ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಭಕ್ತಿಯ ನೃತ್ಯ ಇರಲಿ; ಕುಡಿತದ ಅಸಭ್ಯತೆ ಸಲ್ಲ'

`ಸೌಹಾರ್ದ' ಸಭೆಯಲ್ಲಿ ಮೂರುಸಾವಿರ ಮಠದ ಶ್ರೀ ಸಲಹೆ
Last Updated 7 ಸೆಪ್ಟೆಂಬರ್ 2013, 5:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಭಕ್ತಿಯ ಆವೇಶದ ನೃತ್ಯ ಇರಲಿ. ಆದರೆ ಕುಡಿತದ ಅಸಭ್ಯ ವರ್ತನೆ ಬೇಡ. ಭಕ್ತಿಯ ತರಂಗಗಳು ಹುಟ್ಟಲಿ. ಆದರೆ ಉನ್ಮಾದದ ಪರಾಕಾಷ್ಠೆಯಲ್ಲಿ ಶಾಂತಿಭಂಗ ಬೇಡ. ಆ ನಿಟ್ಟಿನಲ್ಲಿ ನಮಗೆ ನಾವೇ ಶಾಂತಿ, ಸೌಹಾರ್ದದ ವಾರಸುದಾರರಾಗೋಣ...'

ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ನೀಡಿದ ಸಲಹೆ ಇದು. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರೇಟ್ ವತಿಯಿಂದ ನಗರದ ಸಿಆರ್ ಪರೇಡ್ ಮೈದಾನದಲ್ಲಿ ಶುಕ್ರವಾರ ಜರುಗಿದ ಶಾಂತಿ ಹಾಗೂ ಸೌಹಾರ್ದ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

`ಭಕ್ತಿ, ಧ್ಯಾನ ಅಂತರ್ಮುಖಿಯಾದಾಗ ನೃತ್ಯ ತಾನಾಗಿ ಆರಂಭವಾಗುತ್ತದೆ. ಅದು ಭಾವುಕತೆಯ ಸಂಭ್ರಮ. ಉತ್ಕೃಷ್ಟ ಧ್ಯಾನ ದೈವಿಕವಾದುದು. ಹೀಗಾಗಿ ಗಣೇಶೋತ್ಸವ ಮೆರವಣಿಗೆಗಳಲ್ಲಿ ಭಕ್ತಿಯ ಡಾನ್ಸ್ ಇರಲಿ' ಎಂದು ಸಲಹೆ ನೀಡಿದರು.

`ಧರ್ಮವನ್ನು ಆಳವಾಗಿ ಪ್ರೀತಿಸುವ ಜನ ನಾವು. ಆದರೆ ಬಹಳಷ್ಟು ಸಂದರ್ಭದಲ್ಲಿ ತಿಳಿವಳಿಕೆ ಹಾಗೂ ಧಾರ್ಮಿಕ ಮೌಲ್ಯಗಳ ಪರಿಕಲ್ಪನೆ ಇಲ್ಲದೇ ದಾರಿ ತಪ್ಪುತ್ತಿದ್ದೇವೆ. ಗುರುಗಳ ಸಮಕ್ಷಮ, ದೇವಸ್ಥಾನಗಳ್ಲ್ಲಲಷ್ಟೇ ಅಲ್ಲ, ಸಾರ್ವಜನಿಕ ಉತ್ಸವಗಳಲ್ಲೂ ಧರ್ಮ ಪಾಲನೆ ಮಾಡಬೇಕು' ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಕಮಿಷನರ್ ಬಿ.ಎ.ಪದ್ಮನಯನ, `ಹಬ್ಬ ಆಚರಣೆಯ ವೇಳೆ ಇಲಾಖೆ ವಿಧಿಸುವ ನಿಯಮಗಳನ್ನು ನಿರ್ಬಂಧವೆಂದು ಭಾವಿಸದೆ, ಕಾನೂನು ಪಾಲನೆಯನ್ನು ವ್ಯವಸ್ಥಿತಗೊಳಿಸುವ ದೃಷ್ಟಿಯಿಂದ ಪಾಲಿಸಬೇಕಾದ ಮನಸ್ಥಿತಿ ಬೆಳೆಸಿಕೊಳ್ಳಬೇಕು' ಎಂದರು.

`ಗಣೇಶನನ್ನು ಭಕ್ತಿಯಿಂದ ಆರಾಧಿಸಿದ ಬಳಿಕ ಗೌರವಯುತವಾಗಿ ವಿಸರ್ಜಿಸಬೇಕು. ಕಾಲಿನಿಂದ ತುಳಿಯುವುದು ಸರಿಯಲ್ಲ. ಕಳೆದ ವರ್ಷ ಮಂಟಪದಲ್ಲಿ ಅತಿಯಾದ ಧ್ವನಿ ವ್ಯವಸ್ಥೆಯ ಧ್ವನಿವರ್ಧಕ ಬಳಸಿದ ಪರಿಣಾಮ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದರು. ವಿದ್ಯುತ್ ಅವಘಡದಿಂದ ಯುವಕ ಸಾವಿಗೀಡಾಗಿದ್ದಾನೆ. ಈ ದೃಷ್ಟಿಯಲ್ಲಿ ನ್ಯೂನತೆಗಳನ್ನು ಸರಿಪಡಿಸುವ ಉದ್ದೇಶದಿಂದ ಇಲಾಖೆ ಸೂಚಿಸುವ ನಿಯಮಗಳನ್ನು ಪಾಲಿಸಬೇಕು' ಎಂದು ವಿನಂತಿಸಿದರು.

`ಪೂಜೆಯ ನಂತರ ಭಜನೆ ಮಾಡಿ. ಆದರೆ ಜೂಜಾಟ ಬೇಡ. ಶಾಂತಿ, ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಇಲಾಖೆ ಜೊತೆ ಕೈಜೋಡಿಸಿ' ಎಂದರು.

ಗಣೇಶೋತ್ಸವ ಮಹಾಮಂಡಲಗಳ ಅಧ್ಯಕ್ಷ ಶ್ರೀಶೈಲಪ್ಪ ಶೆಟ್ಟರ್, `ಗಣೇಶ ಮೆರವಣಿಗೆ ಸಾಗುವ ರಸ್ತೆಯ ದುರಸ್ತಿ ಮಾಡಬೇಕು. ವಿದ್ಯುತ್ ತಂತಿಗಳಿಗೆ ಅಡ್ಡವಾಗಿರುವ ಗಿಡಗಂಟಿಗಳನ್ನು ಹೆಸ್ಕಾಂ ಸಿಬ್ಬಂದಿ ಕಡಿಯಬೇಕು, ಹೊರಗಡೆಯಿಂದ ಬರುವ ಭಕ್ತರಿಗೆ ರಾತ್ರಿ ವೇಳೆ ಉಳಿದುಕೊಳ್ಳಲು ಕಲ್ಯಾಣ ಮಂಟಪ ಒದಗಿಸಿಕೊಡಬೇಕು, ತಡ ರಾತ್ರಿವರೆಗೆ ಡಬ್ಬ ಅಂಗಡಿ ತೆರೆದಿಡಲು ಅನುಕೂಲ ಮಾಡಿಕೊಡಬೇಕು' ಎಂದು ಒತ್ತಾಯಿಸಿದರು.

`ಹಬ್ಬದ ದಿನಗಳಲ್ಲಿ ಪಟಾಕಿ ಸಿಡಿಸದೆ ಆ ಹಣವನ್ನು ಉತ್ತರಾಖಂಡ ಜಲಪ್ರಳಯ ನಿಧಿಗೆ ದೇಣಿಗೆಯಾಗಿ ನೀಡಬೇಕು' ಎಂದೂ ಸಲಹೆ ನೀಡಿದರು.

ಉದ್ಯಮಿ ಮದನ ದೇಸಾಯಿ, ಡಾ. ಅಬ್ದುಲ್ ಕರೀಂ, ಮೋಹನ ಲಿಂಬಿಕಾಯಿ, ರಮೇಶ ಕುಲಕರ್ಣಿ, ಅಲ್ತಾಫ್ ಕಿತ್ತೂರು, ಭಾಸ್ಕರ ಜಿತೂರಿ, ಮಹೇಂದ್ರ ಸಿಂಘಿ ಮಾತನಾಡಿದರು. ಆರಂಭದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಪಿ ಸುಭಾಷ ಗುಡಿಮನಿ, `ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರ ಸಂಬಂಧ ಮಹತ್ವದ್ದು. ಎಲ್ಲರೂ ಸಹಕರಿಸಬೇಕು' ಎಂದು ವಿನಂತಿಸಿದರು.

ಸಭೆಯಲ್ಲಿ ಪ್ರಮುಖರ ಸಲಹೆ
`ಸಹೋದರತೆ ಹಿಂದೂಸ್ತಾನಿಗಳ ವಿಶೇಷ. ಅವರವರ ಧರ್ಮ ಪಾಲನೆಗೆ ಅಡ್ಡಿಯಾಗದೆ ಎಲ್ಲರೂ ಸೇರಿ ಆಚರಿಸೋಣ. ಕಾನೂನು ಸುವ್ಯವಸ್ಥೆಗೆ ಮಹತ್ವ ನೀಡೋಣ'
ಸಯ್ಯದ್ ತಾಜುದ್ದೀನ್ ಖಾದ್ರಿ, ಮುಸ್ಲಿಂ ಧರ್ಮಗುರು

`ಶಾಂತಿ ನಮಗೆ ಮುಖ್ಯವಾಗಬೇಕೇ ಹೊರತು ಅಶಾಂತಿಯಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜೊತೆ ಎಲ್ಲರೂ ಕೈಜೋಡಿಸಬೇಕು'
ಗ್ಯಾನಿ ರಾಮ್ ಸಿಂಗ್, ಸಿಖ್ ಧರ್ಮಗುರು

`ಗಣೇಶೋತ್ಸವ ಆಚರಣೆಯಿಂದ ಆತ್ಮಕ್ಕೆ ಮುದ. ಆ ಸಂದರ್ಭದಲ್ಲಿ ಧರ್ಮ ತಾರತಮ್ಯ ಬೇಡ'
ಫಾ. ಜೋಸೆಫ್ ರೋಡ್ರಿಗಸ್, ಕ್ರೈಸ್ತ ಧರ್ಮಗುರು

`ಯಾವುದೇ ಹಬ್ಬ ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಪ್ರೀತಿ, ವಿಶ್ವಾಸದಿಂದ ಒಂದಾಗಿ ಗಣೇಶೋತ್ಸವ ಆಚರಿಸಿ ಜೀವನ ಸಾರ್ಥಕ ಮಾಡಿಕೊಳ್ಳೋಣ'
ಜಬ್ಬಾರ್ ಖಾನ್ ಹೊನ್ನಳ್ಳಿ, ಅಧ್ಯಕ್ಷ, ಅಂಜುಮನ್-ಎ- ಇಸ್ಲಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT