ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ ಪೊಲೀಸ್ ವೃತ್ತ: ಸಿಬ್ಬಂದಿ ಕೊರತೆ

Last Updated 21 ಜೂನ್ 2011, 9:55 IST
ಅಕ್ಷರ ಗಾತ್ರ

ಬ್ರಹ್ಮಾವರ: ಗ್ರಾಮಾಂತರ ಪೊಲೀಸ್ ಠಾಣೆಗಳಾದ ಕೋಟ, ಹಿರಿಯಡ್ಕ ಮತ್ತು ಬ್ರಹ್ಮಾವರದಲ್ಲಿ ಅನೇಕ ವರ್ಷಗಳಿಂದ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಇರುವ ಸಿಬ್ಬಂದಿಯೇ ಹಗಲಿರುಳೂ ಕರ್ತವ್ಯ ನಿರ್ವಹಿಸಬೇಕಾಗಿದೆ.

ಉಡುಪಿ ಜಿಲ್ಲೆಯ 25 ಪೊಲೀಸ್ ಠಾಣೆಗಳಲ್ಲಿ ಖಾಲಿ ಇರುವ ಸುಮಾರು 178 ಸಿಬ್ಬಂದಿ ನೇಮಕಕ್ಕೆ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದರೂ ಮಾಜಿ ಸಿಬ್ಬಂದಿಯೊಬ್ಬರು ನೀಡಿದ ದೂರಿನ ಮೇರೆಗೆ ಕೋರ್ಟ್ ತಡೆಯಾಜ್ಞೆ ನೀಡಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಡಚಣೆ ಆಗಿದೆ ಎಂದು ತಿಳಿದುಬಂದಿದೆ.

ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಬ್ಬ ಪಿಎಸ್‌ಐ, ಇಬ್ಬರು ಎಎಸ್‌ಐ, 7 ಹೆಡ್‌ಕಾನ್‌ಸ್ಟೆಬಲ್ ಮತ್ತು 21 ಸಿಬ್ಬಂದಿ ಇರಬೇಕೆನ್ನುವ ನಿಯಮವಿದ್ದರೂ ಬ್ರಹ್ಮಾವರ ವೃತ್ತ ನಿರೀಕ್ಷಕರ ವ್ಯಾಪ್ತಿಯ ಹಿರಿಯಡ್ಕ, ಕೋಟ ಮತ್ತು ಬ್ರಹ್ಮಾವರದ ಗ್ರಾಮಾಂತರ ಠಾಣೆಗಳಲ್ಲಿ ಇದರ ಅರ್ಧದಷ್ಟು ಕೂಡಾ ಸಿಬ್ಬಂದಿ ಇಲ್ಲ.

ಸದ್ಯದ ಸ್ಥಿತಿ: ಕೋಟ ಠಾಣೆಯಲ್ಲಿ ಸದ್ಯ ಪಿಎಸ್‌ಐ, ನಾಲ್ಕು ಜನ ಹೆಡ್‌ಕಾನ್‌ಸ್ಟೆಬಲ್ ಮತ್ತು 8 ಜನ ಸಿಬ್ಬಂದಿ ಸೇರಿ ಒಟ್ಟು 14 ಜನ ಕರ್ತವ್ಯ ನಿರ್ವಹಿಸುತ್ತಿದ್ದರೆ, ಬ್ರಹ್ಮಾವರ ಠಾಣೆಯಲ್ಲಿ ಪಿಎಸ್‌ಐ, 7 ಜನ ಹೆಡ್‌ಕಾನ್‌ಸ್ಟೆಬಲ್ ಮತ್ತು 8 ಮಂದಿ ಸಿಬ್ಬಂದಿ ಒಟ್ಟು 16, ಹಿರಿಯಡ್ಕದಲ್ಲಿ ಪಿಎಸ್‌ಐ, 7 ಜನ ಹೆಡ್‌ಕಾನ್‌ಸ್ಟೆಬಲ್ ಮತ್ತು 12 ಮಂದಿ ಸಿಬ್ಬಂದಿ ಒಟ್ಟು 20 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವ್ಯಾಪ್ತಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 27 ಗ್ರಾಮಗಳು ಬರುತ್ತಿದ್ದು, ಒಟ್ಟು 92 ಸಾವಿರ ಜನಸಂಖ್ಯೆ ಹೊಂದಿದ್ದರೆ, ಕೋಟ ಠಾಣಾ ವ್ಯಾಪ್ತಿಯಲ್ಲಿ 30 ಗ್ರಾಮಗಳು, 89 ಸಾವಿರ ಜನಸಂಖ್ಯೆ ಮತ್ತು ಹಿರಿಯಡ್ಕ ಠಾಣಾ ವ್ಯಾಪ್ತಿಯ 12 ಗ್ರಾಮಗಳಲ್ಲಿ 42ಸಾವಿರ ಜನಸಂಖ್ಯೆ ಹೊಂದಿದೆ. (2001ರ ಜನಸಂಖ್ಯೆಯ ಆಧಾರ). ಆದರೆ ಇಂದು ಜನಸಂಖ್ಯೆ ಇದರ ಎರಡಷ್ಟು ಹೆಚ್ಚಿದ್ದರೂ ಠಾಣೆಯಲ್ಲಿ ಸಿಬ್ಬಂದಿ ಸಂಖ್ಯೆ ಮಾತ್ರ ಹೆಚ್ಚಾಗಿಲ್ಲ.

ಪ್ರಕರಣಗಳು  ಈ ಮೂರು ಠಾಣಾ ವ್ಯಾಪ್ತಿಯಲ್ಲಿ 2009ರಲ್ಲಿ 395 ಅಪರಾಧ ಪ್ರಕರಣಗಳು, 2010ರಲ್ಲಿ 473 ಮತ್ತು 2011ರಲ್ಲಿ ಇದುವರೆಗೆ 190 ಪ್ರಕರಣಗಳು ದಾಖಲಾಗಿದೆ. ಬಹತೇಕ ಪ್ರಕರಣಗಳಲ್ಲಿ 25ರಿಂದ 40 ವರ್ಷದವರೇ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಉಡುಪಿ ಜಿಲ್ಲೆಯ ಈ ವೃತ್ತದಲ್ಲಿ ಅಪರಾಧಗಳ ಸಂಖ್ಯೆ ಮತ್ತು ಕೊಲೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆಯಾದರೂ ಅಪರಾಧಿಗಳನ್ನು ಕೂಡಲೇ ಬಂಧಿಸುವ ಕಾರ್ಯವೂ ಪ್ರಸ್ತುತ ಇರುವ ಸಿಬ್ಬಂದಿಗಳಿಂದಲೇ ಆಗುತ್ತಿದೆ.

ಹಳೆಯ ನಿಯಮ: ಪ್ರಸ್ತುತ ಇರುವ ಸಿಬ್ಬಂದಿಯೇ ರಾತ್ರಿ ಪಾಳಿಯಲ್ಲೂ ಕೆಲಸ ನಿರ್ವಹಿಸಿ ಅಪರಾಧಗಳ ಸಂಖ್ಯೆಗೆ ಈ ವರ್ಷ ಕಡಿವಾಣ ಹಾಕಿದೆಯಾದರೂ ಪೊಲೀಸ್ ಇಲಾಖೆ ಇನ್ನೂ ತನ್ನ ಹಳೆಯ ಪದ್ದತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದೆ. ಇಲಾಖೆ 1998ನೇ ಇಸವಿಯಲ್ಲಿ ಜಾರಿಗೊಳಿಸಿದ ಕೆಲವೊಂದು ನಿಯಮಗಳನ್ನು ಇನ್ನೂ ಪರಿಷ್ಕರಿಸಿಲ್ಲ. ಸಿಬ್ಬಂದಿ ನೇಮಕದ ಬಗ್ಗೆಯಾದರೂ ತನ್ನ ನಿಯಮಾವಳಿಯಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಅಪರಾಧಗಳ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು.

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇರುವ ಸಿಬ್ಬಂದಿಯ ನೆರವಿನಿಂದಲೇ ಪರಿಸರದಲ್ಲಿ ಆಗುತ್ತಿರುವ ಎಲ್ಲಾ ಪ್ರಕರಣಗಳನ್ನು ಶೀಘ್ರವೇ ಭೇದಿಸಿ ಅಪರಾಧಿಗಳನ್ನು ಹಿಡಿಯುವ/ಪತ್ತೆಹಚ್ಚುವ ಕಾರ್ಯವನ್ನು ಇಲ್ಲಿನ ಮೂರೂ ಠಾಣೆಗಳಲ್ಲಿ ನಡೆಯುತ್ತಿದೆ. ವೃತ್ತ ನಿರೀಕ್ಷಕರಾದ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಮೂರು ಠಾಣೆಯ ಪಿ.ಎಸ್.ಐಗಳಾದ ಹೊಸಕೇರಪ್ಪ, ಮಹೇಶ್ ಪ್ರಸಾದ್ ಮತ್ತು ವಿನಾಯಕ ಬಿಲ್ಲವ, ಇರುವ ಸಿಬ್ಬಂದಿ ನೆರವಿನಿಂದ ಉತ್ತಮ ಸೇವೆ ನೀಡುತ್ತಿದ್ದಾರೆ. ಜನಸಂಖ್ಯೆ, ಅಪರಾಧಗಳ ಸಂಖ್ಯೆ ಎಲ್ಲವೂ ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವತ್ತ ಗಮನ ಹರಿಸಬೇಕಾಗಿದೆ.

ಸಾರ್ವಜನಿಕರ ಸಹಕಾರ ಅಗತ್ಯ: ಇತ್ತೀಚಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗಲು ಸಾರ್ವಜನಿಕರೇ ಕಾರಣ ಎನ್ನುವ ಮಾತು ಪೊಲೀಸ್ ಇಲಾಖೆಯದ್ದು. ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವ ಪರಿಜ್ಞಾನವೇ ಇರುವುದಿಲ್ಲ. ಹೊಸ ವ್ಯಕ್ತಿಗಳ ಬಗ್ಗೆ ಮಾಹಿತಿ, ಆಸುಪಾಸಿನ ಮನೆ/ಬಾಡಿಗೆ ಮನೆಯಲ್ಲಿ ವಾಸಿಸುವ ವ್ಯಕ್ತಿಗಳ ಬಗ್ಗೆ ಮಾಹಿತಿ, ಅನುಮಾನಾಸ್ಪದವಾಗಿ ತಿರುಗಾಡುವ ಮಂದಿ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ನೀಡುವ ಕ್ರಮವೇ ಇಲ್ಲಿನ ಜನಕ್ಕಿಲ್ಲ. ನಮಗೆ ಯಾಕೆ ಬೇಕು ಎನ್ನುವ ಮನೋಭಾವನೆ ಇವರದು. ಇದರಿಂದ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನತ್ತಾರೆ ಎಸ್‌ಐ ಕೃಷ್ಣಮೂರ್ತಿ.

ಏನು ಮಾಡಬೇಕು?: ತಮ್ಮ ಸುತ್ತಮುತ್ತ, ಹೋಟೆಲ್‌ಗಳಲ್ಲಿ ತಂಗುವ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ನೀಡಿದಲ್ಲಿ ಆಗುವ ಅಪರಾಧಗಳನ್ನು ತಡೆಯಬಹುದು. ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕು. ಇಲಾಖೆ ನೀಡುವ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿದಲ್ಲಿಯೂ ಮುಂದೆ ಆಗಬಹುದಾದ ಪ್ರಕರಣಗಳನ್ನು ತಡೆಯಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT