ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಹುಟ್ಟಿಸುವ ಬೈಕ್ ಚಾಲನೆ

Last Updated 24 ಡಿಸೆಂಬರ್ 2012, 9:01 IST
ಅಕ್ಷರ ಗಾತ್ರ

ಕಾರವಾರ: ನಗರದ ಮಹಾತ್ಮಗಾಂಧಿ, ಕಾರವಾರ-ಕೋಡಿಬಾಗ ಮುಖ್ಯರಸ್ತೆ, ಹಬ್ಬುವಾಡಾ, ಸುಂಕೇರಿ ರಸ್ತೆ, ಕಳಸವಾಡಾ ಸೇರಿದಂತೆ ನಗರ ಪ್ರದೇಶದಲ್ಲಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕಾಗಿದೆ. ಈ ರಸ್ತೆಯಲ್ಲಿ ಬೈಕ್ ಓಡಾಡುವ ಸದ್ದಿಗೆ ಎದೆ ಝಲ್ ಎನ್ನದೇ ಇರದು.

ನಗರ ವೇಗವಾಗಿ ಬೆಳೆಯುತ್ತಿದೆ. 2011ರ ಜನಗಣತಿಯಂತೆ ನಗರದ ಜನಸಂಖ್ಯೆ ದುಪ್ಪಟ್ಟಾಗಿದೆ. ಪ್ರತಿನಿತ್ಯ 5-10 ಹೊಸ ಬೈಕ್ ಹಾಗೂ ತಿಂಗಳಿಗೆ 5-6 ಕಾರುಗಳು ರಸ್ತೆಗಿಳಿಯುತ್ತಿದ್ದು, ಸಹಜವಾಗಿಯೇ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಿದೆ.

ನಗರ ಮಹಾತ್ಮಗಾಂಧಿ ರಸ್ತೆಯಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದ ಎದುರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇದೆ. ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಬೈಕ್ ಓಡಿಸುವ ಪರಿ ಗಾಬರಿ ಹುಟ್ಟಿಸುತ್ತದೆ. ಕಿರಿದಾದ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುವುದು ವಿದ್ಯಾರ್ಥಿಗಳಿಗೇನೋ ಖುಷಿ ಆದರೆ, ಅನಾಹುತ ಏನಾದರು ಸಂಭವಿಸಿದರೆ ಜೀವನ ಪೂರ್ತಿ ನೋವು ಅನುಭವಿಸಬೇಕಾಗಿ ಬರಬಹುದು ಎನ್ನುವುದು ಅವರು ಅರಿತಂತಿಲ್ಲ.

ಕಾರವಾರ- ಕೋಡಿಬಾಗ ರಸ್ತೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಈ ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರದಿಂದ ತುಂಬಿರುತ್ತದೆ. ಇವುಗಳ ಮಧ್ಯೆಯೇ ಯುವಕರು ಬೈಕ್‌ಗಳನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಾರೆ. ಇದು ನೋಡಲು ರೋಮಾಂಚನವೆನಿಸಿದರೂ ನಿಯಂತ್ರಣ ಕಳೆದುಕೊಂಡು ನೆಲಕ್ಕುರುಳಿದರೆ ಅನಾಹುತ ಕಟ್ಟಿಟ್ಟ ಬುತ್ತಿ.

ಇದೇ ರಸ್ತೆಯಲ್ಲಿ ಮುಂದೆ ಸಾಗಿದರೆ ಬಾಡದಲ್ಲಿ ಶಿವಾಜಿ ಪದವಿ, ಬಿಇಡಿ ಕಾಲೇಜು ಇದೆ. ಈ ಮಾರ್ಗದಲ್ಲೂ ಬೈಕ್‌ಗಳ ವೇಗಕ್ಕೆ ಬ್ರೇಕ್ ಇಲ್ಲ. ಹೊಸ ವಿನ್ಯಾಸದ, 150ರಿಂದ 200 ಅಶ್ವಶಕ್ತಿ ಹೊಂದಿದ ಬೈಕ್‌ಗಳನ್ನು ವೇಗವಾಗಿ ಓಡಿಸಿ ಯುವಕರು ರೋಮಾಂಚನ ಅನುಭವಿಸಿದರೆ ಪಾದಚಾರಿಗಳು ಉಸಿರು ಬಿಗಿಹಿಡಿದು ಓಡಾಡಬೇಕಾಗಿದೆ.

ಹೀಗೆ ವೇಗವಾಗಿ ಬೈಕ್ ಓಡಿಸಲು ಹೋಗಿ ಸವಾರರು ಅನೇಕ ಸಲ ಬಿದ್ದು ಗಾಯ ಮಾಡಿಕೊಂಡ ಘಟನೆಗಳು ಸಾಕಷ್ಟು ನಡೆದಿದೆ. ಕೆಲವರು ಚೇತರಿಸಿಕೊಂಡರೆ ಮತ್ತೆ ಕೆಲವರು ಶಾಶ್ವತವಾಗಿ ಹಾಸಿಗೆ ಹಿಡಿದಿದ್ದಾರೆ.

ಸಂಚಾರ ಪೊಲೀಸ್ ಠಾಣೆ ಅಂಕಿಅಂಶಗಳ ಪ್ರಕಾರ ಅಪಘಾತದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. 2010ರಲ್ಲಿ ನಗರದಲ್ಲಿ ಒಟ್ಟು 70 ಅಪಘಾತ ಪ್ರಕರಣಗಳು ನಡೆದರೆ, 2011ರಲ್ಲಿ 64 ಘಟಿಸಿವೆ. 2012ರಲ್ಲಿ ಇಲ್ಲಿಯವರೆಗೆ ಒಟ್ಟು 41 ಅಪರಾಧ ಪ್ರಕರಣ ಮತ್ತು ನಿರ್ಲಕ್ಷ್ಯ ಮತ್ತು ವೇಗದ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ 941 ಪ್ರಕರಣ, 2011ರಲ್ಲಿ 700 ಮತ್ತು 2012ರಲ್ಲಿ ಇಲ್ಲಿಯವರೆಗೆ 766 ಪ್ರಕರಣಗಳು ದಾಖಲಾಗಿದೆ.

`ವೇಗ ಮತ್ತು ನಿರ್ಲಕ್ಷ್ಯ ಚಾಲನೆಗಳು ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗಿದೆ. ವೇಗವಾಗಿ ಹೋಗುವ ಬೈಕ್‌ಗಳನ್ನು ನಾವು ಬೆನ್ನಟ್ಟುವುದು ಒಂದು ರೀತಿಯಲ್ಲಿ ಅನಾಹುತಕ್ಕೆ ದಾರಿ ಮಾಡಿಕೊಟ್ಟಂತೆ. ಏಕೆಂದರೆ ಅಂತಹ ಬೈಕ್‌ಗಳನ್ನು ನಾವು ಬೆನ್ನಟ್ಟಲು ಹೋದರೆ ಅವರು ಮತ್ತಷ್ಟು ವೇಗವಾಗಿ ಹೋಗುತ್ತಾರೆ. ಅದಕ್ಕಾಗಿ ಅಂತಹ ಪ್ರಯತ್ನಕ್ಕೆ ನಾವು ಕೈ ಹಾಕುವುದಿಲ್ಲ' ಎನ್ನುತ್ತಾರೆ ಸಂಚಾರ ಠಾಣೆಯ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT