ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರಿ ಸಮುದಾಯದ ವಿದ್ಯಾರ್ಥಿಗಳ ಸಮ್ಮಿಲನ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಭಾನುವಾರ ಬ್ಯಾರಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಮ್ಮಿಲನ. ಅದರಲ್ಲೂ ವಿದ್ಯಾರ್ಥಿನಿಯರದ್ದೇ ಮೇಲುಗೈ.

ಎಸ್ಸೆಸ್ಸೆಲ್ಸಿಯಿಂದ ಹಿಡಿದು ಬಿ.ಇ, ಬಿ.ಇಡಿಯಲ್ಲಿ ಉತ್ತಮ ಅಂಕ ಗಳಿಸಿರುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಹಿನ್ನೆಲೆಯಲ್ಲಿ `ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್~ ಆಶ್ರಯದಲ್ಲಿ ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಬಹುಮಾನ ಪಡೆದುಕೊಳ್ಳಲು ಬೆಂಗಳೂರು, ಉಡುಪಿ, ಶಿವಮೊಗ್ಗ,  ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಿಂದ ಬಂದಿದ್ದ ನೂರಾರು ಪ್ರತಿಭಾನ್ವಿತರ ಪೈಕಿ ಶೇ 75ಕ್ಕೂ ಹೆಚ್ಚು ಮಂದಿ ಬಾಲಕಿಯರೇ ಇದ್ದುದು ವಿಶೇಷ.

ಈ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಶಾಸಕ ಎನ್.ಎ.ಹ್ಯಾರಿಸ್, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅತ್ಯಂತ ಹೆಚ್ಚು ಪ್ರೋತ್ಸಾಹ ನೀಡುವ ಬ್ಯಾರಿ ಸಮುದಾಯದವರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

`ಉನ್ನತ ವಿದ್ಯಾಭ್ಯಾಸ ನಡೆಸುವುದಲ್ಲದೆ ಮುಸ್ಲಿಮರು ಐಎಎಸ್, ಐಪಿಎಸ್ ಮುಂತಾದ ಆಡಳಿತಾತ್ಮಕ ಸೇವೆಯ ಕುರಿತು ಹೆಚ್ಚು ಗಮನ ಹರಿಸಬೇಕು. ಶೈಕ್ಷಣಿಕವಾಗಿ ಮುಂದಕ್ಕೆ ಬರದಿದ್ದರೆ ಮುಸ್ಲಿಂ ಸಮುದಾಯಕ್ಕೆ ಉಳಿಗಾಲವಿಲ್ಲ. ರಾಜಕೀಯವಾಗಿ ಮಾತ್ರವಲ್ಲ ಉನ್ನತ ಹುದ್ದೆಗಳಲ್ಲೂ ಮುಸ್ಲಿಮರ ಪ್ರಾತಿನಿಧ್ಯ ಬಹಳ ಕಡಿಮೆ ಇದೆ~ ಎಂದರು.

ಪ್ರೆಸ್ಟೀಜ್ ಬಿಲ್ಡರ್ಸ್‌ ಉದ್ಯಮ ಗುಂಪಿನ ಮುಖ್ಯಸ್ಥ ಇರ್ಫಾನ್ ರಜಾಕ್ ಮಾತನಾಡಿ, `ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆ ಬೆಳಕಿಗೆ ಬರಲು ಸೂಕ್ತ ವೇದಿಕೆಯ ಅಗತ್ಯವಿದೆ. ಶಿಕ್ಷಣದಲ್ಲಿ ಮುಸ್ಲಿಮರು ಮುಂದೆ ಬರಬೇಕು~ ಎಂದರು.

24 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ಯಾರಿ ಸೌಹಾರ್ದ ಸಮುದಾಯ ಭವನವನ್ನು ಮುಂದಿನ ತಿಂಗಳಿನಿಂದ ನಗರದಲ್ಲಿ ನಿರ್ಮಿಸಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ಬಿ.ಎಂ.ಫಾರೂಕ್ ಅವರು ವಿವರಿಸಿದರು.
ಪುತ್ತೂರಿನ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾಕರ್ತ ಮಿತ್ತೂರು ಉಸ್ಮಾನ್ ಹಾಜಿ ಅವರಿಗೆ `ವರ್ಷದ ಬ್ಯಾರಿ~ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮಾಜಿ ಸಚಿವ ಬಿ.ಎ.ಮೊಹಿದ್ದೀನ್, ರಾಜ್ಯ ವಕ್ಫ್ ಮಂಡಳಿ ಉಪಾಧ್ಯಕ್ಷ ಶಾಫಿ ಸಅದಿ, ಅಸೋಸಿಯೇಷನ್ ಉಪಾಧ್ಯಕ್ಷ ಸಿದ್ದೀಖ್ ಬ್ಯಾರಿ, ಕಾರ್ಯದರ್ಶಿ ಟಿ.ಕೆ.ಷರೀಫ್, ಗೌರವ ಕಾರ್ಯದರ್ಶಿ ಕುವೇಂಡ ಹಂಝತುಲ್ಲ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ, ಬಹರೇನ್‌ನ ಉದ್ಯಮಿ ವರ್ಗಿಸ್ ಕುರಿಯನ್ `ಬ್ಯಾರಿ ಟೈಮ್ಸ~ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT