ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್ ರೀಬೌಂಡ್ಗೆ ಯತ್ನ

Last Updated 16 ಜನವರಿ 2011, 20:30 IST
ಅಕ್ಷರ ಗಾತ್ರ

ಸೊಗಸಿಗೆ ಹೆಸರಾದ ಬ್ಯಾಸ್ಕೆಟ್‌ಬಾಲ್ ಕ್ರೀಡೆಯನ್ನು ಬೆಳೆಸಲು ಎರಡೂವರೆ ದಶಕಗಳಿಗೂ ಹೆಚ್ಚು ಕಾಲದ ನಿರಂತರ ಪ್ರಯತ್ನ.ಈವರೆಗೆ ನಡೆದ ಹದಿನೈದಕ್ಕೂ ಹೆಚ್ಚು ಟೂರ್ನಿಗಳಲ್ಲಿ ಅದೆಷ್ಟೋ ಆಟಗಾರರು ಗುರಿ ತಪ್ಪಿದ ಚೆಂಡನ್ನು ಮತ್ತೆ ಬ್ಯಾಸ್ಕೆಟ್‌ಗೆ ಸೇರಿಸಲು ರೀಬೌಂಡ್ ತಂತ್ರಕ್ಕೆ ಮೊರೆ ಹೋಗಿರಬಹುದು, ಅದರಲ್ಲಿ ವಿಫಲರಾಗಿರಲೂಬಹುದು. ಆದರೆ ಬ್ಯಾಸ್ಕೆಟ್‌ಬಾಲ್ ಕ್ರೀಡೆಯನ್ನು ಉಳಿಸುವ ಧಾರವಾಡದ ರೋವರ್ಸ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್‌ನ ಶ್ರಮದಲ್ಲಿ ವೈಫಲ್ಯದ ಛಾಯೆ ಇಲ್ಲ. ರೋವರ್ಸ್‌ ಕ್ಲಬ್ ಸ್ಥಾಪನೆಯಾಗಿ 27 ವರ್ಷಗಳಾಗಿವೆ. ‘ಸಕಾರಣ’ದಿಂದ ಕೆಲವು ವರ್ಷಗಳ ‘ವಿರಾಮ’ವಿದ್ದರೂ ಕ್ಲಬ್ ಪ್ರತಿವರ್ಷ ನಡೆಸುವ ಬ್ಯಾಸ್ಕೆಟ್‌ಬಾಲ್ ಟೂರ್ನಿ ಎಂಬ ‘ವ್ರತ’ಕ್ಕೆ ಭಂಗವಾಗಲಿಲ್ಲ.

ಈ ಬಾರಿಯ ಟೂರ್ನಿ ಜನವರಿ 7ರಿಂದ 9ರವರೆಗೆ ರೋವರ್ಸ್‌ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ನಡೆಯಿತು. ಪುರುಷ ಹಾಗೂ ಬಾಲಕರ ತಲಾ 12 ಮತ್ತು ಬಾಲಕಿಯರ 8 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದು ಸಂಘಟಕರ ಭರವಸೆಯ ಸಸಿಗೆ ನೀರೆರೆದಿತ್ತು.ಕೇವಲ ಹತ್ತು ಮಂದಿ ಯುವ ಪಡೆ ಆರಂಭಿಸಿದ ರೋವರ್ಸ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್‌ನ ಸದಸ್ಯರ ಸಂಖ್ಯೆ ಈಗ ಸಾವಿರ ಮೀರಿದೆ.ಸ್ಥಾಪನೆಯಾದ ವರ್ಷದಲ್ಲೇ ಟೂರ್ನಿ ನಡೆಸಿದ ಕ್ಲಬ್ ಮೊದಲ ಎಂಟು ವರ್ಷ ಜಿಲ್ಲಾ ಮಟ್ಟದ ಬಾಲಕರ ಹಾಗೂ ಅಖಿಲ ಭಾರತ ಪುರುಷ-ಮಹಿಳೆಯರ ಮುಕ್ತ ಟೂರ್ನಿ ನಡೆಸಿಕೊಂಡು ಬಂದಿತು. ಅಂದು ರಾಜ್ಯದ ಹಾಗೂ ಪುಣೆ-ಮುಂಬೈ ಭಾಗದ ಪ್ರಖ್ಯಾತ ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದ ವಿಷಯವನ್ನು ತಂಡದ ಸ್ಥಾಪಕ ಸದಸ್ಯರು ಇಂದಿಗೂ ರೋಮಾಂಚನ ಅನುಭವಿಸುತ್ತಲೇ ವಿವರಿಸುತ್ತಾರೆ.

1992ರಲ್ಲಿ ಈ ‘ಟೆನ್ ಮ್ಯಾನ್ ಆರ್ಮಿ’ಯಲ್ಲಿ ದೊಡ್ಡ ಬದಲಾವಣೆಯಾಯಿತು. ಶಿಕ್ಷಣ ಮುಗಿಸಿದ ಇವರು ಉದ್ಯೋಗ ಅರಸಿ ವಿವಿಧೆಡೆ ಹಂಚಿ ಹೋದರು. ಕೆಲವರು ಉನ್ನತ ಹುದ್ದೆಗಳನ್ನು ಪಡೆದುಕೊಂಡರೆ ಅನೇಕರು ಧಾರವಾಡದಲ್ಲೇ ಉದ್ಯಮ ಆರಂಭಿಸಿದರು.ದೀರ್ಘ ವಿರಾಮದ ನಂತರ 2004ರಲ್ಲಿ ಮತ್ತೆ ಒಂದೆಡೆ ಸೇರಿದರು. ಆದರೆ ಅಷ್ಟರಲ್ಲಿ ದುರಂತವೊಂದು ನಡೆದಿತ್ತು. ಕ್ಲಬ್‌ನ ಖ್ಯಾತ ಆಟಗಾರ, ಲಾಂಗ್‌ವೇ ಶೂಟಿಂಗ್ ಪರಿಣಿತ ವಿಜಯ ಬಳ್ಳಾರಿ ಅವರ ಪತ್ನಿ ರಾಜೇಶ್ವರಿ ದುರಂತ ಸಾವನ್ನು ಕಂಡಿದ್ದರು. ಕಸ್ಟಮ್ಸ್ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ ವಿಜಯ ಬಳ್ಳಾರಿ ಅವರ ಪತ್ನಿ ಗೆಳೆಯರಿಗೆ ಮಮತೆಯ ‘ಭಾಭೀ’ ಆಗಿದ್ದರು. ಹೀಗಾಗಿ ಟೂರ್ನಿಯನ್ನು ಅವರ ಹೆಸರಿನಲ್ಲೇ ನಡೆಸಲು ನಿರ್ಧರಿಸಲಾಯಿತು. 

 ಆಟಗಾರರನ್ನು ಪ್ರೋತ್ಸಾಹಿಸುವುದರೊಂದಿಗೆ ರೋವರ್ಸ್‌ ಕ್ಲಬ್ ಸ್ವತಃ ಬೆಳೆಯುತ್ತಿದೆ; ಬೆಳೆದಿದೆ. ‘ವಿಜಯ’ಗಾಥೆ: ಸದಾ ಹಸನ್ಮುಖಿ.ಕ್ರೀಡೆಗೆ ತನು-ಮನ-ಧನ ಅರ್ಪಿಸಲು ಹಿಂದೇಟು ಹಾಕದ ಹೃದಯವಂತಿಕೆ. ಇದೆಲ್ಲದರ ಸಂಗಮ, ವಿಜಯ ಬಳ್ಳಾರಿ. ಎಂಬತ್ತರ ದಶಕದಲ್ಲಿ ಕರ್ನಾಟಕದ ಬ್ಯಾಸ್ಕೆಟ್‌ಬಾಲ್ ರಂಗದ ಮಿಂಚಾಗಿದ್ದ ಇವರು ರೋವರ್ಸ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್ ಸ್ಥಾಪಿಸಿದ ಹತ್ತು ಮಂದಿ ‘ಮೊದಲಿಗ’ರಲ್ಲಿ ಒಬ್ಬರು. ಈಗ ಕಸ್ಟಮ್ಸ್ ಇಲಾಖೆ ಗುಪ್ತ ದಳದ ಇನ್ಸ್‌ಪೆಕ್ಟರ್.

ಪತ್ನಿಯ ಹೆಸರಿನಲ್ಲಿ ನಡೆಸುವ ಟೂರ್ನಿಯ ಸಂದರ್ಭದಲ್ಲಿ ವಿಜಯ ಬಳ್ಳಾರಿ ಭಾವುಕರಾಗುತ್ತಾರೆ. ಆದರೂ ವಾಸ್ತವವನ್ನು ಮರೆಯದೆ ಎಲ್ಲರ ಬೆನ್ನು ತಟ್ಟುತ್ತಾ ಟೂರ್ನಿಯನ್ನು ‘ವಿಜಯ’ದೆಡೆಗೆ ಸಾಗಿಸು ತ್ತಾರೆ. 1981ರಿಂದ ಸತತ ನಾಲ್ಕು ವರ್ಷ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ವಿಜಯ ಬಳ್ಳಾರಿ ಅವರನ್ನೊಳಗೊಂಡ ತಂಡ 1982ರಲ್ಲಿ ಪ್ರಶಸ್ತಿ ಗೆದ್ದಿತ್ತು. 1987ರಿಂದ 90ರವರೆಗೆ ಪುರುಷರ ವಿಭಾಗದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದು ಅಖಿಲ ಭಾರತ ಇಲಾಖಾ ಕೂಟದಲ್ಲಿ ಕಸ್ಟಮ್ಸ್ ವಿಭಾಗವನ್ನು ಪ್ರತಿನಿಧಿಸಿದ್ದರು. ‘ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಪ್ರಯತ್ನದಿಂದಾಗಿ ಈಗ ಬ್ಯಾಸ್ಕೆಟ್‌ಬಾಲ್ ಕ್ರೀಡೆ ಸರಿಯಾದ ಟ್ರ್ಯಾಕ್‌ನಲ್ಲಿ ಸಾಗುತ್ತಿದೆ. ಕ್ಲಬ್‌ನ ಶ್ರಮಕ್ಕೆ ಇದರಿಂದ ಇನ್ನಷ್ಟು ಹುಮ್ಮಸ್ಸು ಬಂದಿದೆ ಎನ್ನುತ್ತಾರೆ ವಿಜಯ್ ಬಳ್ಳಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT