ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತೆಯಲ್ಲಿ ಸಾಗಿದ ಜಂಬೂ ಸವಾರಿ

Last Updated 7 ಅಕ್ಟೋಬರ್ 2011, 5:25 IST
ಅಕ್ಷರ ಗಾತ್ರ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಕೇಂದ್ರ ಬಿಂದು ಬಲರಾಮ ಹೊತ್ತಿದ್ದ ಚಿನ್ನದ ಅಂಬಾರಿ ಬಿಗಿ ಭದ್ರತೆಯೊಂದಿಗೆ ಗುರುವಾರ ಸಾಗಿತು.

ಪೊಲೀಸರು, ಎನ್‌ಸಿಸಿ ಕೆಡೆಟ್‌ಗಳು ಅಂಬಾರಿ ಸುತ್ತಲೂ ಹಗ್ಗಗಳನ್ನು ಹಿಡಿದು ಮೆರವಣಿಗೆ ಉದ್ದಕ್ಕೂ ಸಾಗಿದರು. ಅಂಬಾರಿ ಬಳಿ ಯಾರೂ ಸುಳಿಯದಂತೆ ಇವರು ಕಟ್ಟೆಚ್ಚರ ವಹಿಸಿದ್ದರು.

ಮೆರವಣಿಗೆ ಹೊರಡುವ ಮುನ್ನ ಬಾಂಬ್ ಪತ್ತೆ ದಳ ಅರಮನೆ ಆವರಣದಲ್ಲಿ ಶ್ವಾನದೊಂದಿಗೆ ಶೋಧ ನಡೆಸಿದರು. ಅಲ್ಲದೆ ರಾಜಮಾರ್ಗದ ಇಕ್ಕೆಲಗಳಲ್ಲಿ ಶೋಧ ಕಾರ್ಯ ಮುಂದುವರೆಸಿದರು. ವಿವಿಧ ಜಿಲ್ಲೆಗಳಿಂದ ಒಟ್ಟು 17 ವಿಧ್ವಂಸಕ ಕೃತ್ಯ ತಡೆ ತಂಡ (ಎಎಸ್‌ಇ)ಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗಿತ್ತು. ಬಾಂಬ್ ಪತ್ತೆ, ಲೋಹ ಶೋಧಕ ಉಪಕರಣಗಳ ಜೊತೆಗೆ 12 ಶ್ವಾನಗಳನ್ನು ಕಾರ್ಯಾಚರಣೆಗೆ ಬಳಸಲಾಯಿತು.

ಒಟ್ಟು 3 ಸಾವಿರ ಪೊಲೀಸ್ ಸಿಬ್ಬಂದಿ, 1 ಸಾವಿರ ಗೃಹ ಪೊಲೀಸರನ್ನು ಭದ್ರತೆಗೆ ನಿಯೋಜಿ ಸಲಾಗಿತ್ತು. ಮೆರವಣಿಗೆ ಉದ್ದಕ್ಕೂ ಸ್ಥಳೀಯ ಪೊಲೀಸರು ಮತ್ತು ಹೊರಗಿನ ಪೊಲೀಸರು ಇಬ್ಬರನ್ನು ಭದ್ರತೆಗೆ ಹಾಕಲಾಗಿತ್ತು. ಎನ್‌ಸಿಸಿ ಕೆಡೆಟ್‌ಗಳು ಭದ್ರತೆಯಲ್ಲಿ ಗಮನ ಸೆಳೆದರು.

 ಎಡಬದಿಗೆ ವಾಲಿದ ಅಂಬಾರಿ!
ಬಲರಾಮ ಹೊತ್ತಿದ್ದ ಚಿನ್ನದ ಅಂಬಾರಿ ಎಡಬದಿಗೆ ಸ್ವಲ್ಪ ವಾಲಿತ್ತು. ಹಾಗಾಗಿ ಮೆರವಣಿಗೆ ಸಾಗುವ ಮಾರ್ಗಮಧ್ಯೆ ಮೂರ‌್ನಾಲ್ಕು ಬಾರಿ ಅಂಬಾರಿಯನ್ನು ಮಾವುತರು ಸರಿಮಾಡಿಕೊಂಡರು.

ಚಿನ್ನದ ಅಂಬಾರಿಗೆ ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡಿದ ಬಳಿಕ ಕಲಾ ಮೇಳಗಳು ಸ್ತಬ್ಧಚಿತ್ರಗಳು ಹೊರಡುವುದು ಹಿಂದಿನ ಸಂಪ್ರದಾಯ. ಆದರೆ ಕಲಾತಂಡಗಳು ಹೊರಡುವ ತನಕ ಎರಡು ಗಂಟೆ ಬಲರಾಮ ಚಿನ್ನದ ಅಂಬಾರಿ ಹೊತ್ತೇ ನಿಲ್ಲುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಕಳೆದ ವರ್ಷದಿಂದ ನಂದಿಕಂಬಕ್ಕೆ ಪೂಜೆ ಸಲ್ಲಿಸಿದ ಬಳಿಕ ಕಲಾಮೇಳ, ಸ್ತಬ್ಧಚಿತ್ರಗ ಳನ್ನು ಹೊರಡುವ ಬದಲಾವಣೆ ಮಾಡಲಾಗಿತ್ತು.

ಹೊಸ ಸಂಪ್ರದಾಯವನ್ನು ಈ ಬಾರಿಯೂ ಮುಂದುವರೆಸಲಾಯಿತು. ಕಲಾಮೇಳಗಳು ಸ್ತಬ್ಧಚಿತ್ರಗಳು ಹೊರಟ ಬಳಿಕ ತರಾತುರಿಯಲ್ಲಿ ಬಲರಾಮನಿಗೆ ಅಂಬಾರಿ ಹೊರಿಸುವ ಸಿದ್ಧತೆ ನಡೆಯಿತು. ಹಾಗಾಗಿ ಚಿನ್ನದ ಅಂಬಾರಿ ಕೊಂಚ ಎಡಕ್ಕೆ ವಾಲಿದಂತೆ ಇತ್ತು.

ಅಲ್ಲದೆ ಅಂಬಾರಿಗೆ ಹೂವುಗಳಿಂದ ವಿಶೇಷವಾಗಿ ಅಲಂಕರಿಸಿ, ಇಳಿಬಿಟ್ಟಿದ್ದರಿಂದ ಚಾಮುಂಡಿ ವಿಗ್ರಹ ಕಾಣುತ್ತಿರಲಿಲ್ಲ. ದೇವಿಯ ದರ್ಶನ ಪಡೆಯಲು ಪರದಾಡಿದರು.

ಬಾಲಭವನದಲ್ಲಿ ಗೃಹ ಸಚಿವ!
ಬನ್ನಿಮಂಟಪದ ಬಾಲಭವನದಲ್ಲಿ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದ್ದ ಕುರ್ಚಿಯಲ್ಲಿ ಗೃಹ ಸಚಿವ ಆರ್.ಅಶೋಕ್ ಮತ್ತು ಶಾಸಕ ಸಿ.ಟಿ.ರವಿ ಕುಳಿತು ದಸರಾ ಮೆರವಣಿಗೆಯನ್ನು ವೀಕ್ಷಿಸಿದರು. ಸಚಿವರು ಬರುವುದು ತಡವಾಗಿದ್ದರಿಂದ ಬಾಲಭವನದಲ್ಲೇ ಮೆರವಣಿಗೆ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು ಎಂದು ತಿಳಿದುಬಂತು.

ಸಿಕ್ಕಿಬಿದ್ದ ಜೇಬುಗಳ್ಳರು

ದಸರಾ ನೂಕುನುಗ್ಗಲಲ್ಲಿ ಸಾರ್ವಜನಿಕರಿಂದ ಪರ್ಸ್, ಮೊಬೈಲ್‌ಗಳನ್ನು ಕದಿಯಲು ಹೋಗಿ 6 ಮಂದಿ ಸಿಕ್ಕಿಬಿದ್ದರು. ಕಳ್ಳತನ ಮಾಡಲು ಯತ್ನಿಸಿದ ದುಷ್ಕರ್ಮಿಗಳಿಗೆ ನಾಗರಿಕರು ಧರ್ಮದೇಟು ನೀಡಿ ಹತ್ತಿರದಲ್ಲೇ ಇದ್ದ ಪೊಲೀಸರ ವಶಕ್ಕೆ ನೀಡಿದರು.

ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ
ದಸರಾ ಮೆರವಣಿಗೆಯನ್ನು ನೋಡಲು ರಸ್ತೆ ಬದಿಯಲ್ಲಿ ಸಾರ್ವಜನಿಕರು ಬೆಳಿಗ್ಗೆಯೇ ಜಾಗ ಹಿಡಿದು ಕಾದು ಕುಳಿತ್ತಿದ್ದರು. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ದಣಿವಾರಿದ್ದರಿಂದ ಕೆಲವರು ತಲೆಸುತ್ತಿ ಬಿದ್ದರು. ಮತ್ತೆ ಕೆಲವರು ನೂಕು-ನುಗ್ಗಲಾದ್ದರಿಂದ ಕಾಲಿಗೆ ಸಣ್ಣಪುಟ್ಟ ಗಾಯಗಳಾದವು. ಕೆ.ಆರ್.ವೃತ್ತದಲ್ಲಿ ಮಹಿಳೆ ಕಾಲಿಗೆ ಗಾಜು ಚುಚ್ಚಿ ಗಾಯಗೊಂಡರು. ಕೂಡಲೇ ಆಂಬುಲೆನ್ಸ್ ಮೂಲಕ ಇವರನ್ನೆಲ್ಲ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು.

ಲಾರಿ- ಬಸ್‌ಗಳಿಗೆ ಡಿಮಾಂಡ್!
ರಾಜಮಾರ್ಗದ ಇಕ್ಕೆಲಗಳಲ್ಲಿ ಜನವೋ ಜನ. ಮೆರವಣಿಗೆ ವೀಕ್ಷಿಸಲು ಮುಗಿಬೀಳುತ್ತಿದ್ದರು. ಸ್ಥಳಾವಕಾಶ ಸಿಗದೆ ಕೆಲವರು ಕೊನೆವರೆಗೂ ನಿಂತೇ ವೀಕ್ಷಿಸಿದರು. ಜನರು ನಿಂತಿದ್ದ ಹಿಂಬದಿಯಲ್ಲಿ ಲಾರಿ-ಬಸ್‌ಗಳನ್ನು ನಿಲ್ಲಿಸಿ ಕೆಲವರು 50 ರೂಪಾಯಿ ಪಡೆದು ಟಾಪ್ ಮೇಲೆ ಕೂರಲು ಅವಕಾಶ ಮಾಡಿಕೊಡುತ್ತಿದ್ದರು. ಇನ್ನು ಕೆಲವರು ಸರ್ಕಾರಿ ವಾಹನಗಳು, ಅಗ್ನಿಶಾಮಕ ವಾಹನಗಳು, ಪೊಲೀಸ್ ವಾಹನಗಳ ಮೇಲೆ ಕುಳಿತು ಮೆರವಣಿಗೆ ವೀಕ್ಷಿಸಿದರು.

ನೆಲದಲ್ಲೇ ಕುಳಿತ ಜಿ.ಪಂ. ಸದಸ್ಯೆ!
ಅರಮನೆ ಆವರಣದಲ್ಲಿ ಕುರ್ಚಿಗಳು ಭರ್ತಿಯಾಗಿದ್ದವು. ದೇವಲಾಪುರ ಕ್ಷೇತ್ರದ ಜಿ.ಪಂ. ಸದಸ್ಯೆ ಮಂಜುಳಾ ಪುಟ್ಟಸ್ವಾಮಿ ಅವರು ವಿಐಪಿ ಪಾಸ್ ಇದ್ದರೂ ಕುರ್ಚಿಗಳು ಲಭ್ಯವಾಗಲಿಲ್ಲ. ಅಧಿಕಾರಿಗಳ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ಇದರಿಂದ ಕುಪಿತರಾದ ಮಂಜುಳಾ ವ್ಯವಸ್ಥೆಯ ಬಗ್ಗೆ ಕಿಡಿಕಾರಿ ಕುರ್ಚಿಗಳ ಹಿಂಬದಿಯ ನೆಲದಲ್ಲಿ ಕುಟುಂಬದವರೊಂದಿಗೆ ಕುಳಿತರು. ಇದರಿಂದ ಅಧಿಕಾರಿಗಳಿಗೆ ಇರಿಸುಮುರಿಸಾಯಿತು.

ಪೋಷಕರಿಂದ ದೂರವಾದ ಬಾಲಕ

ದಸರಾ ನೋಡಲು ಅರಮನೆ ಆವರಣಕ್ಕೆ ಬಂದಿದ್ದ ವಿನಯ್ (6) ಪೋಷಕರಿಂದ ದೂರವಾಗಿದ್ದಾನೆ. ಪೋಷಕರನ್ನು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಇದೀಗ ಬಾಲಕ ಪೊಲೀಸರ ವಶದಲ್ಲೆ ಇದ್ದಾನೆ. ಪೋಷಕರು ದೇವರಾಜ ಪೊಲೀಸ್ ಠಾಣೆ ಸಂಪರ್ಕಿಸಬಹುದು.

ಪೊಲೀಸ್‌ಗೆ ರಾಮದಾಸ್ ಕ್ಲಾಸ್
ಬಲರಾಮ ದ್ವಾರದ ಮುಂದೆ ಸಚಿವ ರಾಮದಾಸ್ ನಿಂತಿದ್ದರು. ಇದೇ ವೇಳೆಗೆ ವಾಹನದಲ್ಲಿ ಬಂದ ಪೊಲೀಸ್ ಮರ ಏರಿ ಕುಳಿತಿದ್ದವರನ್ನು ಕಂಡರು. ಕೂಡಲೇ ಧ್ವನಿವರ್ಧಕದ ಮೂಲಕ `ಮರದ ಮೇಲೆ ಕುಳಿತಿರುವರು ಕೆಳಕ್ಕೆ ಇಳಿಯಿರಲೇ~ ಎಂದು ಏಕವಚನದಲ್ಲಿ ಸೂಚನೆ ನೀಡಿದರು. ಇದನ್ನು ಕೇಳಿದ ರಾಮದಾಸ್ ಗರಂ ಆದರು. ಕೂಡಲೇ ಆ ಪೊಲೀಸಪ್ಪನನ್ನು ಕರೆದು, `ನೀವು ಬಳಸುತ್ತಿರುವ ಭಾಷೆ ಎಂಥದ್ದು~ ಎಂದು ತರಾಟೆಗೆ ತೆಗೆದುಕೊಂಡರು.

ಆದರೂ ಆ ಪೊಲೀಸಪ್ಪ ಮಾತ್ರ ನಾನು ಇಳಿಯಿರಲೇ~ ಎಂದು ಹೇಳಿಯೇ ಇಲ್ಲ ಎಂದು ಇನ್ನಷ್ಟು ಬೈಸಿಕೊಂಡು ಹಿಂದಿರುಗಿದ. ಆ ತಕ್ಷಣವೇ ಸೌಮ್ಯವಾಗಿ `ಮರವೇರಿ ಕುಳಿತವರಲ್ಲಿ ವಿನಂತಿ. ದಯವಿಟ್ಟು ಕೆಳಕ್ಕೆ ಇಳಿಯಿರಿ~ ಎಂದು ಕೋರಿದರು!

ಗಮನ ಸೆಳೆದ ಪ್ಯಾರಾ ಗ್ಲೇಡ್
ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು ವೀಕ್ಷಿಸಲು ಜನರ ಸೇರಿದ್ದರು. ಈ ಸಂದರ್ಭದಲ್ಲಿ ಆಕಾಶದಲ್ಲಿ ಪ್ಯಾರಾ ಗ್ಲೇಡ್ ಹಾರಾಟ ಕಾಣಿಸಿತು. ಎಲ್ಲರೂ ತಮ್ಮ ದೃಷ್ಟಿಯನ್ನು ಅತ್ತ ನೆಟ್ಟರು; ಕ್ಯಾಮರಾಗಳು ಸಹ. ಪ್ಯಾರಾ ಗ್ಲೇಡ್ ನಾಲ್ಕೈದು ಸುತ್ತು ಹಾಕಿ ಆನಂತರ ನಾಪತ್ತೆ ಆಯಿತು.

ಎಲ್ಲ ಕ್ಯಾಮರಾಗಳಿಗಾಗಿ
ರಾಜಕಾರಣಿಗಳು, ಪುಡಾರಿಗಳು, ಗಲ್ಲಿ ಗಲ್ಲಿಗೂ ಇರುವ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮಾತ್ರ ಕ್ಯಾಮರಾಗಳಿಗಾಗಿ ಪ್ರದರ್ಶನ ನೀಡುವುದು ಮಾಮೂಲಿಯಾಗಿತ್ತು. ಆದರೆ ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಾನಪದ ಕಲಾವಿದರೂ ಸಹ ಕ್ಯಾಮರಾಗಳಿಗಾಗಿ ಫೋಸುಕೊಡುವುದನ್ನು ಕಲಿತುಬಿಟ್ಟಿದ್ದರು. ತಮ್ಮತ್ತ ಕ್ಯಾಮರಾಗಳು ತಿರುಗುತ್ತಿದ್ದಂತೆ ಅವರಿಗೆ ಬೇಕಾದರ ರೀತಿಯಲ್ಲಿ ಕುಣಿದು, ಫೋಸು ನೀಡಿ ತಾವೂ ಟಿವಿ ಚಾನಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಮಿಂಚುವ ತಂತ್ರವನ್ನು ಕಂಡುಕೊಂಡಿದ್ದರು!

ಇನ್ನು ಕೆಲವರು ಸ್ವಯಂ ಸೇವಕರ ಸೋಗಿನಲ್ಲಿ ಟಿವಿ ಚಾನಲ್‌ಗಳ ನೇರ ಪ್ರಸಾರದ ಕ್ಯಾಮರಾಗಳು ಇದ್ದಲ್ಲಿಯೇ ಗೂಟ ಹೊಡೆದುಕೊಂಡು ನಿಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT