ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಕ್ಸಿಟ್‌ ತೀರ್ಪಿಗೆ ಯುರೋಪ್ ಬಿರುಕು

ಐತಿಹಾಸಿಕ ತೀರ್ಪಿಗೆ ತಲೆಬಾಗಿ ಹುದ್ದೆ ತೊರೆಯಲು ಪ್ರಧಾನಿ ಕ್ಯಾಮರೂನ್ ನಿರ್ಧಾರ * ಷೇರುಪೇಟೆ ತಲ್ಲಣ
Last Updated 24 ಜೂನ್ 2016, 20:19 IST
ಅಕ್ಷರ ಗಾತ್ರ

ಲಂಡನ್‌ (ಎಎಫ್‌ಪಿ): ಐರೋಪ್ಯ ಒಕ್ಕೂಟದಿಂದ (ಇ.ಯು) ಬ್ರಿಟನ್‌ ಹೊರಗೆ ಬರಬೇಕು (ಬ್ರೆಕ್ಸಿಟ್‌) ಎಂದು ಅಲ್ಲಿನ ಜನರು ತೀರ್ಪು ನೀಡಿದ್ದಾರೆ.

ಈ ಬಗ್ಗೆ ಗುರುವಾರ ನಡೆದ ಜನಮತಗಣನೆಯ ಫಲಿತಾಂಶ ಪ್ರಕಟವಾಗಿದ್ದು ಶೇ 51.9ರಷ್ಟು ಜನರು ಇ.ಯು ಕೂಟದಿಂದ ಪ್ರತ್ಯೇಕವಾಗಬೇಕು ಎಂದು ಹೇಳಿದ್ದಾರೆ.

ಇದು ಬ್ರೆಕ್ಸಿಟ್‌ ವಿರುದ್ಧ ನಿಂತಿದ್ದ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಅವರ ತಲೆದಂಡಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ, ಎರಡನೇ ಮಹಾಯುದ್ಧದ ನಂತರ ಯುರೋಪ್‌ನ ಒಗ್ಗಟ್ಟಿಗಾಗಿ ರಚನೆಯಾದ 28 ದೇಶಗಳ ಸದಸ್ಯತ್ವವಿರುವ ಐರೋಪ್ಯ ಒಕ್ಕೂಟದ ಏಕತೆಗೆ ದೊಡ್ಡ ಹೊಡೆತ ನೀಡಿದೆ.

ಬ್ರಿಟನ್‌ ಜನರ  ಈ ನಿರ್ಧಾರದಿಂದಾಗಿ ಶುಕ್ರವಾರ ಭಾರತ ಸೇರಿದಂತೆ ಹಲವು ದೇಶಗಳ ಷೇರುಪೇಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ.
ಆದರೆ, ಇಂಗ್ಲೆಂಡ್‌ ನೇತೃತ್ವದ  ಯುನೈಟೆಡ್‌ ಕಿಂಗ್‌ಡಮ್‌ ಭಾಗವಾಗಿರುವ ಸ್ಕಾಟ್ಲೆಂಡ್‌ ಜನ ‘ಇಯು’ನಲ್ಲಿಯೇ ಉಳಿಯಲು ನಿರ್ಧರಿಸಿರುವುದರಿಂದ ಯುನೈಟೆಡ್‌ ಕಿಂಗ್‌ಡಮ್‌ನ ಏಕತೆ ಕುರಿತೂ ಈಗ ಅನುಮಾನ ಉದ್ಭವಿಸಿದೆ.

ಪೌಂಡ್‌ ಪಾತಾಳಕ್ಕೆ: ಬ್ರೆಕ್ಸಿಟ್‌ ಫಲಿತಾಂಶದ ನಂತರ ಬ್ರಿಟನ್‌ ಕರೆನ್ಸಿ ಪೌಂಡ್‌ನ ಮೌಲ್ಯ ತಳಕ್ಕಿಳಿದಿದೆ. ಡಾಲರ್‌ ಎದುರು ಪೌಂಡ್‌ ಮೌಲ್ಯ 1.32ಕ್ಕೆ ಇಳಿದಿದೆ. ಇದು ಕಳೆದ 31 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮೌಲ್ಯ. ಹಿಂದೆ ಯಾವತ್ತೂ ಒಂದು ದಿನದಲ್ಲಿ ಪೌಂಡ್‌ ಇಷ್ಟೊಂದು ಮೌಲ್ಯ ಕಳೆದುಕೊಂಡಿಲ್ಲ.

ಬ್ರಿಟನ್‌ ಮುಂದಿರುವ ಸವಾಲು: ಐರೋಪ್ಯ ಒಕ್ಕೂಟದಿಂದ ‘ವಿಚ್ಛೇದನ’ಕ್ಕೆ ಮುಂದಾಗಿರುವ ಬ್ರಿಟನ್‌, ಜಗತ್ತಿನ ಐದನೇ ಅತಿ ದೊಡ್ಡ ಅರ್ಥ ವ್ಯವಸ್ಥೆ. ಅದು ಇನ್ನು ಮುಂದೆ ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿ ವ್ಯವಹಾರ ಮಾಡಬೇಕಾಗುತ್ತದೆ.

ಈಗ ಜಗತ್ತಿನ ಇತರ ದೇಶಗಳ ಜತೆಗೆ ಇ.ಯು ಪರವಾಗಿ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.  ಪ್ರತ್ಯೇಕಗೊಂಡ ನಂತರ ಪ್ರತಿಯೊಂದು ದೇಶದ ಜತೆಗೂ ಬ್ರಿಟನ್‌ ಪ್ರತ್ಯೇಕ ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಎಲ್ಲ ಒಪ್ಪಂದಗಳು ಪೂರ್ಣಗೊಳ್ಳಲು ಒಂದು ದಶಕ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇ.ಯುನಿಂದ ಹೊರಗೆ ಬರುವ ಪ್ರಕ್ರಿಯೆ ಸಂಕೀರ್ಣವಾಗಿದ್ದು, ಪೂರ್ಣಗೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT