ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರೇಜ್ ಗೇಟ್ ತೆರವು: ಇಕ್ಕಟ್ಟಿನಲ್ಲಿ ಸಿಬ್ಬಂದಿ

Last Updated 4 ಜುಲೈ 2012, 8:20 IST
ಅಕ್ಷರ ಗಾತ್ರ

ಬೀಳಗಿ: ಬ್ಯಾರೇಜ್‌ಗೆ ಅಳವಡಿಸಿರುವ ಗೇಟ್‌ಗಳನ್ನು ಹೊರ ತೆಗೆದರೆ ಕೃಷ್ಣಾ ನದಿಗೆ ನೀರು ಬಾರದೇ ಬ್ಯಾರೇಜು ಖಾಲಿಯಾಗಿ ಕುಡಿಯುವ ನೀರಿಗೆ ಸಂಚಕಾರ ಬಂದೀತೆಂಬ ಆತಂಕ ಜನರದ್ದಾದರೆ, ವರ್ಷಾನುಗಟ್ಟಲೇ ನೀರಿನಲ್ಲಿರುವ ಗೇಟ್‌ಗಳು ತುಕ್ಕು ಹಿಡಿದು ಹಾಳಾಗಿದ್ದರಿಂದ ಜನಕ್ಕೆ ತೊಂದರೆ ಆದೀತೆಂಬ ಭೀತಿ ಅಧಿಕಾರಿಗಳದ್ದು.
 

ಇವುಗಳ ನಡುವೆ ಇಕ್ಕಟ್ಟಿನಲ್ಲಿ ನೀರಾವರಿ ಇಲಾಖೆ ಸಿಬ್ಬಂದಿ ಸಂಕಷ್ಟ ಎದುರಿಸುತ್ತಿದ್ದಾರೆ.
ತಾಲ್ಲೂಕಿನ ಕೊರ್ತಿ-ಕೊಲ್ಹಾರ ಬಳಿ ಒಂದೂವರೆ ಶತಮಾನದ ಹಿಂದೆ ಆಳರಸರು ನಿರ್ಮಿಸಿದ ಸೇತುವೆಗೆ 30 ವರ್ಷಗಳ ಹಿಂದೆ ನೀರಾವರಿ ಇಲಾಖೆಯು ಗೇಟ್‌ಗಳನ್ನು ಅಳವಡಿಸಿತ್ತು. ನದಿಯ ಎಡಬಲದ ಜಮೀನುಗಳಿಗೆ ನೀರಾವರಿ ಸೌಲಭ್ಯ ಜೊತೆಗೆ ವಿಜಾಪುರ ಪಟ್ಟಣಿಗರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿತ್ತು.

ಈ ಬರಗಾಲದ ಸಂದರ್ಭದಲ್ಲಿ ಎಂತೆಂತಹ ಜಲಾಶಯಗಳು, ನದಿಗಳು ಬತ್ತಿ ಹೋದರೂ 485 ಎಂ.ಸಿ.ಎಫ್.ಟಿ. ಸಾಮರ್ಥ್ಯದ ಕೊರ್ತಿ ಕೊಲ್ಹಾರ ಬ್ಯಾರೇಜ್ ಜೂನ್ ಅಂತ್ಯದವರೆಗೂ ತನ್ನ ಎಡಬಲದ ಜಮೀನುಗಳನ್ನು ಹಸಿರುಗೊಳಿಸಿ ಸಲುಹಿತು.

ಬ್ಯಾರೇಜ್ ಗೇಟುಗಳು ನೀರಿನಲ್ಲಿ ಸಿಕ್ಕಿ ಹಾಕಿಕೊಂಡು ತುಕ್ಕು ಹಿಡಿಯುವುದು ಬೇಡವೆಂದು ಆಲೋಚಿಸಿದ ಸಿಬ್ಬಂದಿ ನೀರು ಖಾಲಿಯಾದ ಮೂರನೇ ಹಂತದ ಮೇಲ್ಭಾಗದ 158 ಗೇಟುಗಳನ್ನು ಹೊರತೆಗೆದರು.
ನೀರು ಕಡಿಮೆಯಾದಂತೆ ಎರಡನೇ ಮತ್ತು ಒಂದನೇ ಹಂತದ ಗೇಟ್‌ಗಳನ್ನು ತೆಗೆಯಬೇಕೆಂಬುದು ಅವರ ಆಲೋಚನೆಯಾಗಿತ್ತು.

ಕೃಷ್ಣಾ ನದಿಗೆ ನೀರು ಬರತೊಡಗಿದೆ ಎಂದು ನಂಬಿಕೊಂಡು ಎರಡು ಹಾಗೂ ಮೂರನೇ ಹಂತದ ಗೇಟುಗಳನ್ನು ತೆಗೆದು ಬಿಟ್ಟಲ್ಲಿ ಇಡೀ ಬ್ಯಾರೇಜು ಖಾಲಿಯಾಗಿ ಬಿಡುತ್ತದೆ. ಆಗ ವಿಜಾಪುರ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಆಗುವ ಆತಂಕ ರೈತರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT