ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲ್ಯಾಕ್‌ಬೆಲ್ಟ್ 10ನೇ ಡಾನ್ ಗ್ರೇಡ್ ಗುರಿ

Last Updated 17 ಅಕ್ಟೋಬರ್ 2012, 5:15 IST
ಅಕ್ಷರ ಗಾತ್ರ

ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್ 10ನೇ ಡಾನ್ ಗ್ರೇಡ್ ಅಂತಿಮ ಹಂತ. ಇದನ್ನು ಪಡೆದವರು ವಿರಳ. ಈ ಹಂತ ತಲುಪಬೇಕು ಎಂಬ ಛಲ    ಮಧುಗಿರಿ ಪ್ರತಿಭಾನ್ವಿತ ಕರಾಟೆ ಪಟು ಎಂ.ಎಸ್.ಮಹೇಶ್ ಅವರದ್ದು.

ಹನ್ನೊಂದರ ಹರೆಯದಲ್ಲೇ ಕರಾಟೆ `ಪಟ್ಟು~ ಕಲಿಯಲು ಮುಂದಾದ ಮಹೇಶ್ ಹಿಂತಿರುಗಿ ನೋಡಿಲ್ಲ. ಗುರಿ ಸಾಧಿಸುವ ದೃಢ ನಿರ್ಧಾರದಿಂದ ಕಠಿಣ ಪ್ರಯತ್ನದಲ್ಲಿ ನಿರತ. ಇದರ ಜತೆ ನೂರಕ್ಕೂ ಅಧಿಕ ಮಕ್ಕಳಿಗೆ ಶಿರಾ, ಮಧುಗಿರಿಯಲ್ಲಿ ಕರಾಟೆ ಪಟ್ಟುಗಳನ್ನು ಹೇಳಿಕೊಡುತ್ತಿರುವ ಗುರು. ಆಯುಧಗಳ ಬಳಕೆಯಲ್ಲಿ ಪ್ರವೀಣ.

ವಾಣಿಜ್ಯ ಪದವೀಧರರಾದ ಮಹೇಶ್ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆ ಪ್ರದರ್ಶಿಸಿದ ಪ್ರತಿಭಾನ್ವಿತ. ಆರನೇ ತರಗತಿಯಲ್ಲಿ ವ್ಯಾಸಂಗ ನಿರತರಾಗಿದ್ದಾಗಲೇ ಕರಾಟೆ ಅಭ್ಯಾಸಕ್ಕೆ ಪಾದರ್ಪಣೆ ಮಾಡಿ, ಬ್ಲಾಕ್‌ಬೆಲ್ಟ್‌ನ 2ನೇ ಡಾನ್ ಗ್ರೇಡ್ ಪಡೆದಿದ್ದಾರೆ.

ಮಧುಗಿರಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಡಿ ದರ್ಜೆ ನೌಕರನಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಶಿವಣ್ಣ- ಮಂಜುಳಾದೇವಿ ಪುತ್ರ. ಸೋಟೋಖಾನ್, ಸುಟೋರಿಯಾ ಶೈಲಿ ಕರಾಟೆಯಲ್ಲಿ ನಿಪುಣ. ಎದುರಾಳಿಗಳನ್ನು ಚಾಣಾಕ್ಷ್ಯತನದಿಂದ ಸೋಲಿಸುವ ಚತುರ.

`ಪ್ರಾಥಮಿಕ ಶಾಲೆಯಲ್ಲಿ ಕಬಡ್ಡಿ, ಶಾಟ್‌ಪುಟ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ. ತಂದೆ ಆಸೆಯಂತೆ ಕರಾಟೆ ಶಾಲೆಗೆ ಸೇರಿದೆ. ಆರಂಭದಲ್ಲಿ ಆಸಕ್ತಿ ಕಡಿಮೆ. ಕರಾಟೆ ಮಹತ್ವ ತಿಳಿದು ಕಲಿಯಬೇಕೆಂಬ ಛಲ ಹುಟ್ಟಿತು.

ಸುಟೋಖಾನ್ ಶೈಲಿಯ ವೈಟ್‌ಬೆಲ್ಟ್‌ನಿಂದ ಬ್ರೌನ್‌ಬೆಲ್ಟ್ ನಾಲ್ಕನೇ ಹಂತದವರೆಗೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಲಿಲ್ಲ. ಸುಟೋರಿಯೋ ಶೈಲಿ ಕಲಿಯಲು ಸನ್‌ಸೈ (ಗುರು) ಚಂದ್ರಶೇಖರ್ ಮಾರ್ಗದರ್ಶನ ದೊರೆತ ನಂತರ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಬ್ಲಾಕ್‌ಬೆಲ್ಟ್ 10ನೇ ಗ್ರೇಡ್ ಪಡೆಯುವ ಗುರಿ ನನ್ನದು~ ಎನ್ನುತ್ತಾರೆ ಮಹೇಶ್.

ಬೆಂಗಳೂರಿನಲ್ಲಿ 2011ರಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನ ಬ್ಲ್ಯಾಕ್‌ಬೆಲ್ಟ್ ಹಿರಿಯರ ವಿಭಾಗದಲ್ಲಿ ಪ್ರಥಮ, ಬೆಂಗಳೂರು ವೆಲ್‌ಫೇರ್ ಅಸೋಶಿಯೇಷನ್ 2011ರಲ್ಲಿ ನಡೆಸಿದ ಪ್ರಥಮ ರಾಜ್ಯ ಮಟ್ಟದ ಮುಕ್ತ ಕರಾಟೆ ಕಥಾ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ, ಕುಬುಡು ಸ್ಪರ್ಧೆಯಲ್ಲಿ ಪ್ರಥಮ, ದೇವನಹಳ್ಳಿ ಜೆಕ್ಯೂಕೆ ಮಾರ್ಷಲ್ ಆರ್ಟ್ಸ್ ನಡೆಸಿದ ಮೂರನೇ ಅಖಿಲ ಭಾರತ ಕುಮಿತ್ ಮತ್ತು ಕಥಾ ಚಾಂಪಿಯನ್‌ಶಿಪ್-2011ರ 18 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಬೆಂಗಳೂರು ಅಶೋಕ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ನಡೆಸಿದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ (ಎದುರಾಳಿ ಇರಾನ್ ದೇಶದ ಕರಾಟೆ ಪಟು), ಹೈದರಾಬಾದ್‌ನಲ್ಲಿ ನಡೆದ ಎಂಟನೇ ಆಂಧ್ರಪ್ರದೇಶ ಜಪಾನ್ ಸೂಟೋಖಾನ್ ಕರಾಟೆ ಕನ್ನಿನ್ ಜುಕೋ ಚಾಂಪಿಯನ್‌ಶಿಪ್-2012ರ ಕಥಾ ಸ್ಪರ್ಧೆಯಲ್ಲಿ ಪ್ರಥಮ, ಬೆಂಗಳೂರು ಶೈಬುಡೂಕಾಯ್ ಮಾರ್ಷಲ್ ಆರ್ಟ್ಸ್ ಫೆಸ್ಟ್-2012ರ 9ನೇ ಅಖಿಲ ಭಾರತ ಕಥಾ ಮತ್ತು ಕುಮಿತ್ ಚಾಂಪಿಯನ್‌ಶಿಪ್‌ನ ಕಥಾ ಸ್ಪರ್ಧೆಯಲ್ಲಿ ದ್ವಿತೀಯ, ವಿಜಯವಾಡ ಶಾಂಕುಕಾಯ್ ಕರಾಟೆ ಡೊ ಅಸೋಶಿಯೇಷನ್ ಆಫ್ ಇಂಡಿಯಾ ನಡೆಸಿದ ಒಂಬತ್ತನೇ ಆಂಧ್ರಪ್ರದೇಶ ರಾಜ್ಯ ಮಟ್ಟದ ಆಹ್ವಾನಿತ ಶಾಲಾ-ಕಾಲೇಜು ಕರಾಟೆ ಚಾಂಪಿಯನ್‌ಶಿಪ್-2012ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹಿರಿಮೆ.

ಪುಣೆಯಲ್ಲಿ ನಡೆದ ಏಳನೇ ಎನ್‌ಕೆಎಫ್‌ಐ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್-2011ರ ಸ್ಪರ್ಧೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ ಪಾಲ್ಗೊಂಡ ಹೆಮ್ಮೆ ಈತನದ್ದು. ಸಾಧನೆ ಗಮನಿಸಿ ತಾಲ್ಲೂಕು ಆಡಳಿತ 2011ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT