ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರಲ್ಲಿ ಶ್ರೀ ಮಂಜುನಾಥನ ವಿನಂತಿ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಧರ್ಮಸ್ಥಳದಲ್ಲಿ ನಾನು ನನ್ನ ಪ್ರಾಮಾಣಿಕ ಭಕ್ತರುಗಳ ಅಳಲುಗಳು, ಸಂಕಟಗಳು, ನೋವುಗಳು ಇವುಗಳನ್ನು ಹಂಚಿಕೊಂಡು ಯುಗಗಳಿಂದ ನೆಲೆಸಿದ್ದೇನೆ. ಜೊತೆಗೇ, ಹುಟ್ಟಿದ ಮಕ್ಕಳ ನಾಮಕರಣ, ವಿವಾಹಗಳು, ವೃದ್ಧರ ವೈವಾಹಿಕ ಜೀವನದ ವರ್ಧಂತಿಗಳ ಸಂತೋಷ, ಸಂಭ್ರಮ ಗಳಲ್ಲಿ ಪಾಲ್ಗೊಳ್ಳುವುದೂ ನನ್ನ ಅತಿ ಸವಿಯಾದ ಅನುಭವಗಳು.

ನೋವಿನಲ್ಲಾಗಲೀ, ಉಕ್ಕುವ ಸಂಭ್ರಮ ದಲ್ಲಿಯಾಗಲಿ ನನ್ನ ಭಕ್ತರುಗಳ ದೂರುಗಳೇ ಹೊರಡದೆ ತಮ್ಮ ಕಣ್ಣುಗಳಲ್ಲೇ ಎಲ್ಲ ಭಾವಗಳನ್ನೂ ಬಿಂಬಿಸುವುದನ್ನು ನೋಡಿ ನಾನು ರೋಮಾಂಚಿತನಾಗಿದ್ದೇನೆ. ಪರಿಹಾರಗಳು, ಸಾಂತ್ವನಗಳು, ಶುಭ ಹಾರೈಕೆಗಳೂ ನನ್ನ ಭಕ್ತರಿಗೆ ಸಲ್ಲಿಸುವುದಕ್ಕಾಗಿಯೇ ನಾನು ಧರ್ಮಸ್ಥಳದಲ್ಲಿ ನನ್ನ ವಾಸಸ್ಥಾನ ಮಾಡಿಕೊಂಡಿರುವುದು.

ಆದರೆ ಈಗ ನನಗೆ ಮನಸ್ಸು ಕಸಿವಿಸಿಗೊಳ್ಳುವ ಸಂದರ್ಭ ಸೃಷ್ಟಿಯಾಗಿದೆ. ಕರ್ನಾಟಕದ ಮಾಜಿ, ಹಾಲಿ ಮುಖ್ಯಮಂತ್ರಿ ಗಳು ನನ್ನ ಸಮ್ಮುಖದಲ್ಲಿ ಆಣೆ ಪ್ರಮಾಣಗಳನ್ನು ಮಾಡಿ ನನ್ನನ್ನು ಸಾಕ್ಷಿಯನ್ನಾಗಿ ಮಾಡುವ ಯೋಜನೆ ಹಾಕಿ ಕೊಂಡಿದ್ದಾರೆ.
 
ತಮ್ಮ ವೈಯಕ್ತಿಕ ಪ್ರತಿಷ್ಠೆಗಳು, ಪರಸ್ಪರ ದ್ವೇಷಾಸೂಯೆಗಳು, ಅಧಿಕಾರ ಲಾಲಸೆ, ಇವುಗಳಲ್ಲಿ ಮುಳುಗಿರುವ ಈ ನಾಯಕರುಗಳಿಗೆ ಮನಸ್ಸಾಕ್ಷಿಗಳೆಂಬುದು ಸರ್ವಥಾ ಶೂನ್ಯವಾಗಿದ್ದು, ನನ್ನ ಹೆಸರನ್ನು ಮತ್ತು ಈ ಸ್ಥಳವನ್ನು ದುರ್ಬಳಕೆ ಮಾಡಿಕೊಳ್ಳ ಹೊರಟಿದ್ದಾರೆ. ಇವರುಗಳ ಹಾದಿಬೀದಿ ವ್ಯಾಜ್ಯಗಳನ್ನು ನನ್ನ ಆಲಯಕ್ಕೂ ತಂದು ನನ್ನನ್ನು ಬೀದಿಗೆ ಎಳೆಯುವ ಹುನ್ನಾರ ನಡೆಸಿದ್ದಾರೆ.

ಇದು ನನಗಾಗಲಿ, ನನ್ನ ಭಕ್ತರಿಗಾಗಲಿ ತಿಳಿಯಲಾರದು ಎಂಬ ಅಹಂಕಾರದಲ್ಲಿ ಬೀಗುತ್ತಿದ್ದಾರೆ. ನನ್ನ ಬಳಿ ಬರುವುದರ ಬದಲು ತಮ್ಮಗಳನ್ನು ಚುನಾಯಿಸಿದ ಜನಗಳನ್ನು ಲಕ್ಷಾಂತರ ಸೇರಿಸಿ ಅರಮನೆಯ ಮೈದಾನದಲ್ಲಿಯೋ ಅಥವಾ ವಿಧಾನಸೌಧದ ಎದುರೋ ತಮ್ಮ ಪ್ರಮಾಣ ಗಳನ್ನು ಮಾಡಬಹುದು ಎಂದು ನನ್ನ ಸಲಹೆ.ಆದ್ದರಿಂದ, ನನ್ನ ನಿಜವಾದ ಮುಗ್ಧ, ಶುದ್ಧ, ಪ್ರಾಮಾಣಿಕ ಭಕ್ತರುಗಳಿಗೆ ತುಂಬ ತೊಂದರೆಯಾಗುತ್ತದೆಂದು ಗೊತ್ತಿದ್ದರೂ, ಒಂದು ನಿರ್ಧಾರಕ್ಕೆ ಬಂದಿದ್ದೇನೆ. 26ನೇ ತಾರೀಖಿನಿಂದ 28 ರವರೆವಿಗೆ ನಾನು ಧರ್ಮಸ್ಥಳವನ್ನು ಬಿಟ್ಟು ಮೂರು ನಾಲ್ಕು ದಿವಸ ಹಿಮಾಲಯದಲ್ಲಿದ್ದು ಬಿಡುತ್ತೇನೆ.

ನನ್ನ ಭಕ್ತರುಗಳು ಇದನ್ನು ಗಮನಿಸಿ, ಆ ಮೂರು ನಾಲ್ಕು ದಿನ ಧರ್ಮಸ್ಥಳಕ್ಕೆ ಬರುವ ಕಾರ್ಯಕ್ರಮವಿದ್ದರೆ ರದ್ದುಗೊಳಿಸಬೇಕೆಂದು ವಿನಂತಿಸುತ್ತೇನೆ.ಹಾಗೆಂದು ಈಗಾ ಗಲೇ ಹೊರಟುಬಿಟ್ಟಿರುವವರು `ಹೇಗಿದ್ದರೂ ಉಡುಪಿ ಹತ್ತಿರದಲ್ಲಿಯೇ ಇದೆ, ಅಲ್ಲಿ ಕೃಷ್ಣದರ್ಶನ ಮಾಡಿ ಹೋಗೋಣ~ ಎಂದು ಅತ್ತ ಪಯಣಿಸಬೇಡಿ.

ಉಡುಪಿಯಲ್ಲಿ ಕೃಷ್ಣನೂ ಆ ಸಮಯದಲ್ಲಿ ಇರುವುದು ಖಚಿತವಿಲ್ಲ. ಅವನು ಅಕಸ್ಮಾತ್ ಇದ್ದು, ಈ ಮಾಜಿ, ಹಾಲಿಗಳು ಅಲ್ಲಿಗೂ ಹೋದರೆ, ಅವರಿಗೆ ಭಗವದ್ಗೀತೆ ಬೋಧಿಸಿ ಪಾವನವನ್ನಾಗಿ  ಮಾಡಲು ಇವರುಗಳೇನು ಅರ್ಜುನರಲ್ಲವಲ್ಲ. ಉತ್ತರ ಕುಮಾರರಿಂದ ತಪ್ಪಿಸಿಕೊಳ್ಳಲೇ ಕೃಷ್ಣ ದ್ವಾರಕೆಗೆ ಹೊರಡುವ ಸೂಚನೆಯಿದೆ.ಹೀಗೆ ನನ್ನ ಕೈಮೀರಿದ ಸಂದರ್ಭ ಗಳಿಂದಾಗಿ ನನ್ನ ಭಕ್ತರಿಗೆ ಆಗುತ್ತಿರುವ ಅನನುಕೂಲಕ್ಕೆ ನನಗೆ ಬೇಸರವಿದೆ.
 ಇತಿ ನಿಮ್ಮ ಭಕ್ತಿಯ,
 ಧರ್ಮಸ್ಥಳದ ಮಂಜುನಾಥ.
 (ಈ ವಿನಂತಿಯ ನಕಲು ಮಾಡಿಕೊಂಡವರು:ಜಿ.ಕೆ. ಗೋವಿಂದರಾವ್, ಬೆಂಗಳೂರು)

ನ್ಯಾಯಾಲಯವನ್ನೇ ಅಣಕಿಸುವ ಆಣೆ
ದೇಶದ ಪ್ರಜಾಪ್ರಭುತ್ವ ತನ್ನದೇ ಆದ ಸಂವಿಧಾನವನ್ನು ಹೊಂದಿ ಪ್ರತಿಯೊಬ್ಬರೂ ಇದರಡಿಯಲ್ಲಿ ಕರ್ತವ್ಯವನ್ನು ನಿರ್ವಹಿಸಬೇಕಾಗಿರುವುದು ಸರಿಯಷ್ಟೆ. ಯಾವುದೇ ಒಬ್ಬ ವ್ಯಕ್ತಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿನಿಧಿಗಳಾದಾಗ ಮತ್ತು ಅಧಿಕಾರದ ಗೌಪ್ಯತೆಯ ಪ್ರಮಾಣ ವಚನವನ್ನು ಸಂವಿಧಾನದ ಮೇಲೆ ಸ್ವೀಕರಿಸಿರುತ್ತಾರೆ.
ಯಾರೂ ಸಹ ಅದನ್ನು ಮೀರಿ ನಡೆಯುವಂತಿಲ್ಲ.

ದೇವರು, ಧರ್ಮ, ಆಣೆ, ಪ್ರಮಾಣ ಇವೆಲ್ಲವೂ ಸಹ ನಾಲ್ಕು ಗೋಡೆಗಳ ಮಧ್ಯೆ ಅವರ ವೈಯಕ್ತಿಕ ವಿಚಾರ ಗಳಾಗಿರುತ್ತವೆ. ಒಂದು ರಾಜ್ಯದ ಮುಖ್ಯಮಂತ್ರಿ  ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಜಾತ್ಯತೀತ ಧರ್ಮ ನಿರಪೇಕ್ಷತೆಯ ಸಂಗತಿಗಳ ಮೇಲೆ ಸರ್ಕಾರದ ಅಧಿಪತಿಯಾಗಿರುತ್ತಾರೆ. ಅವರು ಸಂವಿಧಾನದ ಮತ್ತು ಇದರಡಿಯಲ್ಲಿ ಬರುವ ನ್ಯಾಯಾಲಯಗಳಿಗೆ ಮಾತ್ರ ಅಧೀನರಾಗಿರಬೇಕೆ ಹೊರತು ದೇವರು, ದೇವಸ್ಥಾನ ಮಠಗಳಿಗಲ್ಲ.

ಕರ್ನಾಟಕ ರಾಜ್ಯದಲ್ಲಿ ಅನೇಕ ಜನ ಮುಖ್ಯಮಂತ್ರಿಗಳು ಈ ರಾಜ್ಯವನ್ನು ಆಳಿದ್ದಾರೆ. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಎಲ್ಲರ ಮೇಲೂ ಆಪಾದನೆಗಳು ಬಂದಾಗ ಮುಖ್ಯಮಂತ್ರಿ ಗಳ ರೀತಿಯಲ್ಲಿ ಮಠಗಳನ್ನು, ದೇವಾಲಯಗಳನ್ನು ಆಶ್ರಯಿಸಿ ಆಣೆ, ಪ್ರಮಾಣ ಮಾಡುವ ಸಂವಿಧಾನಕ್ಕೆ ವಿರುದ್ಧವಾದ ಕೆಲಸವನ್ನು ಮಾಡಿರುವುದಿಲ್ಲ.

ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಎಲ್ಲರಿಗೂ ವಿಶೇಷವಾದ ಭಯ ಮತ್ತು ಭಕ್ತಿ. ಇಲ್ಲಿ ಆಣೆ ಪ್ರಮಾಣ ಮಾಡುವವರು ಸಾಮಾನ್ಯ ನಾಗರಿಕರಾಗಿರುತ್ತಾರೆ. ಇಲ್ಲಿಯತನಕ ಒಂದು ಸರ್ಕಾರದ ವಿಚಾರವಾಗಿ ಒಂದು ರಾಜ್ಯದ ಮುಖ್ಯಮಂತ್ರಿ ಪ್ರಮಾಣವನ್ನು ಮಾಡು ವಂತಹ ಕೆಲಸ ನಡೆದಿಲ್ಲ.

ರಾಜ್ಯದ ಮುಖ್ಯಮಂತ್ರಿ ಜನರಿಗೆ ಉತ್ತರದಾಯಿ ಯಾಗಿರಬೇಕೆ ಹೊರತು ದೇವಾಲಯಗಳಿಗಲ್ಲ. ವೀರೇಂದ್ರ ಹೆಗ್ಡೆಯವರು ಆಣೆ ಪ್ರಮಾಣಗಳಿಗೆ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟರೆ ನಿಜಕ್ಕೂ ಇದು ದೇವಾಲಯದ ಪಾವಿತ್ರ್ಯವನ್ನು ಹಾಳು ಮಾಡುವ ಕೆಲಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT