ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ, ಕಡಲ್ಗಳ್ಳತನ ನಿಗ್ರಹ ; ಕಾಮನ್‌ವೆಲ್ತ್ ಒಕ್ಕೂಟ ರಾಷ್ಟ್ರಗಳ ನಾಯಕರ ಸಂಕಲ್ಪ

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪರ್ತ್ (ಆಸ್ಟ್ರೇಲಿಯಾ) (ಪಿಟಿಐ): ಕಾಮನ್‌ವೆಲ್ತ್ ಒಕ್ಕೂಟ ರಾಷ್ಟ್ರಗಳು ಭಾನುವಾರ ಇಲ್ಲಿ ಭಯೋತ್ಪಾದನೆ ಮತ್ತು ಕಡಲ್ಗಳ್ಳತನದ ವಿರುದ್ಧ ಒಗ್ಗೂಡಿ ಹೋರಾಡುವ ಸಂಕಲ್ಪ ತೊಟ್ಟಿವೆ.

ಉಗ್ರಗಾಮಿ ಚಟುವಟಿಕೆಗಳಿಗೆ ಅಥವಾ ಉಗ್ರರಿಗೆ ಹಣಕಾಸು ಕ್ರೋಡೀಕರಿಸಲು ತಮ್ಮ ನೆಲವನ್ನು ಬಳಸಿಕೊಳ್ಳದಂತೆ ತಡೆಯುವ ಮೂಲಕ ಭಯೋತ್ಪಾದನೆ ನಿಗ್ರಹಿಸುವುದು ಹಾಗೂ ಹಿಂದೂ ಮಹಾಸಾಗರದಲ್ಲಿ ಭದ್ರತೆ ಬಲಪಡಿಸುವ, ಕಡಲ್ಗಳ್ಳರ ವಿರುದ್ಧ ಜಂಟಿ ಕಾರ್ಯಾಚರಣೆ ಕೈಗೊಳ್ಳುವ ಮುಖಾಂತರ ಈ ಹೋರಾಟದಲ್ಲಿ ಯಶಸ್ಸು ಸಾಧಿಸಲು ಈ ರಾಷ್ಟ್ರಗಳು ತೀರ್ಮಾನಿಸಿವೆ.

ಸುಮಾರು 54 ರಾಷ್ಟ್ರಗಳ ಕಾಮನ್‌ವೆಲ್ತ್ ಸರ್ಕಾರಗಳ ಮುಖ್ಯಸ್ಥರ ಮೂರು ದಿನಗಳ ಶೃಂಗಸಭೆಯ ಕೊನೆಯ ದಿನ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ಭಾರತರ ಪರವಾಗಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ನೇತೃತ್ವದ ನಿಯೋಗ ಸಭೆಯನ್ನು ಪ್ರತಿನಿಧಿಸಿತ್ತು.

ತಮ್ಮ ದೇಶದ ನೆಲದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಯದಂತೆ ಮತ್ತು ಹಿಂಸಾಕೃತ್ಯಗಳಿಗೆ ಅವಕಾಶ ನೀಡದಂತೆ ನೋಡಿಕೊಂಡು ಭಯೋತ್ಪಾದನೆಗೆ ಸಂಪೂರ್ಣ ಕಡಿವಾಣ ಹಾಕಲು ಈ ಎಲ್ಲ ರಾಷ್ಟ್ರಗಳೂ ಒಗ್ಗಟ್ಟಿನ ಮಂತ್ರ ಪಠಿಸಿದವು.

ಭಯೋತ್ಪಾದಕರಿಗೆ ಹಣಕಾಸು ಸಿಗದಂತೆ, ಉಗ್ರರು ಮತ್ತು ಅವರ ಸಂಘಟನೆಗಳಿಗೆ ನಿಧಿ ಸಂಗ್ರಹಿಸಲು ಹಾಗೂ ಬಳಸಲು ಬಿಡದಂತೆ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿಗೊಳಿಸಲು ಈ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಅಂತರ ರಾಷ್ಟ್ರೀಯ ಭಯೋತ್ಪಾದನೆ, ಅಪರಾಧ ಪ್ರಕರಣಗಳನ್ನು ತಡೆಯಲು ದೇಶಗಳ ನಡುವೆ ಪರಸ್ಪರ ಸಮಾಲೊಚನೆ ನಡೆಸಿ ಬಿಗಿ ಕ್ರಮ ಜರುಗಿಸಲು ಸಹ ಅವು ನಿರ್ಧರಿಸಿವೆ.

ಸುಧಾರಣೆಗೆ 54 ದೇಶಗಳ ಕ್ರಮ
ಹಂತಹಂತವಾಗಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ಕಾಮನ್‌ವೆಲ್ತ್ ರಾಷ್ಟ್ರಗಳ ಒಕ್ಕೂಟವು, ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ಸುಧಾರಣೆಗಳನ್ನು ಮಾಡಬೇಕೆಂಬ ಪರಿಣತರ ತಂಡದ 106 ಶಿಫಾರಸುಗಳಲ್ಲಿ ಮೂರನೇ ಒಂದರಷ್ಟನ್ನು ಅಳವಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದೆ. ಆದರೆ ಮಾನವ ಹಕ್ಕುಗಳ ಆಯುಕ್ತರ ನೇಮಕದ ಪ್ರಸ್ತಾವವನ್ನು ಸಾರಾಸಗಟು ತಳ್ಳಿಹಾಕಿದೆ.

11 ಸದಸ್ಯರ ಪರಿಣತರು ಮಾಡಿರುವ ಶಿಫಾರಸುಗಳನ್ನು ಜಾರಿಗೊಳಿಸಲು ಹಗಲಿರುಳೂ ದುಡಿಯುವಂತೆ ಕಾಮನ್‌ವೆಲ್ತ್ ರಾಷ್ಟ್ರಗಳ ನಾಯಕರು ತಮ್ಮ ವಿದೇಶಾಂಗ ಸಚಿವರುಗಳಿಗೆ ಸೂಚಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಮತ್ತು ಕಾಮನ್‌ವೆಲ್ತ್ ಮಹಾಪ್ರಧಾನ ಕಾರ್ಯದರ್ಶಿ ಕಮಲೇಶ್ ಶರ್ಮ ಶೃಂಗಸಭೆಯ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ.



ಅಂತರ ರಾಷ್ಟ್ರೀಯ ಭದ್ರತಾ ರಂಗದಲ್ಲಿ ಇನ್ನೊಂದು ಪ್ರಮುಖ ಸಮಸ್ಯೆಯಾಗಿರುವ ಕಡಲ್ಗಳ್ಳತನದ ವಿಷಯವೂ ಪ್ರಮುಖವಾಗಿ ಚರ್ಚೆಗೆ ಬಂದಿತು. ಸ್ಥಿರ, ಸುರಕ್ಷಿತ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಪರಿಸರವನ್ನು ನಿರ್ಮಿಸಲು, ರಕ್ಷಿಸಲು ಬದ್ಧವಾಗಿರುವುದಾಗಿ ಈ ಎಲ್ಲ ರಾಷ್ಟ್ರಗಳ ನಾಯಕರೂ ಭರವಸೆ ವ್ಯಕ್ತಪಡಿಸಿದರು.

ಕಡಲ್ಗಳ್ಳರ ವಿರುದ್ಧ ಕಾರ್ಯಾಚರಣೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಸಾಗರ ಭದ್ರತೆಯನ್ನು ಬಲಪಡಿಸುವುದರೊಂದಿಗೆ, ಸೋಮಾಲಿಯಾದಲ್ಲಿ ರಾಜಕೀಯ ಸ್ಥಿರತೆ, ಭದ್ರತೆಯನ್ನು ಸ್ಥಾಪಿಸುವ ಮೂಲಕ ಭಾರತೀಯ ಸಾಗರದಲ್ಲಿ ಕಡಲ್ಗಳ್ಳರ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಈ ದೇಶಗಳು ಒತ್ತಿಹೇಳಿದವು.

ಸೋಮಾಲಿಯಾದಲ್ಲಿ ಕಡಲ್ಗಳ್ಳರು ಮತ್ತು ಅವರಿಗೆ ಶಸ್ತ್ರಾಸ್ತ್ರ ಸಿಗದಂತೆ ಕಾರ್ಯಾಚರಣೆ ನಡೆಸಲು ಆಫ್ರಿಕಾ ಒಕ್ಕೂಟಕ್ಕೆ ಅಂತರ ರಾಷ್ಟ್ರೀಯ ಸಮುದಾಯ ಹಣಕಾಸಿನ ನೆರವು ಒದಗಿಸಬೇಕು ಎಂದು ಅವು ಆಗ್ರಹಿಸಿದವು.

ಪ್ರಜಾಪ್ರಭುತ್ವ, ಅಭಿವೃದ್ಧಿ ಹಾಗೂ ಬಲವಾದ ಆಡಳಿತ ಸಂಸ್ಥೆಗಳನ್ನು ಬೆಂಬಲಿಸಲು ಕೂಡ ಸಹಮತ ವ್ಯಕ್ತಪಡಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT