ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೇರ್- ಗಡಾಫಿ ಗೌಪ್ಯ ಭೇಟಿ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್, (ಪಿಟಿಐ):  ಸ್ಕಾಟಿಷ್ ಜೈಲಿನಿಂದ ಬಾಂಬ್ ದಾಳಿಕೋರ ಅಬ್ಡೆಲ್ ಬಸೆಟ್ ಅಲ್ ಮೆಗ್ರಾಹಿಯನ್ನು ಬಿಡುಗಡೆ ಮಾಡುವ ಒಂದು ತಿಂಗಳ ಮೊದಲು ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರು ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯನ್ನು ಎರಡು ಬಾರಿ ಗೌಪ್ಯವಾಗಿ ಭೇಟಿ ಮಾಡಿದ್ದ ವಿಷಯ ಈಗ ಬಹಿರಂಗಗೊಂಡಿದೆ.

2007ರ ಜೂನ್‌ನಲ್ಲಿ ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದ ಬ್ಲೇರ್ ಅವರು 2008ರ ಜೂನ್ ಮತ್ತು 2009ರ ಏಪ್ರಿಲ್‌ನಲ್ಲಿ ಗಡಾಫಿ ಅವರ ವೆಚ್ಚದಲ್ಲಿ ಲಿಬಿಯಾಕ್ಕೆ ಭೇಟಿ ನೀಡಿದ್ದರು.

ಮೆಗ್ರಾಹಿಯನ್ನು ಜೈಲಿನಿಂದ ಬಿಡುಗಡೆ ಮಾಡದಿದ್ದರೆ ಬ್ರಿಟನ್ ಜತೆಗಿನ ಎಲ್ಲ ವ್ಯವಹಾರ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಗಡಾಫಿ ಎದರಿಕೆ ಹಾಕಿದ್ದರು ಎಂದು ಸಂಡೆ ಟೆಲಿಗ್ರಾಫ್ ಪತ್ರಿಕೆಯು ಇ-ಮೇಲ್ ಮತ್ತು ಪತ್ರವ್ಯವಹಾರಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಗಡಾಫಿ ಅವರ ಖಾಸಗಿ ಜೆಟ್ ವಿಮಾನದಲ್ಲಿ ಬ್ಲೇರ್ ಅವರು ಎರಡು ಬಾರಿ ಗೌಪ್ಯವಾಗಿ ಲಿಬಿಯಾಕ್ಕೆ ಪ್ರಯಾಣ ಮಾಡಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.

1988ರ ಡಿಸೆಂಬರ್ 21ರಂದು ಮೆಗ್ರಾಹಿ ಲಾಕರ್‌ಬಿಯಲ್ಲಿ ಪಾನ್ ಆಮ್ ವಿಮಾನವನ್ನು ಬಾಂಬ್ ಇಟ್ಟು ಸ್ಫೋಟಿಸಿ 270 ಜನರ ಸಾವಿಗೆ ಕಾರಣನಾಗಿದ್ದಾನೆ. ಹಾಗಿದ್ದರೂ ಬ್ಲೇರ್ ಅವರು ಗಡಾಫಿಯನ್ನು ಖಾಸಗಿಯಾಗಿ ಭೇಟಿ ಮಾಡಿ ಮೆಗ್ರಾಹಿಯನ್ನು ಬಿಡುಗಡೆ ಮಾಡಿಸಲು ಸಂಧಾನ ನಡೆಸಿದ್ದು ನಮಗೆಲ್ಲರಿಗೂ ಭಾರಿ ನೋವು ಉಂಟು ಮಾಡಿದೆ ಎಂದು ಬಾಂಬ್ ದಾಳಿಯಲ್ಲಿ ಸಹೋದರನನ್ನು ಕಳೆದುಕೊಂಡ ಪಾಮ್ ಡಿಕ್ಸ್ ಅವರು ತಿಳಿಸಿದ್ದಾರೆ.

ಈ ಇಬ್ಬರ ಮಧ್ಯೆ ಏನು ಮಾತುಕತೆ ನಡೆದಿತ್ತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ಬ್ರಿಟನ್‌ನಲ್ಲಿ ನಡೆದ ಅತಿ ದೊಡ್ಡ ಭಯೋತ್ಪಾದಕ ಕೃತ್ಯ ಎಂದೇ ಬಣ್ಣಿಸಲಾಗಿರುವ ವಿಮಾನ ಸ್ಫೋಟದ ಆರೋಪಿ ಮೆಗ್ರಾಹಿಯನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಬ್ಲೇರ್ ಅವರು ಗಡಾಫಿಯನ್ನು ಭೇಟಿ ಮಾಡಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮೆಗ್ರಾಹಿ ಜೀವಂತವಾಗಿರುವುದು ಇನ್ನು ಕೇವಲ ಮೂರು ತಿಂಗಳು ಎಂದು ವೈದ್ಯರು ತಿಳಿಸಿದ್ದ ಹಿನ್ನೆಲೆಯಲ್ಲಿ 2009ರ ಆಗಸ್ಟ್‌ನಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು.

ಸ್ಕಾಟಿಷ್ ಆಡಳಿತದ ನಿರ್ಧಾರದಿಂದ ಮೆಗ್ರಾಹಿಯನ್ನು ಬಿಡುಗಡೆ ಮಾಡಲಾಗಿದೆಯೇ ವಿನಾ ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಬ್ಲೇರ್ ಅವರು ಆಪಾದನೆಯನ್ನು ತಳ್ಳಿಹಾಕಿದ್ದಾರೆ.

ಟ್ರಿಪೋಲಿಯಲ್ಲಿರುವ ಬ್ರಿಟನ್ ರಾಯಭಾರಿ, ಲಂಡನ್‌ನಲ್ಲಿ ಲಿಬಿಯಾ ರಾಯಭಾರಿಗೆ ಬ್ಲೇರ್  ಕಳುಹಿಸಿರುವ ಇ-ಮೇಲ್ ಮತ್ತು ಪತ್ರಗಳ ಬಗ್ಗೆ ಈಗ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಬ್ಲೇರ್ ಅವರು ಮಧ್ಯಪ್ರಾಚ್ಯ ದೇಶಗಳ ಶಾಂತಿದೂತನ ಪಾತ್ರ ವಹಿಸಿಕೊಂಡು ಏನೆಲ್ಲಾ ವ್ಯವಹಾರ ನಡೆಸಿರಬಹುದು ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.

ಆದರೆ ಬ್ಲೇರ್ ಅವರ ವಕ್ತಾರರು ಎಲ್ಲಾ ಆಪಾದನೆಗಳನ್ನು ನಿರಾಕರಿಸಿದ್ದು, ಲಿಬಿಯಾದ ಯಾವುದೇ ವಾಣಿಜ್ಯ ಸಂಬಂಧಿ ಕಂಪೆನಿಗಳ ಜತೆ ಸಂಪರ್ಕ ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT