ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಯ ಸಾಗರದಲ್ಲಿ ಶಿವಸ್ಮರಣೆ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಎಲ್ಲೆಡೆ ಶಿವರಾತ್ರಿ ಪ್ರಯುಕ್ತ ಸೋಮವಾರ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜೆ ನಡೆದವು. ಭಕ್ತರು ಬೆಳಗಿನಿಂದಲೂ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡುಬಂದಿತು. ತಾಲ್ಲೂಕಿನ ನೆರಳೂರಿನ ಕಾಶಿ ವಿಶ್ವನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಸ್ವಾಮಿಗೆ ಅಭಿಷೇಕ ಏರ್ಪಡಿಸಲಾಗಿತ್ತು. ದೇವಾಲಯದ ಮುಂಭಾಗದ ಬೃಹತ್ ಶಿವನ ಮೂರ್ತಿ ಎಲ್ಲರ ಆಕರ್ಷಣೆಯಾಗಿತ್ತು. 

 ದೇವಾಲಯದ ಆವರಣದಲ್ಲಿ ಸ್ಥಾಪಿಸಿದ್ದ ಶಿವಲಿಂಗಕ್ಕೆ ಭಕ್ತರೇ ಸ್ವತಃ ನೀರು, ಹಾಲು, ಮೊಸರಿನ ಅಭಿಷೇಕ ಮಾಡಿ ಬಿಲ್ವಪತ್ರೆಯನ್ನಿಟ್ಟು ಪೂಜಿಸಲು ಅವಕಾಶ ಕಲ್ಪಿಸಲಾಗಿತ್ತು. ಸರತಿ ಸಾಲಿನಲ್ಲಿ ಭಕ್ತರು ಪೂಜೆ ಸಲ್ಲಿಸಲು ನಿಂತಿದ್ದ ದೃಶ್ಯ ಕಂಡುಬಂದಿತ್ತು. ತಾಲ್ಲೂಕಿನ ಯಡವನಹಳ್ಳಿ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಏರ್ಪಡಿಸಲಾಗಿತ್ತು. ಬೆಳಗಿನಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ನಿರಂತರ ದಾಸೋಹ ಏರ್ಪಡಿಸಲಾಗಿತ್ತು.

ಯಡವನಹಳ್ಳಿ ಮಹದೇಶ್ವರ ದೇವಾಲಯ ಟ್ರಸ್ಟ್ ವತಿಯಿಂದ ಹರಿಕಥಾ ಕಲಾಕ್ಷೇಪ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ  ತಿಳಿಸಿದೆ. ತಾಲ್ಲೂಕಿನ ಮಾಸ್ತೇನಹಳ್ಳಿ ವೀರಭದ್ರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಅಭಿಷೇಕ ಏರ್ಪಡಿಸಲಾಗಿತ್ತು.
 
ಪಟ್ಟಣದ ಥಳಿ ರಸ್ತೆಯ ಬಸವೇಶ್ವರ ಸ್ವಾಮಿ, ಬನ್ನೇರುಘಟ್ಟ ರಸ್ತೆಯ ಶನೇಶ್ವರ, ಅಮೃತ ಮಲ್ಲಿಕಾರ್ಜುನೇಶ್ವರ, ಕಂಬದ ಗಣಪತಿ, ಗಂಗಾಧರೇಶ್ವರ ದೇವಾಲಯ, ನಗರೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ-ಅಲಂಕಾರ ಏರ್ಪಡಿಸಲಾಗಿತ್ತು. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಭಕ್ತರಿಗೆ ಗಂಗಾಜಲ ವಿತರಿಸಲಾಯಿತು.

ಪಂಚಾಕ್ಷರಿ ಮಂತ್ರ ಪಠಣ
ದೇವನಹಳ್ಳಿ: ಮಹಾಶಿವರಾತ್ರಿ ಪ್ರಯುಕ್ತ ತಾಲ್ಲೂಕಿನಾದ್ಯಂತ ಎಲ್ಲಾ ದೇವಾಲಯಗಳಲ್ಲಿ ಸೋಮವಾರ ಪ್ರಾತಃಕಾಲದಿಂದಲೇ ಶಿವನ ಅಷ್ಟೋತ್ತರ ಮತ್ತು ಪಂಚಾಕ್ಷರಿ ಮಂತ್ರ ಪಠಣ ನಡೆಯಿತು. ಅಂತೆಯೇ ಅಭಿಷೇಕ, ರುದ್ರಾಭಿಷೇಕ, ಹೋಮ ಹವನ ವಿಶೇಷ ಅಲಂಕಾರದ ಹಾಗೂ ಪೂಜೆಗಳು ಜರುಗಿದವು.

ಪಟ್ಟಣದ ಐತಿಹಾಸಿಕ ವೇಣುಗೋಪಾಲ ಸ್ವಾಮಿ, ಕೋಟೆ ನಂಜುಂಡೇಶ್ವರ, ರಾಘವೇಂದ್ರ ರಾಯರ ಮಠ, ಚಂದ್ರಮೌಳೇಶ್ವರ, ನಗರೇಶ್ವರ ಸ್ವಾಮಿ, ಧರ್ಮರಾಯ ಸ್ವಾಮಿ, ಸರ್ಕಲ್ ಆಂಜನೇಯ ಸ್ವಾಮಿ, ಕನ್ನಿಕಾ ಪರಮೇಶ್ವರಿ, ವೀರಭದ್ರ ಸ್ವಾಮಿ, ತರಗು ಆಂಜನೇಯ ಸ್ವಾಮಿ, ಕಚೇರಿ ಸೀತಾರಾಮಾಂಜನೇಯ ಸ್ವಾಮಿ, ಪ್ರಸನ್ನಹಳ್ಳಿ ಶಕ್ತಿ ಗಣಪತಿ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ  ಪಾಲ್ಗೊಂಡಿದ್ದರು.

ತಾಸ್ಲಲೂಕಿನ ಬೊಮ್ಮವಾರ ಗ್ರಾಮದಲ್ಲಿನ ಐತಿಹಾಸಿಕ ಸುಂದರೇಶ್ವರನ ಸನ್ನಿಧಿಯಲ್ಲಿ 6 ಆಯಾಮಗಳ ಪೂಜೆ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದರು.

ತಾಲ್ಲೂಕಿನ ಲಕ್ಷ್ಮಿಪುರ ಆಂಜನೇಯ, ವಿಶ್ವನಾಥಪುರ ಆಂಜನೇಯ, ಬನ್ನಿಮಂಗಲ ಆಂಜನೇಯ , ಚೌಡಪ್ಪನಹಳ್ಳಿ  ಸೋಮೇಶ್ವರ ನಲ್ಲೂರು ಗ್ರಾಮದ ಗಂಗಾ ಪರಮೇಶ್ವರಿ, ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿರಡಿ ಸಾಯಿ ಮಂದಿರ, ಆವತಿ ತಿಮ್ಮರಾಯ ಸ್ವಾಮಿ, ಕೋಡಗುರ್ಕಿ ಗ್ರಾಮದ ಕತ್ತಿಮಾರಮ್ಮ ದೇವಾಲಯಗಳಲ್ಲೂ ಮಹಾ ಶಿವರಾತ್ರಿ ಪ್ರಯುಕ್ತ ನಡೆದ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗಿಯಾಗಿದ್ದರು.

ಎಲ್ಲೆಡೆ  ಸಡಗರದ ಆಚರಣೆ
ವಿಜಯಪುರ: ದೇವಾಲಯಗಳ ನಗರವೆಂದೇ ಪ್ರಸಿದ್ಧವಾದ ವಿಜಯಪುರ ಪಟ್ಟಣದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಸೋಮವಾರ ಹತ್ತು ಹಲವು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ 101 ಲಿಂಗವಿರುವ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ನಗರೇಶ್ವರ ಸ್ವಾಮಿ, ಕೋಟೆ ಬೀದಿಯ ಸೋಮೇಶ್ವರ ಸ್ವಾಮಿ, ಗುರಪ್ಪನ ಮಠದ ಓಂಕಾರೇಶ್ವರ ಸ್ವಾಮಿ, ಬಯಲು ಬಸವೇಶ್ವರ ಸ್ವಾಮಿ, ಸಂಗಮೇಶ್ವರ ಸ್ವಾಮಿ, ದಿನ್ನೆ ಮೇಲಿನ ಈಶ್ವರ ಸ್ವಾಮಿ, ಯಲುವಳ್ಳಿ ರಸ್ತೆಯ ಚಂದ್ರಮೌಳೇಶ್ವರ ಸ್ವಾಮಿ, ಸುಣಕಲ್ಲು ರಸ್ತೆಯ ನಂಜುಡೇಶ್ವರ ಸ್ವಾಮಿ, ಗಾಂಧಿ ಚೌಕದಲ್ಲಿನ ಕುಮಾರ ಸ್ವಾಮಿ, ರುದ್ರದೇವರು, ವೀರಭದ್ರ ಸ್ವಾಮಿ ಮುಂತಾದ ಶಿವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಅಭಿಷೇಕ ಪ್ರಿಯನಿಗೆ ಅಲಂಕಾರ

ದೊಡ್ಡಬಳ್ಳಾಪುರ: ತಾಲ್ಲೂಕಿನಾದ್ಯಂತ ಮಹಾ ಶಿವರಾತ್ರಿಯನ್ನು ಸೋಮವಾರ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ನಗರದ ಚಿಕ್ಕಪೇಟೆಯ ಕಾಶಿ ವಿಶ್ವೇಶ್ವರ ಮುಖ್ಯ ರಸ್ತೆಯ ಶ್ರೀನಗರದ ಶ್ರೀಮಲೆ ಮಾದೇಶ್ವರ, ಶ್ರೀರಾಮಲಿಂಗ ಚೌಡೇಶ್ವರಿ, ಚಂದ್ರಮೌಳೇಶ್ವರ, ರುಮಾಲೆ ವೃತ್ತದ ಗಣಪತಿ, ಸೋಮೇಶ್ವರ, ತಾಲ್ಲೂಕಿನ ಕಮ್ಮಸಂದ್ರದ ಕಾಶಿ ವಿಶ್ವೇಶ್ವರ ದೇವಾಲಯ ಸೇರಿದಂತೆ ಹಲವೆಡೆ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮ ನಡೆದವು.

ದೇವಾಲಯಗಳಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ತೆರಳಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರೇಶ್ವರ ದೇವಾಲಯ, ನೆಲದಾಂಜನೇಯ ಸ್ವಾಮಿ ದೇವಾಲಯದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT