ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತೆ- ಸ್ವಯಂ ವ್ಯವಸ್ಥೆಗೆ ಸೂಚನೆ

Last Updated 8 ಸೆಪ್ಟೆಂಬರ್ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು, ಪ್ರಮುಖ ಕೈಗಾರಿಕೆಗಳು, ಚಿನ್ನಾಭರಣ ಮಳಿಗೆಗಳು ಭದ್ರತೆಗಾಗಿ ಸ್ವಯಂ ವ್ಯವಸ್ಥೆ ಮಾಡಿಕೊಳ್ಳಬೇಕು. ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಸರ್ಕಾರಿ ಮತ್ತು ಖಾಸಗಿ ವಲಯದ ಪ್ರಮುಖ ಸಂಸ್ಥೆಗಳಿಗೆ ಹತ್ತು ದಿನಗಳಲ್ಲಿ ನೋಟಿಸ್ ನೀಡಲಾಗುವುದು ಎಂದು ಗೃಹ ಸಚಿವ ಆರ್.ಅಶೋಕ ಗುರುವಾರ ಇಲ್ಲಿ ಹೇಳಿದರು.

ದೆಹಲಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಗೃಹ ಮತ್ತು ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುನ್ನೆಚ್ಚರಿಕೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ರೂಪುರೇಷಗಳನ್ನು ಗೃಹ ಇಲಾಖೆ ಸಿದ್ಧಪಡಿಸಿ ನೋಟಿಸ್ ರೂಪದಲ್ಲಿ ಕಳುಹಿಸಿಕೊಡಲಿದೆ ಎಂದು ತಿಳಿಸಿದರು.

ಬಸ್ ಮತ್ತು ರೈಲು ನಿಲ್ದಾಣ, ಪ್ರಮುಖ ಜಲಾಶಯಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗುವುದು. ಗುಪ್ತಚರ ಇಲಾಖೆಯನ್ನು ಬಲಪಡಿಸಲಾಗುವುದು. ಅಲ್ಲಿ ಕೈಗೊಳ್ಳಬೇಕಾದ ಭದ್ರತೆಗೆ ಸಂಬಂಧಿಸಿದಂತೆ ಆಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗುವುದು. ಇನ್ನು ಮುಂದೆ ಚಿನ್ನಾಭರಣ ಮಳಿಗೆಗಳನ್ನು ಆರಂಭ ಮಾಡುವಾಗಲೇ ಭದ್ರತಾ ದೃಷ್ಟಿಯಿಂದ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ತಿಳಿಸಿದರು.

ಕಮಾಂಡೊ ಪಡೆಯ 80 ಮಂದಿ ಸಿಬ್ಬಂದಿ ಈಗಾಗಲೇ ತರಬೇತಿ ಪಡೆದಿದ್ದು, ಅವರನ್ನು ನಗರದಲ್ಲಿ ನಿಯೋಜಿಸಲಾಗಿದೆ. ಬರುವ ದಿನಗಳಲ್ಲಿ ಮೈಸೂರು, ಮಂಗಳೂರು, ಗುಲ್ಬರ್ಗ ಮತ್ತು ಹುಬ್ಬಳ್ಳಿಗೂ ಕಮಾಂಡೊ ಪಡೆಯನ್ನು ನಿಯೋಜಿಸಲಾಗುವುದು. ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ ಮೂರು ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಹೈಕೋರ್ಟ್ ಮತ್ತು ಸೆಷನ್ಸ್ ಕೋರ್ಟ್‌ಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗುವುದು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಅವರೊಂದಿಗೆ ಈ ಸಂಬಂಧ ಚರ್ಚೆ ನಡೆಸಿದ್ದು, ಅವರ ಸಲಹೆಗಳಿಗೆ ಅನುಗುಣವಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಹೈಕೋರ್ಟ್ ಆವರಣದಲ್ಲಿ ತಕ್ಷಣವೇ ಸಿಸಿ ಟಿವಿ, ಕ್ಯಾಮರಾ ಅಳವಡಿಸಲಾಗುವುದು. ನ್ಯಾಯಾಧೀಶರು, ವಕೀಲರು ಮತ್ತು ಸಾರ್ವಜನಿಕರು ಕೋರ್ಟ್ ಪ್ರವೇಶಿಸಲು ಪ್ರತ್ಯೇಕ ದ್ವಾರಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

 ಹೈಕೋರ್ಟ್ ಆವರಣದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡುವುದಿಲ್ಲ. ಪಾರ್ಕಿಂಗ್ ಜಾಗದಲ್ಲಿ ನ್ಯಾಯಾಧೀಶರ ವಾಹನಗಳ ನಿಲುಗಡೆಗೆ ಮಾತ್ರ ಅವಕಾಶ ನೀಡಲಾಗುವುದು. ಉಳಿದವರ ವಾಹನಗಳ ನಿಲುಗಡೆಗೆ ಕೋರ್ಟ್ ಎದುರು ವ್ಯವಸ್ಥೆ ಮಾಡಲಾಗುವುದು. ವಕೀಲರು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು ಮುಂದೆ ಎರಡು ಕಡೆಯಿಂದ ಮಾತ್ರ ವಿಕಾಸಸೌಧಕ್ಕೆ ಪ್ರವೇಶ ಕಲ್ಪಿಸಲಾಗುವುದು. ಕಮಾಂಡೊ ಪಡೆಯ ಸಿಬ್ಬಂದಿ ಶುಕ್ರವಾರ ವಿಧಾನಸೌಧ, ವಿಕಾಸಸೌಧ, ಬಸ್ ನಿಲ್ದಾಣ ಸೇರಿದಂತೆ ಜನದಟ್ಟಣೆ ಪ್ರದೇಶಗಳ ಪರಿಚಯ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT