ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಖರೀದಿ ಕೇಂದ್ರದಲ್ಲಿ ಅನ್ಯಾಯ: ಆರೋಪ

Last Updated 25 ಫೆಬ್ರುವರಿ 2012, 10:40 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಹಾನಗಲ್‌ನಲ್ಲಿ ತೆರೆಯಲಾದ ಭತ್ತದ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ದೊಡ್ಡ ಪ್ರಮಾಣದ ಅವ್ಯವಹಾರ ನಡೆಸಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಾನಗಲ್ ತಾಲ್ಲೂಕು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದೆ.

ರೈತರ ಭತ್ತದ ಬೆಳೆಗೆ ಸರಿಯಾದ ಬೆಲೆ ದೊರೆಯದ ಕಾರಣ ತೆರೆಯಲಾದ ಭತ್ತ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ರೈತರ ಭತ್ತ ಖರೀದಿಸುವುದಕ್ಕಿಂತ ವ್ಯಾಪಾರಿಗಳು ತಂದ ಭತ್ತವನ್ನೇ ಖರೀದಿಸುತ್ತಿದ್ದಾರೆ. ಖರೀದಿ ಕೇಂದ್ರ ತೆರೆದಿರುವುದು ರೈತರ ಸಲುವಾಗಿಯೋ ಅಥವಾ ವ್ಯಾಪಾರಿಗಳ ಸಲುವಾಗಿ ತೆರೆಯಲಾಗಿದೆಯೋ ಎಂಬುದು ತಿಳಿಯದಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ರೈತರು ತಂದ ಭತ್ತವನ್ನು ಜೊಳ್ಳು ಎಂದು ನಿರಾಕರಿಸಿ ಅದೇ ಭತ್ತವನ್ನು ರೈತರ ಹೆಸರಿನಲ್ಲಿ ವ್ಯಾಪಾರಿಗಳು ತಂದರೆ ಅವುಗಳನ್ನೂ ಖರೀದಿಸಲಾಗುತ್ತದೆ. ಇದರಿಂದ ರೈತರಿಗೆ ಹಾನಗಲ್ ಭತ್ತದ ಕೇಂದ್ರದಲ್ಲಿ ಅನ್ಯಾಯವಾಗುತ್ತಿದೆ ತಕ್ಷಣವೇ ಈಗಾಗಲೇ ಆಗಿರುವ ಅವ್ಯಹಾರದ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಮೂಲಕ  ರೈತರಿಗೆ ನ್ಯಾಯ ದೊರಕಿಸಿಕೊಡ ಬೇಕೆಂದು ಒತ್ತಾಯಿಸಿ ಹಾನಗಲ್ ತಾಲ್ಲೂಕು ಕಾಂಗ್ರೆಸ್ ಸಮಿತಿ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ಭತ್ತ ಖರೀದಿ ಕೇಂದ್ರ ಆರಂಭಿಸಿ ಒಂದೂವರೆ ತಿಂಗಳಾದರೂ ರೈತರು ಬೆಳೆದ ಭತ್ತವನ್ನು ತೆಗೆದುಕೊಂಡು ಹೋದರೆ, ಅಧಿಕಾರಿಗಳು ಸರ್ಕಾರದ ಮಾರ್ಗದರ್ಶನದ ಪ್ರಕಾರ ಭತ್ತ ಇರುವುದಿಲ್ಲ ಎಂದು ಹೇಳುವ ಮೂಲಕ ಗುಣಮಟ್ಟದ ಭತ್ತವನ್ನು ತೆಗೆದುಕೊಳ್ಳಲಾಗದೇ ರೈತರಿಗೆ ಅನ್ಯಾಯ ಮಾಡಲಾಗುತ್ತದೆ ಎಂದು ಆರೋಪಿಸಿದರು.

ಮಾರುಕಟ್ಟೆಗೆ ತಂದ ಭತ್ತವನ್ನು ವಾಪಸ್ಸು ತೆಗೆದುಕೊಂಡು ಹೋಗಲಾಗದೇ ರೈತರು ಸ್ಥಳೀಯ ವ್ಯಾಪಾಸ್ಥರು ಕೇಳಿದ ಬೆಲೆಗೆ ಕೊಟ್ಟು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದೇ ಭತ್ತವನ್ನು ವ್ಯಾಪಾಸ್ಥರು ರೈತರ ಹೆಸರಿನ ಪಹಣಿಯ ಮೂಲಕ ಖರೀದಿ ಕೇಂದ್ರಕ್ಕೆ ಸಾಗಿಸಿದರೆ, ಆ ಭತ್ತವನ್ನು ಯಾವುದೇ ತಕರಾರು ಇಲ್ಲದೇ ಖರೀದಿಸಿ ಗೋದಾಮು ತುಂಬಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಅಧಿಕಾರಿಗಳು ರೈತರಿಗೊಂದು, ವ್ಯಾಪಾರಸ್ಥರಿಗೊಂದು ನೀತಿ ಅನುಸರಿಸುತ್ತಿ ದ್ದಾರೆ. ತಕ್ಷಣವೇ ಜಿಲ್ಲಾಧಿಕಾರಿಗಳು ಭತ್ತ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಈಗಾಗಲೇ ಖರೀದಿಸಿರುವ ಭತ್ತದ ಸಂಗ್ರಹವನ್ನು ಪರಿಶೀಲಿಸಿ, ಅದರ ಗುಣಮಟ್ಟವನ್ನು ತನಿಖೆಗೊಳಪಡಿಸಬೇಕು ಎಂದು ರೈತರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರವನ್ನು  ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಎಂ.ಪಠಾಣ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಜ್ಜನಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ವಕ್ತಾರ ರಾಜಶೇಖರ ಸಾಲಿಮಠ, ಮುಖಂಡರಾದ ಜಿ.ಎಸ್.ದೇಶಪಾಂಡೆ, ಮಧು ಪಾಣಿಗಟ್ಟಿ, ಅಬ್ದುಲ್ ಸತ್ತರಸಾಬ ಅರಳೇಶ್ವರ, ಎಂ.ಎಂ.ಅಜೀಜ್‌ಮೀಯಾನವರ, ಆರ್.ಸಿ. ಹಿರೇಮಠ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಅರ್ಪಿಸುವ ಸಂದಂಭದಲ್ಲಿ   ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT