ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ- ಭಾವದಿಂದ ಶಿವಸ್ಮರಣೆ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಾಶಿವರಾತ್ರಿ ಹಬ್ಬವನ್ನು ನಗರದಲ್ಲಿ ಭಕ್ತಿ- ಭಾವ, ಸಡಗರ ಸಂಭ್ರಮದಿಂದ ಸೋಮವಾರ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.

ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ವಿವಿಧ ಸಂಘ ಸಂಸ್ಥೆಗಳು ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಉಪನ್ಯಾಸ, ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದವು.

ಮಲ್ಲೇಶ್ವರದ ಕಾಡುಮಲ್ಲೇಶ್ವರ, ಬಸವನಗುಡಿಯ ಮಲ್ಲಿಕಾರ್ಜುನಸ್ವಾಮಿ, ಗವಿಪುರದ ಗವಿಗಂಗಾಧರೇಶ್ವರ, ಜಯನಗರದ ಉಮಾಮಹೇಶ್ವರ, ಕಲಾಸಿಪಾಳ್ಯದ ಕೋಟೆ ಶ್ರೀಜಲಕಂಠೇಶ್ವರ, ಯಶವಂತಪುರದ ಗಾಯಿತ್ರಿ ದೇವಾಲಯ, ಯಡಿಯೂರಿನ ಚಂದ್ರಮೌಳೇಶ್ವರ, ಶಿವನಹಳ್ಳಿಯ ಮಂಜುನಾಥನಗರದ ಮಂಜುನಾಥೇಶ್ವರ ಮತ್ತಿತರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದೇವರ ಆರಾಧನೆ ನಡೆಯಿತು.

ಅಭಿಷೇಕ: ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವ ಲಿಂಗಕ್ಕೆ ಅಭಿಷೇಕ ಮಾಡಲಾಯಿತು. ಹಾಲು, ಮೊಸರು, ತುಪ್ಪ, ಗಂಗಾಜಲ, ಪಂಚಾಮೃತ ಅಭಿಷೇಕ ಮತ್ತು ಬಿಲ್ವಾರ್ಚನೆ ಮಾಡಲಾಯಿತು. ಭಕ್ತಾದಿಗಳಿಗೆ ಗಂಗಾಜಲ ವಿತರಿಸಲಾಯಿತು. ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸುತ್ತಿದ್ದರು. ನೂರಾರು ಮಂದಿ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.

ವಸಂತನಗರದ ಸಂಪಿಗೆ ರಂಗಸ್ವಾಮಿ ದೇವಸ್ಥಾನದಲ್ಲಿ ನಡೆದ ಪೂಜಾ ಕೈಂಕರ್ಯಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಗಾಯಕ ಬದರಿ ಪ್ರಸಾದ್ ಮತ್ತು ತಂಡದವರು ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯನಗರದ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಪೂರ್ಣಾಹುತಿ ಮಹಾ ಮಂಗಳಾರತಿ ಮಾಡಲಾಯಿತು. ನಾಟ್ಯಚೇತನ ಪ್ರತಿಷ್ಠಾನವು ನಗರದ ಬ್ಯಾಟರಾಯನಪುರದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ `ಶಿವರಾತ್ರಿ ಸಂಭ್ರಮ~ ಅಹೋರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿತ್ತು. ಜೆ.ಪಿ.ನಗರ ಐದನೇ ಹಂತದ ಸಂಸ್ಕೃತಿ ಸಂಸ್ಥೆ ಅಹೋರಾತ್ರಿ ನೃತ್ಯೋತ್ಸವ ಆಯೋಜಿಸಿತ್ತು. ಕೆಂಪೇಗೌಡನಗರದ ಮಡಿವಾಳ ಮಾಚಿದೇವ ದೇವಸ್ಥಾನದಲ್ಲಿ ಜಾಗರಣೆ ಪ್ರಯುಕ್ತ `ದಕ್ಷ ಯಜ್ಞ~ ಯಕ್ಷಗಾನ ನಾಟಕ ನಡೆಯಿತು. ರಾಜಾಜಿನಗರ ಎರಡನೇ ಹಂತದಲ್ಲಿರುವ ಮಂಜುನಾಥಸ್ವಾಮಿ ದೇವಸ್ಥಾನ ಟ್ರಸ್ಟ್ `ಜಾತ್ರಾ ರಥೋತ್ಸವ~ ಆಯೋಜಿಸಿತ್ತು.

ಸಾಯಿ ಗೋಲ್ಡ್ ಪ್ಯಾಲೇಸ್ ಮತ್ತು ಸಾಯಿ ಸಮರ್ಪಣ ಚಾರಿಟಬಲ್ ಟ್ರಸ್ಟ್ ಬಸವನಗುಡಿಯ ಸುಬ್ಬರಾಮಶೆಟ್ಟಿ ವೃತ್ತದ ವಾಲಿಬಾಲ್ ಮೈದಾನದಲ್ಲಿ ಇಪ್ಪತ್ತು ಅಡಿ ಎತ್ತರದ ಶಿವನ ಮೂರ್ತಿ ಪ್ರತಿಷ್ಠಾಪಿಸಿತ್ತು. ಮೂರ್ತಿ ಮತ್ತು ಶಿವ ಲಿಂಗಕ್ಕೆ ಗಂಗಾಜಲದಿಂದ ಅಭಿಷೇಕ ಮಾಡಲಾಯಿತು.

ಛಾಯಾಚಿತ್ರ ಪ್ರದರ್ಶನ: ಕೆಂಗೇರಿ ನಿವಾಸಿ ಬಿಎಸ್‌ಎನ್‌ಎಲ್ ಎಂಜಿನಿಯರ್ ಚಕ್ರಪಾಣಿ ಅವರು ಹಬ್ಬದ ಅಂಗವಾಗಿ ಶಿವ ದೇವಸ್ಥಾನ, ಶಿವಲಿಂಗಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಕೆಂಗೇರಿ ಉಪನಗರದಲ್ಲಿರುವ ಬ್ರಾಹ್ಮಣ ಮಹಾ ಸಭಾದಲ್ಲಿ ನಡೆದ ಪ್ರದರ್ಶನದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಶಿವ ದೇವಸ್ಥಾನಗಳ ಮತ್ತು ಶಿವಲಿಂಗಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು. ಬೆಂಗಳೂರು ಜಿಲ್ಲೆಯ ಪ್ರಾಚೀನ ದೇವಾಲಯವಾದ ಚಿಕ್ಕನಹಳ್ಳಿಯ ಸೋಮೇಶ್ವರ ದೇವಾಲಯದಲ್ಲಿರುವ ಶಿವಲಿಂಗದ ಮತ್ತು ಕಾಡುಗೊಂಡನಹಳ್ಳಿ ಸಮೀಪ ಇರುವ ಹಳಗುಂಡನಹಳ್ಳಿಯ ಏಳು ಅಡಿ ಎತ್ತರದ ಬಾಣಲಿಂಗೇಶ್ವರ ದೇವಸ್ಥಾನಗಳ ಛಾಯಾಚಿತ್ರಗಳು ಗಮನ ಸೆಳೆದವು. ನೂರಾರು ಮಂದಿ ಈ ಪ್ರದರ್ಶನ ವೀಕ್ಷಿಸಿದರು. ವಿವಿಧ ಬಡಾವಣೆಗಳಲ್ಲಿ ಜನರು ಸಾಮೂಹಿಕ ಜಾಗರಣೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಜಾಣ-ಜಾಣೆಯರ ನಗೆ:

ನಗರದ ಶಿರೂರ್ ಉದ್ಯಾನದಲ್ಲಿ `ಜಾಣ- ಜಾಣೆಯರ ನಗೆ ಜಾಗರಣೆ~ ಹಾಸ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರವಿ ಭಜಂತ್ರಿ, ಗುಂಡಣ್ಣ ಡಿಗ್ಗಿ ಅವರು ಹಾಸ್ಯ ಚಟಾಕಿಗಳಿಂದ ಜನರನ್ನು ರಂಜಿಸಿದರು. ಕಾರ್ಯಕ್ರಮ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT