ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: ತೆರವಾಗದ ಮಹಾದ್ವಾರ

Last Updated 28 ಅಕ್ಟೋಬರ್ 2011, 9:25 IST
ಅಕ್ಷರ ಗಾತ್ರ

ಭದ್ರಾವತಿ: ನಾಡಹಬ್ಬ ದಸರೆಯ ಅದ್ದೂರಿ ಆಚರಣೆ ಮಾಡಿದ ಇಲ್ಲಿನ ನಗರಸಭೆ ಅದಕ್ಕಾಗಿ ನಿರ್ಮಿಸಿರುವ ಮಹಾದ್ವಾರ ತೆರವು ಮಾಡುವಲ್ಲಿ ಮಾತ್ರ ದಿವ್ಯ ಮೌನ ವಹಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜನದಟ್ಟಣೆ, ವಾಹನ ಸಂಚಾರ ಹೆಚ್ಚಿರುವ ಪ್ರಮುಖ ರಸ್ತೆ ಹಾಗೂ ವೃತ್ತದಲ್ಲಿ ನಿರ್ಮಿಸಿರುವ ಬೃಹದಾಕಾರ ಮಹಾದ್ವಾರಗಳು ಹಬ್ಬ ಕಳೆದು ಎರಡು ವಾರ ಕಳೆದರೂ ಸ್ಥಾನ ಪಲ್ಲಟವಾಗದೇ ಉಳಿದಿರುವುದು ಸಂಚಾರ ಸುವ್ಯವಸ್ಥೆಗೆ ಅಡ್ಡಿ ಉಂಟು ಮಾಡಿದೆ.

ವೃತ್ತದಲ್ಲಿನ ಕೆಲವು ಮಹಾದ್ವಾರಗಳು ಭಾರ ತಾಳಲಾರದೆ ವಾರೆಯಾಗಿ ಬೀಳುವ ಸ್ಥಿತಿಯಲ್ಲಿದ್ದರೆ, ಮತ್ತೆ ಕೆಲವು ಸುಗಮ ಸಂಚಾರಕ್ಕೆ ಅಡ್ಡಿಯಾಗಿ ಅಂಗಡಿ, ಮುಂಗಟ್ಟುಗಳ ಮಾಲೀಕರಿಗೆ ಕಿರಿಕಿರಿ ತಂದಿದೆ.

ಈ ಸಂಬಂಧ ಸಂಚಾರಿ ನಿಯಂತ್ರಣ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಿಗುವ ಸಿದ್ಧ ಉತ್ತರ `ನಾವು ಹಲವು ಪತ್ರವನ್ನು ನಗರಸಭೆಗೆ ಬರೆದಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ. ಜನರೇ ಇದಕ್ಕೆ ದಾರಿ ತೋರಬೇಕು~ ಎಂದು ಕೈಚೆಲ್ಲುತ್ತಾರೆ.

ಕೆಲವು ವೃತ್ತದಲ್ಲಿ ಈ ಮಹಾದ್ವಾರ ಹೆಸರಿನ ಅಡಿಕೆ ಮರಗಳು ಕಳೆದ ಐದಾರು ತಿಂಗಳಿಂದ ನಿಂತುಬಿಟ್ಟಿವೆ. ಕೇಳಿದರೆ ಹಬ್ಬ ಬರುತ್ತದಲ್ಲ ಅದಕ್ಕೆ ಎಂಬ ಹಾರಿಕೆ ಉತ್ತರ ಕೆಲವು ಮುಖಂಡರಿಂದ ವ್ಯಕ್ತವಾಗುತ್ತದೆ.

ನಾಡಹಬ್ಬ ಹೆಸರಿನಲ್ಲಿ ರಚನೆಯಾದ ವಿವಿಧ ಸಮಿತಿಗಳು ಆಚರಣೆ ನಂತರ ತಮ್ಮ ಪಾಲಿನ ಕರ್ತವ್ಯ ಮುಗಿಯಿತು ಎಂಬ ಧೋರಣೆ ತಾಳುತ್ತವೆ. ಆದರೆ, ಅಧಿಕಾರಿ ವರ್ಗ ಇದರ ಕುರಿತು ತೆಗೆದುಕೊಳ್ಳಬೇಕಾದ ಕ್ರಮ ಕುರಿತಂತೆ ನಿರ್ಲಕ್ಷ್ಯಕ್ಕೆ ಮುಂದಾಗಿರುವುದು ನಾಗರಿಕರ ಪಾಲಿಗೆ ಸಮಸ್ಯೆಯಾಗಿದೆ.

ಕಳೆದ ವರ್ಷ ಇಂತಹ ದ್ವಾರಕ್ಕೆ ಡಿಕ್ಕಿ ಹೊಡೆಸಿಕೊಂಡು ಆಸ್ಪತ್ರೆ ಸೇರಿದ ಘಟನೆ ಸಹ ನಡೆದಿದೆ. ಇದರ ಅರಿವಿದ್ದರೂ ಮುಂಜಾಗ್ರತೆ ವಹಿಸದಿರುವ ನಗರಸಭೆ ಮೌನ ಸಂಶಯಕ್ಕೆ ಎಡೆ ಮಾಡುತ್ತದೆ ಎನ್ನುತ್ತಾರೆ ತಿಮ್ಮಪ್ಪ.

ಒಟ್ಟಿನಲ್ಲಿ ಹಲವು ತಿಂಗಳಿಂದ ವೃತ್ತದಲ್ಲಿ ನಿಂತಿರುವ ಮಹಾದ್ವಾರ ಕಂಬಗಳು ಆಸ್ತಿತ್ವ ಕಳೆದುಕೊಂಡು ನಾಗರಿಕರಿಗೆ ಹಾನಿ ಮಾಡುವ ಮುನ್ನ ನಗರಸಭೆ ಅದರ ತೆರವು ಕಾರ್ಯಕ್ಕೆ ಮುಂದಾಗಲಿ ಎಂಬುದು ನಾಗರಿಕರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT