ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು! ಮಾಡಬೇಕಾದುದು ಏನು?

ಬೆಂಗಳೂರು ಅಭಿವೃದ್ಧಿ
Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಲವೂ ಹದವಾಗಿತ್ತು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳೂ ಬೆಂಗಳೂರಿನತ್ತ ಆಸಕ್ತಿ ವಹಿಸಿದ್ದವು. `ಬೆಂಗಳೂರು ಬ್ರ್ಯಾಂಡ್'ಗೆ ಆಕರ್ಷಿತಗೊಂಡ ಸಾಕಷ್ಟು ಐ.ಟಿ ಕಂಪೆನಿಗಳು ಬೆಂಗಳೂರಿನಲ್ಲಿ ತಳ ಊರಿದವು. ಆದರೆ ನಂತರ ಬಂದ ಸಮ್ಮಿಶ್ರ ಸರ್ಕಾರಗಳು ಎನ್.ಆರ್. ನಾರಾಯಣಮೂರ್ತಿ ಅವರನ್ನು ತೆಗಳುವುದರಲ್ಲಿ ಹಾಗೂ ಬೆಂಗಳೂರಿಗಿಂತ ಇತರ ನಗರಗಳ ಅಭಿವೃದ್ಧಿಗೆ ಹೆಚ್ಚು ಗಮನ ನೀಡಿದ್ದರಿಂದಾಗಿ ಬೆಂಗಳೂರಿನ ಬ್ರ್ಯಾಂಡ್ ಇಮೇಜ್ ಕುಸಿಯಿತು. ಇದರಿಂದ ಹೂಡಿಕೆಯ ಪ್ರಮಾಣವೂ ಕುಸಿಯಿತು. ಗಾರ್ಡನ್ ಸಿಟಿ `ಗಾರ್ಬೆಜ್ (ಕಸ) ಸಿಟಿ' ಎಂಬ ಕುಖ್ಯಾತಿಯನ್ನೂ ಪಡೆಯುವಂತಾಯಿತು.

ಬೆಂಗಳೂರಿನಲ್ಲಿ ಇದೆ ಎನ್ನುವ ಪಟ್ಟಿಗಿಂತ `ಇಲ್ಲ' ಎನ್ನುವ ಪಟ್ಟಿಯೇ ದೊಡ್ಡದಾಗಿದೆ. ಉತ್ತಮ ರಸ್ತೆಗಳಿಲ್ಲ, ಪಾದಚಾರಿ ಮಾರ್ಗ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಶುಚಿತ್ವ, ರಕ್ಷಣೆ ಹಾಗೂ ರಾತ್ರಿ ಬದುಕು- ಹೀಗೆ ಪಟ್ಟಿ ಮಾಡುತ್ತಾ ಹೋದಲ್ಲಿ ಜಾಗತಿಕ ನಗರಕ್ಕೆ ಇರಬೇಕಾದ ಸಾಕಷ್ಟು ಗುಣಲಕ್ಷಣಗಳು ಇಲ್ಲಿಲ್ಲ ಎನ್ನುವುದೇ ವಿಪರ್ಯಾಸ. ಕಸ ವಿಲೇವಾರಿ ಈಗ ಮಾಫಿಯಾ ಹಿಡಿತಕ್ಕೆ ಒಳಪಟ್ಟಿದೆ. ಸಾರ್ವಜನಿಕರ ತೆರಿಗೆ ಹಣದ 400-500 ಕೋಟಿ ರೂಪಾಯಿಗಳನ್ನು ಈ ಮಾಫಿಯಾ ಹಿಂದಿನ ಕೈಗಳು ತಿಂದುಹಾಕುತ್ತಿವೆ.

ಇಂಥವರಲ್ಲಿ ಕೆಲವರು ಪಾಲಿಕೆ ಸದಸ್ಯರಾಗಿರುವುದರಿಂದ ಅವರೆಲ್ಲರೂ ಆಡಳಿತವನ್ನು ತಮ್ಮ ಹಿಡಿತಕ್ಕೆ ಪಡೆಯುವ ಹುನ್ನಾರ ನಡೆಸಿದ್ದಾರೆ. ಇದರಿಂದಾಗಿ ಆಗಲೇಬೇಕಾದ ಕೆಲಸಗಳಿಗೆ ಕಲ್ಲು ಬಿದ್ದಂತಾಗಿದೆ. ಹೀಗಾಗಿ ಜಾಗತಿಕ ನಗರ ಎಂಬ ಖ್ಯಾತಿ ಪಡೆಯಲು ಬೇಕಾಗಿರುವ ಮೂಲಭೂತ ಅಂಶಗಳಾಗಿರುವ ನಗರದ ನೈರ್ಮಲ್ಯ ಹಾಳಾಗಿದೆ ಹಾಗೂ ಪಾದಚಾರಿ ಮಾರ್ಗಗಳು ಸಮರ್ಪಕವಾಗಿಲ್ಲ.
ಬೆಂಗಳೂರಿನದ್ದು ಕಸದ ಸಮಸ್ಯೆ ಮಾತ್ರವಲ್ಲ; ನಗರದ ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿವೆ. 21ನೇ ಶತಮಾನದಲ್ಲಿ ಒಳ್ಳೆಯ ರಸ್ತೆ ನಿರ್ಮಿಸುವ ತಂತ್ರಜ್ಞಾನ ಇಲ್ಲ ಎಂದರೆ ನಂಬಲು ಸಾಧ್ಯವೇ?

ನಾನು ಹುಟ್ಟಿದಾಗ ರಸ್ತೆಗಳು ಉತ್ತಮವಾಗಿಯೇ ಇದ್ದವು. ಆಗಿನ ರಸ್ತೆಗಳಿಗೆ ಹೋಲಿಸಿದರೆ ಈಗಿನವು ಕಳಪೆಯಾಗಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ತೀವ್ರ ಹದಗೆಟ್ಟಿದೆ. ಬೆಂಗಳೂರು ನಗರದಲ್ಲಿ ವಾಸಿಸುವ ಸುಮಾರು ಕೋಟಿ  ಜನರಿಗೆ 50 ಲಕ್ಷ ವಾಹನವಿದೆ ಎಂದರೆ ಇದು ಸುಭಿಕ್ಷ ನಗರ ಎಂದು ಅಂದುಕೊಳ್ಳುವುದರ ಜತೆಗೆ ರಸ್ತೆ ವಿಸ್ತರಣೆ ಸರಿಯಾಗಿಲ್ಲ ಎನ್ನುವ ಸತ್ಯವನ್ನೂ ಒಪ್ಪಿಕೊಳ್ಳಬೇಕು. ಐದು ವರ್ಷದ ಹಿಂದೆಯೇ ಮೆಟ್ರೊ ಬರಬೇಕಿತ್ತು. ರಾಜಕೀಯ ಒತ್ತಡದಿಂದಾಗಿ ಅದು ಸಾಧ್ಯವಾಗಿಲ್ಲ. ಈಗ `ನಾವು ಬೆಂಗಳೂರಿಗರು' ಎಂದು ಎದೆ ತಟ್ಟಿ ಹೇಳಿಕೊಳ್ಳಲು ಒಂದು ಸಂಗತಿಯೂ ಇಲ್ಲ. ಭ್ರಷ್ಟಾಚಾರ, ಮಾಫಿಯಾಗಳೇ ನಗರದಲ್ಲಿ ತುಂಬಿವೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ರೆಸ್ಟೋರೆಂಟ್ ಹಾಗೂ ಬಾರ್‌ಗಳು ಹನ್ನೊಂದು ಗಂಟೆಗೆ ಮುಚ್ಚುವುದು ಗ್ಲೋಬಲ್ ಸಿಟಿಯ ಲಕ್ಷಣವಲ್ಲ. ಜಗತ್ತಿನಲ್ಲಿ ಗ್ಲೋಬಲ್ ಸಿಟಿ ಎಂಬ ಹಣೆಪಟ್ಟಿ ಹೊತ್ತ ಯಾವ ನಗರದಲ್ಲೂ ಈ ರೀತಿಯ ವ್ಯವಸ್ಥೆ ಇಲ್ಲ. ಬೆಂಗಳೂರಿನ ಬಿಪಿಒ ಕ್ಷೇತ್ರದಲ್ಲಿ 2.5 ಲಕ್ಷ ಮಂದಿ ಕೆಲಸ ಮಾಡುತ್ತಿರುವವರಲ್ಲಿ ರಾತ್ರಿ ಕೆಲಸ ಮಾಡುವವರ ಸಂಖ್ಯೆ ಅಧಿಕ. ಅವರು ಊಟಕ್ಕೆ ಎಲ್ಲಿಗೆ ಹೋಗಬೇಕು? ಜಾಗತಿಕ ನಗರ ಎಂದರೆ ಅಲ್ಲಿ ಮನರಂಜನೆಯೂ ಬಹುಮುಖ್ಯ. ಸಾರ್ವಜನಿಕರಿಗೆ ರಾತ್ರಿ ವೇಳೆಯಲ್ಲಿ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಪೊಲೀಸರು ಬಾರ್‌ಗಳನ್ನು ಮುಚ್ಚಿಸುವುದು ಗ್ಲೋಬಲ್ ಸಿಟಿಯ ಲಕ್ಷಣವಂತೂ ಅಲ್ಲವೇ ಅಲ್ಲ. ಹಾಗಿದ್ದರೆ ನಾವು ಸುಂಕ ಕಟ್ಟುವುದಾದರೂ ಏತಕ್ಕೆ?

ಐದು ವರ್ಷಗಳಿಗೆ ಒಬ್ಬರೇ ಮೇಯರ್ ಇರಬೇಕು: ನಾರ್ವೆ, ಸ್ವೀಡನ್ ಹಾಗೂ ಸಿಂಗಪುರಗಳನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅಲ್ಲಿರುವುದು ಬೆಂಗಳೂರು ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆ. ಆದರೆ ಬೆಂಗಳೂರು ನಗರ ಒಂದೇ ಒಂದು ದೊಡ್ಡ ರಾಷ್ಟ್ರವಿದ್ದಂತೆ. ಹೀಗಾಗಿ ಇಲ್ಲಿ ಐದು ವರ್ಷಗಳವರೆಗೂ ಅಧಿಕಾರದಲ್ಲಿರುವ ಒಬ್ಬ ಉತ್ತಮ ಮೇಯರ್ ಇರಬೇಕು.

ನಗರ ಪಾಲಿಕೆಗೆ ಮತ್ತಷ್ಟು ಅಧಿಕಾರಿ ವರ್ಗವನ್ನು ನೀಡಬೇಕು. ಉತ್ತಮ ಹಾಗೂ ಸಮರ್ಥ ಜನಪ್ರತಿನಿಧಿಗಳಿರಬೇಕು. ಒಂದು ಸಾವಿರ ಜನಸಂಖ್ಯೆ ಇರುವ ಹಳ್ಳಿಗೆ ಹತ್ತು ಮಂದಿ ಪಂಚಾಯ್ತಿ ಸದಸ್ಯರಿರುತ್ತಾರೆ. ಆದರೆ 198 ವಾರ್ಡ್‌ಗಳಲ್ಲಿ ಒಂದೊಂದು ವಾರ್ಡ್‌ನಲ್ಲಿರುವ ಮೂವತ್ತೈದು ಸಾವಿರ ಮತದಾರರಿಗೆ ಒಬ್ಬ ಜನಪ್ರತಿನಿಧಿ! ಇದು ಯಾವ ರೀತಿಯ ನ್ಯಾಯ?  ಪಾಲಿಕೆಯಲ್ಲಿರುವ ವಾರ್ಡ್‌ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ.

ಬೆಂಗಳೂರಿನ ಮೇಯರ್ ಆಗುವವರಿಗೆ ಜಾಗತಿಕ ಮಟ್ಟದ ವಿದ್ಯಮಾನಗಳನ್ನು ಅರಿಯುವ ಸಾಮರ್ಥ್ಯ ಇರಬೇಕು. ನಮ್ಮ ಬೆಂಗಳೂರಿಗೆ ನಾವು ನೀಡುತ್ತಿರುವ ಆಡಳಿತ ಹಾಗೂ ಯೋಜನೆ ಕುರಿತು ಜಗತ್ತಿಗೆ ಹೇಳುವಂತವರಾಗಬೇಕು. ಈಗಿರುವ 200ಕ್ಕೂ ಅಧಿಕ ಸಂಖ್ಯೆಯ ಸದಸ್ಯರಲ್ಲಿ 105 ಮಂದಿ ರಿಯಲ್ ಎಸ್ಟೇಟ್ ಹಿನ್ನೆಲೆಯುಳ್ಳವರು ಎನ್ನುವ ವರದಿಯೊಂದನ್ನು ಓದಿದೆ. ಇವರಲ್ಲಿ ಒಳ್ಳೆಯವರ ಸಂಖ್ಯೆ ಕಡಿಮೆ. ಇವೆಲ್ಲವನ್ನೂ ಉತ್ತಮಪಡಿಸಿದಲ್ಲಿ ಬೆಂಗಳೂರಿಗೆ ಜಾಗತಿಕ ಸ್ಥಾನಮಾನ ದೊರಕಲಿದೆ.

ನೆರೆಯ ಹೈದರಾಬಾದ್‌ನ ರಸ್ತೆಗಳು ಉತ್ತಮವಾಗಿವೆ. ಅಲ್ಲಿ ಭ್ರಷ್ಟಾಚಾರದ ಪ್ರಮಾಣವೂ ಕಡಿಮೆ. ಪುಣೆ ಕಳೆದ ಐದು ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ. ದೆಹಲಿ ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಉತ್ತಮವಾಗಿದೆ. ಆದರೆ ಬೆಂಗಳೂರಿನ ಸ್ಥಿತಿಯೇ ಬೇರೆ ಇದೆ. ಇಡೀ ರಾಜ್ಯದ ಶೇ 60ರಷ್ಟು ತೆರಿಗೆ ಸಂಗ್ರಹವಾಗುವುದು ಬೆಂಗಳೂರಿನಿಂದ. ಆದರೆ ರಾಜ್ಯ ಬಜೆಟ್‌ನ ಶೇ 10ರಷ್ಟು ಮಾತ್ರ ಬೆಂಗಳೂರಿಗೆ ನೀಡಲಾಗುತ್ತಿರುವುದು ವಿಪರ್ಯಾಸ.

ಮೂಲ ಸೌಕರ್ಯ: ಬೆಂಗಳೂರಿನತ್ತ ಹೂಡಿಕೆದಾರರನ್ನು ಸೆಳೆಯಬೇಕೆಂದರೆ ಇಲ್ಲೊಂದು ಉತ್ತಮ ನಗರ ಇರಬೇಕು. ಜೀವನದ ಗುಣಮಟ್ಟ ಹೆಚ್ಚಬೇಕು. ಆದರೆ, ಬೆಂಗಳೂರು ಸರಿಯಾದ ಸೌಲಭ್ಯವಿಲ್ಲದೆ ಸೂತ್ರವಿಲ್ಲದ ಗಾಳಿಪಟದಂತೆ ಹಾರಾಡುತ್ತಿದೆ. 800 ಚದರ ಕಿಲೋಮೀಟರ್‌ನಷ್ಟು ಬೆಂಗಳೂರು ಇದೆ. ಒಂದು ಚದರ ಕಿಲೋಮೀಟರ್‌ಗೆ 12 ಸಾವಿರ ಜನಸಂಖ್ಯೆ ಇರಬೇಕು ಎಂಬ ಲೆಕ್ಕಾಚಾರವಿದೆ.

ನ್ಯೂಯಾರ್ಕ್‌ನ ಮ್ಯಾನ್‌ಹಟನ್ ಎಂಬ ಪುಟ್ಟ ಬಡಾವಣೆಯ ಒಟ್ಟು ಜನಸಂಖ್ಯೆ 60 ಲಕ್ಷ. ಒಂದು ನಗರ ಎಂದರೆ ಮನುಷ್ಯರ ಬಹುಬಗೆಯ ಚಟುವಟಿಕೆಗಳ ಒಂದು ಕೇಂದ್ರ. ಹೀಗಾಗಿ ಅಲ್ಲಿ ಎತ್ತರದ ಕಟ್ಟಡಗಳು, ಸರಿಯಾದ ರಸ್ತೆಗಳು ಹಾಗೂ ಜನದಟ್ಟಣೆ ಇರಬೇಕು. ಆದರೆ ಬೆಂಗಳೂರು ತೀರಾ ಬೆಳೆದಿರುವುದರಿಂದ ಇಲ್ಲಿ ಒಂದು ಮೂಲೆಯಿಂದ ಮತ್ತೊಂದೆಡೆಗೆ ಸಂಚರಿಸಲು ಗಂಟೆಗಟ್ಟಲೆ ಸಮಯ ಹಿಡಿಯುತ್ತದೆ.

ಬೆಂಗಳೂರಿನ ಮೇಲಿರುವ ಒತ್ತಡ ಕಡಿಮೆ ಮಾಡಲು ತುಮಕೂರು, ದೇವನಹಳ್ಳಿ, ಕೋಲಾರ, ಕೆಂಗೇರಿ, ರಾಮನಗರ, ಮದ್ದೂರು ಉಪನಗರಗಳ ಸೃಷ್ಟಿ ಅನಿವಾರ್ಯ. ಇದನ್ನು ಮಾಡಲು ವರ್ತುಲ ರಸ್ತೆಗಳು ಹೆಚ್ಚಬೇಕು. ಬೀಜಿಂಗ್ ನಗರಕ್ಕೆ ಎಂಟು ವರ್ತುಲ ರಸ್ತೆಗಳಿವೆ. ನಮ್ಮಲ್ಲಿ ಒಂದೂ ಸರಿಯಾದ ವರ್ತುಲ ರಸ್ತೆಯಿಲ್ಲ. `ನಂದಿ'ಯವರು ಕಟ್ಟಿದ ರಸ್ತೆ ಮುಂದುವರಿದಿಲ್ಲ.

ಬೆಂಗಳೂರಿಗೆ ಕನಿಷ್ಠ 250 ಕಿ.ಮೀ. ಉದ್ದದ ಮೆಟ್ರೊ ರೈಲು ಬೇಕು. ಮುಂಬೈನಲ್ಲಿ 70 ಲಕ್ಷ ಮಂದಿ ರೈಲಿನ ಮೇಲೆ ಅವಲಂಬಿತರಾಗಿದ್ದಾರೆ. ಅದರಂತೆಯೇ ಲಂಡನ್‌ನಲ್ಲಿ 300 ಕಿ.ಮೀ., ಶಾಂಘೈ ಹಾಗೂ ಬೀಜಿಂಗ್‌ನಲ್ಲಿ 350 ಕಿ.ಮೀ. ಉದ್ದದ ಮೆಟ್ರೊ ಇದೆ. ಅದರ ಮಾರ್ಗ ನೆಲದಡಿಯಲ್ಲೇ ಇದ್ದಲ್ಲಿ ರಸ್ತೆ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಈ ಕುರಿತು ಪ್ರಸ್ತಾವವೊಂದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಿಂದ ಮೂವತ್ತು ಲಕ್ಷ ಜನರು ನೆಲದಡಿಯ ಸಂಚಾರ ವ್ಯವಸ್ಥೆಯನ್ನು ಬಳಸಲಿದ್ದಾರೆ.

ನ್ಯಾಯ ಹಾಗೂ ರಕ್ಷಣೆ: ಅಭಿವೃದ್ಧಿ ಕಾರ್ಯಗಳು ಹೆಚ್ಚಾದಂತೆ ರಾಷ್ಟ್ರದ ಮೂಲೆ ಮೂಲೆಯಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕ್ರೈಂ ಕೂಡಾ ಹೆಚ್ಚಿದೆ. ಆದರೆ ಪೊಲೀಸರ ಸಂಖ್ಯೆ ಇಪ್ಪತ್ತು ವರ್ಷಗಳ ಹಿಂದೆ ಎಷ್ಟಿತ್ತೋ ಅಷ್ಟೇ ಇದೆ. ಇರುವವರಲ್ಲಿ ಶೇ 20ರಷ್ಟು ಮಂದಿ ಪೊಲೀಸರು ಅತಿಗಣ್ಯರ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಮುಖ್ಯಮಂತ್ರಿಗಳ ಹಿಂದೆ ಇಪ್ಪತ್ತು ವಾಹನಗಳು ಹೋಗುತ್ತವೆ. ಇದರ ಅವಶ್ಯಕತೆಯಾದರೂ ಏನು? ನಮ್ಮದು ಫ್ಯೂಡಲ್ ಸರ್ಕಾರವಾಗಿದೆ. ಸಚಿವರಿಗೆ ಬಂಗಲೆ, ವಿದ್ಯುತ್, ಶುದ್ಧ ನೀರು, ಭದ್ರತೆ, ಐಷಾರಾಮಿ ಕಾರು ಇತ್ಯಾದಿ ವ್ಯವಸ್ಥೆಗಳು ಸಾರ್ವಜನಿಕರ ದುಡ್ಡಿನಲ್ಲಿ ಸಿಗುತ್ತವೆ. ತೆರಿಗೆ ಕಟ್ಟುವ ಸಾರ್ವಜನಿಕರಿಗೆ ಏನೂ ಇಲ್ಲದಂತಾಗಿದೆ. ಇದನ್ನು ಹೇಳುವಾಗ ಒಂದು ಘಟನೆ ನೆನಪಿಗೆ ಬರುತ್ತದೆ. ಹಿಂದೆ ಒಬ್ಬರು ಮುಖ್ಯಮಂತ್ರಿ ಇದ್ದರು.

ಅವರ ಬಳಿ ನಿಯೋಗ ಒಂದು ತೆರಳಿ `ಬೆಂಗಳೂರಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಏನಾದರೂ ಪರಿಹಾರ ನೀಡಬೇಕು' ಎಂದು ಕೇಳಿಕೊಂಡೆವು. ಅದಕ್ಕೆ ಅವರು, `ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಇದೆಯಾ? ಅಂಥ ಪರಿಸ್ಥಿತಿ ನಾನು ಓಡಾಡುವ ಯಾವ ರಸ್ತೆಯಲ್ಲೂ ಕಂಡುಬಂದಿಲ್ಲ' ಎಂದರು. ಅದೇ ಮುಖ್ಯಮಂತ್ರಿಗೆ `ರಸ್ತೆಗಳು ಗುಂಡಿ ಬಿದ್ದಿವೆ' ಎಂದೆವು. ಅದಕ್ಕೆ ಅವರು `ನಿಮ್ಮಲ್ಲಿ ಗುಂಡಿ ಇರುವ ರಸ್ತೆಗಳಾದರೂ ಇವೆ. ನನ್ನ ಕ್ಷೇತ್ರದಲ್ಲಿ ರಸ್ತೆಯೇ ಇಲ್ಲ' ಎಂದರು.

ಇವರ ಮಾತಿಗೆ ನಗಬೇಕೋ, ಅಳಬೇಕೋ ಗೊತ್ತಾಗಲಿಲ್ಲ. ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ಮೂರು ಕಿಲೋಮೀಟರ್‌ನಷ್ಟು ದೂರ ನಡೆದು ಶಾಲೆಗೆ ಹೋಗುತ್ತಿದ್ದೆವು. ಈಗಿನ ಮಕ್ಕಳಿಗೆ ಅದು ಸಾಧ್ಯವಿಲ್ಲ. ಪಾದಚಾರಿ ಮಾರ್ಗವೇ ಇಲ್ಲದೆ ಅದೊಂದು ಉತ್ತಮ ನಗರವಾಗಲು ಹೇಗೆ ಸಾಧ್ಯ?

ಬೆಂಗಳೂರು ಉತ್ತಮ ನಗರ. ಇಲ್ಲಿರುವ ಜನರು ತಾಳ್ಮೆಯುಳ್ಳವರು, ಒಳ್ಳೆಯವರು ಹಾಗೂ ಸುಶಿಕ್ಷಿತರು. ಬೆಂಗಳೂರಿನಲ್ಲಿರುವ ಜನಸಂಖ್ಯೆಯಲ್ಲಿ ಶೇ 40ರಷ್ಟು ಮಂದಿ ಬಳಿ ಪದವಿ ಇದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಪದವೀಧರರನ್ನು ಬೇರೆ ಯಾವ ನಗರವೂ ಹೊಂದಿಲ್ಲ. ಅದು ನಮ್ಮ ಹೆಮ್ಮೆ. ಇಂಥ ನಗರದ ಆಡಳಿತ ಇಷ್ಟೊಂದು ಕೆಟ್ಟಿದೆ ಎಂದರೆ ಏನರ್ಥ?

ಬಹುಸಂಸ್ಕೃತಿ ಅನಿವಾರ್ಯ: ಬೆಂಗಳೂರು ಗ್ಲೋಬಲ್ ಸಿಟಿ ಆಗಬೇಕೆಂದರೆ ಬಹು ಸಂಸ್ಕೃತಿ ಹಾಗೂ ಕಾಸ್ಮೊಪಾಲಿಟನ್ ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳಬೇಕು. ಬೇರೆ ಬೇರೆ ರಾಜ್ಯ ಹಾಗೂ ರಾಷ್ಟ್ರದಿಂದ ಬರುವವರಿಗೆ ಅವರವರ ಭಾಷೆಯ ಶಾಲೆಗಳು ಅತಿಮುಖ್ಯ. ವಲಸಿಗರು ಹಾಗೂ ಸ್ಥಳೀಯರು ಎಂಬ ಭೇದಭಾವ ಕೂಡದು.

ಸರ್ಕಾರ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು. ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ಬೆಂಗಳೂರಿನಲ್ಲಿ ಶಿಕ್ಷಣವೇ ದೊಡ್ಡ ಹೊರೆಯಾಗಿದೆ. ಕಡಿಮೆ ಸಂಬಳ ಕಾರಣ, ಶಿಕ್ಷಕರ ಹುದ್ದೆಯಿಂದ ವಿಮುಖರಾಗುತ್ತಿರುವವರನ್ನು ಮತ್ತೆ ಅದರತ್ತ ಸೆಳೆಯಬೇಕೆಂದರೆ ಉತ್ತಮ ಸಂಬಳ ನೀಡುವುದು ಅನಿವಾರ್ಯ. ಸರ್ಕಾರಿ ಶಾಲಾ ಕಾಲೇಜುಗಳ ಗುಣಮಟ್ಟ ಹೆಚ್ಚಿಸಿ ಅವುಗಳನ್ನು ಖಾಸಗಿಯಷ್ಟೇ ಸಮರ್ಥವಾಗಿ ನಡೆಸುವ ಅವಶ್ಯಕತೆ ಇದೆ.

ಆರೋಗ್ಯ ವಿಮೆ: ಬೆಂಗಳೂರಿನಲ್ಲಿ ಆರೋಗ್ಯವೂ ದುಬಾರಿ. ನಾನು ಇನ್ಫೊಸಿಸ್‌ನಲ್ಲಿ ಇದ್ದಾಗ ಅಲ್ಲಿನ ಎಲ್ಲಾ ನೌಕರರಿಗೂ ಆರೋಗ್ಯ ವಿಮೆ ಮಾಡಿಸಿದೆವು. 2 ಸಾವಿರ ರೂಪಾಯಿ ನೀಡಿದರೆ ಗಂಡ, ಹೆಂಡತಿ ಅವರ ಇಬ್ಬರು ಮಕ್ಕಳು ಹಾಗೂ ಒಬ್ಬ ಪೋಷಕರಿಗೆ 2 ಲಕ್ಷ ರೂಪಾಯಿಯವರೆಗೂ ಚಿಕಿತ್ಸೆ ಪಡೆಯಬಹುದಿತ್ತು.

ಇದೇ ರೀತಿಯ ವಿಮೆಯನ್ನು ರಾಜ್ಯದ ಜನರಿಗೂ ಸರ್ಕಾರ ನೀಡಬಹುದು. ಅಂದರೆ ರಾಜ್ಯದಲ್ಲಿ 1.2 ಕೋಟಿ ಕುಟುಂಬಗಳಿವೆ ಎಂದು ಅಂದಾಜು ಮಾಡಿದರೆ ಅವರಿಗೆ ಒಟ್ಟು 2,400 ಕೋಟಿ ರೂಪಾಯಿ ಹಣ ನೀಡಿ ವಿಮೆ ಮಾಡಿಸಬಹುದು. ರಾಜ್ಯದ  1.2 ಲಕ್ಷ  ಕೋಟಿ ರೂಪಾಯಿಯ ದೊಡ್ಡ ಬಜೆಟ್‌ನಲ್ಲಿ ಈ ಅಲ್ಪ ಮೊತ್ತವನ್ನು ಸೇರಿಸಿ ರಾಜ್ಯದ ಜನರಿಗೆ ಉತ್ತಮ ಆರೋಗ್ಯ ನೀಡಲು ಸರ್ಕಾರ ಮುಂದಾಗಬೇಕಿದೆ.

ಹೂಡಿಕೆದಾರರ ರಕ್ಷಣೆ: ಕಳೆದ ಎರಡು ವರ್ಷಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲು `ಜಿಮ್-1' (ಜಾಗತಿಕ ಹೂಡಿಕೆದಾರರ ಸಮಾವೇಶ) ಹಾಗೂ `ಜಿಮ್-2'ನ್ನು ನಡೆಸಲಾಯಿತು. ಆದರೆ ವರದಿಯಾದಂತೆ ಹೂಡಿಕೆಯಾಗಿಲ್ಲ. ಭೂಮಿ ಬೇಕು ಎಂದರೆ ಲಂಚ ನೀಡುವುದು ಅನಿವಾರ್ಯ, ವಿದ್ಯುತ್ ಸಂಪರ್ಕ ಬೇಕೆಂದರೆ ಲಂಚ ನೀಡಬೇಕು. ಹೀಗಾದರೆ ಯಾವ ಬಹುರಾಷ್ಟ್ರೀಯ ಕಂಪೆನಿಗಳು ಬೆಂಗಳೂರಿನತ್ತ ಮುಖ ಮಾಡಲು ಸಾಧ್ಯ?

ಹೊಸ ಸರ್ಕಾರ ರಚನೆಯಾಗಿದೆ. ಸಿದ್ದರಾಮಯ್ಯ ಉತ್ತಮ ಹಣಕಾಸು ಮಂತ್ರಿಯಾಗಿದ್ದವರು, ಈಗ ಮುಖ್ಯಮಂತ್ರಿಯಾಗಿದ್ದಾರೆ.  ಅವರು ಉತ್ತಮ ಆಡಳಿತ ನೀಡಬೇಕೆಂದಿದ್ದರೆ ದೂರದೃಷ್ಟಿ ಇಟ್ಟುಕೊಳ್ಳುವುದು ಅವಶ್ಯಕ. ಮೊದಲನೆಯದಾಗಿ ಅವರು ಮುಂದಿನ ಹತ್ತು ವರ್ಷಗಳ ಯೋಜನೆಯನ್ನು ರೂಪಿಸಬೇಕು. ಮುಂದಿನ ಹತ್ತು ವರ್ಷಗಳಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಸ್ವಂತ ಸೂರು ಸಿಗುವಂತಾಗಬೇಕು.

ವಿದ್ಯುತ್, ರಸ್ತೆ, ಒಳಚರಂಡಿ, ಕುಡಿಯುವ ನೀರು, ಮಕ್ಕಳಿಗೆ ವಿದ್ಯಾಭ್ಯಾಸ, ಶೇ 50ರಷ್ಟು ಮಂದಿಗೆ ಕಾಲೇಜು ಶಿಕ್ಷಣ ಇತ್ಯಾದಿಗಳು ಅವಶ್ಯಕ. ಈ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರ ದೊಡ್ಡದು. ಅದಕ್ಕಾಗಿ ಮೂಲಸೌಕರ್ಯ ಅಭಿವೃದ್ಧಿ ಮುಖ್ಯ. ಮುಂದಿನ ಹತ್ತು ವರ್ಷಗಳಲ್ಲಿ ನಲವತ್ತು ಸಾವಿರ ಮೆಗಾವಾಟ್ ವಿದ್ಯುತ್ ತಯಾರಿಕೆಗೆ ಯೋಜನೆ ರೂಪಿಸಬೇಕು. ಹೀಗಾದಲ್ಲಿ ಕೈಗಾರಿಕೆಗಳು ರಾಜ್ಯದತ್ತ ಆಸಕ್ತಿ ವಹಿಸುತ್ತವೆ. ಅವು ಬರುವ ಹೊತ್ತಿಗೆ ನಮ್ಮ ಮಕ್ಕಳಿಗೆ ಕೌಶಲ ತರಬೇತಿ ನೀಡಬೇಕು.

ಜಗತ್ತಿನ ಇತರ ರಾಷ್ಟ್ರಗಳು ಕೈಗಾರಿಕೆಗಳನ್ನು ಸೆಳೆಯಲು ತುದಿಗಾಲ ಮೇಲೆ ನಿಂತಿರುವಾಗ ನಾವೂ ಆ ಸ್ಪರ್ಧೆಯನ್ನು ಎದುರಿಸಲು ಸಿದ್ಧರಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT