ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲಾಗಿಲನು ತೆರೆದು/ ಸಂಚಿಯೊಳಗಿನ ಸಿಂಗಾರ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮತ್ತೆ ಮತ್ತೆ ಬಾಲ್ಯದ ಲೋಕಕ್ಕೆ ಎಡತಾಕುವುದು ಬ್ಲಾಗ್ ಬರಹಗಳ ವೈಶಿಷ್ಟ್ಯ. ಊರುಕೇರಿ, ಶಾಲೆ ಕಾಲೇಜು, ಚಡ್ಡಿದೋಸ್ತುಗಳು, ನೆನಪಿನಲ್ಲಿ ಅಚ್ಚಾದ ವಿವಿಧ ಮುಖಗಳು- ಇವೆಲ್ಲವುಗಳ ಜೊತೆಗೆ ದೈನಿಕದ ಹತ್ತಾರು ಸಂಗತಿಗಳು ಸೇರಿಯೇ ಬ್ಲಾಗು ರೂಪುಗೊಳ್ಳುವುದು. ಈ ಬ್ಲಾಗಿನ ಬ್ಯಾಗಿನಲ್ಲಿ ಅದರೊಡೆಯರ ರುಚಿ ಅಭಿರುಚಿಗಳೂ ಸ್ಥಾನ ಪಡೆಯುವವು. `ನೆನಪಿನ ಸಂಚಿಯಿಂದ' (malathisanchiyinda.blogspot.in) ಕೂಡ ಇಂತಹುದೇ ಒಂದು ಸಂಕಲನ.

`ನೆನಪಿನ ಸಂಚಿಯಿಂದ' ಬೆಂಗಳೂರಿನ ಮಾಲತಿ ಎಸ್. ಅವರ ಬ್ಲಾಗು. ನೆನಪುಗಳೊಂದಿಗೆ ಸಂಚಿಯನ್ನು ತಳುಕು ಹಾಕಿರುವುದು ಸೊಗಸಾಗಿದೆ. ಬುಟ್ಟಿಯೊಳಗೆ ಕೈಹಾಕಿ ಅಲ್ಲಿ ಸಿಕ್ಕ ಆಟಿಕೆಯನ್ನು ಕೈಗೆತ್ತಿಕೊಳ್ಳುವ ಮಗುವಿನಂತೆ ಈ ಬ್ಲಾಗಿತಿ ಕೂಡ ತಮ್ಮ ನೆನಪುಗಳನ್ನು ಅನಾವರಣಗೊಳಿಸುತ್ತಾ ಹೋಗಿದ್ದಾರೆ.

ಮಾಲತಿ ಅವರ ಆಸಕ್ತಿಗಳ ಹರಹು ದೊಡ್ಡದು. ಅಡುಗೆ ಮಾಡಿದಷ್ಟೇ ಪ್ರೀತಿಯಿಂದ ಸಂಗೀತವನ್ನು ಕೇಳುತ್ತಾರೆ. ಸಿನಿಮಾ ನೋಡುತ್ತಾರೆ. ಸಿನಿಮಾ ಕುರಿತು ಬರೆಯುತ್ತಾರೆ. ಊರು ಸುತ್ತುತ್ತಾರೆ. ಫೋಟೊ ತೆಗೆಯುತ್ತಾರೆ. ಕವಿತೆ ಬರೆಯಲು ಪ್ರಯತ್ನಿಸುತ್ತಾರೆ. ಚಿತ್ರಕಲೆಯಲ್ಲೂ ಅವರಿಗೆ ಆಸಕ್ತಿಯಿದೆ ಎನ್ನುವುದಕ್ಕೆ ಅವರ `ಫಸ್ಟ್ ಅಟೆಂಪ್ಟ್'ನ ಎರಡು ಚಿತ್ರಗಳು ಬ್ಲಾಗಿನಲ್ಲಿವೆ. ಸ್ಪರ್ಧೆಯೊಂದರ ನೆಪದಲ್ಲಿ ಅವರು ರೂಪಿಸಿರುವ ಪುಸ್ತಕದ ಮುಖಪುಟಗಳು `ವರ್ಣಮಯ'ವಾಗಿಯೇ ಇವೆ. ಮುಖಪುಟದಷ್ಟೇ, ಅದು ರೂಪುಗೊಂಡ ಪ್ರಕ್ರಿಯೆ ಕುರಿತ ಬರಹವೂ ಸೊಗಸಾಗಿದೆ.

`ನೆನಪಿನ ಸಂಚಿಯಿಂದ' ಬರಹಗಳ ರುಚಿಗೆ ಒಂದು ನಮೂನೆ ಇಲ್ಲಿದೆ:
“
ಮೊನ್ನೆ ನಮ್ಮ ಮನೆಯಿಂದ ನಮ್ಮ ಹಳೆ ಮನೆ ಇದ್ದ ಏರಿಯಾ- ಮಹಾಲಕ್ಷ್ಮಿ ಲೇಔಟ್ ಕಡೆ ಸುಮ್ಮನೆ ನಾನು ಶ್ರೀಕಾಂತ ವಾಕ್ ಹೋಗಿದ್ವಿ. ಅಲ್ಲಿ ಒಂದು ಕಡೆ ಶ್ರೀಕಾಂತ ಹಣ್ಣು ಖರೀದಿಸಬೇಕಾದ್ರೆ ನನ್ನ ಕಣ್ಣು ಅಲ್ಲೇ ಲೈಟ್ ಕಂಬಕ್ಕೆ ತೂಗುಹಾಕಿದ ಫ್ಲೆಕ್ಸ್ ಬ್ಯಾನರ್ ಕಡೆ ಹೋಯ್ತು. ಅರೇ ಮುಖ ಎಲ್ಲೋ ನೋಡಿದ ಹಾಗಿದೆಯಲ್ಲ ಅಂತ ಶ್ರೀಕಾಂತಗೂ ತೋರಿಸಿದೆ. ಶ್ರೀಕಾಂತ ಫೋಟೊ ನೋಡಿ, `ನೆನಪಾಗಲಿಲ್ಲವಾ, ಸರೀ ನೋಡು ಅಂದ್ರು'. ಕೆಲವೇ ದಿನಗಳ ಹಿಂದೆ ಕಣ್ಣು ಪರೀಕ್ಷೆ ಮಾಡಿಸಿ ಬಂದು ಡಾಕ್ಟರ್ `ಕಣ್ಣು ಪರ್ಫೆಕ್ಟ್' ಅಂದಿದ್ದು, ಖುಷಿಯಿಂದ ಮನೆಗೆ ಬಂದು ಅಮ್ಮ ತಮ್ಮನಿಗೆ ಫೋನ್‌ನಲ್ಲಿ ಸುದ್ದಿ ರವಾನಿಸಿದ್ದು ಎಲ್ಲ ನೆನಪಿಗೆ ಬಂದು, ಕಣ್ಣು ಉಜ್ಜಿಕೊಂಡು ಪುನಃ ನೋಡಿದೆ.

ಊಹೂಂ ಯಾರು ಅಂತ ಗೊತ್ತಾಗಲಿಲ್ಲ. ಶ್ರೀಕಾಂತ ಕಡೆ ಪ್ರಶ್ನಾರ್ಥಕವಾಗಿ ನೋಡಿದಾಗ, ಅವರು `ನಮ್ಮ ಹಳೆ ಇಸ್ತ್ರಿಯವಳು' ಅಂತ ಹೇಳಿ ಪುನಃ ಹಣ್ಣಿನ ಚೌಕಾಸಿಯಲ್ಲಿ ನಿರತರಾದರು. ಅರೇ ಹೌದಲ್ಲವೇ, ಐದು ವರ್ಷ ನನ್ನ ಕಾಟನ್ ಸೀರಿಗಳಿಗೆ ಸ್ಟಾರ್ಚ್, ಇಸ್ತ್ರಿ ವಗೈರೆ ಹಾಕಿ, ನಾನು ಆಫೀಸ್‌ಗೆ ಟಿಪ್ ಟಾಪ್ ಆಗಿ ಹೋಗುವಂತೆ ಮಾಡಿದವರು.., ಅಂತ ಪುನಃ ಫ್ಲೆಕ್ಸ್‌ನ ತೀರ ಹತ್ತಿರ ಹೋಗಿ ಕಣ್ಣು ಗುಡ್ಡೆ ಹೊರಬರುವಷ್ಟು ಕಣ್ಣನ್ನು ದೊಡ್ಡದಾಗಿಸಿ ನೋಡಿದೆ. ಅರೇ ಅವರು ತೀರಿ ಹೋಗಿರುವ ವಿಷಯ ಹಾಕಿದ್ದರು. ಇದೇನಿದು ಹೊಸ ಪರಿ ಅಂದುಕೊಳ್ಳುತ್ತಿರುವಾಗಲೇ ಶ್ರೀಕಾಂತ, ಅದು ಇತ್ತೀಚಿಗಿನ ಹೊಸ ಟ್ರೆಂಡು- ಸತ್ತು ಹೋಗಿರುವವರ ಚಿತ್ರ ಫ್ಲೆಕ್ಸ್‌ನಲ್ಲಿ ಪ್ರಿಂಟ್ ಹಾಕಿಸಿ ನೇತಾಕುವುದು- ಅಂದುಬಿಟ್ಟರು.

ಅರೇ ಇವರು ತೀರಿಕೊಂಡೇ ಬಿಟ್ರಾ ಅಂತ ಅವರ ಬಗ್ಗೆ ನೆನೆಸ್ತಾ ವಾಪಸ್ ಮನೆ ದಾರಿ ಹಿಡ್ಕೊಂಡ್ವಿ”. ಒಂದು ನೆನಪಿನೊಂದಿಗೆ ನಗರ ಬದುಕಿನ ಹೊಸ ಚಿತ್ರಗಳನ್ನೂ ಹಿಡಿದಿಡುವ ಪ್ರಯತ್ನವಾಗಿ ಇಸ್ತ್ರಿ ಅಜ್ಜಿಯ ಕಥೆ ಗಮನಸೆಳೆಯುತ್ತದೆ. ಇಂಥ ಕುತೂಹಲಕಾರಿ ಬರಹಗಳ ಜೊತೆಗೆ, ಪುಟ್ಟ ಪುಟ್ಟ ಕಥೆಗಳೂ ನಗೆ ತುಣುಕುಗಳೂ `ನೆನಪಿನ ಸಂಚಿ'ಯಲ್ಲಿವೆ. ತಮಗೆ ಇಷ್ಟವಾದ ಬರಹಗಳನ್ನು ಅಲ್ಲಿಂದ ಇಲ್ಲಿಂದ ಆರಿಸಿ ತಂದು ತಮ್ಮ ಸಂಚಿಯನ್ನು ಸಿಂಗರಿಸಿದ್ದಾರೆ.

ಅಡುಗೆ ಕುರಿತ ಬರಹಗಳು `ನೆನಪಿನ ಸಂಚಿ'ಯ ಮತ್ತೊಂದು ಆಸಕ್ತಿಕರ ಸರಕು. ಅನೇಕ ತಿನಿಸುಗಳನ್ನು ಮಾಡುವ ಬಗೆಯನ್ನು ಬ್ಲಾಗಿತಿ ಚಿತ್ರಸಹಿತ ವಿವರಿಸಿದ್ದಾರೆ. ಬಿಳಿ ಹೋಳಿಗೆ, ಹೀರೆಕಾಯಿ ಸಿಪ್ಪೆ ಚಟ್ನಿ, ಬಾಳೆ ಎಲೆ ಕಡುಬು, ಪೆಪ್ಪರ್ ರಸಂ, ದಾಳಿಂಬೆ ಕಡಿ, ರಾಜ್ಮಾ ರೈಸ್, ಬ್ರೆಡ್ ಪಲಾವ್- ಹೀಗೆ, ಸ್ವಾದಿಷ್ಟಕರ ತಿನಿಸುಗಳನ್ನು ತಯಾರಿಸುವ ವಿವರಗಳಿವೆ. ಈ ಕಾರಣಕ್ಕೂ ಮಾಲತಿ ಅವರ ಬ್ಲಾಗ್ ರುಚಿಕರ ಎನ್ನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT