ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂ ಫಿಲಂ: ಚಾನೆಲ್‌ಗಳ ವಿರುದ್ಧ ಪಿಐಎಲ್

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ಶಾಸಕರಾದ ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲ ವೀಕ್ಷಿಸಿದ ಅಶ್ಲೀಲ ಚಿತ್ರಗಳ ತುಣುಕುಗಳನ್ನು ಪ್ರಸಾರ ಮಾಡಿರುವ ಟಿವಿ ಚಾನೆಲ್‌ಗಳ ವಿರುದ್ಧ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಜೆ.ಪಳನಿವೇಲು ಎನ್ನುವವರು ಈ ಅರ್ಜಿ ಸಲ್ಲಿಸ್ದ್ದಿದಾರೆ. ಚಾನೆಲ್‌ಗಳು ಈ ದೃಶ್ಯಗಳನ್ನು ಪದೇ ಪದೇ ಪ್ರಸಾರ ಮಾಡುವ ಮೂಲಕ  ತಪ್ಪು ಎಸಗಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಅವರು ಕೋರಿದ್ದಾರೆ.

ದೃಶ್ಯಗಳನ್ನು ಪ್ರಸಾರ ಮಾಡಿದ ದಿನಾಂಕ, ವೇಳೆ ಇತ್ಯಾದಿಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಂತೆ ಅರ್ಜಿದಾರರಿಗೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿತು.

ಇದೇ ದೃಶ್ಯ ಏಕೆ?: `ಚಾನೆಲ್‌ಗಳು ಗಂಭೀರ ಸ್ವರೂಪದ ತಪ್ಪು ಎಸಗಿವೆ ಎಂದು ಅರ್ಜಿದಾರರು ವಿಚಾರಣೆ ವೇಳೆ ವಾದಿಸಿದರು. ಈ ಪ್ರವೃತ್ತಿ ಮಕ್ಕಳೂ ಸೇರಿದಂತೆ ಸಾರ್ವಜನಿಕರ ಮೇಲೆ ಕೆಟ್ಟ ಪರಿಣಾಮ ಬೀರುವಂತಹದು. ಯುವ ಜನಾಂಗವನ್ನು ತಪ್ಪು ಹಾದಿಗೆ ಎಳೆಯುವಂತಹದು~ ಎಂದು ಅವರು ತಿಳಿಸಿದರು.

ಅದಕ್ಕೆ ನ್ಯಾ.ಸೇನ್ ಅವರು, `ಇದಕ್ಕಿಂತಲೂ ಕೆಟ್ಟದಾದ ದೃಶ್ಯಗಳನ್ನು ಚಲನಚಿತ್ರಗಳಲ್ಲಿಯೂ ತೋರಿಸುತ್ತಾರಲ್ಲ. ಅದನ್ನೂ ಎಲ್ಲರೂ ವೀಕ್ಷಿಸುತ್ತಾರೆ. ಅಂತಹ ವಿಷಯಗಳಿಗೆ ಆಕ್ಷೇಪ ಎತ್ತದೆ, ಕೇವಲ ಇದಕ್ಕೆ ಆಕ್ಷೇಪಣೆ ಮಾಡಿರುವುದು ಏತಕ್ಕೆ~ ಎಂದು ವಕೀಲರನ್ನು ಪ್ರಶ್ನಿಸಿದರು.

ಘಟನೆ ನಡೆದ ದಿನ (ಫೆ.7) ಆಪಾದಿತ ಶಾಸಕರು ವೀಕ್ಷಣೆ ಮಾಡಿದ್ದಾರೆ ಎನ್ನಲಾದ ಯುವತಿಯೊಬ್ಬಳ ಅರೆನಗ್ನ ಚಿತ್ರವನ್ನು ಅರ್ಜಿಯಲ್ಲಿ ಅಡಕ ಮಾಡಲಾಗಿದೆ. ಅದನ್ನು ನೋಡಿದ ನ್ಯಾಯಮೂರ್ತಿಗಳು `ಇಂತಹ ವಸ್ತ್ರ ಉಟ್ಟ ಎಷ್ಟೋ ಯುವತಿಯರನ್ನು ದಿನವೂ ನೋಡುತ್ತೇವೆ ಅಲ್ಲವೆ~ ಎಂದು ಪ್ರಶ್ನಿಸಿದರು. ಅಂತೆಯೇ ಚಾನೆಲ್‌ಗಳ ವಿರುದ್ಧ ಕೋರ್ಟ್‌ಗೆ ಬರುವ ಬದಲು ಸೆನ್ಸಾರ್ ಮಂಡಳಿಗೆ ದೂರು ದಾಖಲಿಸಬಾರದೇಕೆ ಎಂದೂ ಪ್ರಶ್ನಿಸಿದರು.

ಯಾರ ಪರ ನೀವು? ಅದಕ್ಕೆ ಉತ್ತರಿಸಿದ ವಕೀಲರು, ಚಾನೆಲ್‌ಗಳ ವಿರುದ್ಧ ವಾದ ಮುಂದುವರಿಸಿದರು. ಆಗ ನ್ಯಾ.ಸೇನ್, `ನೀವು ಶಾಸಕರ ಪರವಾಗಿ ಇದ್ದೀರೋ ಅಥವಾ ಚಾನೆಲ್‌ಗಳ  ಪರವಾಗಿಯೋ~ ಎಂದು ಕೇಳಿದರು. ಆಗ ವಕೀಲರು `ಇಲ್ಲ, ಇಲ್ಲ ನಾವು ಶಾಸಕರ ಪರವಾಗಿ ಇಲ್ಲ. ಅವರು ಮಾಡಿದ್ದು ತಪ್ಪು~ ಎಂದರು. ಅದಕ್ಕೆ ನ್ಯಾಯಮೂರ್ತಿಗಳು `ಹಾಗಿದ್ದರೆ ಚಾನೆಲ್‌ಗಳ ವಿರುದ್ಧ ಈ ರೀತಿ ಆರೋಪ ಮಾಡುತ್ತಿರುವುದು ಏಕೆ~ ಎಂದರು.
ಅರ್ಜಿಯ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಲಾಯಿತು.

`ಘಟನೆ ನಡೆದ ಒಂದು ವಾರ ಪೂರ್ತಿ ಟಿವಿ ಚಾನೆಲ್‌ಗಳು ಅದನ್ನು ಪ್ರಸಾರ ಮಾಡಿವೆ. ಈ ದೃಶ್ಯಗಳನ್ನು ಪುನಃ ಪ್ರಸಾರ ಮಾಡದಂತೆ ಆದೇಶಿಸಲು ಈಗ ನೀವು ಕೋರಿದ್ದೀರಿ. ಅಂದರೆ ಪುನಃ ಅವರಿಗೆ ದೃಶ್ಯಗಳ ನೆನಪು ಮಾಡುವಂತೆ ಹೇಳಿದ ಹಾಗಿದೆ ನಿಮ್ಮ ಮನವಿ. ಒಂದು ವೇಳೆ ನಿಮಗೆ ದೃಶ್ಯ ವೀಕ್ಷಣೆ ಮಾಡಲು ಇಷ್ಟ ಇಲ್ಲದಿದ್ದರೆ ಟಿ.ವಿ. ನೋಡಬೇಡಿ. ಬೇಕಿದ್ದರೆ ಟಿ.ವಿ. ನೋಡಲು ನಿಮಗೆ ವೇಳೆ ಇರದ ಹಾಗೆ ನಾವು ಕೆಲಸ ಕೊಡುತ್ತೇವೆ~ ಎಂದು ನ್ಯಾಯಮೂರ್ತಿಗಳು ಚಟಾಕಿ ಹಾರಿಸಿದರು. ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಲಾಯಿತು.

ಸಭೆಗೆ ಪ್ರತಿಪಕ್ಷಗಳ ಗೈರು ಹಾಜರಿ

`ಬ್ಲೂ ಫಿಲಂ~ ಪ್ರಕರಣ ಕುರಿತು ತನಿಖೆ ನಡೆಸಲು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ರಚಿಸಿರುವ ವಿಚಾರಣಾ ಸಮಿತಿ ಬುಧವಾರ ಮೊದಲ ಸಭೆ ಸೇರಿತ್ತು. ಈ ಸಭೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗೈರುಹಾಜರಾಗಿದ್ದರು. ಮತ್ತೆ ಇದೇ 29ರಂದು ಸಮಿತಿ ಸಭೆ ಸೇರಲಿದೆ.

ಶಾಸಕ ಶ್ರೀಶೈಲಪ್ಪ ಬಿದರೂರು ಅಧ್ಯಕ್ಷತೆಯ ವಿಚಾರಣಾ ಸಮಿತಿಯಲ್ಲಿ ಬಿಜೆಪಿಯ ಎಸ್.ಆರ್.ವಿಶ್ವನಾಥ್, ಸುರೇಶಗೌಡ ಮತ್ತು ನೆಹರು ಓಲೇಕರ್ ಮಾತ್ರ ಭಾಗವಹಿಸಿದ್ದರು. ಇತರ ಸದಸ್ಯರಾದ ಕಾಂಗ್ರೆಸ್‌ನ ಡಾ.ಎಚ್.ಸಿ.ಮಹದೇವಪ್ಪ, ಅಮರೇಗೌಡ ಬಯ್ಯಾಪುರ ಮತ್ತು ಜೆಡಿಎಸ್‌ನ ದಿನಕರ ಶೆಟ್ಟಿ ಸಭೆಗೆ ಗೈರುಹಾಜರಾಗಿದ್ದರು.

ವಿಧಾನಸಭೆಯಲ್ಲಿ ಅಶ್ಲೀಲ ದೃಶ್ಯಾವಳಿ ನೋಡಿದ ಶಾಸಕರಾದ ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲ ಹಾಗೂ ಅವರಿಗೆ ಅಶ್ಲೀಲ ದೃಶ್ಯಾವಳಿ ಇದ್ದ ಮೊಬೈಲ್ ನೀಡಿದರು ಎನ್ನಲಾದ ಕೃಷ್ಣ ಪಾಲೆಮಾರ್ ಅವರ ವಿರುದ್ಧ ವಿಚಾರಣೆ ನಡೆಸಲು ಈ ಸಮಿತಿ ರಚಿಸಲಾಗಿದೆ.

ತಾವು ತಪ್ಪು ಎಸಗಿಲ್ಲ ಎಂದು ಈ ಮೂವರೂ ಸ್ಪೀಕರ್‌ಗೆ ಸಲ್ಲಿಸಿರುವ ವಿವರಣೆಯ ಪ್ರತಿಗಳನ್ನು ಸಮಿತಿ ವಶಕ್ಕೆ ತೆಗೆದುಕೊಂಡಿದೆ. ಪ್ರಕರಣ ಕುರಿತು ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಅವರು ಸಮಿತಿಗೆ ಮಾಹಿತಿ ನೀಡಿದರು.

ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ ವಿಡಿಯೊ ತುಣುಕುಗಳನ್ನು ಸಮಿತಿಯ ಸದಸ್ಯರು ಇದೇ 29ರಂದು ನಡೆಯುವ ಸಭೆಯಲ್ಲಿ ವೀಕ್ಷಿಸಲಿದ್ದಾರೆ. ವಿಧಾನಸಭೆ ಸಚಿವಾಲಯದ ಕ್ಯಾಮೆರಾಗಳು ಸೆರೆಹಿಡಿದಿರುವ ದೃಶ್ಯಾವಳಿಗಳನ್ನು ಮೊದಲು ನೋಡಲಾಗುವುದು. ನಂತರ ಖಾಸಗಿ ಟಿವಿ ಚಾನೆಲ್‌ಗಳಿಗೆ ನೋಟಿಸ್ ಕೊಟ್ಟು ಅವರಿಂದಲೂ ವಿವರಣೆ ಪಡೆಯಲು ಸಮಿತಿ ನಿರ್ಧರಿಸಿದೆ.

ನಿಯಮಗಳ ಪ್ರಕಾರ ಖಾಸಗಿ ಟಿ.ವಿ.ಗಳು ಸದನದ ಕಾರ್ಯ ಕಲಾಪಗಳನ್ನು ಪ್ರಸಾರ ಮಾಡಲು ಸ್ಪೀಕರ್ ಅವರಿಂದ ಅನುಮತಿ ಪಡೆಯಬೇಕು. ಎಷ್ಟು ಟಿ.ವಿ ಸಂಸ್ಥೆಗಳು ಅನುಮತಿ ಪಡೆದಿವೆ ಎಂಬುದರ ಬಗ್ಗೆಯೂ ಮಾಹಿತಿ ನೀಡುವಂತೆ ಸಮಿತಿ ಅಧಿಕಾರಿಗಳಿಗೆ ಸೂಚಿಸಿದೆ. ಇಷ್ಟೇ ಅಲ್ಲದೆ, ಕಲಾಪಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯಗಳನ್ನು ಪ್ರಸಾರ ಮಾಡಬೇಕಿದ್ದರೂ ಟಿವಿ ಚಾನೆಲ್‌ಗಳು ಸ್ಪೀಕರ್ ಅನುಮತಿ ಪಡೆಯಬೇಕು. ಬ್ಲೂ ಫಿಲಂ ಪ್ರಕರಣದಲ್ಲಿ ಈ ನಿಯಮವನ್ನು ಚಾನೆಲ್‌ಗಳು ಅನುಸರಿಸಿವೆಯೇ ಎಂಬುದರ ಬಗ್ಗೆಯೂ ಮಾಹಿತಿ ನೀಡುವಂತೆ ಸಮಿತಿ, ಅಧಿಕಾರಿಗಳಿಗೆ ಸೂಚಿಸಿದೆ.

ಅಶ್ಲೀಲ ದೃಶ್ಯಾವಳಿಯ ಹಿನ್ನೆಲೆ, ಮೂಲ ಮತ್ತು ಅದು ಎಲ್ಲಿಂದ ಬಂದಿದೆ? ಟಿ.ವಿ.ಗಳಲ್ಲಿ ಪ್ರಸಾರವಾದ ವಿಡಿಯೊ ತುಣುಕುಗಳು ನಿಜಕ್ಕೂ ಆ ಮೊಬೈಲ್‌ನಲ್ಲಿ ಇದ್ದವೇ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಶ್ರೀಶೈಲಪ್ಪ, `ಸದನದ ಘನತೆ ಕಾಪಾಡುವ ಉದ್ದೇಶದಿಂದ ಪ್ರತಿಪಕ್ಷಗಳ ಸದಸ್ಯರು ಸಮಿತಿಯ ಸಭೆಗಳಲ್ಲಿ ಭಾಗವಹಿಸಬೇಕು~ ಎಂದು ಹೇಳಿದರು. ಮುಂದಿನ ಸಭೆ ಇದೇ 29ರಿಂದ ಮೂರು ದಿನಗಳ ಕಾಲ ನಿರಂತರವಾಗಿ ನಡೆಯಲಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT