದವರು.

ಅವರ ಕ್ರೀಡಾ ಬದುಕು ಯಾವಾಗ ಶುರುವಾಯಿತು?
ಮೆಹಬೂಬ್ ಅಲಿ ಅವರಿಂದ ತರಬೇತಿ ಪಡೆಯಲು ಪ್ರಾರಂಭಿಸಿದಾಗ ಸಿಂಧು ಅವರಿಗೆ ಎಂಟು ವರ್ಷ. ಹೈದರಾಬಾದ್‌ನಲ್ಲಿ ಮೆಹಬೂಬ್ ಅಲಿ ಬ್ಯಾಡ್ಮಿಂಟನ್ ತರಬೇತಿ ನೀಡುವುದರಲ್ಲಿ ಹೆಸರು ಮಾಡಿದ್ದವರು. ಅಪ್ಪ-ಅಮ್ಮ ವಾಲಿಬಾಲ್‌ನಲ್ಲಿ ಪಳಗಿದವರಾದರೂ ಮಗಳ ಆಸೆಗೆ ಅಡ್ಡಿಪಡಿಸಲಿಲ್ಲ. 2001ರಲ್ಲಿ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಚಾಂಪಿಯನ್ ಆದ ಪುಲೆಲಾ ಗೋಪಿಚಂದ್ ಅವರಿಂದ ಸ್ಫೂರ್ತಿ ಪಡೆದ ಸಿಂಧು ಬ್ಯಾಡ್ಮಿಂಟನ್ ಆಟದತ್ತ ಆಕರ್ಷಿತರಾದರು. ಈಗ ಸಿಂಧು ತಾವು ಮೆಚ್ಚಿಕೊಂಡಿದ್ದ ಗೋಪಿಚಂದ್ ಅವರ ಅಕಾಡೆಮಿಯಲ್ಲಿ ಅವರಿಂದಲೇ ತರಬೇತಿ ಪಡೆಯುತ್ತಿದ್ದಾರೆ.

ಸಿಂಧು ಪ್ರಮುಖ ಸಾಧನೆಗಳಾವುವು?
ಅಖಿಲ ಭಾರತ ಮಟ್ಟದ ಸರ್ವೋ ಪ್ರಾಯೋಜಿಸಿದ್ದ ಐದನೇ ವರ್ಷದ ಟೂರ್ನಿಯಲ್ಲಿ ಅವರು ಚಾಂಪಿಯನ್ ಆದರು. 10 ವರ್ಷದೊಳಗಿನವರಿಗಾಗಿ ನಡೆದ ಟೂರ್ನಿ ಅದು. 14ನೇ ವಯಸ್ಸಿನಲ್ಲಿ 51ನೇ ರಾಷ್ಟ್ರೀಯ ಸ್ಕೂಲ್ ಗೇಮ್ಸನಲ್ಲಿ ಆಡಿ ಮೊದಲ ಸ್ಥಾನ ಪಡೆದರು. 2009ರಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಸಬ್ ಜೂನಿಯರ್ ಹಂತದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಗಮನ ಸೆಳೆಯಲು ಆರಂಭಿಸಿದರು.

2010ರಲ್ಲಿ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ಸ್ ಪ್ರವೇಶಿಸಿದರು. ಉಬರ್ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಇನ್ನೊಂದು ಅಗ್ಗಳಿಕೆ.  2012ರಲ್ಲಿ ನಡೆದ ಏಷ್ಯಾ 19 ವರ್ಷದೊಳಗಿನವರ ಯುವ ಚಾಂಪಿಯನ್‌ಷಿಪ್‌ನಲ್ಲಿ ಜಪಾನ್‌ನ ನೊಜೊಮಿ ಒಕುಹರಾ ಅವರನ್ನು ಸೋಲಿಸಿ ಚಾಂಪಿಯನ್ ಆದದ್ದು ದೊಡ್ಡ ಹಿರಿಮೆ.

ಇದುವರೆಗಿನ ಅವರ ದೊಡ್ಡ ಗೆಲುವು ಯಾವುದು?
ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಚೀನಾದ ಲಿ ಕ್ಸುಯೆರು ಅವರನ್ನು ಲಿ ನಿಂಗ್ ಚೀನಾ ಮಾಸ್ಟರ್ಸ್‌ ಸೂಪರ್ ಸೀರೀಸ್ ಬ್ಯಾಡ್ಮಿಂಟನ್‌ನ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಸೋಲಿಸಿ ಅವರು ಬೆರಗು ಮೂಡಿಸಿದರು. 2012ರಲ್ಲಿ ನಡೆದ ಆ ಪಂದ್ಯದಲ್ಲಿ ಗೆದ್ದರೂ ಫೈನಲ್ಸ್ ತಲುಪಲು ಅವರು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT