ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಟರ ಗರಡಿಯ ಹೊಸ ಹವಾ

Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

`ಏ ಕೋತ್ ನನ್ ಮಗನೇ, ಬಾರೋ ಇಲ್ಲಿ'.ಕ್ಲಾಪ್ ಬಾಯ್ ಕಕ್ಕಾಬಿಕ್ಕಿಯಾಗಿ ನಿಂತಿದ್ದ, ನಿರ್ದೇಶಕರು ಕರೆದದ್ದು ಯಾರನ್ನು ಎನ್ನುವುದು ತಿಳಿಯದೆ. ಅವರು ಮತ್ತೆ ಕರೆದರು- `ಏ ನಿನ್ನೇ ಕಣೋ ಕರೆದದ್ದು, ಬಾರೋ'.

ಹತ್ತಿರ ಹೋದ ಕ್ಲಾಪ್ ಬಾಯ್‌ಗೆ ನಿರ್ದೇಶಕರು ಏನನ್ನೋ ಹೇಳಿದರು. ಶೂಟಿಂಗ್ ಮುಂದುವರೆಯಿತು. ನಿರ್ದೇಶಕರ ಮಾತು ಮಾತ್ರ ತರುಣನ ಮನಸ್ಸಿನಲ್ಲಿ ಇಡೀ ದಿನ ಕೊರೆಯುತ್ತಲೇ ಇತ್ತು. ಚಿತ್ರರಂಗದಲ್ಲಿ ಆತನದು ಅದು ಮೊದಲ ದಿನ. ಆರಂಭದಲ್ಲೇ ಎದುರಾದ `ಗಾಂಧಿನಗರದ ಕನ್ನಡ' ನೀರಿಳಿಯದ ಗಂಟಲಿಗೆ ಕಡುಬು ಎನ್ನಿಸಿತು. ಅದಕ್ಕೆ ಆತನ ಹಿನ್ನೆಲೆಯೇ ಕಾರಣ.

ಸಿನಿಮಾದ ಮೇಲಿನ ಹುಚ್ಚಿನಿಂದ ಕೈತುಂಬ ಸಂಬಳ ಬರುತ್ತಿದ್ದ ಸಾಫ್ಟ್‌ವೇರ್ ನೌಕರಿಯನ್ನು ಬಿಟ್ಟು ಆ ತರುಣ ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದಿದ್ದ. ಸಾಫ್ಟ್‌ವೇರ್ ಎಂಜಿನಿಯರ್‌ಗೂ ಕೋತ್ ನನ್ ಮಗನಿಗೂ ಎತ್ತಣ ಸಂಬಂಧ?

ಬೆಂಗಳೂರಿಗೆ ಬಂದ ಅವರು ನೇರವಾಗಿ ಎಡತಾಕಿದ್ದು ನಿರ್ದೇಶಕ ಯೋಗರಾಜ ಭಟ್ ಅವರ ಮನೆಗೆ. ಭಟ್ಟರ `ಮನಸಾರೆ' ಸಿನಿಮಾ ತೆರೆಕಂಡಿದ್ದ ದಿನಗಳವು. `ನಿಮ್ಮ ಲೈಫು ಚೆನ್ನಾಗಿದೆ. ಸಿನಿಮಾಗೆ ಬಂದ್ರೆ ಅದು ಚಿತ್ರಾನ್ನ ಆಗುತ್ತೆ' ಎಂದರು ಭಟ್ಟರು. ಕಲಿಯಲು ಬಂದ ಶಿಷ್ಯ ಪಟ್ಟು ಬಿಡಲಿಲ್ಲ. `ಗುರುವೇ, ಚಿತ್ರಾನ್ನ ನನಗಿಷ್ಟ' ಎಂದ. 

`ಸರಿ, ನಿಮ್ಮ ಲೈಫು, ನಿಮ್ಮಿಷ್ಟ' ಎಂದರು ಗುರು. ಆ ಭೇಟಿ ನಡೆದ ಒಂದಷ್ಟು ದಿನಗಳ ನಂತರ `ಪಂಚರಂಗಿ' ಚಿತ್ರದ ಶೂಟಿಂಗ್ ಆರಂಭವಾಯಿತು. ಕ್ಲಾಪ್ ಬಾಯ್ ರೂಪದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಕನ್ನಡ ಚಿತ್ರೋದ್ಯಮಕ್ಕೆ ಅಂಬೆಗಾಲಿಟ್ಟರು. ಆಗ ಎದುರಾದುದೇ `ಕೋತ್ ನನ್ ಮಗ' ಪ್ರಸಂಗ. ಆ ಕ್ಷಣದಲ್ಲಿ, ಗುರುವಿನ ಪಾಲಿಗೆ ತನ್ನ ಶಿಷ್ಯನ ಸಾಫ್ಟ್‌ವೇರ್ ಹಿನ್ನೆಲೆ ಮರೆತುಹೋಗಿ ಬಹುವಚನದ ಜಾಗದಲ್ಲಿ ಏಕವಚನ ಬಂದಿರಬೇಕು.

ಸಿನಿಮಾ ವ್ಯಸನದ ಆ ತರುಣನ ಹೆಸರು ಪವನ್ ಒಡೆಯರ್. ಅವರೀಗ ಕನ್ನಡ ಸಿನಿಮಾದ ಭರವಸೆಯ ನಿರ್ದೇಶಕರಲ್ಲೊಬ್ಬರು. ಒಡೆಯರ್ ನಿರ್ದೇಶನದ `ಗೋವಿಂದಾಯ ನಮಃ' 2012ರ ಸೂಪರ್ ಹಿಟ್ ಸಿನಿಮಾ. ಅವರೀಗ, `ಗೋವಿಂದಾಯ ನಮಃ' ಚಿತ್ರದ ತೆಲುಗು ಅವತರಣಿಕೆ `ಪೋಟಗಾಡು' ಹಾಗೂ ಕನ್ನಡದ `ಗೂಗ್ಲಿ'ಯನ್ನು ತೆರೆಕಾಣಿಸುವ ಪ್ರಯತ್ನದಲ್ಲಿದ್ದಾರೆ.

ಪವನ್ ಮಾತನಾಡುತ್ತಿದ್ದುದು ಯೋಗರಾಜ್ ಭಟ್ ಅವರ `ಮೇಷ್ಟ್ರುತನ'ದ ಬಗ್ಗೆ. ಕನ್ನಡ ಸಿನಿಮಾದಲ್ಲಿ `ಯೋಗರಾಜ ಭಟ್ ಸ್ಕೂಲ್ ಅಥವಾ ಗರಡಿ' ಎನ್ನುವುದೊಂದು ರೂಪುಗೊಂಡಿದೆಯಾ? ಆ ಗರಡಿಯಲ್ಲಿ ಯುವ ಪ್ರತಿಭೆಗಳ ಸಾಮು ಯಾವ ರೀತಿಯಲ್ಲಿ ನಡೆಯುತ್ತಿದೆ? ಎನ್ನುವ `ಕಾಮನಬಿಲ್ಲು' ಪ್ರಶ್ನೆಗಳಿಗೆ ಮೊದಲು ಉತ್ತರಿಸಿದ್ದು ಪವನ್.

ಸಾಫ್ಟ್‌ವೇರ್‌ನಿಂದ ಸ್ಯಾಂಡಲ್‌ವುಡ್‌ಗೆ ಬಂದು ನೆಲೆಕಂಡುಕೊಂಡ ಪವನ್‌ರಿಗೆ ಭಟ್ಟರು ಒಂದರ್ಥದಲ್ಲಿ ದ್ರೋಣಾಚಾರ್ಯ ಇದ್ದಂತೆ. `ಪಂಚರಂಗಿ' ರೂಪುಗೊಂಡ ಹಾಗೆ ಪವನ್ ಕಲಿಕೆಯೂ ಸಾಗಿತು. ಅದೊಂದು ರೀತಿಯಲ್ಲಿ ನೋಡುತ್ತಾ ನೋಡುತ್ತಾ ಕಲಿಯುವ ಪ್ರಕ್ರಿಯೆ. `ಸಿನಿಮಾ ಮಾಡ್ತಾ ಮಾಡ್ತಾ ಕಲಿಯೋದು' ಎನ್ನುವುದು ಭಟ್ಟರದೇ ಮಾತು.

`ಸಿನಿಮಾ ಹೇಗೆ ಮಾಡಬಾರದು ಮತ್ತು ಹೇಗೆ ಮಾಡಬೇಕು' ಎನ್ನುವುದನ್ನು ಭಟ್ಟರ ಗರಡಿಯಲ್ಲಿ ಪವನ್ ಕಲಿತಿದ್ದಾರೆ. ಬೇರೆಯವರ ಬಳಿ ಐದು ಸಿನಿಮಾ ಮಾಡುವ ಅನುಭವ, ಭಟ್ಟರ ಬಳಿ ಒಂದು ಸಿನಿಮಾದ ತಾಲೀಮಿಗೆ ಸಮ ಎಂದು ಅವರಿಗನ್ನಿಸಿದೆ. ಅದೇ ರೀತಿ, `ಒಳ್ಳೆಯ ಡೈರೆಕ್ಟರ್ ಆಗಬೇಕಿದ್ದರೆ ಒಳ್ಳೆಯ ರೈಟರ್ ಆಗಬೇಕು' ಎನ್ನುವ ಅರಿವನ್ನೂ ಮೂಡಿಸಿದೆ.

ಹಾಂ, `ಗೋವಿಂದಾಯ ನಮಃ' ಸಿನಿಮಾ ತೆರೆಕಂಡು ಗೆದ್ದರೂ ಭಟ್ಟರು ಶಿಷ್ಯನ ಸಿನಿಮಾ ನೋಡಲಿಲ್ಲ. ಆದರೆ, `ಈ ಹುಡುಗ ನನ್ನ ಹೆಸರು ಉಳಿಸ್ತಾನೆ' ಎಂದು ಯಾರ ಬಳಿಯೋ ಹೇಳಿದರಂತೆ. ಆ ಮಾತು ಶಿಷ್ಯನ ಪಾಲಿಗೆ ಸರ್ಟಿಫಿಕೇಟ್!

ಪರ್ಯಾಯ ಚಿತ್ರರಂಗ

`ಭಟ್ಟರ ಸ್ಕೂಲ್ ಮೂಲಕ ಪರ್ಯಾಯ ಚಿತ್ರರಂಗವೊಂದು ಸೃಷ್ಟಿಯಾಗ್ತಿದೆ'. ಇದು `ಡ್ರಾಮಾ'ದ ತುಂಡು ಹೈಕ್ಳಲ್ಲಿ ಒಬ್ಬನಾದ ಸತೀಶನ ಅಡಿಗೆರೆ ಕೊರೆದಂಥ ಮಾತು.

`ಭಟ್ಟರ ಗರಡಿಯಲ್ಲಿ ಸಾಕಷ್ಟು ಹುಡುಗರು ಗರಿಗಳನ್ನು ಕಟ್ಟಿಕೊಳ್ತಿದಾರೆ. ಸಿನಿಮಾ ಮಾಡಬೇಕು ಎಂದು ಬರುವ ಯಾವ ಉತ್ಸಾಹಿಗಳನ್ನೂ ಅವರು ಬೇಡ ಅನ್ನೋಲ್ಲ. ಸಾಕಷ್ಟು ಸಿನಿಮಾಗಳು ಆಗಲಿಕ್ಕೆ ಅವರು ಕಾರಣರಾಗ್ತಿದಾರೆ. ಒಬ್ಬರಿಂದ ಇನ್ನೊಬ್ಬರು ಬೆಳೀತಿದ್ದಾರೆ. ಹೊಸ ಪ್ರತಿಭೆಗಳು ರೂಪಿಸಿದ ಚಿತ್ರಕಥೆ, ಸಂಗೀತಕ್ಕೆ ಪೌಷ್ಟಿಕಾಂಶಗಳನ್ನು ಸೇರಿಸುವ ಕೆಲಸವನ್ನು ಮೇಷ್ಟ್ರು ಮಾಡುತ್ತಾರೆ' ಎನ್ನುವುದು `ಭಟ್ಟರ ಗರಡಿ'ಯ ಬಗ್ಗೆಯ ಸತೀಶ್ ನೀಡುವ ಚಿತ್ರಣ.

ಸ್ಕೂಲಿನಿಂದ ಸತೀಶ್ ಮತ್ತು ಭಟ್ಟರ ಪರಿಚಯದ ಮೊದಲ ದಿನಗಳಿಗೆ ಬರೋಣ. ಆ ಪರಿಚಯ ಶುರುವಾದುದೂ ಬೈಗುಳಗಳ ಮೂಲಕವೇ. ಸಿಹಿಕಹಿ ಚಂದ್ರು ಅವರ `ಪರಮಪದ' ಧಾರಾವಾಹಿ ಸಂದರ್ಭ. ಸಂಭಾಷಣೆಯೊಂದನ್ನು ಸತೀಶ್ ಒಪ್ಪಿಸುವಾಗ- `ಕಲ್ಲು ತಗೊಂಡು ಹೊಡೀತೀನಿ. ಸರಿಯಾಗಿ ಹೇಳು' ಎಂದು ಭಟ್ಟರು ಗದರಿದರು. ಆಮೇಲೆ ಅವರಿಗೆ, `ಸತೀಶ ನೀನಾಸಂ ಪ್ರತಿಭೆ' ಎಂದು ಗೊತ್ತಾಯಿತು. ಆತನ ವಾಯ್ಸು ಮತ್ತು ನಟನೆಯ ಸಾಮರ್ಥ್ಯದ ಬಗ್ಗೆ ಲವ್ವ ಶುರುವಾಯ್ತು.

ಕಿರುತೆರೆ ಧಾರಾವಾಹಿಗಳಿಂದ ಭಟ್ಟರು `ಮುಂಗಾರುಮಳೆ'ಗೆ ಹೋದರು. ಆಮೇಲೆ `ಗಾಳಿಪಟ' ಹಾರಿಸಿದರು. `ಮನಸಾರೆ' ಸಮಯದಲ್ಲಿ ಸತೀಶನ ನೆನಪಾಗಿ- `ನಿಂಗೊಂದು ಪಾತ್ರ ಇದೆ, ಕೇಬಲ್ ಆಪರೇಟರ್‌ನದು, ಬಾ' ಎಂದು ಕರೆದರು. ಅಲ್ಲಿಂದ ಇಬ್ಬರ ನಂಟಿನ ಸೆಕೆಂಡ್ ಇನಿಂಗ್ಸು. `ಪಂಚರಂಗಿ'ಯಲ್ಲಿ ಒಳ್ಳೆಯ ಪಾತ್ರ, ಅದಾದ ಮೇಲೆ `ಡ್ರಾಮಾ' ಚಿತ್ರದ ಅವಳಿ ನಾಯಕರಲ್ಲಿ ಒಬ್ಬನಾದ ಸತೀಸನ ಪಾತ್ರ. ಇದೀಗ, ಗರಡಿಯಾಚೆಗಿನ ಚಿತ್ರಗಳಲ್ಲೂ ಸತೀಶ್ ಅವರನ್ನು ನಾಯಕನ ಪಾತ್ರದ ಅವಕಾಶಗಳು ಹುಡುಕಿಕೊಂಡು ಬಂದಿವೆ.

ಸತೀಶ್‌ಗೆ ಭಟ್ಟರ ಆಫೀಸು ಕಂ ಸ್ಕೂಲು ತನ್ನ ಎರಡನೇ ಮನೆ ಅನ್ನಿಸಿದೆ. ಗುರು ಮಾತ್ರವಲ್ಲ, ಅಣ್ಣನ ರೂಪದಲ್ಲೂ ಫ್ರೆಂಡಿನ ರೂಪದಲ್ಲೂ ಭಟ್ಟರು ಕಾಣಿಸುತ್ತಿದ್ದಾರೆ. ಎಷ್ಟು ಜನ ಶಿಷ್ಯರಿಗೆ ಅಣ್ಣನಂಥ, ಗೆಳೆಯನಂಥ ಮೇಷ್ಟ್ರು ದೊರೆಯಲು ಸಾಧ್ಯ?

ಹುರಿದುಂಬಿಸುವ ಹಿರಿದುಂಬಿ!

ಗಡ್ಡ ವಿಜಿ ಯೋಗರಾಜ ಭಟ್‌ರ ಗರಡಿಯ ಮತ್ತೊಂದು ಯುವ ಪ್ರತಿಭೆ. `ಅವರು ಮನುಷ್ಯರ ರೀತಿ ನಡೆದುಕೊಳ್ಳಲ್ಲ. ದೇವರ ರೀತಿ ನಡೆದುಕೊಳ್ತಾರೆ' ಎನ್ನುವುದು ವಿಜಿಯ ಆರಾಧನೆಯ ಮಾತು. `ಏನದು ದೇವರ ಮಹಾತ್ಮೆ?'

`ತನ್ನ ಅನುಯಾಯಿಗಳ ವೃತ್ತಿಜೀವನದ ಬಗ್ಗೆ ಮಾತ್ರವಲ್ಲದೆ ವೈಯಕ್ತಿಕ ಜೀವನದ ಬಗ್ಗೆಯೂ ಭಟ್ಟರು ಕಾಳಜಿ ವಹಿಸುತ್ತಾರೆ. ಹುಡುಗರು ದಾರಿ ತಪ್ಪಿದರೆ ಬುದ್ಧಿ ಹೇಳ್ತಾರೆ. ಅವರ ಮನೆಗಳಿಗೇ ಹೋಗಿ ಹಿರಿಯರ ಜೊತೆ ಮಾತನಾಡ್ತಾರೆ. ಶಿಷ್ಯರ ಹೆಂಡತಿ ಮಕ್ಕಳನ್ನು ಆಫೀಸಿಗೆ ಕರೆಸಿ ಮನೆವಾರ್ತೆ ಹಂಚಿಕೊಳ್ಳೋದೂ ಇದೆ' ಎಂದರು ವಿಜಿ.

ಅವರು ತಮ್ಮ ಮಾತಿಗೆ ಪೂರಕವಾಗಿ ಒಂದು ಉದಾಹರಣೆಯನ್ನೂ ನೀಡಿದರು: `ಸಿನಿಮಾ ಹುಚ್ಚಿನ ಒಬ್ಬ ಹುಡುಗನಿದ್ದ. ಕುಡಿತ ಅವನ ಇನ್ನೊಂದು ವ್ಯಸನ. ಕುಡಿದಾಗ ಸಿಕ್ಕಾಪಟ್ಟೆ ಮಾತು. ತೂತುಬಾಯಿ ಹುಡುಗ ಎಂದೇ ಗಾಂಧಿನಗರದಲ್ಲಿ ಫೇಮಸ್ ಆಗಿದ್ದ. ಆ ಹುಡುಗನ ಮನೆಗೆ ಹೋದ ಭಟ್ಟರು ತಿಳಿವಳಿಕೆ ಹೇಳಿದ್ದಷ್ಟೇ ಅಲ್ಲದೆ, ಚಿಕಿತ್ಸಾ ಕೇಂದ್ರವೊಂದಕ್ಕೆ ಸೇರಿಸಿ ಕುಡಿತ ಬಿಡಲು ನೆರವಾದರು. ಅವನೀಗ ನೆಟ್ಟಗಿದ್ದಾನೆ'.

`ಭಟ್ಟರು ಅದ್ಭುತವಾದ ಹಾಡು ಬರೀತಾರೆ. ಆದರೆ ಬರೆದುದು ತಮಗೇ ಇರಲಿ ಎಂದು ಇಟ್ಟುಕೊಳ್ಳಲ್ಲ. ಯಾರು ಕೇಳಿದರೂ ಭೇದಭಾವ ಇಲ್ಲದೆ ಕೊಟ್ಟುಬಿಡ್ತಾರೆ. ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಎನ್ನುವ ನಿಲುವು ಅವರದು'- ಇದು ವಿಜಿ ಹತ್ತಿರದಿಂದ ಕಂಡಿರುವ ಮೇಷ್ಟ್ರ ವ್ಯಕ್ತಿತ್ವ. ಬೇರೆಯವರ ಮಾತಿರಲಿ, ಸ್ವತಃ ವಿಜಿ ಕೂಪ ಮಂಡೂಕದ ಸ್ಥಿತಿಯಲ್ಲಿ ನರಳುತ್ತಿದ್ದರು. `ಸುಮ್ಮನೆ ಕೂತಿರಬಾರದು, ನಿರ್ದೇಶನ ಮಾಡು' ಎಂದು ಭಟ್ಟರು ಎಷ್ಟು ಹುರಿದುಂಬಿಸಿದರೂ `ನನಗೆ ಯೋಗ್ಯತೆ ಇಲ್ಲ' ಎಂದು ವಿಜಿಗೆ ಅನ್ನಿಸುತ್ತಿತ್ತು. ಸಹಾಯಕ ನಿರ್ದೇಶಕ ಆಗಿರೋದು ಸಾಲದೇ ಎಂದು ಸುಮ್ಮನಿದ್ದರು.

ಕಿರುತೆರೆ ದಿನಗಳಿಂದಲೂ ಭಟ್ಟರ ಜೊತೆಗೆ ವಿಜಿಯ ಪರಿಚಯ. ಸೆಟ್ ಬಾಯ್ ರೀತಿ ಇದ್ದ ಹುಡುಗನನ್ನು ಭಟ್ಟರು ಕಾಡುಹರಟೆಯಲ್ಲಿ ಸೇರಿಸಿಕೊಳ್ಳುತ್ತಿದ್ದರು. ಹುಡುಗ ಗೀಚಿದ ಕವಿತೆಗಳಿಗೆ `ಶಹಭಾಸ್' ಎನ್ನುತ್ತಿದ್ದರು. ಆ ಮೆಚ್ಚುಗೆಯೇ `ಸಿನಿಮಾ ಮಾಡು' ಎನ್ನುವ ಒತ್ತಡವಾಗಿ ಬದಲಾಯಿತು. ಕೊನೆಗೆ, ಮೇಷ್ಟ್ರ ಒತ್ತಡ ತಡೆಯಲಾಗದೆ ವಿಜಿ ಒಂದು ಸ್ಕ್ರಿಪ್ಟ್ ಮಾಡಿದಾಗ, `ಅದ್ಭುತವಾಗಿದೆ, ಮಾಡು' ಎಂದು ಭಟ್ಟರು ಬೆನ್ನು ತಟ್ಟಿದರು. `ಅವರ ಯೋಗದಿಂದ ನಿರ್ದೇಶಕನಾದೆ' ಎನ್ನುತ್ತಾರೆ ವಿಜಿ. ಅವರೀಗ ತಮ್ಮ ಚೊಚ್ಚಿಲ ನಿರ್ದೇಶನದ `ಪಾಪಸ್‌ಕಳ್ಳಿ' ಚಿತ್ರವನ್ನು ತೆರೆಗೆ ತರುವ ಹುಮ್ಮಸ್ಸಿನಲ್ಲಿದ್ದಾರೆ.

ಯೋಗರಾಜ ಭಟ್ ತಾರಾಗಣದಲ್ಲಿ ಇರುವುದು `ಪಾಪಸ್‌ಕಳ್ಳಿ' ಚಿತ್ರದ ವಿಶೇಷ. ಜೈಲರ್‌ನ ಪಾತ್ರದಲ್ಲಿ (ಜೈಲಿನ ಖೈದಿಗಳಿಗೆ ಮೇಷ್ಟ್ರು) ಅವರು ಅದ್ಭುತವಾಗಿ ನಟಿಸಿದ್ದಾರಂತೆ. ಗುರುಗಳಿಗೆ ಆಕ್ಷನ್-ಕಟ್ ಹೇಳಲಿಕ್ಕೆ ವಿಜಿ ಹೆದರಿದ್ದರಂತೆ. ಆ ಅಳುಕು ಇದ್ದುದು ಶೂಟಿಂಗ್ ಶುರು ಆಗೋವರೆಗೆ ಮಾತ್ರ. ಚಿತ್ರೀಕರಣದ ಸಂದರ್ಭದಲ್ಲಿ ಅವರು ಗುರು ಎನ್ನೋದೆ ಮರೆತುಹೋಗಿತ್ತು. ಈ ಆತ್ಮವಿಶ್ವಾಸ ಬಂದುದು ಗುರುಕರುಣೆಯಿಂದಲೇ!

ಕನ್ನಡ ಮೇಷ್ಟ್ರು...

ಯಾವುದೋ ಕಾಲೇಜಿನಲ್ಲಿ ಕನ್ನಡ ಪಾಠ ಮಾಡಿಕೊಂಡು ಇರಬೇಕಿದ್ದವರು ದಾರಿ ತಪ್ಪಿ ಸಿನಿಮಾಕ್ಕೆ ಬಂದಿದ್ದಾರೆ ಎಂದು ಭಟ್ಟರನ್ನು ಹತ್ತಿರದಿಂದ ನೋಡಿರುವ ಕೆಲವರಿಗಾದರೂ ಅನ್ನಿಸಿರಬೇಕು. ಪವನ್‌ಕುಮಾರ್ ಅವರಿಗಂತೂ ಇಂಥ ಅನುಭವ ಆಗಿದೆ.

`ಭಟ್ಟರ ಜೊತೆ ಸೇರುವವರೆಗೂ ನನಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಸಿನಿಮಾಗೆ ಬರೆಯುವಷ್ಟರ ಮಟ್ಟಿಗೆ ನನ್ನ ಕನ್ನಡ ಸುಧಾರಿಸಿದೆ' ಎನ್ನುವ ಪವನ್ ಪಾಲಿಗೆ ಭಟ್ಟರು ಒಳ್ಳೆಯ ಕನ್ನಡ ಮೇಷ್ಟ್ರು. (ಬೇಕಿದ್ದರೆ ಅವರನ್ನು ಫಿಲಂ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರು ಎನ್ನೋಣ).

ಪವನ್ ಸಿನಿಮಾಕ್ಕೆ ಬಂದುದು ನಟರಾಗಿ, ಸೂರಿ ನಿರ್ದೇಶನದ `ಇಂತಿ ನಿನ್ನ ಪ್ರೀತಿಯ' ಚಿತ್ರದ ಮೂಲಕ. ಸೂರಿ ಮತ್ತು ಭಟ್ಟರದು ಗಳಸ್ಯ ಕಂಠಸ್ಯವಷ್ಟೇ. ಹಾಗಾಗಿ ಭಟ್ಟರ ಪರಿಚಯ ಪವನ್‌ರಿಗೆ ಆಗಲು ಹೆಚ್ಚು ದಿನ ಬೇಕಾಗಲಿಲ್ಲ. ಆಸಾಮಿ ಇಷ್ಟವಾದರು. ಅವರ ಯೋಚನಾ ಧಾಟಿ ಭಿನ್ನವಾಗಿದೆ ಅನ್ನಿಸಿತು. ಗರಡಿ ಮನೆ ಪ್ರವೇಶವೂ ನಡೆಯಿತು. `ಮನಸಾರೆ' ಮತ್ತು `ಪಂಚರಂಗಿ' ಚಿತ್ರಗಳ ಬರವಣಿಗೆಯಲ್ಲಿ ಪವನ್ ಪೆನ್ನಿನ ಮಸಿಯೂ ಇತ್ತು.

`ಭಟ್ಟರ ಪರಿಚಯ ಆಗುವ ಮೊದಲು ನಾನು ಹೆಚ್ಚು ನೋಡುತ್ತಿದ್ದುದು ಕಲಾತ್ಮಕ ಸಿನಿಮಾಗಳನ್ನು. ಗರಡಿ ಮನೆ ಸೇರಿದ ನಂತರ ಕಮರ್ಷಿಯಲ್ ಚಿತ್ರಗಳ ಬಗೆಗಿನ ಒಲವು ಶುರುವಾಯಿತು. ವ್ಯಾಪಾರಿ ಸಿನಿಮಾಗಳಲ್ಲಿ ಕಲಾತ್ಮಕ ಅಂಶಗಳನ್ನು ಕಸಿ ಮಾಡುವ ವಿದ್ಯೆಯ ಪರಿಚಯವೂ ಆಯಿತು' ಎಂದು ವಿಶ್ಲೇಷಿಸುತ್ತಾರೆ ಪವನ್. ಅವರ ಮಾತಿಗೆ ಉದಾಹರಣೆಯಾಗಿ, `ಲೈಫು ಇಷ್ಟೇನೆ' ಚಿತ್ರ ಸಹೃದಯರ ಗಮನಸೆಳೆದಿದೆ. ಪವನ್ ನಿರ್ದೇಶನದ ಎರಡನೇ ಸಿನಿಮಾ `ಲೂಸಿಯಾ' ಇದೀಗ ತೆರೆಗೆ ಸಿದ್ಧವಾಗಿದೆ. ಜುಲೈ ತಿಂಗಳ 20ರಂದು `ಲೂಸಿಯಾ'ದ ಪ್ರೀಮಿಯರ್ ಶೋ, ಲಂಡನ್‌ನಲ್ಲಿ!

ಗರಡಿ ಮನೆಯಲ್ಲಿನ ಸಾಮು ಚಟುವಟಿಕೆಗಳನ್ನು ಪವನ್ ಬಣ್ಣಿಸುವುದು ಹೀಗೆ: `ಅಲ್ಲಿನದು ಮುಕ್ತ ವಾತಾವರಣ. ಇಡೀ ದಿನ ಸಿನಿಮಾ ನೋಡಿದರೂ ಯಾರೂ ಏನೂ ಹೇಳೊಲ್ಲ. ಯಾರಾದರೂ ಸ್ಕ್ರಿಪ್ಟ್ ಮಾಡಿದರೆ ಅದರ ಬಗ್ಗೆ ಚರ್ಚೆ ನಡೆಯುತ್ತದೆ. ಯಾರಾದ್ರೂ ಮುಂದೆ ಬರ್ತಾರೆ ಎಂದರೆ ನಮಗೆ ಸ್ಪರ್ಧೆಯ ಭಯ ಇಲ್ಲ. ಅವರಿಗೆ ಬೆಂಬಲ ಕೊಡ್ತೇವೆ. ಅಷ್ಟರಮಟ್ಟಿಗಿನ ಆರೋಗ್ಯಕರ ಮನಸ್ಥಿತಿ ನಮ್ಮಲ್ಲಿದೆ'.

ಅನೌಪಚಾರಿಕ ಶಾಲೆ
ಒಳ್ಳೆಯ ಮೇಷ್ಟ್ರು ಇರುವ ಶಾಲೆಯಲ್ಲಿ ಮಕ್ಕಳ ಗದ್ದಲ ಹೆಚ್ಚು. ಯೋಗರಾಜ ಭಟ್ ಕಚೇರಿಯ ಶಬ್ದಪ್ರಸಂಗವೇನೂ ಸಣ್ಣದಲ್ಲ. ಒಬ್ಬರು ಕೀಬೋರ್ಡ್‌ನಲ್ಲಿ ಏನನ್ನೋ ಹುಡುಕುತ್ತಾ ಕಂಪ್ಯೂಟರ್ ಪರದೆಯ ಮೇಲಿನ ಗೆರೆಗಳ ಏರಿಳಿತದಲ್ಲಿ ಕಳೆದುಹೋಗಿದ್ದರೆ, ಮತ್ತೊಬ್ಬರು ಪುಸ್ತಕವೊಂದರಲ್ಲಿ ಮುಳುಗಿಹೋಗಿರುತ್ತಾರೆ. ಟೇಬಲ್ ಟೆನ್ನಿಸ್ ಆಟ, ಹರಟೆ, ಸಿನಿಮಾ ನೋಟ- ಹೀಗೆ ಅನೇಕ ಚಟುವಟಿಕೆಗಳಿಗೆ  ಕಚೇರಿ ವೇದಿಕೆ ಆಗಿರುತ್ತದೆ. ಮೂಲೆಯ ಕೋಣೆಯೊಂದರಲ್ಲಿ ಚಹಾ ಬಟ್ಟಲುಗಳ ಬದಲಿಸುತ್ತಾ ಕೂತಿರುವ ಮೇಷ್ಟ್ರು.

ಅವರ ಎದುರಿನಲ್ಲಿ ಬೂದಿಯ ಸಣ್ಣದೊಂದು ಕುಂಡ ಹಾಗೂ ಆಗಷ್ಟೇ ಹೆರೆಸಿಕೊಂಡಂತೆ ಕಾಣಿಸುವ ಬಣ್ಣಬಣ್ಣದ ಸೀಸದಕಡ್ಡಿಗಳು. ಮೇಜಿನ ಮೇಲಿನ ಬಿಳಿಹಾಳೆಗಳ ಮೇಲೆ ಬಿಡಿ ಬಿಡಿ ಸಾಲುಗಳು, ಟಿಪ್ಪಣಿಗಳು, ಕಥೆಯ ಭ್ರೂಣಗಳು. ಬರವಣಿಗೆಯ ನಡುವೆಯೇ ಮಾತು-ಕತೆ. ಇಂಥ ಪರಿಸರದ ಕಚೇರಿಯನ್ನು ಕೆಲವರು ಶಾಲೆಯೆಂದೂ ಮತ್ತೆ ಕೆಲವರು ಗರಡಿಯೆಂದೂ ಕರೆಯುವುದಿದೆ.

ಈ ಶಾಲೆ / ಗರಡಿ ಪರಿಸರದಿಂದಲೇ  `ಮುಂಗಾರುಮಳೆ'ಯ ಗಣೇಶ್, `ದುನಿಯಾ'ದ ವಿಜಯ್, `ಮನಸಾರೆ'ಯ ದಿಗಂತ್, `ಡ್ರಾಮಾ'ದ ಸತೀಶ್ ನಾಯಕರಾಗಿ ವರ್ಚಸ್ಸು ಬೆಳೆಸಿಕೊಂಡಿದ್ದು. ಅಷ್ಟು ಮಾತ್ರವೇಕೆ, `ದುನಿಯಾ'ದ ಸೂರಿ ಕೂಡ ಗರಡಿ ಮನೆಯ ಹಿರಿಯ ಸದಸ್ಯರು.

ನಿರ್ದೇಶಕ ಪ್ರೀತಂ ಗುಬ್ಬಿ, ಛಾಯಾಗ್ರಾಹಕರಾದ ಕೃಷ್ಣ, ಸತ್ಯ ಹೆಗಡೆ ಅವರಿಗೂ ಗರಡಿಯ ಪರಿಸರ ಹೊಸತೇನಲ್ಲ. ಈ ಹಳಬರ ಜೊತೆಗೆ ಹೊಸ ಸದಸ್ಯರ ಆಗಮನ ನಿರಂತರವಾಗಿದೆ. ಡಿಸೈನರ್ ಸಾಯಿ, ರಮೇಶ್, ರಾಜಶೇಖರ್ ಪಾಟೀಲ್- ಹೀಗೆ ಹೊಸ ಹುಡುಗರು ಸಿನಿಮಾ ಅಂಗಳದಲ್ಲಿ ತಮ್ಮ ಕನಸುಗಳನ್ನು ಹರವಿಕೊಂಡಿದ್ದಾರೆ.

ಯೋಗರಾಜ ಭಟ್ಟರ ನೇತೃತ್ವದ ಸಿನಿಮಾ ಉತ್ಸಾಹಿಗಳ ಚಟುವಟಿಕೆಯ ಕೇಂದ್ರವನ್ನು `ಶಾಲೆ' ಎಂದು ಕರೆಯಲಿಕ್ಕೆ ಕೆಲವರಿಗೆ ಮುಜುಗರವೂ ಇದೆ. ಗಡ್ಡ ವಿಜಿ ಹೇಳುವಂತೆ- `ಪಾಠಶಾಲೆ ಅನ್ನೋದನ್ನ ಸ್ವತಃ ಭಟ್ಟರು ಒಪ್ಪೋದಿಲ್ಲ. ಟ್ಯಾಲೆಂಟ್ ಹೊರಹೊಮ್ಮಿಸುತ್ತೇನೆ ಎನ್ನುವ ರೀತಿ ಅವರದು. ಕಕ್ಕ ಮಾಡಿಕೊಂಡಿದ್ದೀಯ, ತೊಳ್ಕೋ. ನೀರನ್ನು ನಾನು ತೋರಿಸುತ್ತೇನೆ' ಎನ್ನುವುದು ಅವರ ನೀತಿ. ತೊಳೆದುಕೊಳ್ಳುವುದನ್ನು ಕಲಿಸುವಾತನೂ ಗುರುವೇ ಅಲ್ಲವೇ?

ಹಾಂ, ಭಟ್ಟರು `ಮುಂದೆ ಬನ್ನಿ' ಎಂದು ತಮ್ಮ ಗರಡಿಯ ಪೈಲ್ವಾನರನ್ನು ಹುರಿದುಂಬಿಸುವುದು ಮಾತ್ರವಲ್ಲ, ಅವರ ಸಾಮು ಎಲ್ಲಿಗೆ ಬಂತು? ಅದರಲ್ಲೇನಾದರೂ ಐಬಿದೆಯಾ? ಎಂದೂ ನಿಗಾವಹಿಸುತ್ತಾರೆ. ಎಡವಿದರೆ ಕೈ ನೀಡುತ್ತಾರೆ.

ಎಂಬತ್ತು ತೊಂಬತ್ತರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ಶಿಷ್ಯರು ಎಂದು ಹೇಳಿಕೊಳ್ಳುವ ಸಾಕಷ್ಟು ಮಂದಿ ಸಿನಿಮಾದಲ್ಲಿದ್ದರು. ಆನಂತರ `ಕಾಶೀನಾಥ್ ಹುಡುಗರು' ಚಾಲ್ತಿಯಲ್ಲಿದ್ದರು. ಈಗ ಯೋಗರಾಜ ಭಟ್ ಹುಡುಗರ ಸರದಿ. `ಗರಡಿ ಮನೆ' ಹುಡುಗರು ಒಂದಷ್ಟು ಒಳ್ಳೆಯ ಸಿನಿಮಾಗಳನ್ನು ರೂಪಿಸುವುದು ಸಾಧ್ಯವಾದರೆ, ಅದು ಕನ್ನಡ ಸಿನಿಮಾಕ್ಕೆ ಸಲ್ಲುವ ಬಹುದೊಡ್ಡ ಕೊಡುಗೆಯಾಗುತ್ತದೆ. ಇದು ಯಾಕೆ ಸಾಧ್ಯವಾಗಬಾರದು? ಹೇಳಿಕೇಳಿ, ಇದು ಯುವ ಪೀಳಿಗೆಯ ಕಾಲ.

ಪುಟ್ಟಣ್ಣನವರ ಮಾದರಿ
ಆರ್. ನಾಗೇಂದ್ರರಾವ್, ಬಿ.ಆರ್. ಪಂತುಲು ಕನ್ನಡ ಸಿನಿಮಾದ ರೂವಾರಿಗಳಲ್ಲಿ ಪ್ರಮುಖರು. ಸಿನಿಮಾ ನಿರ್ಮಾಣ, ನಿರ್ದೇಶನದ ಜೊತೆಗೆ ಯುವ ಪ್ರತಿಭೆಗಳನ್ನು ರೂಪಿಸಿದ್ದು ಇಬ್ಬರ ಸಾಧನೆ. ಅಂಥ ಪ್ರತಿಭೆಗಳಲ್ಲೊಬ್ಬರು ಪುಟ್ಟಣ್ಣ ಕಣಗಾಲ್. ಪಂತುಲು ಅವರಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತ ಪುಟ್ಟಣ್ಣ, ತಮ್ಮದೇ ಆದ ನಿರ್ದೇಶನದ ಮಾದರಿಯೊಂದನ್ನು ಕನ್ನಡ ಚಿತ್ರರಂಗದಲ್ಲಿ ರೂಪಿಸಿದವರು.

ಈ `ಪುಟ್ಟಣ್ಣ ಮಾರ್ಗ'ದಲ್ಲಿ ನಡೆದ ಶಿಷ್ಯರ ಸಂಖ್ಯೆಯೂ ದೊಡ್ಡದಿದೆ. ವಿಷ್ಣುವರ್ಧನ್, ಅಂಬರೀಷ್‌ರಂಥ ಘಟಾನುಘಟಿ ತಾರೆಗಳು ಪುಟ್ಟಣ್ಣನವರ ಶೋಧವೇ. ಕಲ್ಪನಾ ಮಿನುಗುತಾರೆ ಆಗಿದ್ದು, ಆರತಿ ರಂಗನಾಯಕಿಯ ಪಟ್ಟ ಧರಿಸಿದ್ದು ಪುಟ್ಟಣ್ಣನವರ ಮಾಂತ್ರಿಕ ಸ್ಪರ್ಶದಲ್ಲೇ.

ನಿರ್ದೇಶಕ ಪಿ.ಎಚ್. ವಿಶ್ವನಾಥ್ ಪುಟ್ಟಣ್ಣನವರ ಗರಡಿಯಲ್ಲಿ ಸಾಮು ಮಾಡಿ ಗುರುವಿಗೆ ತಕ್ಕ ಶಿಷ್ಯ ಎನ್ನಿಸಿಕೊಂಡವರು. `ನೀನೊಂದು ಕಥೆ ಮಾಡು, ಅದನ್ನು ನಾನು ಪ್ರೊಡ್ಯೂಸ್ ಮಾಡ್ತೀನಿ' ಎಂದು ಹೇಳುವಷ್ಟು ವಿಶ್ವನಾಥ್‌ರ ಬಗ್ಗೆ ಗುರುಗಳಿಗೆ ಪ್ರೀತಿಯಿತ್ತು. ದತ್ತು, ರಾಮನಾಥ ಋಗ್ವೇದಿ, ಚಂದ್ರಹಾಸ ಆಳ್ವ ಅವರನ್ನೂ ಪುಟ್ಟಣ್ಣನವರ ಶಿಷ್ಯ ವಲಯದಲ್ಲಿ ಗುರ್ತಿಸಬಹುದು.

ಈಗಲೂ ಹೊಸ ನಿರ್ದೇಶಕರು ಪುಟ್ಟಣ್ಣನವರನ್ನು ತಮ್ಮ ಮಾನಸ ಗುರುವೆಂದು ಹೇಳುವುದಿದೆ. ವಿವಿಧ ತಲೆಮಾರುಗಳ ಪ್ರತಿಭಾವಂತ ನಿರ್ದೇಶಕರ ಗೌರವಕ್ಕೆ ಪಾತ್ರರಾದ ಕನ್ನಡದ ಏಕೈಕ ನಿರ್ದೇಶಕ ಪುಟ್ಟಣ್ಣ.

ಪುಟ್ಟಣ್ಣನವರಂತೆ ಒಂದಷ್ಟು ಪ್ರತಿಭಾವಂತರನ್ನು ರೂಪಿಸಿದ ಮತ್ತೊಬ್ಬ ನಿರ್ದೇಶಕ ಕಾಶೀನಾಥ್. ಪ್ರಸ್ತುತ ಕನ್ನಡ ಚಿತ್ರರಂಗದ ಬೇಡಿಕೆಯ ತಾರೆಗಳಲ್ಲೊಬ್ಬರಾದ ಉಪೇಂದ್ರ ಕಾಶೀನಾಥ್ ಗರಡಿಯಲ್ಲಿಯೇ ಸಿನಿಮಾ ಸೂಕ್ಷ್ಮಗಳನ್ನು ಕಲಿತವರು. ಸಂಗೀತ ನಿರ್ದೇಶಕ ವಿ. ಮನೋಹರ್ ಮತ್ತು ನಿರ್ದೇಶಕ ಸುನೀಲ್‌ಕುಮಾರ್ ದೇಸಾಯಿ ಅವರಿಗೂ ಕಾಶಿ ಮೇಷ್ಟ್ರ ವಾತ್ಸಲ್ಯ ಸಂದಿದೆ. ಈಗಲೂ ಸಕ್ರಿಯರಾಗಿರುವ ಕಾಶೀನಾಥ್, ಹೊಸ ನಿರ್ಮಾಪಕರಿಗೆ ತರಬೇತಿ ನೀಡುವ ಪ್ರಯತ್ನದಲ್ಲಿದ್ದಾರೆ.

ತೋರುಗಾಣಿಕೆ ಇಲ್ಲದ ವಾತ್ಸಲ್ಯ

ಯೋಗರಾಜ ಭಟ್ಟರು ತಾನು ನಿರ್ದೇಶಕ ಎನ್ನುವ ವಿಶೇಷ ಸ್ಥಾನದಲ್ಲಿ ನಿಂತು ಕಿರಿಯರೊಂದಿಗೆ ವರ್ತಿಸುವುದಿಲ್ಲ. ತನ್ನ ಎದುರಿನವರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಅರಿಯುವುದು ಅವರಿಗೆ ಕರಗತ ವಿದ್ಯೆ. ಟೀ ಹುಡುಗನ ಮನಸ್ಸನ್ನೂ ಅರ್ಥ ಮಾಡಿಕೊಳ್ಳಬಲ್ಲರು. ತೋರುಗಾಣಿಕೆ ಇಲ್ಲದ ವಾತ್ಸಲ್ಯ ಅವರ ಶಾಲೆಯಲ್ಲಿನ ಒಂದು ಮೌಲ್ಯ.

ವಿನೋದ ಪ್ರಜ್ಞೆ ಭಟ್ಟರ ಒಂದು ವಿಶೇಷ ಗುಣ. ಅದು ಆಧುನಿಕವಾದುದು, ಹಾಸ್ಯೋತ್ಸವಗಳಿಂದ ಬಂದುದಲ್ಲ. ತನ್ನನ್ನೂ ಸೇರಿದಂತೆ ಎಲ್ಲರನ್ನೂ ಗೇಲಿಗೆ ಒಳಪಡಿಸುವ ಗುಣವದು. ಈ ವಿನೋದ ಪ್ರಜ್ಞೆ ಶಾಲೆಯಲ್ಲಿ ಇರುವವರನ್ನು ಒಟ್ಟಿಗೆ ಹಿಡಿದಿಡುವ ಒಂದು ಸೂತ್ರ.

ಯೋಗರಾಜ ಭಟ್ಟರ ಕಚೇರಿ ಪ್ರವೇಶಿಸುವಾಗಲೇ ಟೇಬಲ್ ಟೆನ್ನಿಸ್ ಆಡುವ ಹುಡುಗರು ಕಾಣಿಸುತ್ತಾರೆ. ಈ ಟೇಬಲ್ ಟೆನ್ನಿಸ್ ಆಟ ಶಾಲೆಯ ರೂಪಕದಂತೆ ಕಾಣಿಸುತ್ತದೆ. ಬಿಜಿ ಆಗಿರಬೇಕು, ಸೋಲುಗೆಲುವುಗಳನ್ನು ಮೀರಿದ ಕ್ರೀಡಾಸ್ಫೂರ್ತಿ ನಮ್ಮದಾಗಬೇಕು ಎನ್ನುವುದನ್ನು ಈ ಆಟ ಧ್ವನಿಸುವಂತಿದೆ.
-ಜಯಂತ ಕಾಯ್ಕಿಣಿ .

ಹಳ್ಳ, ಹಗ್ಗ ಮತ್ತು ಹವಾ!

ಪ್ರತಿಭಾವಂತ ಯುವಕರ ತಂಡವೊಂದನ್ನು ರೂಪಿಸುವ ನನ್ನ ಆಸೆ ಹತ್ತು ಹನ್ನೆರಡು ವರ್ಷಗಳಷ್ಟು ಹಳೆಯದು. ಇಂಥ ಕುಟುಂಬಗಳನ್ನು ತಮಿಳು ತೆಲುಗುಗಳಲ್ಲಿ ನೋಡಿದ್ದೆ. ಅಂಥದೊಂದು ಕುಟುಂಬ ಕನ್ನಡದಲ್ಲಿ ಸಾಧ್ಯವಾಗುತ್ತಿರೋದು, ಹೊಸ ಪ್ರತಿಭೆಗಳು ಒಳ್ಳೆಯ ಸಿನಿಮಾ ಮಾಡೋದನ್ನು ನೋಡೋದು ಖುಷಿ. ಈ ವರ್ಷವೇ ನಾಲ್ಕೈದು ಸಿನಿಮಾಗಳು ಸೆಟ್ಟೇರಲಿವೆ. ಇನ್ನು ಮೂರು ನಾಲ್ಕು ವರ್ಷಗಳಲ್ಲಿ ಹೊಸ ಪೀಳಿಗೆಯ ತಂತ್ರಜ್ಞರು ಕನ್ನಡ ಸಿನಿಮಾದಲ್ಲಿ ಹವಾ ಎಬ್ಬಿಸಲಿದ್ದಾರೆ.

ಹುಡುಗರನ್ನು ಬರವಣಿಗೆಗೆ ಹಚ್ಚುವಂತೆ ಮಾಡೋದರಲ್ಲಿ ಒಂದು ಖುಷಿಯಿದೆ. ಅವರು ಹಳ್ಳಕ್ಕೆ ಬೀಳುವಾಗ ನಾನು ಹಗ್ಗ ಹಿಡಿದುಕೊಳ್ತೇನೆ. ಹಿಡಿದುಕೊಳ್ಳುವವರು ಒಬ್ಬರಿದ್ದಾರೆ ಎಂದರೆ ಬೀಳುವವರಿಗೂ ಒಂದು ಧೈರ್ಯ.

ಆರಂಭದ ದಿನಗಳಲ್ಲಿ ನನ್ನ ತಲೆ ಸವರುವವರು ಯಾರಾದರೂ ಸಿಕ್ಕಿದ್ದರೆ ನಾನೀಗ ಎಲ್ಲೋ ಇರುತ್ತಿದ್ದೆ. ನನಗೆ ಸಿಕ್ಕ ಗುರುಗಳೇನೂ ಸಾಮಾನ್ಯರಲ್ಲ. ಆದರೆ ನನ್ನ ತಾಲೀಮಿನ ದಿನಗಳಲ್ಲಿ ಅವರು ಕೂಡ ನನ್ನಂತೆಯೇ ಸಂಕ್ರಮಣಾವಸ್ಥೆಯಲ್ಲಿ ಇದ್ದರು.
-ಯೋಗರಾಜ ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT