ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಮಾದರಿಯ ಪಕ್ಷಾತೀತ ಸ್ಪೀಕರ್

Last Updated 21 ಜನವರಿ 2012, 20:10 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್‌ಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕಾದರೆ ಬ್ರಿಟನ್ ಮಾದರಿಯಲ್ಲಿ ಪಕ್ಷಾತೀತವಾಗಿ ಸ್ಪೀಕರ್ ಹುದ್ದೆಗೆ ಅವಿರೋಧ ಆಯ್ಕೆ ನಡೆಯಬೇಕಾಗಿದೆ. ಒಟ್ಟಾರೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಂವಿಧಾನಕ್ಕೆ ಸೂಕ್ತ ಕಾನೂನು ತಿದ್ದುಪಡಿ ತರುವ ಅಗತ್ಯವಿದೆ~ ಎಂದು ಕೆಲ ಮಾಜಿ ಸ್ಪೀಕರ್‌ಗಳು ಶನಿವಾರ ಇಲ್ಲಿ ಪ್ರತಿಪಾದಿಸಿದರು.

`ಸೆಂಟರ್ ಫಾರ್ ಸ್ಟ್ಯಾಂಡರ್ಡ್ಸ್ ಇನ್ ಪಬ್ಲಿಕ್ ಲೈಫ್~ (ಸಿಎಸ್‌ಪಿಎಲ್) ಸಂಸ್ಥೆಯು ನಗರದ ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಸಮಕಾಲೀನ ಭಾರತೀಯ ಪ್ರಜಾಪ್ರಭುತ್ವದಲ್ಲಿ ಸ್ಪೀಕರ್‌ಗಳ ಪಾತ್ರ~ ಕುರಿತ ದುಂಡು ಮೇಜಿನ ಸಮಾವೇಶದಲ್ಲಿ ಅವರು ಮಾತನಾಡಿದರು.

ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಹಾಲಿ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, `ವಿಧಾನಸಭೆಗೆ ಆಯ್ಕೆಯಾದ ಸದಸ್ಯರಲ್ಲಿಯೇ ಒಬ್ಬರನ್ನು ಬಹುಮತವಿರುವ ಆಡಳಿತ ಪಕ್ಷ ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡುವ ಸಂಪ್ರದಾಯ ನಮ್ಮಲ್ಲಿದೆ. ಇದರಿಂದ ಸ್ಪೀಕರ್ ಆಯಾ ರಾಜಕೀಯ ಪಕ್ಷದ ನಂಟಿನಿಂದ ಸಂಪೂರ್ಣ ಹೊರ ಬರಲು ಸಾಧ್ಯವಾಗುವುದಿಲ್ಲ~ ಎಂಬುದನ್ನು ಒಪ್ಪಿಕೊಂಡರು.

`ರಾಜಕೀಯ ಪಕ್ಷದಿಂದ ಆಯ್ಕೆಯಾಗಿ ಸ್ಪೀಕರ್ ಹುದ್ದೆಗೆ ಏರಿದವರು ರಾಜಕೀಯ ಬದ್ಧತೆಯನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಅಲ್ಲದೆ, ಸಕ್ರಿಯ ರಾಜಕಾರಣದಿಂದ ದೂರವಿರುವುದು ಕಷ್ಟ. ರಾಜಕೀಯವಾಗಿ ಕಥೆ ಮುಗಿಯಬಹುದು ಅಥವಾ ಬಲಿಪಶುಗಳಾಗಬಹುದು ಎಂಬ ಕಾರಣಕ್ಕಾಗಿ ಅನೇಕರು ಸ್ಪೀಕರ್ ಹ್ದ್ದುದೆಯನ್ನು ಒಪ್ಪುವುದಿಲ್ಲ. ಹೀಗಾಗಿ, ಬ್ರಿಟನ್ ಮಾದರಿಯಲ್ಲಿ ಪಕ್ಷಾತೀತ ಅಭ್ಯರ್ಥಿಯನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಬೇಕಿದೆ. ಆದರೂ, ನಾನು ವಿಧಾನ ಸಭಾಧ್ಯಕ್ಷನಾಗಿ ಆ ಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಿದ್ದೇನೆ~ ಎಂದರು.

`ಬ್ರಿಟನ್‌ನಲ್ಲಿ ಸ್ಪೀಕರ್ ಅಭ್ಯರ್ಥಿ ವಿರುದ್ಧ ಯಾವುದೇ ರಾಜಕೀಯ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ. ಹೀಗಾಗಿ, ಅರ್ಹ ಅಭ್ಯರ್ಥಿ ಅಲ್ಲಿ ಅವಿರೋಧವಾಗಿ ಸ್ಪೀಕರ್ ಹುದ್ದೆಗೆ ಆಯ್ಕೆಯಾಗುತ್ತಾರೆ. ಇದರಿಂದ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ~ ಎಂದರು.

`ಇಂದಿನ ರಾಜಕೀಯ ವ್ಯವಸ್ಥೆ ಬಹಳಷ್ಟು ಹದಗೆಡುತ್ತಿದೆ. ಜನರು ಜನಪ್ರತಿನಿಧಿಗಳನ್ನು ನೋಡುವ ದೃಷ್ಟಿಕೋನವೂ ಬದಲಾಗಿದೆ. ಚುನಾವಣೆಯಲ್ಲಿ ಜಾತಿ, ಹಣ, ತೋಳ್ಬಲ ಹೆಚ್ಚು ಕೆಲಸ ಮಾಡುತ್ತಿದೆ. ಹಣ ಇಲ್ಲದಿದ್ದರೆ ಟಿಕೆಟ್ ಸಿಗುವುದೇ ಕಷ್ಟ ಎನಿಸಿದೆ. ಹಣ, ಜಾತಿ, ತೋಳ್ಬಲದಿಂದ ಯಾರು ಬೇಕಾದರೂ ಶಾಸಕರಾಗಿ ಆಯ್ಕೆಯಾಗಬಹುದು. ಪರಿಣಾಮ, ಶಾಸನಸಭೆಗಳಲ್ಲಿ ಗುಣಮಟ್ಟದ ಚರ್ಚೆಗಳೂ ನಡೆಯುತ್ತಿಲ್ಲ. ಮಾಧ್ಯಮಗಳಲ್ಲಿ ಕೂಡ ಮಂಗ ಚೇಷ್ಟೆ ಅಥವಾ ಜಂಗೀಕುಸ್ತಿ ಮಾಡುವವರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಒಬ್ಬ ಸ್ಪೀಕರ್ ಹೇಗೆ ಸದನವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಹೀಗಾಗಿ, ಚುನಾವಣೆ ವ್ಯವಸ್ಥೆಯಲ್ಲಿಯೇ ಬದಲಾವಣೆ ತರುವುದು ಅಗತ್ಯವಾಗಿದೆ~ ಎಂದು ಅವರು ಪ್ರತಿಪಾದಿಸಿದರು.

10 ವರ್ಷ ನಿಷೇಧ ಹೇರಬೇಕು: ಪಕ್ಷಾಂತರ ಮಾಡುವ ಶಾಸಕರಿಗೆ ಕನಿಷ್ಠ 10 ವರ್ಷ ಚುನಾವಣೆಗೆ ನಿಲ್ಲದಂತೆ ನಿಷೇಧ ಹೇರಬೇಕು. ಇದಕ್ಕಾಗಿ ಕಾನೂನಿಗೆ ತಿದ್ದುಪಡಿ ತರಬೇಕು. ತೇಪೆ ಹಾಕುವ ಕೆಲಸದಿಂದ ಸಮಸ್ಯೆಗೆ ಪರಿಹಾರ ಸಿಗದು. ಇದರಿಂದ ಮುಂದಿನ 50 ವರ್ಷಗಳಾದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮಾಜಿ ಸ್ಪೀಕರ್ ಕೃಷ್ಣ ಅಭಿಪ್ರಾಯಪಟ್ಟರು.

ಕಾನೂನು ಪರಿಜ್ಞಾನ ಇರುವಂಥವರನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಬೇಕು. ಬ್ರಿಟನ್ ಮಾದರಿಯಲ್ಲಿ ಅವಿರೋಧ ಆಯ್ಕೆ ನಡೆದರೂ ಇನ್ನೂ ಒಳ್ಳೆಯದು. ಎರಡನೇ ಬಾರಿಗೂ ಅವರನ್ನೇ ಸ್ಪೀಕರ್ ಆಗಿ ಮುಂದುವರಿಸಬೇಕು. ಇದರಿಂದ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು. ಇದಕ್ಕೂ ಮುನ್ನ ಬ್ರಿಟನ್ ಮಾದರಿಯಲ್ಲಿ ನಮ್ಮಲ್ಲಿಯೂ ಸ್ಪೀಕರ್ ಅವಿರೋಧವಾಗಿ ಆಯ್ಕೆಯಾಗಬೇಕು ಎಂಬ ಪ್ರಸ್ತಾವವನ್ನು ಸಂಸದ ಡಿ.ಬಿ. ಚಂದ್ರೇಗೌಡ ಮುಂದಿಟ್ಟರು.

ಪಾವಿತ್ರ್ಯತೆ ಕಳೆದುಕೊಂಡಿತು: ಲೋಕಾಯುಕ್ತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮುನ್ನವೇ ಬಹಿರಂಗಗೊಂಡಿದ್ದರಿಂದ ಅದು ತನ್ನ ಪಾವಿತ್ರ್ಯತೆ ಕಳೆದುಕೊಂಡಿತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಅಭಿಪ್ರಾಯ ಹೇಳುವುದಕ್ಕೂ ಅವಕಾಶ ನೀಡದೆ ಮೊಕದ್ದಮೆ ದಾಖಲಿಸಿದ್ದರಿಂದ ಆಡಳಿತದ ಮುಖ್ಯಸ್ಥರೊಬ್ಬರನ್ನು ಅಯೋಗ್ಯ ಎನ್ನುವ ತೀರ್ಮಾನಕ್ಕೆ ಬರಲಾಯಿತು. ಇದು ಇಡೀ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಿತು  ಎಂದರು.

ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಸ್ಪೀಕರ್ ಬಿ.ಜಿ. ಬಣಕಾರ್, ಶಾಸಕ ಚಂದ್ರಕಾಂತ್ ಬೆಲ್ಲದ, ಮಾಜಿ ಸಚಿವ ಬಿ. ಸೋಮಶೇಖರ್ ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT