ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂ ಫಿಲಂ ಹಗರಣ: ಪರಿಷತ್ ಕಲಾಪಕ್ಕೂ ಭಂಗ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬ್ಲೂ ಫಿಲಂ~ ವಿವಾದ ಗುರುವಾರ ವಿಧಾನ ಪರಿಷತ್ ಕಲಾಪವನ್ನೂ ಕಾಡಿತು. ಇದರಿಂದ ಉದ್ಭವಿಸಿದ ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು. ಈ ಬೆಳವಣಿಗೆಯ ಬೆನ್ನಲ್ಲೇ ಪ್ರತ್ಯೇಕ ನಿಯೋಗಗಳಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು, ಸರ್ಕಾರವನ್ನು ವಜಾ ಮಾಡುವಂತೆ ಒತ್ತಾಯಿಸಿದರು.

ವಿಧಾನ ಪರಿಷತ್‌ನಲ್ಲಿ ಬೆಳಿಗ್ಗೆ 11.25ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಪತಿ ಪೀಠದ ಎದುರಿಗೆ ಬಂದು ಧರಣಿ ಆರಂಭಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು, ಮೂವರು ಸಚಿವರ ಹಠಾತ್ ರಾಜೀನಾಮೆ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. `ಮೊದಲು ಪ್ರಶ್ನೋತ್ತರ ಕಲಾಪ ನಡೆಸೋಣ. ನಂತರ ನಿಮ್ಮ ಬೇಡಿಕೆ ಕುರಿತು ಪರಿಶೀಲಿಸುತ್ತೇನೆ. ಈಗ ಎಲ್ಲರೂ ಸ್ವಸ್ಥಾನಕ್ಕೆ ಮರಳಿ ಸಹಕರಿಸಿ~ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಹಲವು ಬಾರಿ ಮನವಿ ಮಾಡಿದರು.

ದಿನದ ಕಲಾಪ ಪಟ್ಟಿ ಪ್ರಕಾರ ಪ್ರಶ್ನೋತ್ತರ ಆರಂಭಿಸುವಂತೆ ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು. ಆದರೆ, `ಬ್ಲೂ ಫಿಲಂ~ ವಿವಾದವನ್ನು ಪ್ರಸ್ತಾಪಿಸಿದ ವಿರೋಧಪಕ್ಷದ ನಾಯಕಿ ಮೋಟಮ್ಮ, ಉಪನಾಯಕ ಎಸ್.ಆರ್.ಪಾಟೀಲ್, ವಿ.ಆರ್.ಸುದರ್ಶನ್ ಮತ್ತಿತರರು, ನಿಲುವಳಿ ಸೂಚನೆ ಮಂಡನೆ ಬಳಿಕವೇ ಇತರೆ ಕಲಾಪ ನಡೆಸಬೇಕು. ಕಲಾಪ ಪಟ್ಟಿಯಲ್ಲಿರುವ ವಿಷಯಗಳಿಗಿಂತ ತಾವು ಪ್ರಸ್ತಾಪಿಸಿರುವ ವಿಚಾರ ಗಂಭೀರವಾದುದು ಎಂದು ಪಟ್ಟು ಹಿಡಿದರು.
 
ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭಾಪತಿಯವರು ಅರ್ಧ ಗಂಟೆ ಕಾಲ ಸದನವನ್ನು ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗಲೂ ಗದ್ದಲ ಮುಂದುವರಿಯಿತು. ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಧರಣಿ ಮುಂದುವರಿಸಿದರು. ಆಡಳಿತ ಮತ್ತು ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಹೆಚ್ಚುತ್ತಲೇ ಹೋಯಿತು.

`ಬುಧವಾರವೇ ಈ ಬಗ್ಗೆ ಚರ್ಚೆಗೆ ಅವಕಾಶ ಕೋರಿದ್ದೆವು. ನೋಟಿಸ್ ನೀಡದ ಕಾರಣದಿಂದ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನೀವು (ಸಭಾಪತಿ) ಹೇಳಿದ್ದಿರಿ. ಆದರೆ, ಈ ದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಒಟ್ಟಾಗಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದ್ದೇವೆ. ವಿಧಾನ ಮಂಡಲದ ಘನತೆಯನ್ನು ರಕ್ಷಿಸುವ ದೃಷ್ಟಿಯಿಂದ ನಮ್ಮ ಬೇಡಿಕೆಯನ್ನು ಒಪ್ಪಿ    ಕೊಳ್ಳಿ~ ಎಂದು ಮೋಟಮ್ಮ, ಸುದರ್ಶನ್ ಮತ್ತು ಜೆಡಿಎಸ್‌ನ ವೈಎಸ್‌ವಿ ದತ್ತ ಒತ್ತಾಯಿಸಿದರು. ಒಂದೆಡೆ ಪ್ರತಿಪಕ್ಷಗಳ ಒತ್ತಾಯ, ಸರ್ಕಾರದ ವಿರುದ್ಧ ಘೋಷಣೆ. ಮತ್ತೊಂದೆಡೆ ಆಡಳಿತ ಪಕ್ಷದ ಸದಸ್ಯರ ಪ್ರತಿರೋಧ. ಸದನದಲ್ಲಿ ಕೋಲಾಹಲವೇ ಸೃಷ್ಟಿಯಾಯಿತು. 
 
ಈ ನಡುವೆಯೇ ಎದ್ದುನಿಂತ  ಸಿಎಂ ಡಿ.ವಿ.ಸದಾನಂದ ಗೌಡ ಅವರು, `ಶಾಸನಸಭೆಗೆ ತನ್ನದೇ ಆದ ಮಹತ್ವವಿದೆ. ಸಭೆಯನ್ನು ಸಮರ್ಪಕವಾಗಿ ನಡೆಸುವ ವಿಷಯದಲ್ಲಿ ಆಳುವ ಪಕ್ಷ ಮಾತ್ರವೇ ಜವಾಬ್ದಾರವಲ್ಲ. ವಿರೋಧ ಪಕ್ಷಗಳು ಕೂಡ ಸಹಕಾರ ನೀಡಬೇಕು. ಈ ವಿಷಯದಲ್ಲಿ ಪ್ರತಿಪಕ್ಷಗಳ ವರ್ತನೆ ಗೌರವ ತರುವಂತಹದ್ದಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೆ ಕೋಲಾಹಲ ಸೃಷ್ಟಿಯಾಯಿತು.

ಪರಿಸ್ಥಿತಿ ಹತೋಟಿಗೆ ಬರುವ ಸಾಧ್ಯತೆ ಕಡಿಮೆ ಇರುವುದನ್ನು ಗಮನಿಸಿದ ಸಭಾಪತಿಯವರು, ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ್ದ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕರಿಸುವ ಪ್ರಸ್ತಾವ ಮಂಡಿಸುವಂತೆ ಮುಖ್ಯಮಂತ್ರಿಯವರಿಗೆ ಸೂಚಿಸಿದರು. ಈ ಸಂಬಂಧ ಹೇಳಿಕೆಯನ್ನು ಓದಿದ ಸದಾನಂದಗೌಡ ಅವರು, ನಿರ್ಣಯ ಮಂಡಿಸಿದರು. ಗದ್ದಲದ ನಡುವೆಯೇ ನಿರ್ಣಯ ಅಂಗೀಕರಿಸಲಾಯಿತು. ತಕ್ಷಣ , ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುತ್ತಿರುವುದಾಗಿ ಸಭಾಪತಿ ಪ್ರಕಟಿಸಿದರು.

ಕಳಂಕಿತ ಮಾಜಿ ಸಚಿವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷ, ಕಾಂಗ್ರೆಸ್ ಸಮಿತಿ ಇತರರು ಧರಣಿ ನಡೆಸಿದರು.

ಸಂಪಾದಕೀಯ ಓದಿದರು

ಆಡಳಿತ ಪಕ್ಷದ ಸಾಲಿನಿಂದ ಮುಖ್ಯಮಂತ್ರಿಯವರು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸ್ವೀಕರಿಸುವ ಸಂಬಂಧ ಹೇಳಿಕೆ ನೀಡುತ್ತಿದ್ದರೆ ವಿರೋಧ ಪಕ್ಷದ ಸಾಲಿನಿಂದ ಮೋಟಮ್ಮ ಅವರು ಎದ್ದುನಿಂತು, `ನಾನೂ ಓದುತ್ತೇನೆ~ ಎಂದು `ಬ್ಲೂ ಫಿಲಂ~ ವೀಕ್ಷಣೆ ಖಂಡಿಸಿ `ಪ್ರಜಾವಾಣಿ~ಯಲ್ಲಿ ಗುರುವಾರ ಪ್ರಕಟವಾದ ಸಂಪಾದಕೀಯ ಓದಿದರು. ಸದಾನಂದ ಗೌಡರು ಹೇಳಿಕೆ ನೀಡುವ ಅವಧಿಯುದ್ದಕ್ಕೂ ಇವರು ಸಂಪಾದಕೀಯ ಓದುತ್ತಾ ಸರ್ಕಾರವನ್ನು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT