ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮನ ಮೇಲೆ ಶಿವನ ಮುನಿಸು

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಆರ್‌. ಚಂದ್ರು  ನಿರ್ದೇಶನದ, ಉಪೇಂದ್ರ ನಟನೆಯ ‘ಬ್ರಹ್ಮ’ ಚಿತ್ರ ಗಾಂಧಿನಗರದ ಗಲ್ಲಿಯೊಳಗೆ ಹವಾ ಎಬ್ಬಿಸಿರುವುದಷ್ಟೇ ಅಲ್ಲ, ಸಿನಿಪ್ರಿಯರಲ್ಲೂ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಚಿತ್ರ.

ಅದ್ದೂರಿ ಸೆಟ್‌ನಲ್ಲಿ ಮೈನವಿರೇಳಿಸುವ ಸಾಹಸ ದೃಶ್ಯಗಳು, ಮುಂಬೈನಲ್ಲಿ ಚಿತ್ರೀಕರಿಸಿರುವ ಟೆಕ್ನೋ ಸಾಂಗ್‌... ಮತ್ತಿತರ ಅಂಶಗಳು ‘ಬ್ರಹ್ಮ’ ಕಥಾನಕದಲ್ಲಿ ಅಡಗಿವೆ. ಆದರೆ  ಚಿತ್ರತಂಡವನ್ನು ಪದೇಪದೇ ಬೆನ್ನುಹತ್ತಿದ್ದು ಶಿವನ ಮುನಿಸು. ಆ ಮುನಿಸಿನ ಪರಿಣಾಮಗಳನ್ನು ಬಯಲು ಮಾಡಿದರು ನಿರ್ದೇಶಕ ಚಂದ್ರು. ಆರಂಭದಲ್ಲಿಯೇ ಚಿತ್ರದ ಶೀರ್ಷಿಕೆ ಕಂಡು ಉಪೇಂದ್ರ ಸೋಜಿಗ ವ್ಯಕ್ತಪಡಿಸಿದ್ದರಂತೆ. 

ಪ್ರತಿ ಗೋಷ್ಠಿಯಲ್ಲಿ ‘ಚಿತ್ರದ ನಿಜವಾದ ಬ್ರಹ್ಮ ಚಂದ್ರು’ ಎಂದು ಉಪೇಂದ್ರ ಕ್ರೆಡಿಟ್ ನೀಡಿದರೆ, ‘ಉಪ್ಪಿ ಅವರಿಗೆ ಈ ಹೆಸರು ನೂರಕ್ಕೆ ನೂರರಷ್ಟು ಸೂಕ್ತ. ನಿರ್ದೇಶಕರ ಲೆಜೆಂಡ್ ಉಪ್ಪಿ ಸರ್‌’ ಎಂದು ಚಂದ್ರು ಬಾಯಿತುಂಬಾ ಹೊಗಳುತ್ತಾರೆ. ಹೀಗೆ ಇಬ್ಬರು ‘ನಾ ಬ್ರಹ್ಮನಲ್ಲ.... ನೀ ಬ್ರಹ್ಮ...’ ಎಂದು ಮಹೇಶ್ವರನ ಗುಣಗಾನಕ್ಕೆ ಮೊರೆಹೋಗಿದ್ದರು. ಅದ್ದೂರಿತನ, ಯುದ್ಧದ ಸನ್ನಿವೇಶಗಳ ಟ್ರೈಲರ್‌ನಿಂದಲೇ ಸದ್ದು, ಸುದ್ದಿ ಮಾಡಿರುವ ‘ಬ್ರಹ್ಮ’ನ ಒಡಲಾಳ ಮಾತ್ರ ಕಠಿಣ. ಸಾಮಾನ್ಯವಾಗಿ ಬ್ರಹ್ಮನನ್ನು ಆರಾಧಿಸುವ ಭಕ್ತರು ಕಡಿಮೆ. ಈ ಸೃಷ್ಟಿಕರ್ತನ ಹೆಸರನ್ನು ಅರಗಿಸಿಕೊಳ್ಳುವುದು ಸುಲಭದ್ದಲ್ಲ ಎಂದು ‘ಬ್ರಹ್ಮ’ ಹುಟ್ಟಿದ ಕುರಿತು ಹೇಳುತ್ತಾರೆ ಚಂದ್ರು.

ನಿರ್ದೇಶಕರು ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಬ್ರಹ್ಮನನ್ನು ಅರಗಿಸಿಕೊಳ್ಳುವುದು ಸುಲಭದ್ದಲ್ಲ ಎನ್ನುವುದು ನಿರ್ದೇಶಕರಿಗೆ ಚಿತ್ರ ಅಂತಿಮ ಹಾದಿಗೆ ಬರುವಷ್ಟರಲ್ಲಿ ಅರ್ಥವಾಗಿದೆ. ಚಿತ್ರದ ಆರಂಭದಿಂದಲೂ ಅವರಿಗೆ ಒಂದಲ್ಲ ಒಂದು ತೊಡಕು ಎದುರಾಗುತ್ತಿತ್ತಂತೆ. ಅಕ್ಟೋಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದ್ದರೂ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. 100 ದಿನ ಚಿತ್ರೀಕರಣ ನಡೆಸಲಾಗಿದೆ.

‘ಬ್ರಹ್ಮ’ನ ಮಹಿಮೆ ಅರಿವಾದ ಗಳಿಗೆಯನ್ನು ಚಂದ್ರು ವಿವರಿಸುವುದು ಹೀಗೆ: ‘ಮುಂಬೈನಲ್ಲಿ ಚಿತ್ರದ ಒಂದು ಹಾಡಿನ ಶೂಟಿಂಗ್‌ ನಡೆಯುತ್ತಿತ್ತು. ಆಗ ಅಲ್ಲಿಗೆ ಬಂದ ಉಪೇಂದ್ರ ಅವರ ಸ್ನೇಹಿತರಾದ ಜ್ಯೋತಿಷಿ ನಟೇಶ್ ಎಂಬುವವರು ‘ಚಂದ್ರು ನೀವು ಈ ಚಿತ್ರಕ್ಕೆ ಬಳಸಿಕೊಂಡಿರುವ ಟೈಟಲ್‌ ಅತ್ಯುತ್ತಮವಾಗಿದೆ ಎಂದಿದ್ದರು. ಆಗ ನಾನು ನನ್ನ ಚಿತ್ರದ ಸಂಕ್ಷಿಪ್ತ ವಿವರಣೆ ನೀಡಿದ್ದೆ. ಆದರೆ ಬ್ರಹ್ಮನನ್ನು ಜೈಯಿಸಿದವರು ಅಪರೂಪ. ಈ ಹೆಸರಿಟ್ಟುಕೊಂಡು ಹೋದ ಚಿತ್ರಗಳು ಅರ್ಧಕ್ಕೆ ನಿಂತಿವೆ, ಇಲ್ಲವೇ ಹಲವು ವಿಘ್ನಗಳಾಗಿವೆ. ಶೂಟಿಂಗ್ ಪೂರ್ಣ ಆಗಿಲ್ಲ ನೋಡಿ. ಚಿತ್ರೀಕರಣ ಪೂರ್ಣವಾದರೆ ಚಿತ್ರವೇ ಗೆದ್ದಂತೆ’ ಎಂದು ನಟೇಶ್ ಹೇಳಿದರು.

‘ನೀವು ಶಿವನನ್ನು ಪೂಜಿಸಬೇಕು. ಬ್ರಹ್ಮನಿಗೆ ಪೂಜೆ ಇರಬಾರದು ಅಂತ ಶಾಪ ಕೊಟ್ಟವನು ಶಿವ. ನೀವು ಪ್ರತಿ ಬಾರಿಯೂ ಬ್ರಹ್ಮ... ಬ್ರಹ್ಮ ಎಂದು ಕರೆದು ಸೃಷ್ಟಿಕರ್ತನನ್ನು ಪೂಜಿಸುತ್ತಿರಿ. ಆಗ ಲಯಕರ್ತ ಮುನಿಯುತ್ತಾನೆ. 12 ವರ್ಷಕ್ಕೊಮ್ಮೆ ಬರುವ ಒಂದು ಸೋಮವಾರ (ಡಿ.2) ನೀವು ಶಿವನನ್ನು ಪೂಜಿಸಿ ಒಳ್ಳೆಯದಾಗುತ್ತದೆ’– ಹೀಗೆ ಹೇಳಿದ ಜ್ಯೋತಿಷಿಗಳ ಮಾತು ಚಂದ್ರು ಅವರನ್ನು ಕಾಡಿತ್ತು.

‘ಚಿತ್ರೀಕರಣದ ಅಂತಿಮ ದಿನ ನಿರ್ಮಾಪಕರು ಶಿವನಿಗೆ ಪೂಜೆ ಸಲ್ಲಿಸುವಷ್ಟರಲ್ಲಿ ಅನಾಹುತ ನಡೆಯಿತು. ನನ್ನ ಕಾರು ಅಪಘಾತಕ್ಕೀಡಾಗಿ ಜಖಂ ಆಯಿತು. ಉಪೇಂದ್ರ ಅವರ ವಾಹನಕ್ಕೂ ಪೆಟ್ಟು ಬಿತ್ತು’ ಎಂದರು ಚಂದ್ರು. ಕೊನೆಗೆ ಶಿವ ನಿಂಗೆ ಜೋಡಿಸ್ತೀನಿ ಕೈ....ಅಂತ ಚಿತ್ರೀಕರಣದ ಕೊನೆಯ ದಿನ ಚಂದ್ರು ಬೇಡಿಕೊಂಡಿದ್ದಾರೆ. ‘ತಾಜ್‌ಮಹಲ್‌ ಚಿತ್ರದ ಹೆಸರಿಟ್ಟಾಗಲೂ ಇದು ಸ್ಮಶಾನದ ಹೆಸರು ಎಂದು ಅನೇಕರು ಹೇಳಿದ್ದರಂತೆ. ಇನ್ನು ಶಿವನ ಮುನಿಸು ತಮ್ಮ ಮೇಲಿಲ್ಲ, ಅವನ ಸಹಕಾರವಿದೆ’ ಎನ್ನುವಂತೆ ನಕ್ಕರು ಚಂದ್ರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT