ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್ ತಂತ್ರ ಬದಲಾಗುತ್ತಿದೆ, ವೇಗ ಹೆಚ್ಚುತ್ತಿದೆ...

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ಕರ್ನಾಟಕದ ಬಾಲಕಿಯರು ಕಳೆದ ವಾರ ಗೋವಾದಲ್ಲಿ ನಡೆದ ರಾಷ್ಟ್ರೀಯ ಸಬ್‌ಜೂನಿಯರ್ ಬ್ಯಾಸ್ಕೆಟ್‌ಬಾಲ್‌ನ ಕೆಲವು ಪಂದ್ಯಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರಿದ್ದು ಕಂಡಾಗ ಮನಸ್ಸಿಗೆ ಹಿತವೆನಿಸಿತು. ಕನ್ನಡದ ಬಾಲಕಿಯರು ಮೂರನೇ ಸ್ಥಾನ ಪಡೆದದ್ದು ಕಡಿಮೆ ಸಾಧನೆ ಏನಲ್ಲ.
 
ರಾಷ್ಟ್ರ ಮಟ್ಟದ ಮಹಿಳಾ ಬ್ಯಾಸ್ಕೆಟ್‌ಬಾಲ್ ಕೂಟಗಳಲ್ಲಿ ಇವತ್ತಿಗೂ ದಕ್ಷಿಣ ಭಾರತದ ಆಟಗಾರ್ತಿಯರ ಮೇಲರಿಮೆ ಕಂಡುಬರುತ್ತಿರುತ್ತದೆ. ಅದರಲ್ಲಿಯೂ ಕೇರಳ,ತಮಿಳುನಾಡಿನ ಆಟಗಾರ್ತಿಯರದೇ ಎತ್ತಿದ ಕೈ. ಕರ್ನಾಟಕದವರು ಇನ್ನೂ ಬಹು ದೂರ ಸಾಗಬೇಕೆನಿಸುತ್ತದೆ.

ಈ ಹಿನ್ನೆಲೆಯಲ್ಲಿ ನನ್ನ ತವರಿನ ಬಾಲಕಿಯರು ರಾಷ್ಟ್ರೀಯ ಸಬ್ ಜೂನಿಯರ್ ಕೂಟದಲ್ಲಿ ಎದ್ದು ಕಂಡರೆ, ಮುಂದಿನ ದಿನಗಳಲ್ಲಿ ಅವರು ಇನ್ನಷ್ಟೂ ಎತ್ತರಕ್ಕೇರಬಹುದೆಂಬ ಆಶಯ ನನ್ನದು.

ಗೋವಾದಲ್ಲಿ ನನ್ನೂರ ಹುಡುಗಿಯರು ಕಂಚಿನ ಪದಕ ಗೆದ್ದ ಸುದ್ದಿ ಗೊತ್ತಾದಾಗ, ನಾನೂ ಕೂಡ ಹಿಂದೆ ಬೆಂಗಳೂರು, ಮಂಗಳೂರು ಸೇರಿದಂತೆ ಕೆಲವು ಕಡೆ ನಡೆದ ಸಬ್‌ಜೂನಿಯರ್ ಟೂರ್ನಿಗಳಲ್ಲಿ ಆಡುತ್ತಾ, ಕರ್ನಾಟಕವನ್ನು ಪ್ರತಿನಿಧಿಸಿದ್ದ ದಿನಗಳ ನೆನಪುಗಳು ಕಾಡತೊಡಗಿದವು. ಈಗ ವರ್ಷಗಳು ಉರುಳಿವೆ.

ಬ್ಯಾಸ್ಕೆಟ್‌ಬಾಲ್ ಕ್ರೀಡೆ ದೇಶದಾದ್ಯಂತ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾ ನಡೆದಿದೆ. `ಡಬ್ಲ್ಯುಎನ್‌ಬಿಎ~ ನಿಯಮಗಳನ್ನು ಎಫ್‌ಐಬಿಎ ಅಳವಡಿಸಿಕೊಳ್ಳುತ್ತಿದೆ. ಆಟದ ವೇಗ ಹೆಚ್ಚುತ್ತಿದೆ. ಅದಕ್ಕೆ ನಿಯಮಗಳಲ್ಲಿ ಏನೆಲ್ಲಾ ಸುಧಾರಣೆಗಳಾಗಬೇಕೋ ಅದೆಲ್ಲಾ ಆಗುತ್ತಿದೆ. ಹಿಂದೆ ನಾವು ಏಳು ನಂಬರ್‌ನ ಚೆಂಡುಗಳನ್ನು ಬಳಸುತ್ತಿದ್ದೆವು.

ಈಗ ಆರು ನಂಬರ್‌ನ ಚೆಂಡುಗಳನ್ನೇ ಬಳಸುತ್ತಿದ್ದೇವೆ. ಇದರಿಂದ ಚೆಂಡಿನ ಮೇಲಿನ ಹಿಡಿತ ಇನ್ನಷ್ಟು ಹೆಚ್ಚಿದಂತಾಗಿದೆ. ಆಟದ ತಂತ್ರಗಳಂತೂ ಬಹಳಷ್ಟು ಸುಧಾರಿಸುತ್ತಲೇ ಇವೆ.

ಎರಡು ವರ್ಷಗಳಿಂದ ರಿಲಯನ್ಸ್‌ನವರ ಪ್ರಾಯೋಜಕತ್ವ ರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡೆಗೆ ಇನ್ನಿಲ್ಲದ ಮಹತ್ವ ಸಿಗುವಂತೆ ಮಾಡಿದೆ. ರಿಲಯನ್ಸ್‌ನವರು ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ `ಗ್ರೇಡ್~ಗಳನ್ನು ನೀಡುವ ವ್ಯವಸ್ಥೆ ಆರಂಭವಾಗಿದೆ.

ಎ ಗ್ರೇಡ್‌ನ ಆಟಗಾರ್ತಿಯರು ತಿಂಗಳಿಗೆ 30ಸಾವಿರ ಪಡೆದರೆ, ಬಿ ಗ್ರೇಡ್‌ನವರು 20 ಸಾವಿರ ಮತ್ತು ಸಿ ಗ್ರೇಡ್‌ನವರು 10 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ. ಇದರಿಂದಾಗಿ ದೇಶದಾದ್ಯಂತ ಹೆಚ್ಚು ಮಕ್ಕಳು ಬ್ಯಾಸ್ಕೆಟ್‌ಬಾಲ್‌ನತ್ತ ಬರುತ್ತಿದ್ದಾರೆ. 

 ಬ್ಯಾಸ್ಕೆಟ್‌ಬಾಲ್ ಬಗ್ಗೆ ಬಹಳ ಆಸಕ್ತಿ ಇರುವವರಿಗೆ ಪೋಷಕರ ಪ್ರೋತ್ಸಾಹ ಇರುವುದೇ ಇಲ್ಲ. ಇಂತಹ ಪ್ರತಿಕೂಲ ಸ್ಥಿತಿಗಳ ನಡುವೆಯೂ ಕರ್ನಾಟಕದಲ್ಲಿ ಈ ಕ್ರೀಡೆ ಗಮನಾರ್ಹ ಸಾಧನೆ ತೋರಿದೆ. ಆದರೆ ಕರ್ನಾಟಕದ ಮಟ್ಟಿಗೆ ಹೇಳುವುದಿದ್ದರೆ ಶಾಲೆಗಳಲ್ಲಿ ಈ ಕ್ರೀಡೆಗೆ ಸರಿಯಾದ ತರಬೇತಿ ವ್ಯವಸ್ಥೆ ಕಡಿಮೆಯೇ. ಅಗತ್ಯ ಸೌಲಭ್ಯಗಳೂ ಇಲ್ಲ.

ಕಿರಿಯರು ಅಥವಾ ಶಾಲಾಮಕ್ಕಳಲ್ಲೇ ಪ್ರತಿಭೆಯನ್ನು ಗುರುತಿಸಿ ಸರಿಯಾದ ತರಬೇತಿ ನೀಡಬೇಕು. ಆರಂಭದಲ್ಲಿ ಕನಿಷ್ಠ ಒಂದು ವರ್ಷದ ಕಾಲ ಆಟದ ಮೂಲಭೂತ ನಿಯಮಗಳನ್ನು ಕಲಿಸಬೇಕು, ಚೆಂಡನ್ನು ಸಮರ್ಪಕವಾಗಿ ತಂಡದ ಇನ್ನೊಬ್ಬರಿಗೆ ತಲುಪಿಸುವುದರಲ್ಲಿ ಪರಿಣತಿ ನೀಡಬೇಕು.

ಹೊಸ ತಂತ್ರಗಳ ಬಗ್ಗೆ ಅರಿವು ನೀಡಬೇಕು. ನಂತರ ಪಂದ್ಯಗಳಲ್ಲಿ ಆಡಿಸಬೇಕು. ಆದರೆ ಈಚೆಗಿನ ದಿನಗಳಲ್ಲಿ ಮಕ್ಕಳು ಎರಡು ದಿನ ಚೆಂಡನ್ನು ಬ್ಯಾಸ್ಕೆಟ್‌ನೊಳಗೆ ಹಾಕುತ್ತಿದ್ದಂತೆಯೇ ಅವರನ್ನು ನೇರವಾಗಿ ಪಂದ್ಯಗಳಲ್ಲಿ ಆಡಿಸಲಾಗುತ್ತದೆ. ಇದು ತಪ್ಪು, ಯಾರು ಬೇಕಾದರೂ ಚೆಂಡನ್ನು ಬ್ಯಾಸ್ಕೆಟ್‌ನೊಳಗೆ ಹಾಕಬಹುದು. ಆದರೆ ಮೊದಲು ಆಟದ ನಿಯಮಗಳನ್ನು ಸರಿಯಾಗಿ ಕಲಿಯಬೇಕು.

ರೀಬೌಂಡ್ ಚೆಂಡನ್ನು ಪಡೆಯುವುದು ಹೇಗೆ, ಎದುರಾಳಿಯನ್ನು ಬ್ಲಾಕ್ ಮಾಡುವುದು ಹೇಗೆ ಇತ್ಯಾದಿಗಳೆಲ್ಲದರ ಬಗ್ಗೆಯೂ ಎಳೆಯರಿಗೆ ಹಲವು ತಿಂಗಳ ಕಾಲ ತರಬೇತಿ ನೀಡಬೇಕು. ಹಾಗಿದ್ದಾಗ ಮಾತ್ರ ಉತ್ತಮ ಆಟಗಾರ್ತಿಯರು ರೂಪುಗೊಳ್ಳಲು ಸಾಧ್ಯ.
ಮೊದಲೆಲ್ಲ ನಾವು ವಿದೇಶಿ ಕೋಚ್‌ಗಳ ಬಗ್ಗೆ ಕೇಳಿದ್ದೆವು. ಆದರೆ ಹಿಂದೆ ನನ್ನ ತಂಡಕ್ಕೆ ಅಮೆರಿಕಾದಿಂದ ತರಬೇತುದಾರರು ಬಂದಾಗ ಅವರಿಂದ ನಾವು ಬಹಳಷ್ಟು ಕಲಿತೆವು.

ತರಬೇತಿದಾರರು ಆಟವನ್ನು ಹೇಗೆ ಸೆಟ್ ಮಾಡಬಹುದೆಂದು ಹೇಳಿಕೊಡಬಹುದು. ಆ ನಂತರ ಪಂದ್ಯ ನಡೆಯುತ್ತಿದ್ದಾಗ ಪರಿಸ್ಥಿತಿಯನ್ನು ಬಳಸಿಕೊಳ್ಳುವುದಿದೆಯಲ್ಲಾ, ಆ ದಿಸೆಯಲ್ಲಿ ಆಟಗಾರ್ತಿಯು ಸ್ವಂತ ನಿರ್ಧಾರವನ್ನೇ ತೆಗೆದುಕೊಳ್ಳಬೇಕು ತಾನೆ. ಇಂತಹ ಸಂದರ್ಭದಲ್ಲಿಯೇ ಆಟಗಾರ್ತಿಯರಿಗೆ ದಟ್ಟ ಅನುಭವ ಮತ್ತು ತರಬೇತಿ ನೆರವಿಗೆ ಬರುವುದು.

ನಾನು ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ದೇಶಗಳ ನಡುವಣ ಬ್ಯಾಸ್ಕೆಟ್‌ಬಾಲ್ ಸೇರಿದಂತೆ ಹತ್ತು ಹಲವು ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ನ್ಯೂಜಿಲೆಂಡ್, ಚೀನಾ, ಆಸ್ಟ್ರೇಲಿಯ, ಜಪಾನ್, ಕೊರಿಯಾ ತಂಡಗಳನ್ನು ಎದುರಿಸಿದ್ದಂತೂ ನಾನು ಮರೆಯಲಾಗದ ಅನುಭವಗಳು.

ನಾನು ಕಂಡುಕೊಂಡಂತೆ ಆ ತಂಡಗಳಲ್ಲಿ ಚೆಂಡನ್ನು ಬ್ಯಾಸ್ಕೆಟ್‌ಗೆ ಹಾಕುವವರಷ್ಟೇ ಮುಖ್ಯವಲ್ಲ. ರಕ್ಷಣಾ ಆಟಗಾರ್ತಿಯರೂ ತಾರಾ ಮೌಲ್ಯವನ್ನೇ ಹೊಂದಿರುತ್ತಾರೆ. ನಮ್ಮಲ್ಲಿ ಯಾರು ಹೆಚ್ಚು ಸಲ ಚೆಂಡನ್ನು ಬ್ಯಾಸ್ಕೆಟ್‌ಗೆ ಹಾಕಿರುತ್ತಾರೋ, ಅವರೇ ಅತ್ಯುತ್ತಮ ಆಟಗಾರರೆಂಬ ಭ್ರಮೆ ಇದೆ. ಅದು ಸರಿಯಲ್ಲ. ನನ್ನನ್ನು ರಕ್ಷಣಾ ಆಟಗಾರ್ತಿಯೆಂದೇ ಗುರುತಿಸಿದಾಗ ಬಹಳ ಖುಷಿಯಾಗುತ್ತದೆ.

ನಾವು ಎಷ್ಟು ಪಾಯಿಂಟ್ಸ್ ಗಳಿಸುತ್ತೇವೆಯೋ, ಅದೇ ರೀತಿ ಎದುರಾಳಿ ಪಾಯಿಂಟ್ಸ್ ಗಳಿಸುವುದಕ್ಕೆ ಅಡ್ಡಿ ಪಡಿಸುವ ದಿಸೆಯಲ್ಲಿ ನಾವು ತಡೆಗೋಡೆ ಯಂತಿರಬೇಕು. ಚೆಂಡನ್ನು ಬ್ಯಾಸ್ಕೆಟ್‌ಗೆ ಹಾಕುವಷ್ಟೇ ಮುಖ್ಯ ರಕ್ಷಣಾ ಆಟ ಕೂಡ. ಈ ಭಾವನೆ ಮೂಡದಿದ್ದರೆ ಉತ್ತಮ `ಪಾಸಿಂಗ್~ಗೂ ಅವಕಾಶವಿಲ್ಲದೆ ತಂಡ ಸೊರಗುತ್ತದೆ ಎಂಬ ಸತ್ಯವನ್ನು ಇಷ್ಟು ವರ್ಷಗಳ ನನ್ನ ಅನುಭವದಲ್ಲಿ ನಾನು ಕಂಡುಕೊಂಡಿದ್ದೇನೆ.

ಹಿಂದೆ ಆಸ್ಟ್ರೇಲಿಯ ಮುಂತಾದ ತಂಡಗಳು ವಿದೇಶ ಪ್ರವಾಸ ನಡೆಸಿದಾಗ ಆಟಗಾರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ತಾಂತ್ರಿಕ ಅಧಿಕಾರಿಗಳಿರುವುದನ್ನು ಕಂಡು ಆಶ್ಚರ್ಯ ಪಟ್ಟಿದ್ದೆ. ಆದರೆ ಈಗ ನಮ್ಮ ದೇಶದಲ್ಲಿಯೂ ಪರಿಸ್ಥಿತಿ ಬದಲಾಗಿದೆ.

ಅದು ಮಹಿಳಾ ತಂಡವಿರಬಹುದು, ಪುರುಷರ ತಂಡವಿರಬಹುದು, ದೇಶದ ತಂಡವೆಂದರೆ ಅದರಲ್ಲಿ ಕೋಚ್, ಫಿಸಿಯೋ, ಟ್ರೈನರ್, ಫಿಟ್‌ನೆಸ್ ನೋಡಿಕೊಳ್ಳುವವರು, ಮ್ಯೋನೇಜರ್ ಸೇರಿದಂತೆ ಆಟಗಾರರ ಸಂಖ್ಯೆಯಷ್ಟೇ ಇತರರೂ ಇರುತ್ತಾರೆ.

ಹೌದು, ಈ ಎಲ್ಲಾ ಅನುಭವಗಳ ನಡುವೆ ಹಿಂದಿನದನ್ನು ಯೋಚಿಸಿದಾಗ ನೆನಪು ಎಲ್ಲೆಲ್ಲೋ ಹೋಗುತ್ತಿದೆ. ಒಂದೂವರೆ ದಶಕದ ಹಿಂದೆ ನಾನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯ ಕ್ರೀಡಾಶಾಲೆಯಲ್ಲಿ ಬ್ಯಾಸ್ಕೆಟ್‌ಬಾಲ್ ಅಭ್ಯಾಸ ನಡೆಸುತ್ತಿದ್ದ ದಿನಗಳು ನೆನಪಾಗುತ್ತವೆ. ಅಲ್ಲಿ ನಾನು ಐದನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗಿದ್ದೆ.

 ಆ ಶಾಲೆಯನ್ನು ಮುಚ್ಚಿದಾಗ ನಿಟ್ಟೆಯ ಕೆ.ಎಸ್.ಹೆಗ್ಡೆ ಫೌಂಡೇಷನ್‌ಗೆ ಸೇರಿದೆ. ಈ ಫೌಂಡೇಷನ್‌ನವರು ಕಳೆದ ಹದಿನೈದು ವರ್ಷಗಳಿಂದ ಉತ್ತಮ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯರನ್ನು ಆಯ್ಕೆ ಮಾಡಿ ಅವರಿಗೆ ಅಲ್ಲಿ ಉಚಿತ ಶಿಕ್ಷಣ ಮತ್ತು ಹಾಸ್ಟೆಲ್ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ.

ಅಲ್ಲಿ ನನ್ನ ಬ್ಯಾಸ್ಕೆಟ್‌ಬಾಲ್ ಬದುಕಿಗೆ ಹೊಸ ತಿರುವು ಸಿಕ್ಕಿದ್ದನ್ನು ನಾನು ಹೇಗೆ ತಾನೆ ಮರೆಯಲಿ. ಹತ್ತು ವರ್ಷಗಳ ಕಾಲ ನಾನು ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದೆ. ನನ್ನ ತಂಡ ಒಂದು ಸಲ ಬಂಗಾರ ಗೆದ್ದಿದ್ದು, ಏಳು ವರ್ಷಗಳ ಕಾಲ ಎರಡನೇ ಸ್ಥಾನಕ್ಕೇರಿತ್ತು.

ಹತ್ತು ದಿನಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ ಆಲ್‌ಸ್ಟಾರ್ ಟೂರ್ನಿಗೆ ನನ್ನನ್ನು ಆಹ್ವಾನಿಸಲಾಗಿತ್ತು. ನಿಜಕ್ಕೂ ನನಗೆ ಅತೀವ ಖುಷಿಯಾಗಿತ್ತು. ಇಂತಹದ್ದೊಂದು ಟೂರ್ನಿ ಭಾರತದಲ್ಲಿ ನಡೆದದ್ದು ಇದೇ ಮೊದಲು. ಮುಂಬೈನಲ್ಲಿ ಮೂರು ದಿನವಿದ್ದೆ.

ಅಲ್ಲಿ ಭಾರತದ ಶ್ರೇಷ್ಠ ಆಟಗಾರ್ತಿಯರಲ್ಲೇ ಎರಡು ತಂಡ ಮಾಡಿ ಆಡಿಸಲಾಗಿತ್ತು. ನಾನು ದೆಹಲಿಯನ್ನು ಪ್ರತಿನಿಧಿಸಿದ್ದೆನಾದರೂ, ಮೂಲತಃ ನಾನು ಕನ್ನಡತಿ ತಾನೆ. ಅಲ್ಲಿ ಹಿಂದಿ, ತಮಿಳು, ಮಲೆಯಾಳಂ ಸೇರಿದಂತೆ ಕೆಲವು ಭಾಷೆಗಳಲ್ಲಿ ಪರಸ್ಪರ ಮಾತನಾಡುತ್ತಿದ್ದವರು ಇದ್ದರು. ಆದರೆ ಕನ್ನಡದಲ್ಲಿ ಮಾತನಾಡುವವರೂ ನನಗೆ ಸಿಗಲೇ ಇಲ್ಲ.

ಈ ಹಿನ್ನಲೆಯಲ್ಲೇ ನನಗೆ ಈಚೆಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಸಬ್‌ಜೂನಿಯರ್‌ನಲ್ಲಿ ಕರ್ನಾಟಕದ ಆಟಗಾರ್ತಿಯರು ಕೆಲವು ಪಂದ್ಯಗಳಲ್ಲಿ ಉತ್ತಮವಾಗಿ ಆಡಿರುವುದು ಗೊತ್ತಾದಾಗ ಬಹಳ ಸಂತಸವಾಗಿತ್ತು. ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಹೆಚ್ಚು ಆಟಗಾರ್ತಿಯರು ಅಂತರರಾಷ್ಟ್ರೀಯ ಎತ್ತರಕ್ಕೇರುವಂತಾಗಲಿ ಎಂಬುದೇ ನನ್ನ ಆಶಯ.
(ಲೇಖಕಿ: ಅಂತರರಾಷ್ಟ್ರೀಯ ಆಟಗಾರ್ತಿ ಮತ್ತು ದೆಹಲಿ ತಂಡದ ಮಾಜಿ ನಾಯಕಿ)   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT