ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯವೇ ಗೆಲುವಿನ ಮೂಲವಯ್ಯಾ...

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕಣ್ಣುಗುಡ್ಡೆಗಳನ್ನು ಹೊರಳಿಸುತ್ತಾ, ಮಾತಿನಲ್ಲಿ ಕಾಠಿಣ್ಯ ತುಂಬಿಕೊಂಡು ಮಾತನಾಡುವ `ಅಮೃತವರ್ಷಿಣಿ~ ಧಾರಾವಾಹಿಯ ಯಶೋದ ನೋಡುಗರ ಮನಗೆದ್ದವರು. ಈ ಪಾತ್ರವನ್ನು ನಿರ್ವಹಿಸಿರುವ ಸವಿತಾ ಕೃಷ್ಣಮೂರ್ತಿ ಅವರಿಗೆ ಅಭಿನಯದ ಹಿನ್ನೆಲೆಯೇನೂ ಇಲ್ಲ.
 
ಯಾವುದೇ ತರಬೇತಿ ಇಲ್ಲದೆ, ಅಭಿನಯದ ಹಿನ್ನೆಲೆಯೂ ಇಲ್ಲದೇ ನಟನೆಯ ಅಂಗಳಕ್ಕೆ ಇಳಿದ ಅವರನ್ನು ಅದೃಷ್ಟ ಕೈ ಹಿಡಿದಿದೆ.

`ರುಚಿ ಅಭಿರುಚಿ~ ಕಾರ್ಯಕ್ರಮದಲ್ಲಿ ಸವಿತಾ ಕೃಷ್ಣಮೂರ್ತಿ ಅವರು ಭಾಗವಹಿಸ್ದ್ದಿದ ಸಂದರ್ಭ. `ನೀವೇಕೆ ಧಾರಾವಾಹಿಗಳಲ್ಲಿ ನಟಿಸಬಾರದು?~ ಎಂದು ಕ್ಯಾಮೆರಾಮನ್ ಜೀವ ಹುರಿದುಂಬಿಸಿದರು.
 
ನಂತರ `ಪಾಯಿಂಟ್ ಪರಿಮಳ~ ಧಾರಾವಾಹಿಯಲ್ಲಿ ಅವಕಾಶವೂ ದೊರೆಯಿತು. ಅದಾದಮೇಲೆ, ` ಪಾರ್ವತಿ ಪರಮೇಶ್ವರ~, `ಪತಿ ಪತ್ನಿ ಗುಲಾಮ~, `ಚಕ್ರವಾಕ~ ಧಾರಾವಾಹಿಗಳಲ್ಲಿ ಸಾಲು ಅವಕಾಶಗಳು ದೊರೆತವು. `ಚಕ್ರವಾಕ~ ಧಾರಾವಾಹಿಯ ಪಾತ್ರ ಸೊಗಸಾಗಿತ್ತು. ಅದರಿಂದಲೇ `ಅಮೃತವರ್ಷಿಣಿ~ಯಿಂದ ಕರೆ ಬಂತು.

ಸವಿತಾ ಮರಾಠಿ ಮಾತನಾಡುವ ಕುಟುಂಬಕ್ಕೆ ಸೇರಿದವರು. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದರಿಂದ ಕನ್ನಡ ಸುಲಲಿತ. `ಚಿಕ್ಕಂದಿನಲ್ಲಿ ನನಗೆ ನೃತ್ಯ ಮಾಡಬೇಕೆಂಬಾಸೆ ಇತ್ತು. ಕುಟುಂಬದ ಸಂಪ್ರದಾಯಗಳ ನಡುವೆ ಅದು ಸಾಧ್ಯವಾಗಿರಲಿಲ್ಲ.
 
ಮದುವೆಯ ನಂತರ ಪತಿ ಕೃಷ್ಣಮೂರ್ತಿ ಅವರ ಬೆಂಬಲದಿಂದ ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದೆ. ಇದೀಗ ರವಿ ಗರಣಿ ನಿರ್ದೇಶನದ `ಅಮೃತ ವರ್ಷಿಣಿ~ಯಲ್ಲಿ ಸಿಕ್ಕ ಪಾತ್ರ ಜನಪ್ರಿಯತೆ ತಂದು ಕೊಟ್ಟಿದೆ~ ಎನ್ನುವ ಖುಷಿ ಅವರದು.

`ಅಮೃತವರ್ಷಿಣಿ~ಯ ಪಾತ್ರ ಅವರಿಗೆ ತಮಿಳು - ಹಿಂದಿ ಧಾರಾವಾಹಿಗಳಿಂದಲೂ ಅವಕಾಶಗಳನ್ನು ತಂದು ಕೊಡುತ್ತಿದೆ. ಎಲ್ಲೇ ಹೋದರೂ ಕನ್ನಡ ಕಿರುತೆರೆಗೆ ಅವರ ಮೊದಲ ಆದ್ಯತೆಯಂತೆ.
 
ಸಿನಿಮಾಗಳಲ್ಲಿಯೂ ನಟಿಸಿರುವ ಅವರು ಗೌರವಾನ್ವಿತ ಪಾತ್ರಗಳಿಗೆ ಪ್ರಾಮುಖ್ಯ ನೀಡುತ್ತಾರಂತೆ. `ಬಿಂದಾಸ್ ಹುಡುಗಿ~, `ಹುಲಿ~, `ಪ್ರಿನ್ಸ್~, `ಗಾಡ್‌ಫಾದರ್~, `ಜನವರಿ 1 ಬಿಡುಗಡೆ~, `ಮದುವೆ ಮನೆ~, `ಗೌರಿಪುತ್ರ~, `ಕೇಡಿಗಳು~ ಅವರು ನಟಿಸಿರುವ ಮತ್ತು ನಟಿಸುತ್ತಿರುವ ಸಿನಿಮಾಗಳು.
 
`ಅಮೃತವರ್ಷಿಣಿ~ಯಲ್ಲಿ ಮನೆ ಮುರಿಯುವ ಪಾತ್ರ ಮಾಡಿರುವ ಅವರಿಗೆ ಸೌಮ್ಯ ಸ್ವಭಾವದ ಪಾತ್ರಗಳನ್ನು ನಿರ್ವಹಿಸಬೇಕೆಂಬಾಸೆ ಇದೆ. ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗದೇ ಹಲವು ರೀತಿಯ ಅವಕಾಶಗಳನ್ನು ಬಳಸಿಕೊಳ್ಳಬೇಕು ಎನಿಸಿದೆ.

`ಕುಟುಂಬ ಮತ್ತು ವೃತ್ತಿ ಎರಡನ್ನೂ ನಿಭಾಯಿಸುತ್ತಿರುವೆ. ಅದಕ್ಕೆ ಮನೆಯವರ ಸಂಪೂರ್ಣ ಸಹಕಾರ ಇದೆ. ಅಲ್ಲಿ ತೃಪ್ತಿ ಇರುವುದರಿಂದಲೇ ನಾನು ನಟಿಸಲು ಸಾಧ್ಯವಾಗಿದೆ~ ಎನ್ನುವ ಸವಿತಾ ಅವರು ಕುಟುಂಬದ ನಿರ್ವಹಣೆಗೆ ತೊಂದರೆಯಾದರೇ ಎಂಥ ಪಾತ್ರವಾದರೂ ಸರಿ ಅದನ್ನು ನಿರಾಕರಿಸುತ್ತಾರಂತೆ.

`ಭಯ ಎಂಬುದಿದ್ದರೆ ಬದುಕಿನಲ್ಲಿ ಖಂಡಿತವಾಗಿಯೂ ಗೆಲ್ಲಬಹುದು~ ಎನ್ನುವ ನೀತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಸವಿತಾ ಅವರು ಇಂದಿಗೂ ಕ್ಯಾಮೆರಾ ಎದುರು ನಿಲ್ಲುವಾಗ ಭಯ ತುಂಬಿಕೊಳ್ಳುತ್ತಾರಂತೆ. ಅದರಿಂದಲೇ ಅವರ ನಟನೆ ಕಳೆಗಟ್ಟುತ್ತಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT