ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ ಭಾವದಿಂದ ರಥೋತ್ಸವ, ಮಡೆಸ್ನಾನ

Last Updated 19 ಡಿಸೆಂಬರ್ 2012, 11:09 IST
ಅಕ್ಷರ ಗಾತ್ರ

ಮಂಗಳೂರು/ ಸುಬ್ರಹ್ಮಣ್ಯ: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ನಾಗಾರಾಧನಾ ಸ್ಥಳಗಳು, ಸುಬ್ರಹ್ಮಣ್ಯ ಕ್ಷೇತ್ರಗಳು ಬಹಳ ಸಂಖ್ಯೆಯಲ್ಲಿದ್ದು, ಪಂಚಮಿ, ಷಷ್ಠಿ ಉತ್ಸವಗಳು ಇಲ್ಲೆಲ್ಲ ಶ್ರದ್ಧಾ-ಭಕ್ತಿಯಿಂದ ಮಂಗಳವಾರ ಕೊನೆಗೊಂಡವು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ರಥದೊಂದಿಗೆ ಸತತ ಮೂರನೇ ದಿನವಾದ ಮಂಗಳವಾರವೂ ನೂರಾರು ಮಂದಿ ಮಡೆ ಮಡೆಸ್ನಾನ ನಡೆಸಿ ಹರಕೆ ತೀರಿಸಿದರು.

ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರೆ ಪ್ರಯುಕ್ತ ಸೋಮವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಂಚಮಿ ರಥೋತ್ಸವ ನಡೆಯಿತು.

ತಳಿರು, ತೋರಣ, ಸೀಯಾಳ, ಅಡಿಕೆ, ಬಾಳೆ, ಬಾಳೆಗೊನೆ ಮತ್ತು ವಿದ್ಯುತ್ ಅಲಂಕಾರದ ರಥದಲ್ಲಿ ದೇವರ ಉತ್ಸವ ನೆರವೇರಿತು. ಬೆಳಿಗ್ಗೆ ತೈಲಾಭ್ಯಂಜನ ನಡೆದು ರಾತ್ರಿ ಹೂವಿನ ಅಲಂಕಾರದೊಂದಿಗೆ ವಿಶೇಷ ಪಲ್ಲಕ್ಕಿ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ನೆರವೇರಿತು. ಸಂಗೀತ, ಮಂಗಳವಾದ್ಯ, ಸ್ಯಾಕ್ಸೊಫೋನ್, ಬ್ಯಾಂಡ್ ಸುತ್ತುಗಳಲ್ಲಿ ಉತ್ಸವ ನೆರವೇರಿತು. ನಂತರ ರಾತ್ರಿ ರಥೋತ್ಸವ ನಡೆಯಿತು. ಸವಾರಿ ಮಂಟಪ ಕಟ್ಟೆಯಲ್ಲಿ ಪೂಜೆ ನೆರವೇರಿತು. ಬಳಿಕ ಆಕರ್ಷಕ ಸುಡುಮದ್ದು ಪ್ರದರ್ಶನಗೊಂಡಿತು. ಮಂಗಳವಾರ ಬೆಳಿಗ್ಗೆ ಷಷ್ಠಿ ರಥೋತ್ಸವ ಸಹ ವಿಜ್ರಂಭಣೆಯಿಂದ ನಡೆಯಿತು.

800 ಮಂದಿಯಿಂದ ಮಡೆಸ್ನಾನ:
ಮಂಗಳವಾರ ಮಧ್ಯಾಹ್ನ 800ಕ್ಕೂ ಮಿಕ್ಕಿ ಭಕ್ತರು ಮಡೆ ಮಡೆಸ್ನಾನ ಸೇವೆ ಸಲ್ಲಿಸಿದರು. ಸರದಿ ಸಾಲಿನಲ್ಲಿ ನಿಂತು ಬ್ರಾಹ್ಮಣರ ಊಟದ ಬಳಿಕ ದೇವಸ್ಥಾನದ ಹೊರಾಂಗಣದಲ್ಲಿ ತಮ್ಮ ಸೇವೆ ನೆರವೇರಿಸಿದರು. ಪೋಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಈ ಮೂಲಕ ಚೌತಿ, ಪಂಚಮಿ ಮತ್ತು ಷಷ್ಠಿ ದಿನಗಳಂದು ದೇವಸ್ಥಾನದಲ್ಲಿ ನಿರಾತಂಕವಾಗಿ ಮಡೆ ಮಡೆಸ್ನಾನ ನಡೆದಂತಾಗಿದೆ.

ಸುಬ್ರಹ್ಮಣ್ಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಅವರನ್ನು ಕರೆತಂದ ವಾಹನಗಳ ಸಂಖ್ಯೆಯೂ ಅಧಿಕವಾದ್ದರಿಂದ ರಸ್ತೆ ಸಂಚಾರ ಸುಗಮಗೊಳಿಸಲು ಪೊಲೀಸರು ಭಾರಿ ಪ್ರಯಾಸಪಟ್ಟರು. ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳನ್ನು ಓಡಿಸಿತ್ತು.
ಬುಧವಾರ ಮಾರ್ಗಶಿರ ಶುದ್ಧ ಸಪ್ತಮಿಯಂದು ಬೆಳಿಗ್ಗೆ ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನೆರವೇರಿ ಕುಮಾರಾಧಾರಾ ನದಿಯಲ್ಲಿ ದೇವರ ಅವಭೃತೋತ್ಸವ ಮತ್ತು ನೌಕಾವಿಹಾರ ನಡೆಯಲಿದೆ.

ಕುಡುಪು-ಸಂಭ್ರಮದ ಷಷ್ಠಿ: ಮಂಗಳೂರು ಹೊರವಲಯದ ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಷಷ್ಠಿ ಮಹೋತ್ಸವ ನಡೆಯಿತು. ಮೊದಲು ದೇವಸ್ಥಾನದ ಹೊರಾಂಗಣದಲ್ಲಿ ಬಲಿ ಉತ್ಸವ ನಡೆಯಿತು. ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಭವ್ಯ ರಥ ಎಳೆಯಲಾಯಿತು. ಬುಧವಾರ ಮಧ್ಯಾಹ್ನ ಸ್ವಲ್ಪ ಹೊತ್ತು ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಪುತ್ತೂರು ತಾಲ್ಲೂಕಿನ ಪಾಣಾಜೆ ಸಮೀಪದ ರಣಮಂಗಲ ದೇವಸ್ಥಾನ ಸಹಿತ ಇತರ ನೂರಾರು ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಸಹ ಉತ್ಸವಗಳು ನಡೆದವು.

ಉಡುಪಿ ವರದಿ: ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ಉಡುಪಿಯ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿಯ ಬಳಿ ಭಕ್ತರು ಮಂಗಳವಾರ ಮಡೆ ಮಡೆ ಸ್ನಾನ ಮಾಡಿದರು.

ಸುಬ್ರಹ್ಮಣ್ಯ ಗುಡಿಯಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಅನ್ನ ಸಂತರ್ಪಣೆಯ ನಂತರ ಐವರು ಮಹಿಳೆಯರೂ ಸೇರಿ ಒಟ್ಟು ಹತ್ತು ಮಂದಿ ಮಡೆಸ್ನಾನ ಮಾಡಿದರು. ಎಂಜಲು ಎಲೆಯ ಮೇಲೆ ದೇವಸ್ಥಾನವನ್ನು ಒಂದು ಸುತ್ತು ಹಾಕಿದರು.

ದೇವಸ್ಥಾನದ ಎದುರು ಕೇವಲ ಬ್ರಾಹ್ಮಣರಿಗೆ ಮಾತ್ರ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ಮಡೆ ಸ್ನಾನ ಮಾಡಿದವರು ಸಹ ಬ್ರಾಹ್ಮಣರೇ ಎಂದು ದೇವಸ್ಥಾನದ ಸಿಬ್ಬಂದಿ ತಿಳಿಸಿದರು.

ಕಾಸರಗೋಡು ವರದಿ: ಮಂಜೇಶ್ವರದ ಅನಂತೇಶ್ವರ ದೇವಸ್ಥಾನ, ಬೇಳದ ಕುಮಾರಮಂಗಲ, ಮುಗು ಸುಬ್ರಹ್ಮಣ್ಯ ದೇವಸ್ಥಾನ ಸಹಿತ ಜಿಲ್ಲೆಯ ಹಲವಾರು ಕಡೆಗಳಲ್ಲಿ ಬುಧವಾರ ಷಷ್ಠಿ ಮಹೋತ್ಸವ ಸಂಭ್ರಮದಿಂದ ನಡೆಯಿತು. ಮಂಜೇಶ್ವರದ ರಥೋತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT