ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: ಎಂಪಿಎಂ ಕಾರ್ಮಿಕರ ಸತ್ಯಾಗ್ರಹ

Last Updated 17 ಫೆಬ್ರುವರಿ 2011, 8:35 IST
ಅಕ್ಷರ ಗಾತ್ರ

ಭದ್ರಾವತಿ: ‘ಸಭೆ ನಡೆಯುತ್ತಿದ್ದಾಗ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದ್ದರೆ ಅಧ್ಯಕ್ಷರು ನನಗೆ ಅರ್ಜೆಂಟ್ ಮೀಟಿಂಗ್ ಇದೆ. ನೀವು ಮುಂದುವರಿಸಿ ಎಂದು ಕುಂಟು ನೆಪ ಹೇಳುತ್ತಾರೆ. ಇವರಿಂದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಮಾಡಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಎಂಪಿಎಂ ಕಾರ್ಮಿಕ ಸಂಘದ ಪದಾಧಿಕಾರಿಗಳು, ಕಳೆದ ಐದು ತಿಂಗಳಿಂದ ಬಾರದ ತುಟ್ಟಿಭತ್ಯೆ ವಿಚಾರದ ಸತ್ಯಾಗ್ರಹವನ್ನು ಮತ್ತಷ್ಟು ತೀವ್ರ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಕಾರ್ಖಾನೆ ಅಭಿವೃದ್ಧಿ ವಿಚಾರದ ಸಭೆ ನಡೆಯುತ್ತಿದ್ದರೆ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಪೋನ್ ಬಂತು, ಮೀಟಿಂಗ್ ಇದೆ. ನೀವು ಅಧಿಕಾರಿಗಳ ಜತೆ ಚರ್ಚಿಸಿ ಎಂದು ಕುಂಟು ನೆಪ ಹೇಳುತ್ತಾರೆ. ಇಂತಹ ಪಲಾಯನವಾದ ಕಾರಣ ಸಮಸ್ಯೆಗಳ ಜಟಿಲವಾಗುತ್ತಿದೆ ಎಂದು ಆರೋಪಿಸಿದರು.

ಫೆ. 7ರಂದು ಮುಖ್ಯಮಂತ್ರಿ ಅವರ ಗೃಹಕಚೇರಿ ‘ಕೃಷ್ಣಾ’ದಲ್ಲಿ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಜರುಗಿದ ಸಭೆಯಲ್ಲಿ ಅಧಿಕೃತ ಯೂನಿಯನ್‌ಗೆ ಆಹ್ವಾನ ನೀಡದೇ, ಕಾರ್ಮಿಕ ಮುಖಂಡರು ಎಂದು ಹೇಳಿಕೊಂಡು ಓಡಾಡುವ ವ್ಯಕ್ತಿಗಳಿಗೆ ಆಹ್ವಾನ ನೀಡಿ ಚರ್ಚೆ ನಡೆಸಿರುವುದರ ಹಿಂದೆ ಅಧ್ಯಕ್ಷರು ಹಾಗೂ ಸಂಸದ ಆಯನೂರು ಮಂಜುನಾಥ್ ಅವರ ಕೈವಾಡವಿದೆ ಎಂದು ಮುಖಂಡರು ದೂರಿದರು.

ಅಧಿಕೃತ ಚುನಾಯಿತ ಪ್ರತಿನಿಧಿಗಳನ್ನು ಹೊರಗಿಟ್ಟು ಕಾರ್ಮಿಕರ ನಡುವೆ ಒಡೆದು ಆಳುವ ನೀತಿಯನ್ನು ಮಾಡಲು ಹೊರಟಿರುವ ಆರಗ ಜ್ಞಾನೇಂದ್ರ ಅವರು ಹಿಂದೆ ಶಾಸಕರಾಗಿದ್ದಾಗ ಸಾರ್ವಜನಿಕ ಉದ್ಯಮಗಳ ಸಮಿತಿ ಅಧ್ಯಕ್ಷರಾಗಿ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಬೇಕು ಎಂದು ವರದಿ ನೀಡಿದ್ದರು. ಅದರ ಯಥಾವತ್ತು ಪಾಲನೆ ಜಾರಿ ಮಾಡುವ ಸಲುವಾಗಿ ಕಾರ್ಖಾನೆ ಹಿತಾಸಕ್ತಿ ಬಲಿ ಕೊಟ್ಟಿದ್ದಾರೆ. ಇದರ ಷಡ್ಯಂತ್ರದ ಫಲವೇ ರೋಗಗ್ರಸ್ತ ಕಾರ್ಖಾನೆ ಸಾಲಿಗೆ ಎಂಪಿಎಂ ಸೇರಿಸಲು ಮುಂದಾಗಿದ್ದು ಎಂದು ಮುಖಂಡರು ಟೀಕಿಸಿದರು.

ನಮಗೆ ಬರಬೇಕಾದ ನ್ಯಾಯಯುತ ತುಟ್ಟಿಭತ್ಯೆ ನೀಡಲು ಅವರು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನದಲ್ಲಿ ಕಾರ್ಖಾನೆ ಒಳಗೆ ಪಿಕೆಟಿಂಗ್, ತೀರ್ಥಹಳ್ಳಿಯ ಅವರ ನಿವಾಸದ ಮುಂದೆ ಪ್ರತಿಭಟನೆ, ಬೆಂಗಳೂರಿನ ಕಾರ್ಪೂರೇಟ್ ಕಚೇರಿ ಮುಂದೆ ಹಾಗೂ ಲೇಬರ್ ಕಮೀಷನರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಬಿ.ಜೆ. ಸದಾಶಿವಲಿಂಗೇಗೌಡ, ಜಿ. ಹಾಲಪ್ಪ, ಸಿ.ಎಸ್. ಶಿವಮೂರ್ತಿ, ಎ. ದಾನಂ, ತೀರ್ಥಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಸಂಕಷ್ಟದಲ್ಲಿ ಕಾರ್ಖಾನೆ ಬೆಂಬಲಿಸಿ: ಮನವಿ
ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಪ್ರತಿಕೂಲ ಮಾರುಕಟ್ಟೆ ಕಾರಣ ವ್ಯಾಪಾರ ಮಾಡುವುದು ಕಷ್ಟವಾಗಿದೆ. ಇದನ್ನರಿತು ಕಾರ್ಮಿಕರ ಆಡಳಿತದ ಜತೆಗೆ ಸಹಕಾರ ನೀಡಬೇಕು ಎಂದು ಜನರಲ್ ಮ್ಯಾನೇಜರ್ (ಎಚ್‌ಆರ್‌ಡಿ) ವಿನಂತಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉದ್ಯೋಗಿಗಳ ಸವಲತ್ತುಗಳನ್ನು ಕಂಪೆನಿ ಆರ್ಥಿಕ ಸ್ಥಿತಿ ಉತ್ತಮವಾಗುವ ತನಕ ತಡೆಹಿಡಿಯಲಾಗಿದೆ. ಇದನ್ನರಿತು ಕಾರ್ಖಾನೆ ಮುನ್ನೆಡೆಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಕಾರ್ಖಾನೆಯನ್ನು ರೋಗಗ್ರಸ್ಥ ವ್ಯಾಪ್ತಿಯಿಂದ ಹೊರತರಲು ಆಡಳಿತ ಮಂಡಳಿ ಹಾಗೂ ಸರ್ಕಾರ ಪ್ರಯತ್ನ ನಡೆಸಿವೆ. ಈ ಹಿನ್ನೆಲೆಯಲ್ಲಿ ಈಚೆಗೆ ಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಸಭೆ ಸಹ ನಡೆದಿದೆ. ಹಾಗಾಗಿ, ತುಟ್ಟಿಭತ್ಯೆ ವಿಚಾರವನ್ನು ತೊಡಕಿನ ವಿಷಯವನ್ನಾಗಿ ಮಾಡದೆ ಸಹಕರಿಸಬೇಕು ಎಂದು ಆಡಳಿತ ಮಂಡಳಿ ಹೇಳಿಕೆಯಲ್ಲಿ ಮನವಿ ಮಾಡಿದೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT