ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಸುಭದ್ರವಾಗುವುದೇ?

Last Updated 17 ಜನವರಿ 2011, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ:ದಶಕಗಳ ಹೋರಾಟದ ನಂತರ ಹತ್ತು ಹಲವು ಏಳು-ಬೀಳುಗಳ ನಡುವೆ ಹೊಸರೂಪ ಪಡೆದುಕೊಂಡು ಮೈದಳೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಬಯಲುಸೀಮೆ ಜನತೆ ಪಾಲಿಗೆ ಆಶಾಕಿರಣ.ಕೃಷ್ಣಾ ನ್ಯಾಯಾಧೀಕರಣದ ಐತೀರ್ಪಿನಿಂದ ಕೃಷ್ಣಾ ಕೊಳ್ಳದ ವ್ಯಾಪ್ತಿಗೆ ಸೇರುವ ಈ ಯೋಜನೆಯನ್ನು ಮತ್ತಷ್ಟು ಸುಭದ್ರಗೊಳಿಸುತ್ತದೆ ಎನ್ನುವ ಆಶಾಭಾವ ಈ ಭಾಗದಲ್ಲಿ ಮೂಡಿದೆ. ಐತೀರ್ಪಿನಿಂದಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಹಾದಿ ಸುಗಮವಾಗಿದ್ದು, ಸರ್ಕಾರ ‘ಬಿ’ ಸ್ಕೀಮ್ ಅಡಿಯಲ್ಲಿ ನೀರು ಬಳಸಿಕೊಳ್ಳಲು ತಕ್ಷಣವೇ ಯೋಜನೆ ರೂಪಿಸುವ ಮೂಲಕ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲಿ ಎನ್ನುವುದು ಜನತೆಯ ಆಗ್ರಹ.

ಕಳೆದ 100 ವರ್ಷಗಳಲ್ಲಿ 59 ಬಾರಿ ಬರದ ದವಡೆಗೆ ಸಿಲುಕಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ನೀರಾವರಿ ಕೇವಲ ಮರೀಚಿಕೆಯಾಗಿ ಉಳಿದಿದೆ. ಜಿಲ್ಲೆಯ ಜನತೆಯ ಹೋರಾಟದ ಫಲವಾಗಿ ರೂಪುಗೊಂಡಿದ್ದು ಭದ್ರಾ ಮೇಲ್ದಂಡೆ ಯೋಜನೆ.ಈ ಯೋಜನೆ ಮೂಲಕ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ 1,07,265 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹಾಗೂ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ 156 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶವಿದೆ.

2001ರ ಸ್ಕೀಮ್ ‘ಎ’ ಪರಿಷ್ಕೃತ ಮಾಸ್ಟರ್ ಪ್ಲಾನ್‌ನಲ್ಲಿ 21.5 ಟಿಎಂಸಿ ನೀರಿನ ಹಂಚಿಕೆ ಮಾಡಲಾಗಿತ್ತು. ಜತೆಗೆ 19 ಟಿಎಂಸಿ ನೀರನ್ನು ಸ್ಕೀಮ್ ‘ಬಿ’ ಅಡಿಯಲ್ಲಿ ಬಳಸಿಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿ ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕೃಷ್ಣಾ ಜಲಾನಯನ ಪ್ರದೇಶದಿಂದ ಸ್ಕೀಂ ‘ಎ’ ಮತ್ತು ‘ಬಿ’  ಅಡಿಯಲ್ಲಿ ತುಂಗಾ ಮತ್ತು ಭದ್ರಾ ನದಿಗಳ ಮೂಲಕ ಒಟ್ಟು 40.50 ಟಿಎಂಸಿ ನೀರೆತ್ತಿ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಕೋಲಾರ ಜಿಲ್ಲೆಗಳಿಗೆ ನೀರುಣಿಸುವ ಯೋಜನೆರೂಪಿಸಲಾಯಿತು. ನಂತರ ಕೆ.ಸಿ.ರೆಡ್ಡಿ ಸಮಿತಿಯ ವರದಿಯ ಶಿಫಾರಸುಗಳನ್ನು ಆಧರಿಸಿ ರೂ 5,985 ಕೋಟಿಗೆ ಇಡೀ  ಯೋಜನೆರೂಪಿಸಿ 2006ರ ನವೆಂಬರ್‌ನಲ್ಲಿ ಅನುಷ್ಠಾನದ ಜವಾಬ್ದಾರಿಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವಹಿಸಲಾಯಿತು.

ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ನೀರಾವರಿಗಾಗಿ ರೂ 3,388 ಕೋಟಿ ಮತ್ತು ತುಮಕೂರು, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ರೂ 2,597 ಕೋಟಿ ಕಲ್ಪಿಸಲಾಯಿತು. ಅಂತೂ ಭದ್ರಾ ಮೇಲ್ದಂಡೆ ಯೋಜನೆಗೆ 2009ರ ಫೆ. 9ರಂದು ನಗರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಈಗ ಕೃಷ್ಣಾ ನ್ಯಾಯಾಧೀಕರಣ ‘ಬಿ’ ಸ್ಕೀಮ್‌ನಲ್ಲಿ 177 ಟಿಎಂಸಿ ನೀರನ್ನು ರಾಜ್ಯಕ್ಕೆ ನೀಡಿರುವುದರಿಂದ ‘ಎ’ ಮತ್ತು ‘ಬಿ’ ಸ್ಕೀಮ್‌ನ ಅಷ್ಟೂ ನೀರು ಬಳಕೆಗೆ ಯೋಜನೆ ರೂಪಿಸಿ ನೀರಾವರಿಗೆ ಒತ್ತು ನೀಡಿದರೆ ಮಾತ್ರ ಭದ್ರಾ ಮೇಲ್ದಂಡೆ ಯೋಜನೆಗೆ ಸಾರ್ಥಕತೆ ಬರುತ್ತದೆ ಎನ್ನಲಾಗುತ್ತಿದೆ.

‘ಸ್ಕೀಮ್ ‘ಎ’ ಮತ್ತು ‘ಬಿ’ ಅಡಿಯಲ್ಲಿ ಮಧ್ಯಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಯಾದ ಭದ್ರಾ ಮೇಲ್ದಂಡೆಗೆ ಕನಿಷ್ಠ 100 ಟಿಎಂಸಿ ಮೀಸಲಿಡಬೇಕು ಎಂದು  ಒತ್ತಾಯಿಸುತ್ತಾ ಬಂದಿದ್ದೇವೆ. ‘ಬಿ’ ಸ್ಕೀಮ್‌ನಲ್ಲಿ 77 ಟಿಎಂಸಿ ನೀರು ನೀಡಬೇಕು. ಸರ್ಕಾರ ಈಗಲಾದರೂ 77 ಟಿಎಂಸಿ ಅಡಿ ನೀರು ಬಳಕೆಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಬೇಗ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಜಯಣ್ಣ ಆಗ್ರಹಿಸುತ್ತಾರೆ.

ಪ್ರಸ್ತುತ ‘ಎ’ ಸ್ಕೀಮ್ ಅಡಿಯಲ್ಲಿ ಜಿಲ್ಲೆಯ ಹೊಳಲ್ಕೆರೆ ಮತ್ತು ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ತಾಲ್ಲೂಕಿನಲ್ಲಿ ಒಂದಾಗಿರುವ ಮೊಳಕಾಲ್ಮುರು ಸೇರಿಸಿಲ್ಲ. ಈಗಲಾದರೂ ‘ಬಿ’ ಸ್ಕೀಮ್‌ನಲ್ಲಿ ಈ ಎರಡು ತಾಲ್ಲೂಕುಗಳನ್ನು ಸೇರಿಸುವ ಮೂಲಕ ಜಿಲ್ಲೆಯನ್ನು ಸಮಗ್ರ ನೀರಾವರಿ ವ್ಯಾಪ್ತಿಗೆ ಒಳಪಡಿಸಲಿ ಎನ್ನುವ ಒತ್ತಾಯವೂ ಜಿಲ್ಲೆಯಲ್ಲಿ ಕೇಳಿ ಬಂದಿದೆ.ಯೋಜನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಪಡೆದಿರುವ ಸರ್ಕಾರ, ನೇರವಾಗಿ ಭದ್ರಾ ಮೇಲ್ದಂಡೆಗೆ ರೂ 500 ಕೋಟಿ ಬಿಡುಗಡೆ ಮಾಡಿದೆ. ಉಳಿದ ಹಣವನ್ನು  ನೀರಾವರಿ ನಿಗಮದ ಮೂಲಕ ಭರಿಸಲಾಗುವುದು ಎಂದು ಪ್ರತಿಪಾದಿಸುತ್ತ ಬಂದಿದೆ.

ಯೋಜನೆಗೆ ಒಟ್ಟು ಮೂರು ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ. ರೂ 324 ಕೋಟಿ ಮೊತ್ತದ ಪ್ಯಾಕೇಜ್-1 ಮತ್ತು ರೂ 1,032 ಕೋಟಿ ಮೊತ್ತದ ಪ್ಯಾಕೇಜ್-2 ಹಾಗೂ ರೂ 223.96 ಕೋಟಿ ಮೊತ್ತದ ಪ್ಯಾಕೇಜ್-3ಗೆ ಟೆಂಡರ್ ಕರೆದು ಗುತ್ತಿಗೆದಾರರಿಗೆ ವಹಿಸಲಾಗಿದೆ. ಜತೆಗೆ ಜಮೀನು ಸ್ವಾಧೀನ ಪ್ರಕ್ರಿಯೆಗಳಿಗೂ ಚಾಲನೆ ದೊರೆತಿದೆ.ಮುಖ್ಯ ಅಂಶಗಳು: ಭದ್ರಾ ಮೇಲ್ದಂಡೆ ಯೋಜನೆಯ ಸ್ಕೀಮ್ ‘ಎ’ ಅಡಿಯಲ್ಲಿ ತುಂಗಾ ನದಿಯಿಂದ 15 ಟಿಎಂಸಿ ನೀರನ್ನು ಜೂನ್‌ನಿಂದ ಅಕ್ಟೋಬರ್‌ವರೆಗೆ  75 ಮೀಟರ್‌ವರೆಗೆ ಎರಡು ಹಂತದಲ್ಲಿ ಎತ್ತಿ 10 ಕಿ.ಮೀ. ದೂರದ ಭದ್ರಾ ಜಲಾಶಯಕ್ಕೆ ತುಂಬಿಸುವುದು ಹಾಗೂ ಇದೇ ಅವಧಿಯಲ್ಲಿ ಭದ್ರಾ ಜಲಾಶಯದಿಂದ 21.5 ಟಿಎಂಸಿ ನೀರನ್ನು ಸುಮಾರು 94 ಮೀಟರ್‌ವರೆಗೆ ಮೂರು ಹಂತದಲ್ಲಿ ಎತ್ತಿ 39 ಕಿ.ಮೀ. ಉದ್ದದ ಕಾಲುವೆ ಹಾಗೂ ಅಜ್ಜಂಪುರ ಗ್ರಾಮದ ಬಳಿಯಲ್ಲಿ 6.9 ಕಿ.ಮೀ. ಉದ್ದದ ಸುರಂಗದ ಮೂಲಕ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸುವ ಉದ್ದೇಶವಿದೆ.

ಮೂರನೇ ಹಂತದಲ್ಲಿ ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಸುಮಾರು 1,07,265 ಹೆಕ್ಟೇರ್ ಜಮೀನಿಗೆ ಅರೆಖುಷ್ಕಿ ಬೆಳೆಗಳ ನೀರಾವರಿಗಾಗಿ 15.9 ಟಿಎಂಸಿ ನೀರನ್ನು ಬಳಸಲು ಸುಮಾರು 151 ಕಿ.ಮೀ. ಉದ್ದದ ಕಾಲುವೆಯೊಂದಿಗೆ ಅಚ್ಚುಕಟ್ಟು ಪ್ರದೇಶವನ್ನು ನಿರ್ಮಿಸುವುದು. ಇದರಲ್ಲಿ 2.02 ಟಿಎಂಸಿ ನೀರನ್ನು ಅಚ್ಚುಕಟ್ಟು ಪ್ರದೇಶದಲ್ಲಿ ಇರುವ 37 ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT