ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟಿಷ್ ಲೇಖಕಿಗೆ ಬುಕರ್

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಅಂತರರಾಷ್ಟ್ರೀಯ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಬುಕರ್ ಪ್ರಶಸ್ತಿ ಈ ಬಾರಿ ಖ್ಯಾತ ಬ್ರಿಟಿಷ್ ಕಾದಂಬರಿಗಾರ್ತಿ ಹಿಲರಿ ಮ್ಯಾಂಟಲ್ ಅವರ ಪಾಲಾಗಿದೆ. `ಬ್ರಿಂಗ್ ಅಪ್ ದಿ ಬಾಡೀಸ್~ ಎಂಬ ಕಾದಂಬರಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದು ಕೊಟ್ಟಿದೆ. 

ಇದು 60 ವರ್ಷದ ಹಿಲರಿ ಅವರಿಗೆ ಸಂದ ಎರಡನೇ ಬುಕರ್ ಪ್ರಶಸ್ತಿಯಾಗಿದ್ದು, ಈ ಮೊದಲು 2009ರಲ್ಲಿ ಅವರ `ವೂಲ್ಫ್ ಹಾಲ್~ ಎಂಬ ಕಾದಂಬರಿ ಮೊದಲ ಬಾರಿಗೆ ಬುಕರ್ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಇದರೊಂದಿಗೆ ಹಿಲರಿ ಎರಡನೇ ಬಾರಿ ಬುಕರ್ ಗಳಿಸಿದ ಪ್ರಥಮ ಮಹಿಳೆ ಮತ್ತು ಪ್ರಥಮ ಬ್ರಿಟಿಷ್ ಲೇಖಕಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ವರ್ಷದ ಅತ್ಯಂತ ಹೆಚ್ಚು ಮಾರಾಟವಾದ ಬೇಡಿಕೆಯ ಕಾದಂಬರಿ ಎಂಬ ಪ್ರಶಂಸೆಗೆ ಪಾತ್ರವಾಗಿರುವ `ಬ್ರಿಂಗ್ ಅಪ್ ದಿ ಬಾಡೀಸ್~ ಕೃತಿ ಅಂತಿಮ ಪಟ್ಟಿಯಲ್ಲಿದ್ದ ಇನ್ನಿತರ ಐದು ಕೃತಿಗಳನ್ನು ಹಿಂದಕ್ಕಿ ಪ್ರಶಸ್ತಿ ಗಳಿಸಿದೆ.
ಈ ಬಾರಿಯ ಬುಕರ್ ಪ್ರಶಸ್ತಿಯ ನೆಚ್ಚಿನ ಕೃತಿ ಎಂದೇ ಪರಿಗಣಿಸಲಾಗಿದ್ದ ವಿಲ್ ಸೆಲ್ಫ್  ಅವರ `ಅಂಬ್ರೆಲ್ಲಾ~ ಕೂಡಾ ಕೊನೆಯ ಗಳಿಗೆಯವರೆಗೂ ತೀವ್ರ ಪೈಪೋಟಿ ಒಡ್ಡಿತ್ತು.

ಸ್ಪರ್ಧೆಯಲ್ಲಿದ್ದ ಭಾರತದ ಜೀತ್ ತಯಿಲ್ ಅವರ `ನಾರ್ಕೊಪೊಲಿಸ್~ ಜೊತೆಗೆ ತಾನ್ ತ್ವಾನ್ ಯಂಗ್  ಅವರ `ದಿ ಗಾರ್ಡನ್ ಆಫ್ ಇವ್ನಿಂಗ್ ಮಿಸ್ಟ್ಸ್~, ದೆಬೊರಾ ಲೆವಿ ಅವರ `ಸ್ವಿಮ್ಮಿಂಗ್ ಹೋಮ್~ ಮತ್ತು ಅಲಿಸನ್ ಮೂರ್ ಅವರ `ದಿ ಲೈಟ್‌ಹೌಸ್~ ಅಂತಿಮ ಪಟ್ಟಿಯಲ್ಲಿದ್ದವು. ಆದರೆ, `ಬ್ರಿಂಗ್ ಅಪ್ ದಿ ಬಾಡೀಸ್~ ಇವೆಲ್ಲವನ್ನೂ ಹಿಂದಿಕ್ಕಿ ಪ್ರಶಸ್ತಿ ಗೌರವಕ್ಕೆ ಪಾತ್ರವಾಯಿತು.

ಬ್ರಿಟನ್‌ನ ಅ್ಯನ್ ಬೊಲೆನ್ ಸಾಮ್ರಾಜ್ಯದ ಪತನ, ಹತ್ಯೆ ಮತ್ತು ಐತಿಹಾಸಿಕ ಸಂಗತಿಗಳ ಸುತ್ತ ಹೆಣೆಯಲಾಗಿರುವ `ಬ್ರಿಂಗ್ ಅಪ್ ದಿ ಬಾಡೀಸ್~ ಮತ್ತು ಅವರ ಮತ್ತೊಂದು ಬುಕರ್ ವಿಜೇತ ಕೃತಿ `ವೂಲ್ಫ್ ಹಾಲ್~ ಹಕ್ಕುಗಳನ್ನು ಬಿಬಿಸಿ ಪಡೆದಿದೆ.  ಈ ಎರಡೂ ಕಾದಂಬರಿಗಳನ್ನು ಅದು ನಾಟಕ ರೂಪಕ್ಕೆ ಇಳಿಸುವ ಪ್ರಯತ್ನ ನಡೆಸಿದೆ.

ಬ್ರಿಟನ್‌ನ ಬಹುತೇಕ ರಕ್ತಸಿಕ್ತ ಇತಿಹಾಸ, ಸಾಮ್ರಾಜ್ಯಗಳ ಪತನ ಇತ್ಯಾದಿ ಸೂಕ್ಷ್ಮ ಸಂಗತಿಗಳನ್ನು ಅತ್ಯಂತ ರಸವತ್ತಾಗಿ ಅಕ್ಷರ ರೂಪಕ್ಕೆ ಇಳಿಸುವ ಕಲೆಯನ್ನು ಸಿದ್ಧಿಸಿಕೊಂಡಿರುವ ಹಿಲರಿ ಸದ್ಯ `ದಿ ಮಿರರ್ ಆ್ಯಂಡ್ ದಿ ಲೈಟ್~ ಎಂಬ ಕಾದಂಬರಿಯ ಕೊನೆಯ ಕಂತನ್ನು ಬರೆದು ಮುಗಿಸುವ ಧಾವಂತದಲ್ಲಿದ್ದಾರೆ.

ಸಾಮಾಜಿಕ ಕಾರ್ಯ
ಸಾಮಾಜಿಕ ಕಾರ್ಯಕರ್ತೆಯಾಗಿ ಸಾರ್ವಜನಿಕ ಜೀವನ ಆರಂಭಿಸಿದ ಹಿಲರಿ 1979ರಲ್ಲಿ ಮೊತ್ತ ಮೊದಲ ಬಾರಿಗೆ ಫ್ರೆಂಚ್ ಕ್ರಾಂತಿ ಎಳೆಯನ್ನು ಹಿಡಿದು ಬರೆದ `ಎ ಪ್ಲೇಸ್ ಆಫ್ ಗ್ರೇಟರ್ ಸೇಫ್ಟಿ~ ಕಾದಂಬರಿ ಹಸ್ತಪ್ರತಿ ಓದಿದ ಎಲ್ಲ ಪ್ರಕಾಶಕರು ಅದನ್ನು ಪ್ರಕಟಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರು. ಕೊನೆಗೆ ಅದು 1992ರಲ್ಲಿ ಪ್ರಕಟಣೆಯ ಭಾಗ್ಯ ಕಂಡಿತು.

ಎರಡು ಬಾರಿ ಗೌರವ
ಎರಡು ಬಾರಿ ಬುಕರ್ ಮುಡಿಗೇರಿಸಿಕೊಂಡ ಸಾಧನೆ ಇದೇ ಮೊದಲೇನಲ್ಲ. ಈ ಮೊದಲು ಆಸ್ಟ್ರೇಲಿಯಾದ ಲೇಖಕ ಪೀಟರ್ ಕ್ಯಾರಿ 1988 ಮತ್ತು 2001ರಲ್ಲಿ ಮತ್ತು ದಕ್ಷಿಣ ಆಫ್ರಿಕಾದ ಜೆ.ಎಂ. ಕೊಟ್ಜಿ 1983 ಮತ್ತು 1999ರಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT