ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಡ್ಲಿ ಮತ್ತು Ctrl+Alt+Del

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ಹೊಸದಾಗಿ ಗಣಕಯಂತ್ರವನ್ನು ಕಲಿಯುತ್ತಿರುವ ನಮ್ಮ ಗೆಳೆಯರೇನಾದರೂ ಫೋನ್ ಮಾಡಿ ಗಣಕಯಂತ್ರ ಹ್ಯಾಂಗ್ ಆಗಿದೆ ಏನ್ ಮಾಡುವುದು ಅಂತಾ ಹೇಳಿದರೆ ತಕ್ಷಣ ನಾವು ಹೇಳುವುದು Ctrl+Alt+Del  ಕೀಯನ್ನು ಒಟ್ಟಾಗಿ ಒತ್ತಿ ಸರಿಹೋಗುತ್ತದೆ ಎಂದು. ಪ್ರಪಂಚದಾದ್ಯಂತ ಪ್ರತಿಯೊಬ್ಬ ಗಣಕಯಂತ್ರ  ಉಪಯೋಗಿಸುವವನು ಬಳಸಲೇಬೇಕಾದದ್ದು ಈ  ಕೀಗಳ ಸಂಯೋಜನೆಯನ್ನು.

ಆದರೆ ಯಾರೊಬ್ಬರೂ ಇದನ್ನು ಯಾರು ಕಂಡುಹಿಡಿದರೂ ಎಂದು ತಿಳಿದುಕೊಳ್ಳಲು ತಲೆಕೆಡಿಸಿಕೊಳ್ಳುವುದು ಇರಲಿ ಅವರನ್ನು ನೆನೆಯುವುದೂ ಇಲ್ಲ.  ಹಲವಾರು ವರ್ಷಗಳಿಂದ ಗಣಕಯಂತ್ರಗಳು ಹ್ಯಾಂಗ್ ಆದಾಗ ಈ ಕೋಡ್ (ಸಂಕೇತ) ಅದೆಷ್ಟೋ ಕೋಟ್ಯಂತರ ಗಣಕಯಂತ್ರಗಳನ್ನು ಉಳಿಸಿದೆ.

2004, ಜನವರಿ 30ರಲ್ಲಿ 29ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಐಬಿಎಂನ ಅತೀ ಬುದ್ಧಿಶಾಲಿ ಉದ್ಯೋಗಿಯಾದ ಡೇವಿಡ್ ಬ್ರಾಡ್ಲಿ ಅವರು ಈ ಸಂಕೇತವನ್ನು ಕಂಡುಹಿಡಿದಿದ್ದರು. ಗಣಕಯಂತ್ರವೂ ಯಾವುದೇ  ಕೀ ಯ ಮಾತನ್ನು ಕೇಳದಿದ್ದಾಗ ಕಡ್ಡಾಯವಾಗಿ ಈ  ಕೀಗಳ ಸಂಯೋಜನೆಯನ್ನು ಬಳಸಿ ಗಣಕಯಂತ್ರವನ್ನು ಪುನರಾಂಭಿಸಬಹುದು.

1980ರಲ್ಲಿ ಗಣಕಯಂತ್ರಗಳು ಹ್ಯಾಂಗ್ ಆದಾಗ ಅತೀ ಸರಳ ವಿಧಾನದಲ್ಲಿ ಪುನರರಾಂಭಿಸಲು ಸಂಕೇತವನ್ನು ಕಂಡು ಹಿಡಿಯಲು ಶ್ರಮಿಸುತ್ತಿದ್ದ 12 ಜನ ಎಂಜಿನಿಯರ್‌ಗಳಲ್ಲಿ ಡೇವಿಡ್ ಬ್ರಾಡ್ಲಿಯೂ ಒಬ್ಬರೂ. ಗಣಕಯಂತ್ರವೂ ಬಳಕೆದಾರರಿಗೆ ಪ್ರತಿಕ್ರಿಯಿಸದಿದ್ದಾಗ ಸುಲಭ ರೂಪದಲ್ಲಿ ಪುನರಾರಂಭಿಸುವ ಸಂಕೇತದ ಅವಶ್ಯಕತೆಯನ್ನು ಎಂಜಿನಿಯರ್‌ಗಳು ಮನಗಂಡಿದ್ದರು. ಕೊನೆಗೆ ಬ್ರಾಡ್ಲಿಯವರೂ ಸಂಕೇತವನ್ನು ಕಂಡುಹಿಡಿದರು.

ಮೂಲ ಸಂಕೇತವನ್ನು ಕಂಡು ಹಿಡಿಯುಲು ತೆಗೆದುಕೊಂಡ ಸಮಯ 1 ನಿಮಿಷ 23 ಸೆಕೆಂಡ್‌ಗಳು. ಈ Ctrl+Alt+Del   ಕೀಯ ಸಂಯೋಜನೆಯನ್ನು ಕಂಡುಹಿಡಿಯುವಾಗ ಕಂಪ್ಯೂಟರ್ ಬಳಕೆದಾರರ ಉಪಯೋಗಕ್ಕೆ ಬರುತ್ತದೆಂಬ ಉದ್ದೇಶವಿರಲಿಲ್ಲ. ಇವರ ಉದ್ದೇಶವಿದ್ದಿದ್ದು ಪ್ರೋಗ್ರ್ಯಾಂಗಳನ್ನು ಬರೆಯುವವರು, ಗಣಕಯಂತ್ರವನ್ನು ಪವರ್ ಆಫ್ ಮಾಡದೆ ಪುನರಾರಂಭ ಮಾಡಿ ಇದಕ್ಕೆ ವ್ಯರ್ಥವಾಗುವ ಸಮಯವನ್ನು ಕಡಿತಗೊಳಿಸುವ ಉದ್ದೇಶವೇ ಮಾತ್ರವಾಗಿತ್ತು ಏಕೆಂದರೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವವರು, ತಾಂತ್ರಿಕ ಬರವಣಿಗೆಗಳನ್ನು ಬರೆಯುವವರು ಆಗಾಗ ಗಣಕಯಂತ್ರ  ಪುನರಾರಂಭಿಸಬೇಕಾಗುತ್ತಿತ್ತು.

ಬ್ರಾಡ್ಲಿ, ಈ  ಕೀಗಳ ಸಂಯೋಜನೆಯನ್ನೇ ಏಕೆ ಆಯ್ಕೆ ಮಾಡಿಕೊಂಡರೆಂದರೆ ಪ್ರಾಯೋಗಿಕವಾಗಿ ಯಾವುದೇ ಕಾರಣಕ್ಕೂ ಆಕಸ್ಮಾತಾಗಿ ಕೀಲಿಮಣಿಯಲ್ಲಿ, ಈ  ಕೀ ಗಳನ್ನು ಒತ್ತುವ ಅವಕಾಶವಿರುವುದಿಲ್ಲ. ಈ  ಕೀಗಳ ಗುಟ್ಟನ್ನು ಬಿಟ್ಟುಕೊಟ್ಟಿದ್ದು ಐಬಿಎಂ ಪಿಸಿಯ 20ನೇ ವರ್ಷದ ವಾರ್ಷಿಕೋತ್ಸವದಲ್ಲಿ.

ನಾನು ಏನೇನೋ ಸಂಕೇತ  ಕಂಡು ಹಿಡಿದೆ. ಆದರೆ ನನಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದು  Ctrl+Alt+Del ಮಾತ್ರ ಎಂದು  ಬ್ರಾಡ್ಲಿ ಹೇಳುತ್ತಾರೆ. ನನ್ನ ಕೀರ್ತಿ ಮತ್ತು ಯಶಸ್ಸು ನಿಂತಿರುವುದು ಗಣಕಯಂತ್ರ ಉಪಯೋಗಿಸುವವರು ಸೋಲುವುದರ ಮೇಲೆ. ನಾನೇನೋ ಈ ಸಂಕೇತ  ಕಂಡುಹಿಡಿದೆ. ಆದರೆ ಮೈಕ್ರೊಸಾಫ್ಟ್‌ನ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಆಗಾಗ ಕ್ರಾಶ್ ಆಗುವುದರಿಂದ ನನ್ನ ಸಂಕೇತ ಪ್ರಸಿದ್ಧಿಯಾಯಿತು. ಬಿಲ್‌ಗೇಟ್ಸ್ ಸೋಲುತ್ತಿದ್ದಾಗಲ್ಲೆಲ್ಲ ನಾನು ಗೆಲ್ಲುತ್ತಿದ್ದೆ ಎಂದು ಬ್ರಾಡ್ಲಿ ಹೇಳುತ್ತಾರೆ.

 ಅಸೆಂಬ್ಲಿ ಲಾಂಗ್ವೇಜ್ ಪ್ರೋಗ್ರಾಮಿಂಗ್ ಫಾರ್ ದ ಐಬಿಎಂ ಪಿಸಿ ಪುಸ್ತಕದ ಕರ್ತೃವಾಗಿರುವ ಬ್ರಾಡ್ಲಿ, ಅದನ್ನು ಫ್ರೆಂಚ್ ಮತ್ತು ರಷ್ಯನ್ ಭಾಷೆಯಲ್ಲೂ ಸಹ ಬಿಡುಗಡೆ ಮಾಡಿದ್ದಾರೆ. ಬ್ರಾಡ್ಲಿ  ತಮ್ಮ ತೆಕ್ಕೆಯಲ್ಲಿ 7 ಯು.ಎಸ್ ಹಕ್ಕುಸ್ವಾಮ್ಯ (ಪೇಟೆಂಟ್)ಗಳನ್ನು ಹೊಂದಿದ್ದಾರೆ.

ವೃತ್ತಿಯ ಜೊತೆಜೊತೆಗೆ ಫ್ಲೋರಿಡಾ ಅಟ್ಲಾಂಟಿಕ್ ಮತ್ತು ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾಲಯಗಳ ಎಲೆಕ್ಟ್ರಿಕಲ್ ಮತ್ತು ಗಣಕಯಂತ್ರ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ಬ್ರಾಡ್ಲಿ 1975ರಲ್ಲಿ ಪರ್‌ಡ್ಯೂನಿಂದ ಡಾಕ್ಟರೇಟ್ ಪದವಿ ಪಡೆದ ನಂತರ ಐಬಿಎಂನಲ್ಲಿ ವೃತ್ತಿಜೀವನ ಆರಂಭಿಸಿ, ಜೀವನದ ಹೆಚ್ಚು ಸಮಯವನ್ನು ಐಬಿಎಂನಲ್ಲೇ ಕಳೆದಿದ್ದಾರೆ.

ಇವರು ಐಬಿಎಂ-1 ಸಿಸ್ಟಮ್‌ನ ಮೇಲೂ ಕೆಲಸ ಮಾಡಿದ್ದಾರೆ. 1978ರಲ್ಲಿ ಸಿಸ್ಟಮ್ 23 ಡ್ಯಾಟ ಮಾಸ್ಟರ್ ಸಿಸ್ಟಮ್‌ಗಳಿಗೆ ಇನ್‌ಪುಟ್ / ಔಟ್‌ಪುಟ್  ಸಿಸ್ಟಮ್ ಅಭಿವೃದ್ಧಿ ಪಡಿಸಿದ್ದಾರೆ. ಇವರ ಪಾಂಡಿತ್ಯಗಳು ಇನ್ನೂ ಹಲವಾರಿವೆ. 
                         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT