ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾತನಾಳ ಯೋಜನೆಗೆ ಬಲವಿದೆಯೇ?

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ಹಾವೇರಿ: ಕೃಷ್ಣಾ ನ್ಯಾಯಾಧೀಕರಣ ತೀರ್ಪು ಪ್ರಕಟವಾಗುತ್ತಿದ್ದಂತೆಯೇ 10 ವರ್ಷಗಳ ಹಿಂದೆ ಚರ್ಚೆಯಲ್ಲಿದ್ದ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಬ್ಯಾತನಾಳ ಡ್ಯಾಂ ನಿರ್ಮಾಣ ಯೋಜನೆಗೆ ಮರುಜೀವ ಬಂದಿದೆ. ಆದರೆ, ‘ಬಿ’ ಸ್ಕೀಮ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಹಂಚಿಕೆಯಾದ ನೀರಿನಲ್ಲಿ 20.52 ಟಿಎಂಸಿ ನೀರಿನ ಈ ಯೋಜನೆಯ ಅನುಷ್ಠಾನ ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.

ಕೃಷ್ಣಾ ನ್ಯಾಯಾಧೀಕರಣವು ರಾಜ್ಯಕ್ಕೆ 177 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದು ರಾಜ್ಯದ ಬೇಡಿಕೆಗಿಂತ 101 ಟಿಎಂಸಿ ಕಡಿಮೆಯಾಗಿದೆ.ಈಗ ದೊರೆತ ನೀರಿನಲ್ಲಿಯೇ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಬರುವ ಯೋಜನೆಗಳಿಗೆ ಕೇವಲ 60 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ.ಇದರಲ್ಲಿ ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆಗಾಗಿ 21.5 ಟಿಎಂಸಿ ನೀರು ಬಳಕೆಯಾಗಲಿದೆ.

ಉಳಿದ 38.5 ಟಿಎಂಸಿ ನೀರಿನಲ್ಲಿ ಭದ್ರಾ ಮೇಲ್ದಂಡೆ ವ್ಯಾಪ್ತಿಯಲ್ಲಿ ಬರುವ ತುಂಗಾ ಮೇಲ್ದಂಡೆ ಸೇರಿದಂತೆ ಇತರ ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ. ಇನ್ನೂ 20.52 ಟಿಎಂಸಿ ನೀರಿನ ಸಾಮರ್ಥ್ಯದ ಬ್ಯಾತನಾಳ ಡ್ಯಾಂ ಯೋಜನೆಯ ಅನುಷ್ಠಾನ ಹೇಗೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬ್ಯಾತನಾಳ ಸಮೀಪ ಹರಿಯುವ ವರದಾ ನದಿಗೆ ಅಡ್ಡವಾಗಿ ಆಣೆಕಟ್ಟು ನಿರ್ಮಿಸುವ ಯೋಜನೆಗೆ 2001ರಲ್ಲಿ ಆಗಿನ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ಅಂದಿನ ನೀರಾವರಿ ಸಚಿವ ಎಚ್.ಕೆ.ಪಾಟೀಲ ಸಮೀಕ್ಷೆ ಕಾರ್ಯವನ್ನು ಮಾಡಿಸಿದ್ದರು.

ಸುಮಾರು 422 ಕೋಟಿ ರೂಪಾಯಿ ವೆಚ್ಚದ ನೀಲನಕ್ಷೆಯನ್ನು ತಯಾರಿಸಲಾಗಿತ್ತು. 3 ಕಿ.ಮಿ. ಉದ್ದದ ಡ್ಯಾಂ, ಪೂರ್ವ ಭಾಗದಲ್ಲಿ 84 ಕಿ.ಮೀ. ಕಾಲುವೆ, ಪಶ್ಚಿಮ ಭಾಗದಲ್ಲಿ 104 ಕಿ.ಮೀ. ಕಾಲುವೆ ಬರುತ್ತದೆ. ಹಾವೇರಿ, ಧಾರವಾಡ ಹಾಗೂ ಗದಗ ಜಿಲ್ಲೆಯ 167ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಜತೆಗೆ, ಸಾವಿರಾರು ಎಕರೆ ನೀರಾವರಿಗೆ ಒಳಪಡಿಸಲಿದೆ.

ಜಿಲ್ಲೆಯ ಹಾನಗಲ್ಲ, ಹಾವೇರಿ, ಹಿರೇಕೆರೂರು, ಬ್ಯಾಡಗಿ ತಾಲ್ಲೂಕುಗಳಿಗೆ, ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕುಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಆದರೆ, ಈ ಯೋಜನೆ ಕುರಿತು ಪ್ರಸ್ತಾವ ಬಂದಾಗ ಜಿಲ್ಲೆಯ ಈಗಿನ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಸೇರಿದಂತೆ ರಾಜಕೀಯ ಮುಖಂಡರು ಅಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

31 ಗ್ರಾಮಗಳು ಮುಳುಗಡೆ: ಬ್ಯಾತನಾಳ ನೀರಾವರಿ ಯೋಜನೆ ಅನುಷ್ಠಾನಗೊಂಡರೆ, ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ 13 ಹಾಗೂ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ 18 ಗ್ರಾಮಗಳು ಸೇರಿ 31 ಗ್ರಾಮಗಳು ಮುಳುಗಡೆಯಾಗುತ್ತವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜಿಲ್ಲೆಗೆ ಯಾವುದೇ ಲಾಭ ಇಲ್ಲದಿದ್ದರೂ ಆ ಜಿಲ್ಲೆಯ ಹೆಚ್ಚಿನ ಗ್ರಾಮಗಳು ಮುಳುಗಡೆಯಾಗುತ್ತವೆ. ಅದಕ್ಕಾಗಿ ಈ ಯೋಜನೆಗೆ ಒಪ್ಪಿಗೆ ದೊರೆಯಲಿದೆಯೋ ಇಲ್ಲವೋ ಎನ್ನುವ ಅನುಮಾನ ಜಿಲ್ಲೆಯ ಜನರನ್ನು ಕಾಡುತ್ತಿದೆ.

ನೀರಿನ ಕೊರತೆ:  ‘‘ಬಿ’ ಸ್ಕೀಮ್ ನಲ್ಲಿ ರಾಜ್ಯದ ಪಾಲಿನ ನೀರು ಬಳಕೆ ಸಲುವಾಗಿ ಬ್ಯಾತನಾಳ ಯೋಜನೆಗಾಗಿ ಜಾಗೆಯನ್ನು ಗುರುತಿಸಲಾಗಿತ್ತು. ಆದರೆ, ಈಗ ಕೃಷ್ಣಾ ಕಣಿವೆ ವ್ಯಾಪ್ತಿಯ ಭದ್ರಾ ಮೇಲ್ದಂಡೆಗೆ ದೊರೆತಿರುವ 60 ಟಿಎಂಸಿ ನೀರಿನಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಕಷ್ಟ ಸಾಧ್ಯ’ ಎನ್ನುತ್ತಾರೆ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಆರ್.ರುದ್ರಯ್ಯ.

ಹೆಚ್ಚಿನ ಪ್ರಮಾಣದ ನೀರು ದೊರೆತಿದ್ದರೆ, ಬ್ಯಾತನಾಳ ಸೇರಿದಂತೆ ಸಂಪೂರ್ಣ ಕುಡಿಯುವ ನೀರಿನ ಯೋಜನೆಯಾದ ಹಾವೇರಿ ಜಿಲ್ಲೆಯ ತಿಮ್ಮಾಪುರ ಏತ ನೀರಾವರಿ ಹಾಗೂ ಗದಗ ಜಿಲ್ಲೆಯ ಇಟಗಿ-ಸಾಸಲವಾಡ ಎರಡನೇ ಹಂತದ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅನುಕೂಲವಾಗುತ್ತಿತ್ತು ಎನ್ನುವುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT