ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತಕ್ಕೆ ಹೊಸ ಬೆಂಬಲ ಬೆಲೆ ನಿಗದಿಗೆ ಒತ್ತಾಯ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಉತ್ಕೃಷ್ಟ ಗುಣಮಟ್ಟದ ಸೋನಾ ಮಸೂರಿ ಭತ್ತಕ್ಕೆ ರೂ 1,600 ಮತ್ತು ನಂತರದ ಗುಣಮಟ್ಟಕ್ಕೆ ಪ್ರತಿ ಕ್ವಿಂಟಲ್‌ಗೆ   ರೂ 1,500ರಂತೆ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಕೃಷಿ ಸಚಿವ ಉಮೇಶ್ ಕತ್ತಿ ನೇತೃತ್ವದ ರಾಜ್ಯದ ನಿಯೋಗ ಕೇಂದ್ರ ಸರ್ಕಾರವನ್ನು ಮಂಗಳವಾರ ಆಗ್ರಹಿಸಿದೆ.

ರೈತರು, ಶಾಸಕರು ಮತ್ತು ಅಧಿಕಾರಿಗಳನ್ನು ಒಳಗೊಂಡ ನಿಯೋಗ ಕೇಂದ್ರ ಕೃಷಿ ಸಚಿವ  ಶರದ್ ಪವಾರ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಆಹಾರ ಸಚಿವ ಪಿ.ವಿ. ಥಾಮಸ್ ಕೂಡಾ ಹಾಜರಿದ್ದರು.

ರಾಜ್ಯದಲ್ಲಿ 60 ಲಕ್ಷ ಟನ್ ಭತ್ತ ಬೆಳೆಯಲಾಗಿದೆ. ಸದ್ಯ ಉತ್ಕೃಷ್ಟ ಗುಣಮಟ್ಟಕ್ಕೆ ರೂ 1030 ಮತ್ತು ಅನಂತರದ ಗುಣಮಟ್ಟಕ್ಕೆ ಸಾವಿರ ರೂ ಬೆಂಬಲ ಬೆಲೆ ನಿಗದಿ ಆಗಿದ್ದರೂ ಮಾರುಕಟ್ಟೆಯಲ್ಲಿ ರೂ 775ರಿಂದ ರೂ 875 ಮಾತ್ರ ಸಿಗುತ್ತಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಸೋನಾ ಮಸೂರಿ ಭತ್ತ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಕೃಷಿ ವೆಚ್ಚ ದಿನೇ ದಿನೇ ಏರುತ್ತಿರುವ ಹಿನ್ನೆಲೆಯಲ್ಲಿ ರೈತರು ತೊಂದರೆಗೆ ಸಿಕ್ಕಿದ್ದಾರೆ.

ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿ ಬೆಲೆಯು ಪ್ರತಿ ಕ್ವಿಂಟಲ್‌ಗೆ  ರೂ 3000 ದಿಂದ ರೂ 4000   ಇದೆ. ಬೆಂಬಲ ಬೆಲೆಯ ಹೆಚ್ಚಳಕ್ಕೆ ರೈತರು ಹೋರಾಟದ ಹಾದಿ ಹಿಡಿದಿದ್ದಾರೆ. ಇದರಿಂದ ಕಾನೂನು- ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತಿದೆ. ಇವೆಲ್ಲ ಕಾರಣದಿಂದ ಬೆಂಬಲ ಬೆಲೆ ಹೆಚ್ಚಿಸುವಂತೆ ಸಚಿವರನ್ನು ಆಗ್ರಹಿಸಲಾಗಿದೆ.

ರಫ್ತಿಗೆ ಅವಕಾಶ: ಮನವಿ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಉಮೇಶ್ ಕತ್ತಿ, ಬಾಸುಮತಿಯಂತೆ ಸೋನಾ ಮಸೂರಿ ರಫ್ತಿಗೂ ಅವಕಾಶ ಕೊಡಬೇಕು. ಕಳೆದ ವರ್ಷ ಒಂದು ಲಕ್ಷ ಟನ್ ರಫ್ತಿಗೆ ಅನುಮತಿ ನೀಡಲಾಗಿತ್ತು.

ಆದರೆ, ಅಧಿಕಾರಿಗಳು ಸಹಕಾರ ಕೊಡಲಿಲ್ಲ ಎಂಬುದನ್ನು ಕೃಷಿ ಸಚಿವರ ಗಮನಕ್ಕೆ ತರಲಾಯಿತು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು ಎಂದರು.

ಅಲ್ಲದೆ, ರಾಜ್ಯದ ಮೂರೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ವರ್ಷಕ್ಕೆ ಸಾಕಾಗುವ ಸಕ್ಕರೆ ದಾಸ್ತಾನಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಪಂಜಾಬ್‌ನಲ್ಲೂ ಹೇರಳವಾಗಿ ಕಬ್ಬು ಬೆಳೆಯಲಾಗಿದ್ದು, ಸಕ್ಕರೆ ಕಾರ್ಖಾನೆಗಳಿಗೆ ರಫ್ತು ಅವಕಾಶ  ದೊರೆಯದಿದ್ದರೆ ಬೆಲೆ ಕುಸಿಯಲಿದೆ ಎಂಬ ಆತಂಕವನ್ನು ನಿಯೋಗ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿತು.

ರೇಷ್ಮೆ ಆಮದು ಸುಂಕ: ರೇಷ್ಮೆ ಬೆಲೆ ಕುಸಿತ ತಡೆಯುವ ಉದ್ದೇಶದಿಂದ ರೇಷ್ಮೆ ಆಮದು ಮೇಲಿನ ಸುಂಕವನ್ನು ಈಗಿನ ಶೇ.5ರಿಂದ ಶೇ.30ಕ್ಕೆ ಹೆಚ್ಚಿಸಬೇಕು ಎಂದು ನಿಯೋಗ ಒತ್ತಡ ಹಾಕಿತು. ಕರ್ನಾಟಕ ಹೆಚ್ಚು ರೇಷ್ಮೆ ಬೆಳೆಯಲಾಗಿದ್ದು ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆಂಬ ಅಂಶವನ್ನು ಸರ್ಕಾರದ ಗಮನಕ್ಕೆ ತರಲಾಯಿತು.

ರಾಜ್ಯಕ್ಕೆ 29 ಲಕ್ಷ ಟನ್ ರಸಗೊಬ್ಬರ ನಿಗದಿ ಆಗಿದೆ. ಆದರೆ, ಇದರಲ್ಲಿ ಅರ್ಧದಷ್ಟು ಮಾತ್ರ ಪೂರೈಕೆ ಆಗಿದೆ ಎಂಬ ಅಂಶವನ್ನು ರಸಗೊಬ್ಬರ ಸಚಿವ ಎಂ.ಕೆ. ಅಳಗಿರಿ ಅವರ ಅನುಪಸ್ಥಿತಿಯಲ್ಲಿ ಸಚಿವಾಲಯದ ಕಾರ್ಯದರ್ಶಿ ಗಮನಕ್ಕೆ ತರಲಾಯಿತು.

 ಇದನ್ನು ಸರಿಪಡಿಸುವ ಆಶ್ವಾಸನೆಯನ್ನು ಅವರು ನೀಡಿದ್ದಾರೆ. ಹೆಚ್ಚಿನ ಪ್ರಮಾಣದ ಗೊಬ್ಬರ ಪೂರೈಕೆ ಬೇಡಿಕೆಯನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT