ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ: ಶೇ. 20 ಇಳುವರಿ ಹೆಚ್ಚಳ ನಿರೀಕ್ಷೆ

Last Updated 4 ಡಿಸೆಂಬರ್ 2012, 7:19 IST
ಅಕ್ಷರ ಗಾತ್ರ

ಸಕಲೇಶಪುರ: ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ ಯಂತ್ರ ನಾಟಿ ಹಾಗೂ ಲಘು ಪೋಷಕಾಂಶಗಳ ಬಳಕೆಗೆ ಹೆಚ್ಚು ಒತ್ತು ನೀಡಿದ್ದರ ಫಲವಾಗಿ ಭತ್ತದ ಬೆಳೆಯಲ್ಲಿ ಸರಿ ಸುಮಾರು ಶೇ 20ರ ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಲಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 9425 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.

ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇಲಾಖೆಯ ಭೂ ಚೇತನ ಯೋಜನೆ ಅಡಿಯಲ್ಲಿ ವಿವಿಧ ಲಘು ಪೋಷಕಾಂಶಗಳಾದ ಜಿಪ್ಸಮ್, ಜಿಂಕ್ ಸಲ್ಫೇಟ್ ಹಾಗೂ ಬೋರಾಕ್ಸ್ ಬಳಕೆಯನ್ನು ಉತ್ತೇಜಿಸ ಲಾಗಿದೆ. ಜೊತೆಗೆ ತಾಲ್ಲೂಕಿನಲ್ಲಿ 9 ನಾಟಿ ಯಂತ್ರಗಳನ್ನು ಸಹಾಯ ಧನದಲ್ಲಿ ರೈತರಿಗೆ ವಿತರಿಸುವ ಮೂಲಕ 600 ಎಕರೆ ಪ್ರದೇಶದಲ್ಲಿ ಯಂತ್ರದ ಮೂಲಕ ನಾಟಿ ಮಾಡಲಾಗಿದೆ. ನಾಟಿ ಮಾಡಿದ ಪ್ರತಿ ರೈತರಿಗೆ, ಪ್ರತಿ ಎಕರೆಗೆ ಒಂದು ಸಾವಿ ರ ರೂಪಾಯಿ ಸಹಾಯ ಧನ ವಿತರಣೆ ಮಾಡಲಾಗಿದೆ ಎಂದು ಸಹಾ ಯಕ ಕೃಷಿ ನಿರ್ದೇಶಕ ಜಿ.ಎಚ್.ಯೋಗೇಶ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಯಂತ್ರ ನಾಟಿಯ ಉಪಯೋಗ: ಯಂತ್ರ ನಾಟಿ ಮಾಡುವುದರಿಂದ ರೈತರು ಹಲವು ರೀತಿಯಲ್ಲಿ ಉಳಿತಾಯ ಕಂಡು ಕೊಂಡಿದ್ದಾರೆ. 4 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಿ, ಕೈ ನಾಟಿಯಲ್ಲಿ ಎಕರೆಗೆ ಗರಿಷ್ಠ ಸರಾಸರಿ 15 ಕ್ವಿಂಟಲ್ ಇಳುವರಿ ಪಡೆಯುತ್ತಿದ್ದರು. `ಯಂತ್ರ ನಾಟಿಯಲ್ಲಿ ಕೇವಲ 20 ಕೆಜಿ ಬಿತ್ತನೆ ಬೀಜ ಬಳಸಿ, ನಾಟಿ ಮಾಡುವ ಯಂತ್ರದ ಬಾಡಿಗೆ 2 ಸಾವಿರ ರೂಪಾಯಿ ಸೇರಿದಂತೆ ಎಕರೆಗೆ ಒಟ್ಟು 3 ಸಾವಿರ ರೂಪಾಯಿ ಖರ್ಚಾಗುತ್ತದೆ. ಜೊತೆಗೆ ಕಾರ್ಮಿಕರ ಸಮಸ್ಯೆ ಇದ್ದರೂ ಸಕಾಲದಲ್ಲಿ ನಾಟಿ ಮಾಡಿ, ಬೇಸಾಯದ ಖರ್ಚು ಉಳಿಸಿಕೊಂಡು ಎಕರೆಗೆ ಸರಾ ಸರಿ 24 ರಿಂದ 25 ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದೇವೆ.
ಸಹಾಯಕ ಕೃಷಿ ನಿರ್ದೇಶಕ ಜಿ.ಎಚ್.ಯೋಗೇಶ್ ಹಾಗೂ ಅವರ ಇಲಾಖೆಯ ಇತರ ಸಿಬ್ಬಂದಿ ಪ್ರೋತ್ಸಾಹ ಕಾರಣ' ಎಂದು ಜಾನೇಕೆರೆ ಗ್ರಾಮದ ಪ್ರಗತಿಪರ ರೈತ ಜೆ.ಜೆ.ರಮೇಶ್ ಹೇಳುತ್ತಾರೆ.

ಪ್ರಕೃತಿ ವೈಪರಿತ್ಯ, ಕಾರ್ಮಿಕ ಸಮಸ್ಯೆ, ಹೆಚ್ಚುತ್ತಿರುವ ರಸಗೊಬ್ಬರದ ಬೆಲೆ, ಬೆಳೆದ ಬಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಇರುವುದರಿಂದ ಹಲವಾರು ರೈತರು ಭತ್ತ ಬೆಳೆಯಲು ಹಿಂಜರಿ ಯುತ್ತಿರುವ ಈ ದಿನಗಳಲ್ಲಿ ಯಂತ್ರದ ನಾಟಿ ರೈತಬಂಧುವಾಗಿದೆ.

`ತಾಲ್ಲೂಕಿನಾದ್ಯಂತ 14 ಗ್ರಾಮಗಳಲ್ಲಿ ಕೃಷಿ ಇಲಾಖೆಯು ರೈತರ ಕ್ಷೇತ್ರ ಪಾಠ ಶಾಲೆಗಳನ್ನು ನಡೆಸುವ ಮೂಲಕ 10 ವಾರಗಳ ಸರಣಿ ತರಬೇತಿಯಲ್ಲಿ ಪ್ರಾಯೋಗಿಕವಾಗಿ ಸುಧಾರಿತ ಭತ್ತದ ಬೇಸಾಯ ತಾಂತ್ರಿಕತೆಗಳನ್ನು ರೈತರಿಗೆ ಪರಿಚಯಿಸಿಕೊಡಲಾಗಿದೆ.

ಇದರ ಫಲವಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಮುಂಗಾರಿನಲ್ಲಿ ಭತ್ತದ ಬೆಳೆ ಉತ್ತಮವಾಗಿ ಬಂದಿದೆ. ಲಘು ಪೋಷಕಾಂಶಗಳ ಬಳಕೆಯಿಂದ ಭತ್ತದಲ್ಲಿ ತೆಂಡೆಗಳು ಹಾಗೂ ಗೊನೆಗಳು ಹೆಚ್ಚು ಬಂದಿದ್ದು, ಎಕರೆಗೆ 28 ಕ್ವಿಂಟಾ ಲ್ ಇಳುವರಿ ಪಡೆದಿದ್ದೇನೆ' ಎಂದು ದಬ್ಬೇಗದ್ದೆ ಗ್ರಾಮದ ರೈತ ಕಾಂತರಾಜ್ ಖುಷಿಯಿಂದ ಹೇಳುತ್ತಾರೆ.

ಇದೀಗ ಭತ್ತದ ಬೆಳೆ ಕೊಯ್ಲು ಹಂತಕ್ಕೆ ಬಂದಿದ್ದು, ಕಟಾವು ಯಂತ್ರಗಳಿಗಾಗಿ ರೈತರು  ಸಹಾಯಕ ಕೃಷಿ ನಿರ್ದೇಶಕರು ಮೊ: 94800 78455, ಹಾಗೂ ಪ್ರಗತಿಪರ ರೈತ ಹುರುಡಿ ನರೇಶ್: 9448920180 ಸಂಪರ್ಕಿಸಬಹುದಾಗಿದೆ.

ಒಟ್ಟಿನಲ್ಲಿ ಯಂತ್ರದ ನಾಟಿ, ಯಂತ್ರದ ಕಟಾವು ಬಳಕೆಯಿಂದಾಗಿ ತಾಲ್ಲೂಕಿನಲ್ಲಿ ಭತ್ತದ ಬೇಸಾಯಕ್ಕೆ ರೈತರು ಉತ್ಸುಕರಾ ಗಿರುವುದು ಕಂಡು ಬಂದಿದೆ.                                                

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT